ವಿಧಾನಸಭೆ ಕಾರ್ಯದರ್ಶಿ-2 ಹುದ್ದೆ ಸೃಷ್ಟಿ ಜಟಾಪಟಿ: ಪಾಲನೆಯಾಗುತ್ತಿಲ್ಲ ನೇಮಕ ನಿಯಮಗಳು..!
ವೃಂದ ಮತ್ತು ನೇಮಕಾತಿ ನಿಯಮಗಳನ್ನು ಕನಿಷ್ಠ ಮೂರು ವರ್ಷಗಳಿಗೊಮ್ಮೆ ಪುನರಾಲೋಕನ ಮಾಡಿ ಪರಿಷ್ಕರಿಸಿದ ನಿಯಮಗಳನ್ನು ರಚಿಸಬೇಕು. ಸಮಗ್ರವಾಗಿ ಪರಿಷ್ಕರಿಸಿದ ಹೊಸ ನಿಯಮಗಳನ್ನು ರಚಿಸಬೇಕು.;
ಶಾಸನ ರಚನೆಯಲ್ಲಿ ಮಹತ್ವದ ಪಾತ್ರವಹಿಸುವ ವಿಧಾನಸಭೆ ಸಚಿವಾಲಯದಲ್ಲಿ ಕಾರ್ಯದರ್ಶಿ-2 ಹುದ್ದೆ ಸೃಷ್ಟಿಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳ ಪಾಲನೆಯಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿ ಹುದ್ದೆ ಸೃಷ್ಟಿಗೆ ಕಳೆದೊಂದು ವರ್ಷದಿಂದ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಮತ್ತು ಕಂಪ್ಯೂಟರ್ ವಿಭಾಗದ ನಿರ್ದೇಶಕ ಜೆ.ಇ.ಶಶಿಧರ್ ನಡುವೆ ಶೀತಲ ಸಮರ ನಡೆಯುತ್ತಿದೆ. ಕಾರ್ಯದರ್ಶಿ ಹುದ್ದೆಗೆ ಕಾನೂನು ಪದವಿ ಬೇಕು ಎಂಬುದು ವಾದವಾದರೆ, ವೃಂದ ಮತ್ತು ನೇಮಕಾತಿ ನಿಯಮಗಳನ್ನು ಕಾಲಕಾಲಕ್ಕೆ ಪರಿಷ್ಕರಣೆ ಮಾಡಲು ಅವಕಾಶ ಇದೆ ಎಂಬು ಮತ್ತೊಂದು ವಾದವಾಗಿದೆ. ಇದು ಸಚಿವಾಲಯದಲ್ಲಿ ಆರೋಪ-ಪ್ರತ್ಯಾರೋಪದ ಗುದ್ದಾಟಕ್ಕೆ ಸಾಕ್ಷಿಯಾಗಿದೆ.
ಸೇವಾ ನಿಯಮಗಳನ್ನು ಅವಕಾಶ ಬದಲಿಸುವ ಅವಕಾಶ ಇದೆ. ಆದರೂ ಎಂ.ಕೆ.ವಿಶಾಲಾಕ್ಷಿ ಅವರು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ, ಕಾನೂನು ಪದವಿ ಪ್ರಸ್ತುತ ಕಾರ್ಯದರ್ಶಿ ಹುದ್ದೆಗೆ ಕಡ್ಡಾಯ ಇದೆಯೇ ಹೊರತು ಹೊಸದಾಗಿ ಸೃಷ್ಟಿಸುವ ಕಾರ್ಯದರ್ಶಿ-2 ಹುದ್ದೆಗೆ ಅಗತ್ಯ ಇಲ್ಲ. ಹೊಸ ಹುದ್ದೆ ಸೃಷ್ಟಿ ಮಾಡುತ್ತಿರುವ ಕಾರಣ ಎಲ್‌ಎಲ್‌ಬಿ ವಿದ್ಯಾಭ್ಯಾಸದ ಕಡ್ಡಾಯವಾಗಿರುವುದಿಲ್ಲ. ಆದರೂ, ಅದರ ನೆಪವೊಡ್ಡಿ ಹೊಸ ಹುದ್ದೆಗೆ ತಡೆವೊಡ್ಡಲಾಗುತ್ತಿದೆ ಎಂಬ ಆರೋಪಗಳು ಬಲವಾಗಿ ಕೇಳಿಬಂದಿವೆ. ಈ ನಡುವೆ, ಸಭಾಧ್ಯಕ್ಷ ಯು.ಟಿ.ಖಾದರ್ ಸಹ ಹೆಚ್ಚುವರಿ ಕಾರ್ಯದರ್ಶಿ ಹುದ್ದೆ ಸೃಷ್ಟಿಗೆ ಸೂಚನೆ ನೀಡಿದರೂ ಯಾವುದೇ ಕ್ರಮಗೊಂಡಿಲ್ಲ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎನ್ನಲಾಗಿದೆ.
ಮೂರು ವರ್ಷಕ್ಕೊಮ್ಮೆ ನಿಯಮಗಳ ಪರಿಷ್ಕರಣೆ
ಕರ್ನಾಟಕ ರಾಜ್ಯ ಸಿವಿಲ್ ಸೇವಾ ಅಧಿನಿಯಮ ಜಾರಿ ಬಳಿಕ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿನ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸಮಗ್ರವಾಗಿ ಪುನರಾವಲೋಕನ ಮಾಡಿ ಪರಿಷ್ಕರಿಸಿದ ನಿಯಮಗಳನ್ನು ರೂಪಿಸಲು ಕಾಲಕಾಲಕ್ಕೆ ಹಲವು ಸೂಚನೆ ಮತ್ತು ಸ್ಪಷ್ಟೀಕರಣಗಳನ್ನು ನೀಡಲಾಗಿದೆ. ದ ಫೆಡರಲ್ ಕರ್ನಾಟಕಕ್ಕೆ ಈ ಬಗ್ಗೆ ದಾಖಲೆ ಲಭ್ಯವಾಗಿದೆ. ವೃಂದ ಮತ್ತು ನೇಮಕಾತಿ ನಿಯಮಗಳನ್ನು ಕನಿಷ್ಠ ಮೂರು ವರ್ಷಗಳಿಗೊಮ್ಮೆ ಪುನರಾಲೋಕನ ಮಾಡಿ ಪರಿಷ್ಕರಿಸಿದ ನಿಯಮಗಳನ್ನು ರಚಿಸಬೇಕು. ನೇಮಕಾತಿ ನಿಯಮಗಳಿಗೆ ಹಲವು ತಿದ್ದುಪಡಿಗಳನ್ನು ಮಾಡಿದ್ದ ವೇಳೆ ಅವುಗಳನ್ನು ಅಳವಡಿಸಿ ನಿಯಮಗಳನ್ನು ಸಮಗ್ರವಾಗಿ ಪುನರಾವಲೋಕನ ಮಾಡಿ ಪರಿಷ್ಕರಿಸಿದ ಹೊಸ ನಿಯಮಗಳನ್ನು ರಚಿಸಬೇಕು. ಯಾವುದೇ ನೂತನ ಇಲಾಖೆಯ ಅಸ್ತಿತ್ವಕ್ಕೆ ಬಂದ ಒಂದು ವರ್ಷದೊಳಗೆ ಕಡ್ಡಾಯವಾಗಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸಬೇಕು ಎಂದು ಸರ್ಕಾರದ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಕರಡು ತಯಾರಿಸುವ ವೇಳೆ ಗಮನದಲ್ಲಿರಬೇಕಾದ ಅಂಶಗಳು
ಅಸ್ತಿತ್ವದಲ್ಲಿರುವ ನಿಯಮಗಳಲ್ಲಿ ಹುದ್ದೆಗಳಿಗೆ ವಿದ್ಯಾರ್ಹತೆಗಳನ್ನು ನಿಗದಿಪಡಿಸುವ ಮತ್ತು ಈಗಾಗಲೇ ನಿಗದಿಪಡಿಸಿರುವ ವಿದ್ಯಾರ್ಹತೆಗಳನ್ನು ಕಾಲಕ್ಕನುಗುಣವಾಗಿ ಮಾರ್ಪಡಿಸಬೇಕು. ಕೇಂದ್ರ ಸರ್ಕಾರವು ಕಾಲಕಾಲಕ್ಕೆ ನಿಗದಿಪಡಿಸುವ ವಿದ್ಯಾರ್ಹತೆಯನ್ನು ನಿಯಮಗಳಲ್ಲಿ ಅಳವಡಿಸಬೇಕು ಎಂದು ತಿಳಿಸಲಾಗಿದೆ. ಇಲಾಖೆಯ ಅಗತ್ಯಕ್ಕೆಗನುಗುಣವಾಗಿ ವೃಂದ ಬಲವನ್ನು ಪರಿಷ್ಕರಿಸುವುದು ಮತ್ತು ಕಡಿತಗೊಳಿಸಬಹುದು. ನಿಯಮಗಳನ್ನು ರೂಪಿಸುವ ಅಥವಾ ಅವುಗಳಿಗೆ ತಿದ್ದುಪಡಿ ಮಾಡುವಾಗ ನೌಕರರ ಸೇವಾ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಬೇಕು ಎಂಬುದನ್ನು ಗಮನಿಸಬೇಕು ಎಂದು ತಿಳಿಸಲಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಆರ್ಥಿಕ ಇಲಾಖೆ ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಶಾಸನ ರಚನಾ ಇಲಾಖೆಯೊಂದಿಗೆ ಟಿಪ್ಪಣಿಯೊಂದಿಗೆ ಸಮಾಲೋಚಿಸಬೇಕು. ಈ ಮೂರು ಇಲಾಖೆಗಳ ಅಭಿಪ್ರಾಯಗಳೊಂದಿಗೆ ನಿಯಮಗಳ ಕರಡನ್ನು ಆಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ ಅಥವಾ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿನ ವೃಂದ ಪರಿಶೀಲನಾ ಉಪಸಮಿತಿ ಸಭೆಯಲ್ಲಿ ಪರಿಶೀಲನೆ ನಡೆಸಬೇಕು ಎಂದು ಹೇಳಲಾಗಿದೆ.
ಸಭಾಧ್ಯಕ್ಷರಿಂದ ಆರ್ಥಿಕ ಇಲಾಖೆಗೆ ಪತ್ರ
ಕಾರ್ಯದರ್ಶಿ-2 ಹುದ್ದೆಯ ಸೃಷ್ಟಿಯ ಸಂಬಂಧ ಸಭಾಧ್ಯಕ್ಷ ಯು.ಟಿ.ಖಾದರ್ ಆರ್ಥಿಕ ಇಲಾಖೆಗೆ ಪತ್ರ ಬರೆದಿದ್ದಾರೆ. ವಿಧಾನಸಭೆಯ ಸಚಿವಾಲಯದ ಸುಗಮ ಮತ್ತು ಪರಿಣಾಮಕಾರಿ ಕಾರ್ಯನಿರ್ವಹಣೆಯ ಹಿತದೃಷ್ಟಿಯಿಂದ ಮತ್ತು ದೈನಂದಿನ ಕೆಲಸವನ್ನು ತ್ವರಿತವಾಗಿ ವಿಲೇವಾರಿ ಮಾಡಲು ಕಾರ್ಯದರ್ಶಿ-2 ಹುದ್ದೆಯನ್ನು ಸೃಷ್ಟಿಸಬೇಕಾಗಿದೆ. ಹೀಗಾಗಿ ಕಾರ್ಯದರ್ಶಿ-2 ಹುದ್ದೆಯನ್ನು ರಚಿಸಲು ಪ್ರಸ್ತಾಪಿಸುತ್ತೇನೆ. ಕಾರ್ಯದರ್ಶಿ-2 ಹುದ್ದೆಯು 1,04,600 ರೂ.ನಿಂದ 1,50,600 ವೇತನ ಶ್ರೇಣಿಯಲ್ಲಿರುತ್ತದೆ. ಈ ಹುದ್ದೆಯನ್ನು ರಚಿಸುವುದರಿಂದ ರಾಜ್ಯದ ಖಜಾನೆಗೆ ಯಾವುದೇ ಹೆಚ್ಚುವರಿ ಹೊರೆ ಇರುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಅಧಿವೇಶನದ ಕೆಲಸವನ್ನು ಹೊರತುಪಡಿಸಿ, ದೈನಂದಿನ ವ್ಯವಹಾರಗಳನ್ನು ನಿರ್ವಹಿಸುವ ಗುರುತರ ಜವಾಬ್ದಾರಿಯನ್ನು ವಿಧಾನಸಭೆಯ ಕಾರ್ಯದರ್ಶಿ ಹೊಂದಿದ್ದಾರೆ. ಅಧಿವೇಶನ ಇಲ್ಲದ ಅವಧಿಯಲ್ಲಿಯೂ ಸಹ, ಕಾರ್ಯದರ್ಶಿಯವರಿಗೆ ಸಾಕಾಷ್ಟು ಹೊಣೆಗಾರಿಕೆಗಳು ಇರುತ್ತವೆ. ಶಾಸಕರ ಗೃಹ ವ್ಯವಹಾರಗಳು, ಲೆಕ್ಕಪತ್ರಗಳು, ಗ್ರಂಥಾಲಯ, ಅನುವಾದ ಸೇರಿದಂತೆ ಹಲವು ಕೆಲಸಗಳು ಇರುತ್ತವೆ. ಅಲ್ಲದೇ, ದೈನಂದಿನ ಆಡಳಿತಾತ್ಮಕ ಕೆಲಸಗಳ ಜತೆಗೆ 16 ಕ್ಕೂ ಹೆಚ್ಚು ಸ್ಥಾಯಿ ಸಮಿತಿಗಳು, ತಾತ್ಕಾಲಿಕ ಸಮಿತಿಗಳು, ಆಯ್ಕೆ ಮತ್ತು ಜಂಟಿ ಆಯ್ಕೆ ಸಮಿತಿಗಳನ್ನು ನೋಡಿಕೊಳ್ಳುವ ಹೊಣೆಗಾರಿಕೆ ಇದೆ. ಈ ಎಲ್ಲಾ ಕಾರಣಕ್ಕಾಗಿ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಯನ್ನು ಸೃಷ್ಟಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಆರ್ಥಿಕ ಇಲಾಖೆಯಿಂದಲೂ ಸಹಮತ
ವಿಧಾನಸಭೆ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿ ಹುದ್ದೆ ಸೃಷ್ಟಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗೆ ಒಪ್ಪಿಗೆ ನೀಡಿ ವಿಧಾನಸಭೆ ಕಾರ್ಯದರ್ಶಿ ಅವರಿಗೆ ಆರ್ಥಿಕ ಇಲಾಖೆ ಬರೆದಿರುವ ಪತ್ರವು ದ ಫೆಡರಲ್ ಕರ್ನಾಟಕಕ್ಕೆ ಲಭ್ಯವಾಗಿದೆ. ವಿಧಾನಸಭೆ ಸಚಿವಾಲಯಕ್ಕೆ ಕಾರ್ಯದರ್ಶಿ-2 ಹುದ್ದೆಯನ್ನು ಸೃಷ್ಟಿಸಲು ಆರ್ಥಿಕ ಇಲಾಖೆ ಸಮ್ಮತಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕಾಯ್ದೆ ತಿದ್ದುಪಡಿಗೆ ಅಗತ್ಯ ಇಲ್ಲ
ಕಾರ್ಯದರ್ಶಿ ಹುದ್ದೆಗೆ ಅಗತ್ಯ ಇರುವ ಎಲ್‌ಎಲ್‌ಬಿ ವಿದ್ಯಾರ್ಹತೆಯನ್ನು ಬದಲಿಸಲು ಸಂಬಂಧಪಟ್ಟ ಕಾಯ್ದೆಗೆ ತಿದ್ದುಪಡಿ ಅಗತ್ಯ ಇದೆ. ಆದರೆ, ಪ್ರಸ್ತುತ ಕಾರ್ಯದರ್ಶಿ ಹುದ್ದೆಗೆ ಯಾವುದೇ ರೀತಿಯಲ್ಲಿಯೂ ಧಕ್ಕೆಯಾಗುವುದಿಲ್ಲ. ಹೆಚ್ಚುವರಿ ಕಾರ್ಯದರ್ಶಿ ಹುದ್ದೆ ಸೃಷ್ಟಿಸುತ್ತಿರುವುದರಿಂದ ವಿದ್ಯಾರ್ಹತೆಯನ್ನು ನಿಗದಿ ಮಾಡಬೇಕಾಗುತ್ತದೆ. ಇದಕ್ಕೆ ಪದವಿ ವಿದ್ಯಾರ್ಹತೆಯನ್ನು ನಿಗದಿಗೊಳಿಸಿದರೆ ಸಾಕಾಗುತ್ತದೆ. ಆದರೆ, ವಿದ್ಯಾರ್ಹತೆಯನ್ನು ಬದಲಿಸಿಲು ಕಾಯ್ದೆ ತಿದ್ದುಪಡಿ ಮಾಡಬೇಕು ಎಂಬ ಸುದ್ದಿ ಹಬ್ಬಿಸಲಾಗುತ್ತಿದೆ. ಈ ಮೂಲಕ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಸಚಿವಾಲಯದ ಮೂಲಗಳು ಹೇಳಿವೆ.
ಈ ಬಗ್ಗೆ ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿಯ ಅಧ್ಯಕ್ಷ ಡಿ. ಶಿವಶಂಕರ್, ಲೋಕಸಭೆ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೆಚ್ಚುವರಿ ಕಾರ್ಯದರ್ಶಿ ಹುದ್ದೆ. ಅಲ್ಲಿ ಕಾನೂನು ಪದವಿಯ ಅರ್ಹತೆಯ ಮೇರೆಗೆ ನೇಮಕ ಮಾಡಿಲ್ಲ. ಕೇವಲ ಪದವಿ ಅರ್ಹತೆಯನ್ನು ಮಾತ್ರ ಪರಿಗಣಿಸಲಾಗುತ್ತದೆ. ಲೋಕಸಭೆ ಮತ್ತು ಅರುಣಾಚಲ ಪ್ರದೇಶ, ಅಸ್ಸಾಂ, ಛತ್ತೀಸ್‌ಘಡ್, ದೆಹಲಿ, ಹಿಮಾಚಲಪ್ರದೇಶ, ಜಾರ್ಖಂಡ್, ಮಿಜೋರಾಂ, ಪಂಜಾಬ್, ಸಿಕ್ಕಿಂ, ತಮಿಳುನಾಡು, ಉತ್ತರಪ್ರದೇಶ, ಜಾರ್ಖಂಡ್ ರಾಜ್ಯದಲ್ಲಿ ಹೆಚ್ಚುವರಿ ಕಾರ್ಯದರ್ಶಿ ಹುದ್ದೆ ಇದ್ದು, ಪದವಿ ಅರ್ಹತೆಯನ್ನು ಪರಿಗಣಿಸಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿಯೂ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಯನ್ನು ಸೃಷ್ಟಿಸಿ, ಕಂಪ್ಯೂಟರ್ ವಿಭಾಗದ ನಿರ್ದೇಶಕ ಜೆ.ಇ.ಶಶಿಧರ್ ಅವರಿಗೆ ಆ ಹುದ್ದೆಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.