ʼಹುತಾತ್ಮʼಅರ್ಜುನನಿಗೆ ಸ್ಮಾರಕ ನಿರ್ಮಾಣ

Update: 2024-07-06 13:28 GMT

ಯಸಳೂರು ಅರಣ್ಯ ವ್ಯಾಪ್ತಿಯಲ್ಲಿ ಕಳೆದ ವರ್ಷ  ಡಿ.೪ ರಂದು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಯಿಂದ ಗಾಯಗೊಂಡು ಮೃತಪಟ್ಟ  ಆನೆ, ಮೈಸೂರು ದಸರಾ ಅಂಬಾರಿ ಹೊರುವ  ಅರ್ಜುನನಿಗೆ ಸ್ಮಾರಕ ನಿರ್ಮಿಸಲಾಗುತ್ತಿದೆ.

ಕಾಕನಕೋಟೆಯಲ್ಲಿ 1968ರಲ್ಲಿ ನಡೆದ ಖೆಡ್ಡ ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲಾಗಿದ್ದ ಅರ್ಜುನ ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿರುವ ಬಳ್ಳೆ ಆನೆ ಶಿಬಿರದಲ್ಲಿತ್ತು. ಹೀಗಾಗಿ ಸಮಾಧಿ ಸ್ಥಳ ಯಸಳೂರಿನ ಜೊತೆಗೆ ಬಳ್ಳೆಯಲ್ಲಿ ಕೂಡ ಸ್ಮಾರಕ ನಿರ್ಮಿಸಲು ಇಲಾಖೆ ನಿರ್ಧರಿಸಿದೆ.  ಮೈಸೂರು ದಸರಾ ಪ್ರಧಾನ ಆಕರ್ಷಣೆ ಜಂಬೂ ಸವಾರಿಯಲ್ಲಿ ಎಂಟು ಬಾರಿ ಅಂಬಾರಿ ಹೊತ್ತ ಅರ್ಜುನ  ಹಲವು ಯಶಸ್ವಿ ಆನೆ ಸೆರೆ ಕಾರ್ಯಾಚರಣೆ, ಹುಲಿ ಕಾರ್ಯಾಚರಣೆ ಮತ್ತು ಚಿರತೆ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿತ್ತು.  ಡಿ.4ರಂದು ಕಾಡಾನೆಯೊಂದಿಗೆ ಕಾದಾಡಿ ಮೃತಪಟ್ಟಿತ್ತು. 

ಶನಿವಾರ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಸ್ಮಾರಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು. ಅರ್ಜುನನ ಸ್ಮಾರಕವನ್ನು ಡಿ.4ರ ಪ್ರಥಮ ಪುಣ್ಯ ತಿಥಿಯೊಳಗಾಗಿ ನಿರ್ಮಿಸುವಂತೆ ಸೂಚಿಸಿದ ಸಚಿವರು, ಈ ಸ್ಮಾರಕದಲ್ಲಿ ಅರ್ಜುನನ ಸಾಹಸಗಳ ಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದು ಸಚಿವರು ತಿಳಿಸಿದರು.

ಬಳಿಕ ಮಾತನಾಡಿದ ಅವರು,  ಮಾನವ-ವನ್ಯಜೀವಿ ಸಂಘರ್ಷಕ್ಕೆ ಏನು ಕಾರಣ ಎಂಬ ಅಧ್ಯಯನಕ್ಕೆ ಒತ್ತು ನೀಡಲಾಗುವುದು. ಆನೆ ಹಾವಳಿ ತಪ್ಪಿಸಲು ಆಗಸ್ಟ್ 12ರಂದು ವಿಶ್ವ ಆನೆಗಳ ದಿನದಂದು ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ನಡೆಸಲಾಗುವುದು. ಈ ಸಮ್ಮೇಳನದಲ್ಲಿ ವಿಶ್ವಾದ್ಯಂತದಿಂದ ತಜ್ಞರು ಆಗಮಿಸಲಿದ್ದಾರೆ. ಈ ಸಮ್ಮೇಳನದಲ್ಲಿ ವನ್ಯಜೀವಿ- ಮಾನವ ಸಂಘರ್ಷ ನಿಯಂತ್ರಣಕ್ಕೆ ಯಾವ ಯಾವ ದೇಶದಲ್ಲಿ ಯಾವ ರೀತಿಯ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲಾಗಿದೆ. ಅತ್ಯುತ್ತಮ ರೂಢಿಗಳನ್ನು ನಮ್ಮಲ್ಲಿ ಕೂಡ ಅಳವಡಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಚಿಂತನ ಮಂಥನ ನಡೆಸಲಾಗುವುದು ಎಂದು ತಿಳಿಸಿದರು.

Tags:    

Similar News