ಪಿಜಿ ಮಾಲೀಕನಿಂದ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಆರೋಪಿ ಬಂಧನ
ಸೋಲದೇವನಹಳ್ಳಿಯಲ್ಲಿರುವ ಪಿಜಿಗೆ ವಿದ್ಯಾರ್ಥಿನಿ ಕೇವಲ 10 ದಿನಗಳ ಹಿಂದಷ್ಟೇ ಸೇರಿದ್ದರು. ಕಳೆದ ಶನಿವಾರ ತಡರಾತ್ರಿ ಪಿಜಿ ಮಾಲೀಕ ಅಶ್ರಫ್ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೋಯ್ದು, ಅತ್ಯಾಚಾರ ಎಸಗಿದ್ದ;
ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿರುವ ಸೋಲದೇವನಹಳ್ಳಿಯಲ್ಲಿ ಕಾಲೇಜಿನ ವಿದ್ಯಾರ್ಥಿನಿ ಮೇಲೆ ಲೇಡಿಸ್ ಪಿಜಿ ಮಾಲೀಕನಿಂದ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.
ಸಂತ್ರಸ್ಥೆ ನೀಡಿದ ದೂರಿನ ಆಧಾರದ ಮೇಲೆ ಸೋಲದೇವನಹಳ್ಳಿ ಠಾಣೆ ಪೊಲೀಸರು ಪಿಜಿ ಮಾಲೀಕ ಅಶ್ರಫ್ ಎಂಬಾತನನ್ನು ಬಂಧಿಸಿದ್ದಾರೆ.
ಸೋಲದೇವನಹಳ್ಳಿಯಲ್ಲಿರುವ ಪಿಜಿಗೆ ವಿದ್ಯಾರ್ಥಿನಿ ಕೇವಲ 10 ದಿನಗಳ ಹಿಂದಷ್ಟೇ ಸೇರಿದ್ದರು. ಕಳೆದ ಶನಿವಾರ ತಡರಾತ್ರಿ ಪಿಜಿ ಮಾಲೀಕ ಅಶ್ರಫ್ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೋಯ್ದು, ಅತ್ಯಾಚಾರ ಎಸಗಿದ್ದ. ವಿದ್ಯಾರ್ಥಿನಿ ನೀಡಿದ ದೂರಿನ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಇತ್ತೀಚೆಗೆ ಬೆಂಗಳೂರು ಮೂಲದ ವಿದ್ಯಾರ್ಥಿನಿಗೆ ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೂಡಬಿದರೆಯ ಇಬ್ಬರು ಉಪನ್ಯಾಸಕರು ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದರು.
ಭೌತವಿಜ್ಞಾನ ಉಪನ್ಯಾಸಕ ನರೇಂದ್ರ, ಜೀವವಿಜ್ಞಾನ ಉಪನ್ಯಾಸಕ ಸಂದೀಪ್, ಹಾಗೂ ಆತನ ಗೆಳೆಯ ಅನೂಪ್ ಎಂಬಾತ ಸೇರಿ ವಿದ್ಯಾರ್ಥಿನಿಯನ್ನು ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ ಎಸಗಿದ್ದರು.
ಮೂಡಬಿದಿರೆ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಗೆ ಅದೇ ಕಾಲೇಜಿನ ಉಪನ್ಯಾಸಕ ನರೇಂದ್ರ ನೋಟ್ಸ್ ನೀಡುವ ನೆಪದಲ್ಲಿ ಹತ್ತಿರವಾಗಿದ್ದ. ಮೊಬೈಲ್ನಲ್ಲಿ ಚಾಟಿಂಗ್ ಮಾಡಿ ವಿದ್ಯಾರ್ಥಿನಿ ಜೊತೆ ಸಲುಗೆ ಬೆಳೆಸಿಕೊಂಡಿದ್ದ. ಬಳಿಕ ಇದೇ ನರೇಂದ್ರ ವಿದ್ಯಾರ್ಥಿನಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಮಾರತ್ತಹಳ್ಳಿಯಲ್ಲಿರುವ ಗೆಳೆಯನ ರೂಮ್ನಲ್ಲಿ ಅತ್ಯಾಚಾರ ಎಸಗಿದ್ದ. ಉಪನ್ಯಾಸಕ ನರೇಂದ್ರನ ಬಳಿಕ ಸಂದೀಪ್ ಸಹ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ್ದ. ಬಳಿಕ ಆತನ ಸ್ನೇಹಿತ ಕೂಡ ಅತ್ಯಾಚಾರ ಎಸಗಿ ಕ್ರೌರ್ಯ ಮೆರೆದಿದ್ದ. ಉಪನ್ಯಾಸಕರ ಉಪಟಳ ಹೆಚ್ಚಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ, ಪೋಷಕರಿಗೆ ವಿಷಯ ತಿಳಿಸಿದ್ದಳು. ಅಲ್ಲದೇ, ಮಹಿಳಾ ಆಯೋಗಕ್ಕೂ ದೂರು ನೀಡಿದ್ದಳು. ಸಂತ್ರಸ್ತೆಯ ದೂರಿನ ಮೇರೆಗೆ ಮಾರತ್ತಹಳ್ಳಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು.