ಹೈಕಮಾಂಡ್ ಎಚ್ಚರಿಕೆಗೆ ತಣ್ಣಗಾದ ಸಿಎಂ | ಪಾಕಿಸ್ತಾನದ ಪರ ಘೋಷಣೆ ದೇಶದ್ರೋಹ ಎಂದ ಸಿದ್ದರಾಮಯ್ಯ
ಪಾಕಿಸ್ತಾನದ ಜೊತೆ ಯುದ್ಧ ಬೇಡ ಎಂಬ ಸಿಎಂ ಹೇಳಿಕೆಗೆ ಕಾಂಗ್ರೆಸ್ ಆಂತರಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು. ಆದ್ದರಿಂದ ಪಹಲ್ಗಾಮ್ ದಾಳಿ ಕುರಿತು ಯಾರೂ ಹೇಳಿಕೆ ನೀಡದಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಕಟ್ಟಪ್ಪಣೆ ಮಾಡಿತ್ತು.;
ಪಾಕಿಸ್ತಾನದ ಜೊತೆ ಯುದ್ಧ ಬೇಡ ಎಂದು ಹೇಳುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಪಾಕಿಸ್ತಾನದ ವಿಷಯ ಪ್ರಸ್ತಾಪ ಮಾಡುವ ವೇಳೆ ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ.
ಸಿಎಂ ಹೇಳಿಕೆಗೆ ಪರ-ವಿರೋಧದ ಚರ್ಚೆಗಳು ಕಾವೇರುತ್ತಿದ್ದಂತೆ ತಮ್ಮ ಹೇಳಿಕೆ ಸ್ಪಷ್ಟೀಕರಣ ನೀಡಿದ್ದರು. ಆದರೆ, ಸಿದ್ದರಾಮಯ್ಯ ಅವರ ಹೇಳಿಕೆಯನ್ನೇ ಪ್ರತಿಪಕ್ಷ ಬಿಜೆಪಿ ಅಸ್ತ್ರವನ್ನಾಗಿ ಬಳಸಿಕೊಂಡಿತ್ತು. ಈ ಮಧ್ಯೆ ಸಿದ್ದರಾಮಯ್ಯ ಅವರ ಯುದ್ಧದ ಕುರಿತ ಹೇಳಿಕೆ ಪಾಕಿಸ್ತಾನದ ಮಾಧ್ಯಮಗಳಲ್ಲೂ ಪ್ರಸಾರಗೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದರು.
ಪಹಲ್ಗಾಮ್ ದಾಳಿ ನಂತರ ಪಾಕಿಸ್ತಾನ ಹಾಗೂ ಭಾರತದ ನಡುವಿನ ರಾಜತಾಂತ್ರಿಕ ಸಂಬಂಧ ಬಿಗಡಾಯಿಸಿದ್ದ ಹೊತ್ತಲ್ಲೇ ಸಿಎಂ ಹೇಳಿಕೆ ಕಾಂಗ್ರೆಸ್ ಆಂತರಿಕ ವಲಯದಲ್ಲೂ ವಿರೋಧಕ್ಕೆ ಕಾರಣವಾಗಿತ್ತು. ಹಾಗಾಗಿ ಪಹಲ್ಗಾಮ್ ದಾಳಿ ಕುರಿತು ಯಾರೂ ಹೇಳಿಕೆ ನೀಡದಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಕಟ್ಟಪ್ಪಣೆ ಮಾಡಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಆರ್.ಬಿ ತಿಮ್ಮಾಪುರ, ಸಂತೋಷ್ ಲಾಡ್ ಸೇರಿ ಹಲವರು ಸಿದ್ದರಾಮಯ್ಯ ಅವರ ವಿವಾದಾತ್ಮಕ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಪಹಲ್ಗಾಮ್ ದಾಳಿ ಸಂಬಂಧ ಕೇಂದ್ರ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಧಾರಗಳಿಗೆ ಸಹಮತವಿದೆ ಎಂದಿದ್ದ ಕಾಂಗ್ರೆಸ್ ಹೈಕಮಾಂಡ್‌ಗೆ ನಾಯಕರ ಹೇಳಿಕೆಗಳು ಮುಗುಜರ ತಂದೊಡ್ಡಿದ್ದವು.
ಪಾಕ್ ಪರ ಘೋಷಣೆ ದೇಶದ್ರೋಹ ಎಂದ ಸಿಎಂ
ಪಹಲ್ಗಾಮ್ ದಾಳಿ ನಂತರದ ಬೆಳವಣಿಗೆಗಳು ಹಾಗೂ ಪಕ್ಷದ ಹೈಕಮಾಂಡ್ ಎಚ್ಚರಿಕೆ ಬಳಿಕ ಎಚ್ಚೆತ್ತುಕೊಂಡ ಸಿಎಂ ಸಿದ್ದರಾಮಯ್ಯ ಅವರು ಪಾಕಿಸ್ತಾನದ ಪರವಾಗಿ ಯಾರೇ ಮಾತನಾಡಿದರೂ ಅದು ದೇಶದ್ರೋಹ ಎಂದು ಹೇಳುವ ಮೂಲಕ ಮೃಧು ಧೋರಣೆಯಿಂದ ಹಿಂದೆ ಸರಿದಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲೆ ಗುಂಪು ಹತ್ಯೆ ಮಾಡಿದ ಪ್ರಕರಣದಲ್ಲಿ ಈಗಾಗಲೇ 15 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ತನಿಖೆಯೂ ನಡೆಯುತ್ತಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು. ಯಾರೇ ಪಾಕಿಸ್ತಾನದ ಪರವಾಗಿ ಮಾತನಾಡಿದರೆ ಅದು ತಪ್ಪು ಎಂದು ಹೇಳಿದ್ದಾರೆ.
ಇನ್ನೊಂದೆಡೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಕೂಡ ಭಾರತದಲ್ಲಿದ್ದುಕೊಂಡು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುವವರನ್ನು ನಾನು ಬೆಂಬಲಿಸುವುದಿಲ್ಲ. ನನ್ನ ಮನೆಯವರೇ ಹಾಗೆ ಕೂಗಿದ್ದರೂ ಅವರ ಮೇಲೆ ಕ್ರಮವಾಗಬೇಕು' ಎಂದು ಮೈಸೂರಿನಲ್ಲಿ ತಿಳಿಸಿದ್ದಾರೆ.