ಸಂವಿಧಾನ ಬದಲಾವಣೆಯಾಗಲೇಬೇಕು; ಪೇಜಾವರ ಶ್ರೀಗಳ ಹೇಳಿಕೆಗೆ ಕಟು ಟೀಕೆ
ಸ್ವಾತಂತ್ರ್ಯ ಪಡೆಯುವ ಮೊದಲು ಭಾರತವು ಹಿಂದು ರಾಷ್ಟ್ರವಾಗಿತ್ತು. ಸ್ವಾತಂತ್ರ್ಯ ಬಂದ ನಂತರ ಜಾತ್ಯತೀತ ರಾಷ್ಟ್ರವಾಯಿತು. ಆದರೆ ಈಗ ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕು’ ಎಂದು ಸ್ವಾಮೀಜಿ ಹೇಳಿಕೆ ನೀಡಿದ್ದರು.;
ಬಿಡುಬೀಸು ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ ʼಸಂವಿಧಾನ ಬದಲಾಗಲೇಬೇಕುʼ ಎಂದು ನೀಡಿರುವ ಹೇಳಿಕೆಯೊಂದು ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಸಂವಿಧಾನ ತಜ್ಞರು ಹಾಗೂ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ಸಂತರೊಬ್ಬರು ಈ ರೀತಿಯ ಹೇಳಿಕೆ ನೀಡಬಾರದು ಎಂಬುದಾಗಿ ಟೀಕೆ ಮಾಡಿದ್ದಾರೆ.
‘ಸ್ವಾತಂತ್ರ್ಯ ಪಡೆಯುವ ಮೊದಲು ಭಾರತವು ಹಿಂದು ರಾಷ್ಟ್ರವಾಗಿತ್ತು. ಸ್ವಾತಂತ್ರ್ಯ ಬಂದ ನಂತರ ಜಾತ್ಯತೀತ ರಾಷ್ಟ್ರವಾಯಿತು. ಆದರೆ ಈಗ ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕು’ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿಕೆ ನೀಡಿದ್ದರು. ವಿಶ್ವ ಹಿಂದೂ ಪರಿಷತ್ ಕರ್ನಾಟಕ ಘಟಕವು ಆಯೋಜಿಸಿದ್ದ ಸಂತ ಸವಾವೇಶದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಶ್ರೀಗಳ ಹೇಳಿಕೆಗೆ ರಾಜ್ಯದ ಕಾಂಗ್ರೆಸ್ ನಾಯಕರು ಕಿಡಿ ಕಾರಿದ್ದಾರೆ. ಇದು ಮಠಾಧೀಶರಿಗೆ ಸಲ್ಲುವ ಸಂಗತಿಯಲ್ಲ ಎಂಬುದಾಗಿ ಹೇಳಿದ್ದಾರೆ. ಸಂವಿಧಾನ ಬದಲಾವಣೆ ಕುರಿತು ಈ ಹಿಂದೆ ಬಿಜೆಪಿ ನಾಯಕರು ಕೂಡ ಮಾತನಾಡಿದ್ದರು. ಆಗ ಅವರ ಹೇಳಿಕೆಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಷ್ಟೇ ಅಲ್ಲ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಫಲಿತಾಂಶದ ಮೇಲೂ ಈ ಹೇಳಿಕೆಗಳು ಪರಿಣಾಮ ಬೀರಿವೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದರು. ಇದೀಗ ಮಠಾಧೀಶರ ಮೂಲಕ ʼಸಂವಿಧಾನ ಬದಲಾವಣೆʼ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಸಂತ ಸಮಾವೇಶದಲ್ಲಿ ತೆಗೆದುಕೊಂಡಿದ್ದ ನಿರ್ಣಯಗಳ ಅನುಷ್ಠಾನಕ್ಕೆ ರಾಜ್ಯಪಾಲರಿಗೆ ಮನವಿಯನ್ನೂ ಮಠಾಧೀಶರ ನಿಯೋಗ ಕೊಟ್ಟಿದೆ ಎಂದು ವರದಿಯಾಗಿದೆ.
ಹಿಂದೆ ಬಿಜೆಪಿಯ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಅವರು ಸಂವಿಧಾನ ಬದಲಾವಣೆ ಮಾಡೇ ತೀರುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಅವರ ಹೇಳಿಕೆಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿದ್ದ ಕೇಂದ್ರ ಬಿಜೆಪಿ ನಾಯಕರು, ಹೆಗಡೆಗೆ ಬಿಜೆಪಿ ಟಿಕೆಟ್ ನಿರಾಕರಿಸಿ ವಿವಾದಕ್ಕೆ ತೇಪೆ ಹಾಕುವ ಪ್ರಯತ್ನ ಮಾಡಿದ್ದರು. ಇದೀಗ ರಾಜ್ಯದಲ್ಲಿ 3 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆ ಆಗಿರುವಂತಹ ಸಂದರ್ಭದಲ್ಲಿ ಮಠಾಧೀಶರಿಂದ ಇಂತಹ ಹೇಳಿಕೆ ಬಂದಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.
ಸನ್ಯಾಸತ್ವಕ್ಕೆ ಅಪಚಾರ: ಉಗ್ರಪ್ಪ
‘ದ ಫೆಡರಲ್ ಕರ್ನಾಟಕ’ದ ಜೊತೆಗೆ ಮಾತನಾಡಿದ ಮಾಜಿ ಸಂಸದ, ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ, ‘ಸ್ವಾಮೀಜಿಗಳಾದವರು ಕಾಮ, ಕ್ರೋಧ, ಮದ, ಮಾತ್ಸರ್ಯ, ಮೋಹಗಳನ್ನು ತ್ಯಜಿಸಿದವರಾಗಿರಬೇಕು. ಅದನ್ನು ಹೊರತು ಪಡಿಸಿ ಭ್ರಮೆಯಲ್ಲಿ ಮಾಡುವ ಕೆಲಸ ಸನ್ಯಾಸತ್ವಕ್ಕೆ ತೋರುವ ಅಪಚಾರ’ ಎಂದು ಹೇಳಿದ್ದಾರೆ.
ಸಂವಿಧಾನ ಪಾಲಿಸುವುದರ ಉದ್ದೇಶ, ಗಾಂಧೀಜಿ ಅವರ ಜಾತಿ ರಹಿತ, ವರ್ಗ ರಹಿತ ಸಮಾಜ ನಿರ್ಮಾಣ . ಜೊತೆಗೆ ಮಹರ್ಷಿ ವಾಲ್ಮೀಕಿ ರಾಮಾಯಣದ ಅಂತಿಮ ಗುರಿ ಕೂಡ ರಾಮರಾಜ್ಯ ನಿರ್ಮಾಣ. ಇದೆಲ್ಲವನ್ನೂ ಸಂವಿಧಾನದ ಪೀಠಿಕೆಯಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ನಿರೂಪಿಸಿದ್ದಾರೆ. ಅದೇ ಭಾರತದ ಪರಂಪರೆ ಸಂಸ್ಕಾರ-ಸಂಸ್ಕೃತಿಯಾಗಿದೆ. ಸ್ವಾಮೀ ವಿವೇಕಾನಂದ, ಕುವೆಂಪು ಅವರನ್ನು ಅರ್ಥೈಸಿಕೊಳ್ಳದ ಕೆಲವರು ಈ ರೀತಿಯ ಮಾತುಗಳನ್ನು ಆಡುತ್ತಿದ್ದಾರೆ. ಅದರಲ್ಲೂ ಇವು ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಂಥವರ ಮಾತುಗಳೇ ಹೊರತು, ಮನುಕುಲದ ಹಿತವನ್ನು ಬಯಸುವಂಥವರ ಮಾತಂತೂ ಅಲ್ಲ. ಜನರಂತೂ ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬು ಭಾವಿಸುತ್ತೇನೆ ಎಂದಿದ್ದಾರೆ ಉಗ್ರಪ್ಪ.
ಕಾಂಗ್ರೆಸ್ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸ್ವಾಮೀಜಿ ಮಾತಿಗೆ ತೀವ್ರ ಆಕ್ಷೇಪಿ ವ್ಯಕ್ತಪಡಿಸಿದ್ದಾರೆ ‘ಸಂವಿಧಾನ ಬದಲಾಯಿಸಬೇಕು ಎಂದು ಪೇಜಾವರಶ್ರೀ ಹಾಗೂ ಸಂಘ ಪರಿವಾರ ನಿಷ್ಠೆಯ ಸ್ವಾಮೀಜಿಗಳು ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವುದು ಆತಂಕಕಾರಿ ಮಾತ್ರವಲ್ಲ ಸಂವಿಧಾನಕ್ಕೆ ಬೆದರಿಕೆಯೂ ಹೌದು’ ಎಂದಿದ್ದಾರೆ. ಜೊತೆಗೆ ‘ಆರ್‌ಎಸ್‌ಎಸ್‌ಗೂ ಸ್ವಾಮೀಜಿಗಳ ಈ ಹೇಳಿಕೆಗೂ ನೇರ ಸಂಬಂಧವಿದೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ. ‘ಸಂವಿಧಾನ ವಿರೋಧಿ ಸಂಘಟನೆ ಆಗಿರುವ ಆರ್‌ಎಸ್‌ಎಸ್ ನೂರು ವರ್ಷಕ್ಕೆ ಕಾಲಿಡುತ್ತಿರುವುದಕ್ಕೂ, ಸಂವಿಧಾನ ಬದಲಾಯಿಸಬೇಕು ಎಂದು ಪರಿವಾರ ನಿಷ್ಠೆ ಹೊಂದಿರುವ ಯತಿಗಳು ಬೀದಿಗಿಳಿದು ಮಾತಾಡುತ್ತಿರುವುದಕ್ಕೂ ಸಂಬಂಧವಿದೆ. ಇದು ಸಂಘ ಪರಿವಾರದ ನೂರು ವರ್ಷಗಳ ಸಂಭ್ರಮಾಚಾರಣೆಯ ಗುಪ್ತ ಸೂಚಿ ಆಗಿರುವುದು ಸ್ಪಷ್ಟ’ ಎಂದು ಹರಿಪ್ರಸಾದ್ ಆರೋಪಿಸಿದ್ದಾರೆ.
ಬುದ್ಧ, ಬಸವಾದಿ ಶಿವ ಶರಣರು, ನಾರಾಯಣ ಗುರುಗಳಂತಹ ಸಮಾಜ ಸುಧಾರಕರ ಆಶಯಗಳು ಹಾಗೂ ಗಾಂಧಿ, ನೆಹರೂ, ಬಾಬಾ ಸಾಹೇಬರಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಪರಿಶ್ರಮದಿಂದ ರಚಿತವಾಗಿರುವ "ಸರ್ವ ಧರ್ಮ, ಸಹಬಾಳ್ವೆ"ಯ ತಿರುಳಿರುವ ಸಂವಿಧಾನವನ್ನು ಬದಲಾಯಿಸಲು ಮುಂದಾಗಿರುವ ಪೇಜಾವರರು ತಮಗೆ ಗೌರವ ನೀಡುವ ಸಂವಿಧಾನ ಯಾವುದು? ಎಂಬುದನ್ನು ಮೊದಲು ಸ್ಪಷಪಡಿಸಲಿ ಎಂದು ಬಿ.ಕೆ. ಹರಿಪ್ರಸಾದ್ ಆಗ್ರಹಿಸಿದ್ದಾರೆ.
ಪೇಜಾವರರು ಬಯಸುತ್ತಿರುವ ಗೌರವ ನೀಡುವ ವ್ಯವಸ್ಥೆಯಲ್ಲಿ ಸಾವಿರಾರು ವರ್ಷಗಳಿಂದ ದಲಿತರು-ಶೂದ್ರರು ಶ್ರೇಷ್ಠತೆಯ ವ್ಯಸನಕ್ಕೆ ತಲೆಬಾಗಬೇಕೆ? ಮಹಿಳೆಯರು ಅತ್ಯಾಚಾರಿಗಳನ್ನು ಆರಾಧಿಸಬೇಕೆನ್ನುವ ವ್ಯವಸ್ಥೆ ಇರಬೇಕೆ? ಜೀತದಾರರು, ಶ್ರಮಿಕ ವರ್ಗ ಮಾಲೀಕರ ಅಡಿಯಾಳಾಗಿರಬೇಕೆ? ನೂರಾರು ಕೋಟಿ ಜನಸಂಖ್ಯೆಯ ಭಾರತದಲ್ಲಿ ಪ್ರತಿಯೊಬ್ಬರು ಸ್ವಾಭಿಮಾನದಿಂದ ಬದುಕಲು ಸಂವಿಧಾನ ಅವಕಾಶ ನೀಡಿದೆ. ಆದರೆ ಪೇಜಾವರ ಸ್ವಾಮೀಜಿಗಳು ಯಾವ ವ್ಯವಸ್ಥೆಯಲ್ಲಿ ತಮ್ಮ ಗೌರವ ಚಬಯಸುತ್ತಿದ್ದಾರೆ ಎಂದೂ ಬಹಿರಂಗವಾಗಿ ಹೇಳಲಿ ಎಂದು ಅವರು ಪ್ರಶ್ನಿಸಿದ್ದಾರೆ.
ಸ್ವಾತಂತ್ರ್ಯ ಪೂರ್ವ ಭಾರತದ ಇತಿಹಾಸದ ಬಗ್ಗೆ ಪುರಾವೇ ಇಲ್ಲದೆ ಮಾತಾಡಿರುವ ಸ್ವಾಮೀಜಿಗಳು ಒಂದಿಷ್ಟು ಇತಿಹಾಸ ಅರಿತು ಮಾತಾಡಲಿ. ಹರಿದು ಹಂಚಿ ಹೋಗಿದ್ದ ದೇಶವನ್ನು ಒಕ್ಕೂಟ ವ್ಯವಸ್ಥೆಯನ್ನಾಗಿ ಮಾಡಿ ಭಾರತವಾಗಿಸಲು ನಮ್ಮ ಪೂರ್ವಜರ ಪರಿಶ್ರಮವನ್ನು ಅವಮಾನಿಸುವ ಹಕ್ಕೂ ಸ್ವಾಮೀಜಿಗಳಿಗಿಲ್ಲ ಸಂವಿಧಾನದ ಬದಲಾಗಿ ಮನುಸ್ಮೃತಿ ಜಾರಿ ಮಾಡಲು ಹೊರಟಿರುವ ಸಂಘ ಪರಿವಾರದ ಹಿಡನ್ ಅಜೆಂಡಾವನ್ನೇ ಪೇಜಾವರರು ಮುಂದುವರಿಸುತ್ತಿದ್ದಾರೆ. ದಲಿತ-ಹಿಂದುಳಿದ-ಶೋಷಿತ ಸಮುದಾಯಗಳು ಸೇರಿದಂತೆ ಭಾರತದ ಪ್ರತಿಯೊಬ್ಬ ಪ್ರಜೆಯೂ ಸ್ವಾಭಿಮಾನ-ಘನತೆಯಿಂದ ಬದುಕುಬೇಕಾದ ವ್ಯವಸ್ಥೆ ಇರುವುದು ಸಂವಿಧಾನದಡಿಯಲ್ಲಿ ಮಾತ್ರ ಎಂದು ಅವರು ಹೇಳಿದ್ದಾರೆ.
ಸಾವಿರಾರು ವರ್ಷಗಳ ಶ್ರೇಣಿಕೃತ ವ್ಯವಸ್ಥೆಯನ್ನು ಪೋಷಿಸುತ್ತಿರುವ ಪೇಜಾವರ ಸ್ವಾಮೀಜಿಗಳಿಗೆ ಸಂವಿಧಾನದಡಿಯಲ್ಲಿ ಬದುಕುವ ಹಕ್ಕಿದೆ. ಸಮಾನತೆ ಬಿತ್ತಿದ ನಮ್ಮ ಪೂರ್ವಜರನ್ನು ಅವಮಾನಿಸುವ, ಸಂವಿಧಾನಕ್ಕೆ ದ್ರೋಹ ಬಗೆಯುವ ಹಕ್ಕಿಲ್ಲ ಎಂಬುದು ಮನವರಿಕೆಯಾಗಲಿ ಎಂದಿದ್ದಾರೆ ಹರಿಪ್ರಸಾದ್.
ಮೂರ್ಖರು ನೀಡುವ ಹೇಳಿಕೆ
ಸಂವಿಧಾನ ತಜ್ಞ, ಸುಪ್ರೀಂಕೋರ್ಟ್ ಹಿರಿಯ ನ್ಯಾಯವಾದಿ ಬಿ.ಟಿ. ವೆಂಕಟೇಶ್ ಅವರನ್ನು ‘ದ ಫೆಡರಲ್ ಕರ್ನಾಟಕ’ ಸಂಪರ್ಕಿಸಿದಾಗ, ‘ಇದು ಮುರ್ಖರು ಕೊಡುವಂಥ ಹೇಳಿಕೆಗಳು. ಹೀಗೆ ಹೇಳಿಕೆ ಕೊಟ್ಟು ರಾಜ್ಯಪಾಲರನ್ನು ಭೇಟಿ ಮಾಡುವವರನ್ನು ಮುರ್ಖರು ಎನ್ನದೇ ವಿಧಿಯಿಲ್ಲ. ಈ ಕುರಿತು ಹೇಳಿಕೆ ನೀಡಿರುವುದು ದೊಡ್ಡ ತಪ್ಪು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂವಿಧಾನ ಬದಲಾವಣೆ ವಿಚಾರ ಕಾಂಗ್ರೆಸ್ ಹಾಗೂ ಬಿಜೆಪಿ ಸೇರಿದಂತೆ ಆ ಪಕ್ಷಗಳ ಬೆಂಬಲಿತರ ಮಧ್ಯೆಯೂ ಆಗಾಗ ಚರ್ಚೆಗಳು ನಡೆಯುತ್ತಲೇ ಇದೆ. ಇತ್ತೀಚೆಗೆ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಂವಿಧಾನ ಬದಲಾವಣೆ ಮಾಡಿದರೆ, ಸಂವಿಧಾನದ ಸ್ವರೂಪ ಬದಲಾವಣೆ ಆದರೆ ದೇಶದಲ್ಲಿ ರಕ್ತಪಾತವಾಗುತ್ತದೆ ಎಂದು ಎಚ್ಚರಿಸಿದ್ದರು.