Smart Meter Scam Part-2 | ಸ್ಮಾರ್ಟ್‌ ಮೀಟರ್‌ ಹೆಸರಲ್ಲಿ ಗ್ರಾಹಕರಿಗೆ ವಿದ್ಯುದಾಘಾತ; ಸಾವಿರಾರು ಕೋಟಿ ಹಗರಣದ ಆರೋಪ

ಮುಡಾ ಹಗರಣ, ವಾಲ್ಮೀಕಿ, ಭೋವಿ ಅಭಿವೃದ್ಧಿ ನಿಗಮ ಹಾಗೂ ಕೆಐಎಡಿಬಿ ಭೂಮಿ ಹಂಚಿಕೆಯ ಸರಣಿ ಹಗರಣಗಳ ಆರೋಪದ ಬೆನ್ನಲ್ಲೇ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಟೆಂಡರ್‌ ಅವ್ಯವಹಾರದ ಆರೋಪ ರಾಜ್ಯ ಸರ್ಕಾರಕ್ಕೆ ವಿದ್ಯುದಾಘಾತ ನೀಡುತ್ತಿದೆ.;

Update: 2025-05-03 02:30 GMT

ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಹಾಗೂ ನಿರ್ವಹಣೆಯ ಟೆಂಡರ್‌ನಲ್ಲಿ ಕೋಟ್ಯಂತರ ರೂ. ಅವ್ಯವಹಾರದ ಆರೋಪಗಳು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು  ಹಗರಣದ ಸುಳಿಗೆ ಸಿಲುಕಿಸಿವೆ.

ಮುಡಾ ಹಗರಣ, ವಾಲ್ಮೀಕಿ, ಭೋವಿ ಅಭಿವೃದ್ಧಿ ನಿಗಮ ಹಾಗೂ ಕೆಐಎಡಿಬಿ ಭೂಮಿ ಹಂಚಿಕೆಯ ಸರಣಿ ಹಗರಣಗಳ ಆರೋಪದ ಬೆನ್ನಲ್ಲೇ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಟೆಂಡರ್‌ ಅವ್ಯವಹಾರದ ಆರೋಪ ರಾಜ್ಯ ಸರ್ಕಾರಕ್ಕೆ ವಿದ್ಯುದಾಘಾತ ನೀಡುತ್ತಿದೆ. 

ಸ್ಮಾರ್ಟ್ ಮೀಟರ್ ಅಳವಡಿಕೆ ಹಾಗೂ ನಿರ್ವಹಣೆ ಗುತ್ತಿಗೆಯಲ್ಲಿ ಬರೋಬ್ಬರಿ 15,568 ಸಾವಿರ ಕೋಟಿ ರೂ. ಹಗರಣ ನಡೆದಿರುವ ಆರೋಪವು ಪ್ರತಿಪಕ್ಷಗಳು ಹಾಗೂ ಎಲೆಕ್ಟ್ರಿಕಲ್‌ ಗುತ್ತಿಗೆದಾರರಿಂದ ಕೇಳಿ ಬರುತ್ತಿದೆ.  ಹಾಗಾದರೆ ಟೆಂಡರ್‌ನಲ್ಲಾಗಿರುವ ಅವ್ಯವಹಾರ ಏನು, ಗುತ್ತಿಗೆ ನೀಡುವಲ್ಲಿ ಅನುಸರಿಸಿದ ಮಾರ್ಗಗಳೇನು, ಉಲ್ಲಂಘಿಸಿದ ಮಾನದಂಡಗಳೇನು, ಹಗರಣ ನಡೆದಿರುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ. 

ಮಾನದಂಡದಂತೆ ಟೆಂಡರ್ ನಡೆದಿಲ್ಲ

ದಾವಣಗೆರೆ ಮೂಲದ ರಾಜಶ್ರೀ ಎಲೆಕ್ಟ್ರಿಕಲ್ಸ್‌ ಕಂಪೆನಿಗೆ ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಹಾಗೂ ನಿರ್ವಹಣೆಯ ಟೆಂಡರ್ ನೀಡಲಾಗಿತ್ತು. ಆದರೆ, ಟೆಂಡರ್‌ ಕರೆಯಲು ಅನುಸರಿಸಿದ ಮಾನದಂಡಗಳು ʼಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆʼ(ಕೆಪಿಟಿಟಿ) ಕಾಯ್ದೆಯಂತೆ ಇರಲಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ಕರೆಯಲಾಗಿದ್ದ ಟೆಂಡರ್‌ಗೆ ಸಾಮಾನ್ಯವಾಗಿ 45 ದಿನಗಳ ಕಾಲಾವಕಾಶ ನೀಡಬೇಕು. ಆದರೆ, ಈ ಟೆಂಡರ್‌ಗೆ ಕೇವಲ 35ದಿನದಲ್ಲಿ ಅನುಮೋದನೆ ನೀಡಲಾಗಿದೆ.  1 ಲಕ್ಷ ಸ್ಮಾರ್ಟ್ ಮೀಟರ್ ಅಳವಡಿಸಿರುವ ಅನುಭವ ಹೊಂದಿದವರು ಟೆಂಡರ್‌ನಲ್ಲಿ ಭಾಗವಹಿಸಬೇಕು ಎಂಬುದಿದೆ. ಆದರೆ, ಇಲ್ಲಿ ಸ್ಮಾರ್ಟ್ ಮೀಟರ್ ಉತ್ಪಾದನೆಯನ್ನೇ ಮಾಡದ ಕೇವಲ 10 ಲಕ್ಷ ಸಾಮಾನ್ಯ ಮೀಟರ್ ಅಳವಡಿಕೆ ಮಾಡಿದ ಅನುಭವ ಹೊಂದಿರುವ ಕಂಪನಿಗೆ ಟೆಂಡರ್ ನೀಡಲಾಗಿದೆ.

ಗುತ್ತಿಗೆ ಪಡೆದ ಕಂಪೆನಿಯದ್ದು ಸ್ಮಾರ್ಟ್ ಮೀಟರ್ ಉತ್ಪಾದನೆ ಘಟಕವೇ ಇಲ್ಲ. ಕೇವಲ ವಿದ್ಯುತ್‌ ಕಂಬ ತಯಾರಿಸುವ ಕಂಪನಿಗೆ ಮೀಟರ್ ಅಳವಡಿಕೆಯ ಹೊಣೆ ನೀಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಕೆಪಿಟಿಟಿ ಕಾಯ್ದೆ ಉಲ್ಲಂಘನೆ

ಎಂಟು ಲಕ್ಷ ಸ್ಮಾರ್ಟ್‌ ಮೀಟರ್‌ಗಳ ಅಳವಡಿಕೆಗೆ ಕರೆಯಲಾಗಿದ್ದ ಟೆಂಡರ್‌ನಲ್ಲಿ ಬಿಡ್ ಸಾಮರ್ಥ್ಯ(ಮೊತ್ತ) ನಮೂದಿಸಬೇಕು. ಕೆಪಿಟಿಟಿ ಕಾಯ್ದೆಯನ್ವಯ 8 ಲಕ್ಷ ಸ್ಮಾರ್ಟ್ ಮೀಟರ್ ಅಳವಡಿಕೆಯ ಟೆಂಡರ್‌ನಲ್ಲಿ 6,800 ಕೋಟಿ ರೂ. ಬಿಡ್ ಸಾಮರ್ಥ್ಯ ಉಲ್ಲೇಖಿಸಬೇಕಿತ್ತು. ಆದರೆ,  ಟೆಂಡರ್‌ನಲ್ಲಿ ರಾಜಶ್ರೀ ಎಲೆಕ್ಟ್ರಿಕಲ್ಸ್‌ ಕೇವಲ 107 ಕೋಟಿ ರೂ. ಬಿಡ್‌ ಸಾಮರ್ಥ್ಯ ತೋರಿಸಿತ್ತು. ಕಪ್ಪುಪಟ್ಟಿಗೆ ಸೇರಿದ ಕಂಪೆನಿಯನ್ನು ಬಿಡ್‌ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು ಎಂಬ ಆರೋಪವೂ ಇದೆ.

ಬೆಸ್ಕಾಂ ಒಂದರಲ್ಲೇ ಅಂದಾಜು ಟೆಂಡರ್ ವೆಚ್ಚ 4,800 ಕೋಟಿ ರೂ. ಆಗಲಿದೆ. ಆದರೆ, ರಾಜಶ್ರೀ ಎಲೆಕ್ಟ್ರಿಕಲ್ಸ್‌ ಕೇವಲ 571 ಕೋಟಿ ರೂ. ಉಲ್ಲೇಖಿಸಿ, ಬಳಿಕ 997.23 ಕೋಟಿ ರೂ. ಎಂದು ತಿದ್ದುಪಡಿ ಮಾಡಲಾಗಿದೆ ಎನ್ನಲಾಗಿದೆ. ಇನ್ನು ಗುತ್ತಿಗೆ ಕರಾರು ಮಾಡಿಕೊಂಡಿರುವ ಮೊತ್ತದ ಶೇ 30 ರಷ್ಟು ಹಣಕಾಸು ಸಾಮರ್ಥ್ಯವನ್ನು ಕಂಪೆನಿ ತೋರಿಸಬೇಕು. ಅಂದರೆ 1,440 ಕೋಟಿ ರೂ. ಹಣ ಹೊಂದಿರುವುದಾಗಿ ಸಾಬೀತುಪಡಿಸಬೇಕಾಗಿತ್ತು. ಆದರೆ ವಾರ್ಷಿಕ ಪಾವತಿಯ ಶೇ25ರಷ್ಟಕ್ಕೆ ಹೊಂದಾಣಿಕೆಯಾಗುವಂತೆ ಸರ್ಕಾರವೇ ಕೇವಲ 107 ಕೋಟಿ ರೂ. ಹಣಕಾಸು ಸಾಮರ್ಥ್ಯ ಕೇಳಿತ್ತು.  ಟೆಂಡರ್ ಬಗ್ಗೆ ಪತ್ರಿಕಾ ಪ್ರಕಟಣೆ ಸಹ ನೀಡಿರಲಿಲ್ಲ. ಆಡಳಿತ ಮಂಡಳಿಯಿಂದ ಅನುಮತಿ ಪಡೆದಿಲ್ಲ ಎಂಬ ಗಂಭೀರ ಆರೋಪವೂ ಕೇಳಿ ಬಂದಿದೆ.

ಹಗರಣ ನಡೆದಿರುವುದು ಹೇಗೆ?

ಕೇಂದ್ರ ಸರ್ಕಾರವು ರಿವ್ಯಾಂಪ್ಡ್ ಡಿಸ್ಟ್ರಿಬ್ಯೂಷನ್ ಸೆಕ್ಟರ್ ಸರ್ವೀಸ್ (ಆರ್‌ಡಿಎಸ್‌ಎಸ್‌) ಯೋಜನೆಯಡಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ 900 ರೂ. ಸಹಾಯಧನ ಒದಗಿಸುತ್ತದೆ. ಅದಕ್ಕಾಗಿ ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಬೇಕಾಗಿತ್ತು. ಆದರೆ, ಎರಡು ಬಾರಿ ಸಲ್ಲಿಸಿದ್ದ ಪ್ರಸ್ತಾವವನ್ನು ತಾಂತ್ರಿಕ ಷರತ್ತಿಗೆ ಒಳಪಟ್ಟಿಲ್ಲ ಎಂಬ ಕಾರಣ ನೀಡಿ ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ಹಾಗಾಗಿ ಕೆಆರ್‌ಸಿಇ ಆದೇಶದಂತೆ, ಕೇಂದ್ರದ ಅನುಮೋದನೆ ಇಲ್ಲದೇ ರಾಜ್ಯ ಸರ್ಕಾರ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕಾರ್ಯ ಆರಂಭಿಸಿದೆ.  

ಹೀಗಿರುವಾಗ ಸಹಾಯಧನ ಸಿಗುವುದಿಲ್ಲ. ಸ್ಮಾರ್ಟ್‌ ಮೀಟರ್‌ ವೆಚ್ಚವನ್ನು ಸಂಪೂರ್ಣ ಗ್ರಾಹಕರೇ ಭರಿಸಬೇಕಾಗಿದೆ.

ಆರ್‌ಸಿಎಸ್‌ಎಸ್‌ ಯೋಜನೆಯಡಿ ಸ್ಮಾರ್ಟ್‌ ಮೀಟರ್‌ ಅಳವಡಿಸುತ್ತಿರುವ ಬೇರೆ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ನೀಡುವ 900 ರೂ.ಸಹಾಯಧನವನ್ನು ನೇರವಾಗಿ ಗುತ್ತಿಗೆದಾರ ಸಂಸ್ಥೆಗೆ ನೀಡಲಾಗುತ್ತಿದೆ. ಆ ನಂತರದ 10ವರ್ಷಗಳಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚದೊಂದಿಗೆ ಪ್ರತಿ ತಿಂಗಳು 65 ರೂ.ನಿಂದ 90 ರೂ. ಜೊತೆ ಸ್ಮಾರ್ಟ್ ಮೀಟರ್‌ಗೆ ತಗುಲುವ 8,510 ರೂ. ಸಂಗ್ರಹಿಸಲಾಗುತ್ತದೆ. ಆದರೆ, ಕರ್ನಾಟಕದಲ್ಲಿ ಸ್ಮಾರ್ಟ್ ಮೀಟರ್‌ಗೆ ಮೀಟರ್ ಅಳವಡಿಕೆ ದಿನವೇ ಗ್ರಾಹಕರಿಂದ 8,510ರೂ.ವಸೂಲಿ ಮಾಡಲಾಗಿದೆ. ಜೊತೆಗೆ ಸ್ಮಾರ್ಟ್ ಮೀಟರ್ ಮೂಲ ವೆಚ್ಚದ ಜೊತೆಗೆ 10 ವರ್ಷಗಳಿಗೆ ನಿರ್ವಹಣಾ ವೆಚ್ಚವಾಗಿ ಪ್ರತಿ ತಿಂಗಳಿಗೆ 75 ರೂ.ಗಳಂತೆ 120 ತಿಂಗಳು ಪಡೆಯಲಾಗುತ್ತದೆ. ಆಗ ಒಂದು ಸ್ಮಾರ್ಟ್ ಮೀಟರ್‌ ಮೂಲ ವೆಚ್ಚ 8,510 ರೂ ಹಾಗೂ 10 ವರ್ಷದ ನಿರ್ವಾಹಣಾ ವೆಚ್ಚ ಸೇರಿ 17,030 ರೂ. ಸಂಗ್ರಹಿಸಿದಂತಾಗುತ್ತದೆ. ಒಟ್ಟು ಎಂಟು ಲಕ್ಷ ಮೀಟರ್‌ಗಳಿಗೆ ತಲಾ 17,030ರೂ. ಪಡೆದರೆ 15,558 ಕೋಟಿ ರೂ.ಗೂ ಹೆಚ್ಚು ಹಣ ವಸೂಲಿ ಮಾಡಿದಂತಾಗುತ್ತದೆ. ಹಾಗಾಗಿ ಇದೊಂದು ದೊಡ್ಡ ಹಗರಣದಂತಿದೆ ಎಂಬುದು ಗಂಭೀರ ಆರೋಪವಾಗಿದೆ.

ಬೇರೆ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಹೇಗೆ?

ಕೇರಳ, ಉತ್ತರ ಪ್ರದೇಶ, ಗುಜರಾತ್, ಅಸ್ಸಾಂ ನಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಕೇಂದ್ರ ಸರ್ಕಾರ ನೀಡುವ  900 ರೂ. ಮಾತ್ರ ಆರಂಭದಲ್ಲೇ ಗುತ್ತಿಗೆದಾರರಿಗೆ ನೀಡಲಾಗುತ್ತದೆ. ನಿರ್ವಹಣಾ ವೆಚ್ಚ ಪ್ರತಿ ತಿಂಗಳಿಗೆ 50.29 ರೂ. ಗಳಿಂದ 76.1 ರೂ.ಗಳನ್ನು ಮಾಸಿಕ ಶುಲ್ಕದ ಜೊತೆ ಹೊಂದಾಣಿಕೆ ಮಾಡಿ ಸಂಗ್ರಹಿಸಲಾಗುತ್ತದೆ. ಓಡಿಶಾದಲ್ಲಿ ಮಾತ್ರ ಕಾರ್ಯಾಚರಣೆ ಹಾಗೂ ನಿರ್ವಹಣೆ ಮೊತ್ತವನ್ನು ಕೇವಲ 5 ವರ್ಷ ಸಂಗ್ರಹಿಸುವ ಮೂಲಕ ಗ್ರಾಹಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಆದರೆ, ಕರ್ನಾಟಕದಲ್ಲಿ ಇದ್ಯಾವುದೂ ಗ್ರಾಹಕರ ಪರವಾಗಿಲ್ಲ . ಬರೀ ಗುತ್ತಿಗೆದಾರರ ಪರವಾಗಿದೆ.

ಹಿಮಾಚಲ ಪ್ರದೇಶದಲ್ಲಿ 900 ರೂ. ಮೀಟರ್ ದರ ಹಾಗೂ ನಿರ್ವಹಣೆ ದರ ಮಾಸಿಕ 68.4 ರೂ ಮಾತ್ರ ಇದೆ. ತೆಲಂಗಾಣದಲ್ಲಿ 900 ರೂ. ಹಾಗೂ 66.5 ರೂ. ಇದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಎಸ್ಕಾಂಗಳು ಸ್ಮಾರ್ಟ್ ಮೀಟರ್‌ಗೆ 8,510 ರೂ. ಸಂಗ್ರಹಿಸುವ ಜತೆಗೆ ಪ್ರತಿ ತಿಂಗಳು ನಿರ್ವಹಣಾ ವೆಚ್ಚವಾಗಿ 75 ರೂ. ನಿಗದಿ ಮಾಡಿವೆ. ಗ್ರಾಹಕರಿಂದ ಪಡೆಯುವ ಹಣವನ್ನು ಗುತ್ತಿಗೆದಾರ ಸಂಸ್ಥೆಗೆ ಪಾವತಿಸಲಿವೆ ಎಂದು ಆರೋಪಿಸಲಾಗಿದೆ.

ಗುತ್ತಿಗೆ ಕಂಪೆನಿಯ ನೌಕರರಿಗೆ ಎಸ್ಕಾಂಗಳಿಂದ ವೇತನ 

ಸ್ಮಾರ್ಟ್‌ ಮೀಟರ್‌ ಅಳವಡಿಕೆ ಗುತ್ತಿಗೆ ಪಡೆದಿರುವ ರಾಜಶ್ರೀ ಎಲೆಕ್ಟ್ರಿಕಲ್ಸ್ ಕಂಪೆನಿಗೆ ಸ್ಮಾರ್ಟ್ ಮೀಟರ್ ಮಾರಾಟ ಮಳಿಗೆಗೆ ಸ್ಥಾಪಿಸಲು ಎಸ್ಕಾಂಗಳೇ ಬಾಡಿಗೆ ಪಾವತಿಸುತ್ತಿವೆ. ಗ್ರಾಮೀಣ ಭಾಗದಲ್ಲಿ ಪ್ರತಿ ಚದರಡಿಗೆ 45 ರೂ, ನಗರ ಪ್ರದೇಶದಲ್ಲಿ 110 ರೂ. ಬಾಡಿಗೆ ಪಾವತಿಸುತ್ತಿವೆ ಎಂಬ ಆರೋಪವೂ ಇದೆ. ಕಂಪೆನಿಯ ಮಾರಾಟ ಮಳಿಗೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪ್ರತಿ ತಿಂಗಳು 30,159 ರೂ. ವೇತನವನ್ನೂ ಎಸ್ಕಾಂಗಳೇ ಪಾವತಿಸುತ್ತಿವೆ. ಪ್ರತಿ ತಿಂಗಳು ನಿರ್ವಹಣಾ ಶುಲ್ಕದ ಹೆಸರಿನಲ್ಲಿ 125 ರೂ. ಹಾಗೂ ಸಾಫ್ಟ್‌ವೇರ್‌ ನಿರ್ವಹಣೆಗೆ 71 ರೂ.ಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಕೇಂದ್ರದ ಮಾನದಂಡಗಳೇನು?

ಕೇಂದ್ರ ಸರ್ಕಾರವು ಸ್ಮಾರ್ಟ್ ಮೀಟರ್ ಅಳವಡಿಕೆಗೆ ಹಲವಾರು ಮಾನದಂಡಗಳನ್ನು ನಿಗದಿಪಡಿಸಿದೆ. ಗುಣಮಟ್ಟ, ಕಾರ್ಯದಕ್ಷತೆ ಹಾಗೂ ಸುರಕ್ಷತೆ ಖಾತರಿಪಡಿಸುವ ಸ್ಮಾರ್ಟ್ ಮೀಟರ್‌ಗಳನ್ನೇ ಗ್ರಾಹಕರ ಮನೆಗೆ ಅಳವಡಿಸಬೇಕು. IS 16444 ಶ್ರೇಣಿಯ ಗುಣಮಟ್ಟ ಹೊಂದಿರಬೇಕು ಎಂದು ಹೇಳಿದೆ. ಅಲ್ಲದೇ ಭಾರತೀಯ ಗುಣಮಟ್ಟ ಬ್ಯೂರೋ(ಬಿಐಎಸ್) ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದೆ. ಆದರೆ, ಈಗ ಅಳವಡಿಸುತ್ತಿರುವ ಸ್ಮಾಟ್‌ ಮೀಟರ್‌ಗಳಲ್ಲಿ ಸಾಕಷ್ಟು ನೂನ್ಯತೆಗಳಿವೆ ಎಂದು ದೂರುಗಳು ಬಂದಿವೆ.  

ಲೋಕಾಯುಕ್ತಕ್ಕೆ ಬಿಜೆಪಿ ದೂರು

ಸ್ಮಾರ್ಟ್ ಮೀಟರ್ ಖರೀದಿಯಲ್ಲಿ ನಡೆದಿದೆ ಎನ್ನಲಾದ ಹಗರಣ ಸಂಬಂಧ ತನಿಖೆ ನಡೆಸುವಂತೆ ಕೋರಿ ಬಿಜೆಪಿ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದೆ.

ಇಂಧನ ಸಚಿವ ಕೆ.ಜೆ.ಜಾರ್ಜ್, ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಬೆಸ್ಕಾಂ ಎಂ.ಡಿ. ಮಹಂತೇಶ್, ತಾಂತ್ರಿಕ ನಿರ್ದೇಶಕರಾದ ರಮೇಶ್, ಬಾಲಾಜಿ ಮತ್ತಿತರರ ವಿರುದ್ಧ ದೂರು ನೀಡಲಾಗಿದೆ.

ನ್ಯಾಯಾಲಯದ ಮುಂದೆ ಸ್ಮಾರ್ಟ್ ಮೀಟರ್ ಹಗರಣ ಆರೋಪ 

ದಾವಣೆಗೆರೆಯ ರಾಜಶ್ರೀ ಎಲೆಕ್ಟ್ರಿಕಲ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಸ್ಮಾರ್ಟ್ ಮೀಟರ್‌ಗಳ ಮಾರಾಟ ಮತ್ತು ನಿರ್ವಹಣೆ ಟೆಂಡರ್ ನೀಡಿರುವುದನ್ನು ರದ್ದುಪಡಿಸುವಂತೆ ಕೋರಿ ಅಶ್ವರಾಮನುಜಾ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ಈ ಸಂಬಂಧ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನೋಟಿಸ್‌ ನೀಡಿದೆ.  

ಹೈಕೋರ್ಟ್‌ಗೆ ಅರ್ಜಿದಾರರು ಸಲ್ಲಿಸಿರುವ ದೂರಿನ ಪ್ರಕಾರ ರಾಜ್ಯ ಸರ್ಕಾರ “ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್  ಬೆಲೆ 2,461 ರೂ. ಇದ್ದರೆ ಟೆಂಡರ್‌ನಲ್ಲಿ 4,235 ರೂ. ನಿಗದಿಪಡಿಸಿದೆ. ತ್ರೀಫೇಸ್ ಸ್ಮಾರ್ಟ್ ಮೀಟರ್‌ 3,292 ರೂ. ದರ ಇದ್ದರೆ, 7,525ರೂ. ನಿಗದಿಪಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಅಂದರೆ ಸ್ಮಾರ್ಟ್ ಮೀಟರ್‌ಗಳ ಬೆಲೆಯನ್ನು ಶೇ 170ರಷ್ಟು ಹೆಚ್ಚಿಸಲಾಗಿದೆ. ಇದರಿಂದ ಗ್ರಾಹಕರಿಗೆ ಅನ್ಯಾಯವಾಗುತ್ತಿದ್ದು, ಗುತ್ತಿಗೆ ರದ್ದುಮಾಡಬೇಕು ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಕೋರಲಾಗಿದೆ. 

Tags:    

Similar News