Guarantee Scheme| ಶಕ್ತಿ ಯೋಜನೆ ಮುಂದುವರಿಕೆ ಕಷ್ಟ, ಆದರೂ ನಿಲ್ಲಿಸಲ್ಲ; ರಾಮಲಿಂಗಾರೆಡ್ಡಿ
ಮಹಿಳೆಯರಿಗೆ ಉಚಿತ ಪ್ರಯಾಣದ ಖಾತರಿ ಒದಗಿಸುವ ಶಕ್ತಿ ಯೋಜನೆ ನಡೆಸುವುದು ಸಾರಿಗೆ ಇಲಾಖೆಗೆ ಕಷ್ಟವಾಗಿದೆ. ಹಾಗಂತ ಯಾವುದೇ ಕಾರಣಕ್ಕೂ ಯೋಜನೆ ನಿಲ್ಲಿಸುವುದಿಲ್ಲ;
ʼಶಕ್ತಿ ಯೋಜನೆʼ ಪರಿಷ್ಕರಣೆ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ವಾಕ್ಸಮರದ ಬೆನ್ನಲ್ಲೇ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಶಕ್ತಿ ಯೋಜನೆ ಮುಂದುವರಿಸುವುದು ಸಾರಿಗೆ ಇಲಾಖೆಗೆ ತ್ರಾಸದಾಯಕ ಎಂಬ ಹೇಳಿಕೆ ಕೊಟ್ಟಿದ್ದಾರೆ. ಆದಾಗ್ಯೂ ಚುನಾವಣಾ ಭರವಸೆಗೆ ಬದ್ಧ ಹಾಗೂ ಯಾವುದೇ ಕಾರಣಕ್ಕೂ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕೊಡುವ ಈ ಯೋಜನೆ ನಿಲ್ಲಿಸುವುದಿಲ್ಲ ಎಂಬುದಾಗಿಯೂ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆ ಮುಂದುವರಿಸುವುದು ಸಾರಿಗೆ ಇಲಾಖೆಗೆ ಕಷ್ಟ. ಹಾಗಂತ ಯಾವುದೇ ಕಾರಣಕ್ಕೂ ಯೋಜನೆ ನಿಲ್ಲಿಸುವುದಿಲ್ಲ ಎಂದು ಭರವಸೆ ನೀಡಿದರು.
ಹಣಕಾಸಿನ ಕೊರತೆ
ಅನ್ನಭಾಗ್ಯ ಯೋಜನೆಯಡಿ ನೇರನಗದು ವರ್ಗಾವಣೆಯು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಅನ್ವಯವಾಗುತ್ತದೆ. ಶಕ್ತಿ ಯೋಜನೆ ಹಾಗಲ್ಲ. ಎಲ್ಲ ಮಹಿಳೆಯರಿಗೂ ಉಚಿತ ಪ್ರಯಾಣದ ಅವಕಾಶವಿದೆ. ಹೀಗಾಗಿ ಯೋಜನೆ ಮುನ್ನಡೆಸುವುದು ಇಲಾಖೆಗೆ ಸ್ವಲ್ಪ ಕಷ್ಟವಾಗುತ್ತಿದೆ. ಆದರೂ ಯೋಜನೆಯನ್ನು ಸ್ಥಗಿತಗೊಳಿಸುವುದಿಲ್ಲ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಚೆಗೆ ಶಕ್ತಿ ಯೋಜನೆ ಪರಿಷ್ಕರಣೆಯ ಸುಳಿವು ನೀಡಿದ್ದರು. ಡಿಸಿಎಂ ಹೇಳಿಕೆಗೆ ಬಿಜೆಪಿ ನಾಯಕರಿಂದ ಟೀಕೆ ವ್ಯಕ್ತವಾಗಿತ್ತು. ಇದರ ಪರಿಣಾಮ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾಧ್ಯಮಗಳ ಎದುರೇ ಡಿ.ಕೆ ಶಿವಕುಮಾರ್ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿ ಸರ್ಕಾರವನ್ನು ದುರ್ಬಲಗೊಳಿಸುವ ಹೇಳಿಕೆ ನೀಡದಂತೆ ಎಚ್ಚರಿಕೆ ಕೊಟ್ಟಿದ್ದರು.
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಕುರಿತು ಟೀಕಿಸಿದ್ದರು. ಪ್ರಧಾನಿಯವರ ಟೀಕೆಗೆ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿರುಗೇಟು ನೀಡಿದ್ದರು. ಬಿಜೆಪಿ ಸರ್ಕಾರ ಎಷ್ಟು ಭರವಸೆ ಈಡೇರಿಸಿದೆ ಎಂದು ಪ್ರಶ್ನಿಸಿದ್ದರು.