ಜನ ಜೆಡಿಎಸ್ ನೆನಪಿಸಿಕೊಳ್ಳುವಂತೆ ಮಾಡಿದ್ದು ಕಾಂಗ್ರೆಸ್: ಡಿ.ಕೆ ಸುರೇಶ್
ಭಯೋತ್ಪಾದನೆ ಬಗ್ಗೆ ಶೋಭಾ ಕರಂದ್ಲಾಜೆ ಕೇಂದ್ರವನ್ನು ಪ್ರಶ್ನಿಸಲಿ; ಸುರೇಶ್ ಸವಾಲು;
ಕರ್ನಾಟಕ ಕಾಂಗ್ರೆಸ್‌ನ ಏಕೈಕ ಸಂಸದರಾಗಿರುವ ಡಿ.ಕೆ ಸುರೇಶ್ ಅವರು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳ ವಿರುದ್ಧ ವಾಕ್ಸಮರ ಮುಂದುವರಿಸಿದ್ದಾರೆ.
“ನಾವು (ಕಾಂಗ್ರೆಸ್) ಜೆಡಿಎಸ್ ನಾಯಕರನ್ನು ಪ್ರಧಾನಮಂತ್ರಿ, ಮುಖ್ಯಮಂತ್ರಿಯನ್ನಾಗಿ ಮಾಡಿದ್ದೇವೆ. ಆ ಮೂಲಕ ದೇಶ ಹಾಗೂ ರಾಜ್ಯದ ಜನರ ನೆನಪಿನಲ್ಲಿ ಉಳಿಯುವಂತೆ ಮಾಡಿದ್ದೇವೆ” ಎಂದು ಸಂಸದ ಡಿ.ಕೆ. ಸುರೇಶ್ ತಿರುಗೇಟು ನೀಡಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್‌ನವರಂತೆ ಬಿಜೆಪಿಯವರು ಕುತ್ತಿಗೆ ಕುಯ್ಯವ ಕೆಲಸ ಮಾಡಿಲ್ಲ” ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.
“ಕಾಂಗ್ರೆಸ್ ಪಕ್ಷವು ಎಚ್.ಡಿ ದೇವೇಗೌಡ ಅವರನ್ನು ಪ್ರಧಾನಿ ಮಾಡದಿದ್ದರೆ, ದೇಶ ಅವರನ್ನು ನೆನಪಿಸಿಕೊಳ್ಳುತ್ತಿರಲಿಲ್ಲ. ರಾಜ್ಯದ ಮೂವತ್ತು ಮುಖ್ಯಮಂತ್ರಿಗಳಲ್ಲಿ ಎಚ್.ಡಿ ಕುಮಾರಸ್ವಾಮಿ ಅವರು ಒಬ್ಬರಾಗುತ್ತಿರಲಿಲ್ಲ” ಎಂದರು.
ಆಸ್ಪತ್ರೆಯಿಂದ ಬಂದ ನಂತರ ಬಲಿಷ್ಠವಾಗಿ ಪ್ರಚಾರ ಮಾಡುತ್ತೇನೆ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಕುಮಾರಸ್ವಾಮಿ ಅವರ ಪ್ರಶ್ನೆಗಳಿಗೆ ನಾನು ಉತ್ತರ ನೀಡುವುದಿಲ್ಲ. ಅವರು ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ರಾಜಕಾರಣದಲ್ಲಿ ಎದುರಾಳಿಗಳು ಬಲಿಷ್ಠವಾಗಿರಬೇಕು” ಎಂದರು.
ದೇವೇಗೌಡ ಅವರ ಮಾತನ್ನು ಜನರಿಗೆ ತೋರಿಸಿ: ಡಿ.ಕೆ ಸುರೇಶ್
ʼದೇವೇಗೌಡ ಅವರು ಈ ಹಿಂದೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದರು. “ ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆ, ಮೋದಿ ಗೆದ್ದರೆ ದೇಶ ಬಿಟ್ಟು ಹೋಗುತ್ತೇನೆ, ರಾಜ್ಯಕ್ಕೆ ರಾಷ್ಟ್ರೀಯ ಪಕ್ಷಗಳ ಅವಶ್ಯಕತೆಯಿಲ್ಲ, ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇದೆ” ಎನ್ನುವುದೂ ಸೇರಿದಂತೆ ಹಲವು ಹೇಳಿಕೆಗಳನ್ನು ಕೊಟ್ಟಿದ್ದರು. ಅದನ್ನು ಈಗ ಜನರಿಗೆ ತೋರಿಸಬೇಕುʼ ಎಂದು ಸುರೇಶ್ ಹೇಳಿದರು
ಶೋಭಾ ಕರಂದ್ಲಾಜೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಲಿ
ತಮಿಳುನಾಡಿನ ಕೃಷ್ಣಗಿರಿ ಸೇರಿದಂತೆ ವಿವಿಧೆಡೆಯಿಂದ ಬಂದು ಬೆಂಗಳೂರಿನಲ್ಲಿ ಬಾಂಬ್ ಇಟ್ಟಿದ್ದಾರೆ ಎನ್ನುವ ಶೋಭಾ ಕರಂದ್ಲಾಜೆ ಅವರ ವಿವಾದಾತ್ಮಕ ಹೇಳಿಕೆಯ ಬಗ್ಗೆ ಮತನಾಡಿದ ಡಿ.ಕೆ ಸುರೇಶ್ ಅವರು, “ಉನ್ನತ ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಬಳಿ ಇವೆ. ಭಯೋತ್ಪಾದಕರು ಎಲ್ಲೆಲ್ಲಿ ಇದ್ದಾರೆ ಎನ್ನುವುದು ಅವರಿಗೆ ತಿಳಿದಿದೆ. ಕಾಂಗ್ರೆಸ್‌ನ ಮೇಲೆ ಆರೋಪ ಮಾಡುವುದು ಬಿಟ್ಟು ಕೇಂದ್ರ ಸರ್ಕಾರದ ಬಳಿ ಪ್ರಶ್ನೆ ಮಾಡಲಿ. ಕೃಷ್ಣಗಿರಿಯಿಂದ ಬರುತ್ತಾರೆ ಎನ್ನುವುದು ಅವರಿಗೆ ತಿಳಿದಿದ್ದರೆ, ಬೇಕಂತಲೇ ಎಲ್ಲವನ್ನು ಮುಚ್ಚಿಡುತ್ತಿದ್ದಾರೆ ಎಂದರ್ಥವಲ್ಲವೇ, ಈ ವಿಚಾರದಲ್ಲೂ ಅವರು ರಾಜಕೀಯ ಮಾಡಲು ಮುಂದಾಗಿದ್ದಾರೆ" ಎಂದು ದೂರಿದ್ದಾರೆ.