ಬಿಜೆಪಿಗೆ ಭ್ರಷ್ಟಾಚಾರಿಗಳ ಪಟ್ಟಿ ಕೊಟ್ಟ ಕಾಂಗ್ರೆಸ್: ಲಿಸ್ಟ್‌ನಲ್ಲಿ ಬೊಮ್ಮಾಯಿ, ಜನಾರ್ದನ ರೆಡ್ಡಿ!
ಬಿಜೆಪಿಯಲ್ಲಿ ಇರುವ ಭ್ರಷ್ಟಾಚಾರಿಗಳ ಪಟ್ಟಿ ಎನ್ನುವ ಹೆಸರಿನಲ್ಲಿ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ...;
ಲೋಕಸಭೆ ಚುನಾವಣಾ ಕಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ನಡುವೆ ವಾಕ್ಸಮರ ಮುಂದುವರಿದಿದೆ. ಬಿಜೆಪಿಯ ಜಾಹೀರಾತುಗಳಿಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಇದೀಗ ಕಾಂಗ್ರೆಸ್ ಟ್ವೀಟ್ ವಾರ್‌ಗೆ ಮುಂದಾಗಿದೆ.
ಪ್ರತಿ ಚುನಾವಣೆಗಳಂತೆಯೇ ಈ ಬಾರಿ ಲೋಕಸಭೆ ಚುನಾವಣೆಯಲ್ಲೂ ಭ್ರಷ್ಟಾಚಾರದ ವಿಷಯ ಮುನ್ನೆಲೆಗೆ ಬಂದಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು “ಲೂಟಿಯಾಗಿರುವ ಒಂದೊಂದು ಪೈಸೆಯನ್ನೂ ಸಹ ವಾಪಸ್ ಜನರಿಗೆ ತಲುಪಿಸುವೆ” ಎಂದು ಹೇಳಿದ್ದು, ಇದಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಬಿಜೆಪಿಯಲ್ಲಿ ಇರುವ ಭ್ರಷ್ಟಾಚಾರಿಗಳ ಪಟ್ಟಿ ಎನ್ನುವ ಹೆಸರಿನಲ್ಲಿ ಬಿಜೆಪಿಯ ಪ್ರಮುಖ ನಾಯಕರ ಹೆಸರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದೆ. ಇದರಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಶಾಸಕರಾದ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿಗೆ ಈತ್ತೀಚೆಗೆ ಸೇರ್ಪಡೆಯಾದ ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ 11 ನಾಯಕರ ಹೆಸರು ಇದೆ.
ಇನ್ನು ಕಾಂಗ್ರೆಸ್ ಮಾಡಿರುವ ಟ್ವೀಟ್‌ನಲ್ಲಿ ಬಸವರಾಜ ಬೊಮ್ಮಾಯಿ(ಪೇ ಸಿಎಂ), ಗಾಲಿ ಜನಾರ್ದನ ರೆಡ್ಡಿ (35 ಸಾವಿರ ಕೋಟಿ ರೂಪಾಯಿ ಗಣಿ ಹಗರಣ), ಕೇಂದ್ರ ಸಚಿವ ನಾರಾಯಣ ರಾಣೆ (ಭೂ ಹಗರಣ), ಹಿಮಂತ್ ಬಿಸ್ವಾ ಶರ್ಮಾ ಮತ್ತು ಸುವೇಂದು ಅಧಿಕಾರಿ (ಶಾರದಾ ಹಗರಣ), ಶಿವರಾಜ್ ಸಿಂಗ್ ಚೌಹಾಣ್(ವ್ಯಾಪಂ ಹಗರಣ), ಪ್ರಫುಲ್ ಪಟೇಲ್(ಏರ್ ಇಂಡಿಯಾ ಹಗರಣ), ರಘುಬರ್ ದಾಸ್(ಟೀ ಶರ್ಟ್ ಹಗರಣ), ಹಸನ್ ಮುಶ್ರಿಫ್(1500 ಕೋಟಿ ರೂಪಾಯಿ ಹಗರಣ), ಅಜಿತ್ ಪವಾರ್(ನೀರಾವರಿ ಹಗರಣ), ಪೆಮಾ ಖಂಡು(2000 ಕೋಟಿ ರೂಪಾಯಿ ಹಗರಣ) ಎಂದು ಟ್ವೀಟ್ ಮಾಡಿದ್ದು, ಈ ನಾಯಕರ ಚಿತ್ರವನ್ನೂ ಹಂಚಿಕೊಂಡಿದೆ.