ನ್ಯಾ. ಕುನ್ಹಾ ವಿರುದ್ಧ ಟೀಕೆ | ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ರಾಜ್ಯಪಾಲರಿಗೆ ದೂರು
ಕೋವಿಡ್ ಭ್ರಷ್ಟಾಚಾರಗಳ ಕುರಿತು ವರದಿ ನೀಡಿರುವ ನ್ಯಾಯಮೂರ್ತಿ ಮೈಕಲ್ ಕುನ್ಹಾ ಅವರನ್ನು ಕಾಂಗ್ರೆಸ್ ಏಜೆಂಟ್ ಎಂದಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಅವರಿಗೆ ಕಾಂಗ್ರೆಸ್ ನಾಯಕರ ನಿಯೋಗ ದೂರು ನೀಡಿದೆ.;
ಕೋವಿಡ್ ಭ್ರಷ್ಟಾಚಾರಗಳ ಕುರಿತು ವರದಿ ನೀಡಿರುವ ನ್ಯಾಯಮೂರ್ತಿ ಮೈಕಲ್ ಕುನ್ಹಾ ಅವರನ್ನು ಕಾಂಗ್ರೆಸ್ ಏಜೆಂಟ್ ಎಂದಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಅವರಿಗೆ ಕಾಂಗ್ರೆಸ್ ನಾಯಕರ ನಿಯೋಗ ದೂರು ನೀಡಿದೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದ ನಿಯೋಗವು ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ. ಮೈಕಲ್ ಕುನ್ಹಾ ಅವರನ್ನು ಕಾಂಗ್ರೆಸ್ ಏಜೆಂಟ್ ಎಂದಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನಡೆ ಖಂಡನೀಯ. ಇದು ಕಮಿಷನ್ ಆಫ್ ಎನ್‌ಕ್ವಯರಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ತನ್ನ ದೂರಿನಲ್ಲಿ ತಿಳಿಸಿದೆ.
ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್, ನಿವೃತ್ತ ನ್ಯಾಯಮೂರ್ತಿ ಕುನ್ಹಾ ಅವರು ಅತ್ಯಂತ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದವರು. ಅಂಥವರ ಬಗ್ಗೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಲ್ಹಾದ್ ಜೋಶಿ ಅವರು ಬೇಜವಾಬ್ದಾರಿ ಹೇಳಿಕೆ ನೀಡಿರುವುದು ಖಂಡನೀಯ. ಕುನ್ಹಾ ನ್ಯಾಯಾಧೀಶರಲ್ಲ, ಪೊಲಿಟಿಕಲ್ ಏಜೆಂಟ್ ಅಂದಿದ್ದಾರೆ. ದುರುದ್ದೇಶದಿಂದ, ಚುನಾವಣಾ ದೃಷ್ಟಿಯಿಂದ ಕುನ್ಹಾ ವರದಿ ನೀಡಿದ್ದಾರೆ. ಜೋಶಿ ಸಾಮಾನ್ಯ ವ್ಯಕ್ತಿಯಲ್ಲ, ಕೇಂದ್ರ ಸಚಿವರು. ಸಂವಿಧಾನದಲ್ಲಿ ಸ್ವಾಯತ್ತ ಸಂಸ್ಥೆಗಳು, ಆಯೋಗಗಳ ಬಗ್ಗೆ ವೈಯುಕ್ತಿಕ ಟೀಕೆ ಸರಿಯಲ್ಲ. ಇದು ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ಧವಾದದ್ದು. ಕಾನೂನು ಬಾಹಿರವೂ ಹೌದು. ನ್ಯಾಯಾಂಗ ತನಿಖಾ ಆಯೋಗದ ವಿರುದ್ಧ ಸಂಶಯ ಪಡುವಂತಿಲ್ಲ. ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯಿಸಿ, ಆದರೆ ನ್ಯಾಯಾಧೀಶರ ಬಗ್ಗೆ ಟೀಕಿಸಬಾರದು. ಅವರು ಕೂಡಲೇ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕಮಿಷನ್ ಆಫ್ ಎನ್‌ಕ್ವಯರಿ ಕಾಯ್ದೆಯಡಿ ಇಂತಹ ಹೇಳಿಕೆಗಳನ್ನು ನೀಡಿದಾಗ 6 ತಿಂಗಳವರೆಗೆ ಶಿಕ್ಷೆ ವಿಧಿಸಲು ಅವಕಾಶವಿದೆ ಎಂದರು.
ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಬೇಕಿದ್ದರೆ ಆಯೋಗದ ವರದಿಯನ್ನು ವಿಮರ್ಶಿಸಲಿ. ಆದರೆ ಕುನ್ಹಾ ಅವರ ವೈಯಕ್ತಿಕ ನಿಂದನೆ ಸರಿಯಲ್ಲ. ಜೋಶಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದುಕೊಂಡು ನಮ್ಮ ತನಿಖಾ ಆಯೋಗಗಳು, ವ್ಯವಸ್ಥೆಗಳ ವಿರುದ್ದ ಮಾತನಾಡುತ್ತಿರುವುದು ದುರಂತ. ಈ ರೀತಿ ನಿಂದನೆಗಳನ್ನು ಮಾಡಿದರೆ ಮುಂದೆ ಯಾರು ಕೂಡ ತನಿಖೆ ನಡೆಸುವ ಜವಾಬ್ದಾರಿ ತೆಗೆದುಕೊಳ್ಳಲು ಬರದಿರುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಹೇಳಿದರು.