Mysore MUDA case | ಸಿಎಂ ಆಪ್ತ ಸಹಾಯಕರಿಗೆ ಇಡಿ ಡ್ರಿಲ್, ನಿವೃತ್ತ ಜಿಲ್ಲಾಧಿಕಾರಿ ವಿಚಾರಣೆ
ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು 13 ನಿವೇಶನ ಕೋರಿ ಮುಡಾಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅಧಿಕಾರಿಗಳು 14 ನಿವೇಶನಗಳನ್ನು ಮಂಜೂರು ಮಾಡಿರುವ ಸಂಗತಿಯೂ ತನಿಖೆಯಿಂದ ಬೆಳಕಿಗೆ ಬಂದಿದೆ.;
ಮುಡಾ ಹಗರಣ ಸಂಬಂಧ ಮೂರು ತನಿಖಾ ಸಂಸ್ಥೆಗಳಿಂದ ಪ್ರತ್ಯೇಕ ತನಿಖೆ ನಡೆಯುತ್ತಿದ್ದು, ಪ್ರಕರಣವು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಲೋಕಾಯುಕ್ತ ಪೊಲೀಸ್, ನ್ಯಾಯಾಂಗ ಆಯೋಗ ಹಾಗೂ ಜಾರಿ ನಿರ್ದೇಶನಾಲಯವು (ಇಡಿ) ಪ್ರಕರಣದ ಆಳ ಅಗಲವನ್ನು ಕೆದಕುತ್ತಿವೆ.
ಇಡಿ ಅಧಿಕಾರಿಗಳು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಖಾಸಗಿ ಆಪ್ತ ಸಹಾಯಕ ಸಿ.ಟಿ.ಕುಮಾರ್(ಎಸ್.ಜಿ ದಿನೇಶ್‌ಕುಮಾರ್) ಹಾಗೂ ಮೈಸೂರಿನ ನಿವೃತ್ತ ಜಿಲ್ಲಾಧಿಕಾರಿ, ಹಾಲಿ ರಾಯಚೂರು ಸಂಸದ ಜಿ. ಕುಮಾರ್ ನಾಯಕ್ ಅವರನ್ನು ನಿವೇಶನ ಹಂಚಿಕೆ, ಭೂ ಪರಿವರ್ತನೆ ಕುರಿತು ವಿಚಾರಣೆಗೆ ಒಳಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು 13 ನಿವೇಶನ ಕೋರಿ ಮುಡಾಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅಧಿಕಾರಿಗಳು 14 ನಿವೇಶನಗಳನ್ನು ಮಂಜೂರು ಮಾಡಿರುವ ಸಂಗತಿಯೂ ತನಿಖೆಯಿಂದ ಬೆಳಕಿಗೆ ಬಂದಿದೆ.
ಇನ್ನು ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಮೈಸೂರು ಹಾಗೂ ವರುಣಾ ಕ್ಷೇತ್ರದ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದ ಸಿ.ಟಿ.ಕುಮಾರ್ ಅವರೇ 2014ರಿಂದ ಮುಡಾ ಕೇಸ್ ನೋಡಿಕೊಳ್ಳುತ್ತಿದ್ದರು. ಪಾರ್ವತಿ ಅವರ ಪರವಾಗಿ ಪ್ರತಿ ಹಂತದಲ್ಲೂ ಅರ್ಜಿ ವಿಲೇವಾರಿ ಮಾಡಿದ್ದರು. ಜೊತೆಗೆ ಇದೇ ಸಿ.ಟಿ. ಕುಮಾರ್ ಅವರೇ ಅರ್ಜಿ ಹಾಕಿ ಪಾರ್ವತಿಯವರ ಹೆಸರಿಗೆ ನಿವೇಶನ ನೋಂದಣಿ ಮಾಡಿಸಿದ್ದರು. 2022ರಲ್ಲಿ ಖಾತೆಗಾಗಿ ಪಾರ್ವತಿ ಅವರ ಹೆಸರಲ್ಲಿ ಹಾಕಿದ್ದ ಅರ್ಜಿಗೂ ಸಿ.ಟಿ.ಕುಮಾರ್ ಸಹಿ ಮಾಡಿದ್ದರೆಂಬ ಆರೋಪವೂ ಇದೆ. ವಿಜಯನಗರ 3 ನೇ ಹಂತ ಸಿ,ಡಿ,ಇ ಮತ್ತು ಜಿ ಬ್ಲಾಕ್ ನಲ್ಲಿ ನಿವೇಶನ ಸಂ. 25, 331, 332, 213, 214, 215, 05 ಮತ್ತು ವಿಜಯನಗರ 4 ನೇ ಹಂತ 2 ನೇ ಫೇಸ್ ನಿವೇಶನ ಸಂಖ್ಯೆ 5108, 5085, 11189, 10855, 12065, & 12068 ಸಂಖ್ಯೆಯ ನಿವೇಶನ ಖಾತೆಗಾಗಿ ಸಿ.ಟಿ. ಕುಮಾರ್ ಸಿಎಂ ಪತ್ನಿ ಹೆಸರಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಸಿ.ಟಿ. ಕುಮಾರ್ ಅವರನ್ನು ಬೆಂಗಳೂರಿನ ಇಡಿ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂಸದ ಕುಮಾರ್‌ನಾಯಕ್ ವಿಚಾರಣೆ
ಇನ್ನು ಮುಡಾ ಹಗರಣಕ್ಕೆ ಸಂಬಂಧಿಸಿ ಮೈಸೂರಿನ ನಿವೃತ್ತ ಜಿಲ್ಲಾಧಿಕಾರಿ, ಹಾಲಿ ರಾಯಚೂರು ಸಂಸದ ಕುಮಾರ್ ನಾಯಕ್ ಅವರನ್ನೂ ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ಮುಡಾ ಜಮೀನು ಭೂ ಪರಿವರ್ತನೆಗೆ ಸಂಬಂಧಿಸಿ ಕುಮಾರ್ ನಾಯಕ್ ಅವರನ್ನು ವಿಚಾರಣೆ ನಡೆಸಲಾಗಿದೆ. 2000ನೇ ಸಾಲಿನಲ್ಲಿ ಜಮೀನು ಮಾಲೀಕ ದೇವರಾಜು ಭೂ ಸ್ವಾಧೀನ ಕೈಬಿಡುವಂತೆ ಪತ್ರ ಬರೆದಿದ್ದರು. ಆಗ ಜಿಲ್ಲಾಧಿಕಾರಿಯಾಗಿದ್ದ ಕುಮಾರ್ ನಾಯಕ್ ಅವರು ಮುಡಾ ಮತ್ತು ತಹಶೀಲ್ದಾರರಿಗೆ ಸ್ಥಳ ಪರಿಶೀಲಿಸಲು ಸೂಚಿಸಿದ್ದರು. ಆದರೆ, ಅಂದಿನ ತಹಶೀಲ್ದಾರ್ ಅವರು ಸ್ಥಳ ಪರಿಶೀಲನೆ ಮಾಡದೆಯೇ ವರದಿ ನೀಡಿದ್ದರು ಎಂದು ತಿಳಿದುಬಂದಿದೆ.
ತಹಶೀಲ್ದಾರ್ ವರದಿ ಆಧರಿಸಿ 2003ರಲ್ಲಿ ಮುಡಾ ಸ್ವಾಧೀನದಲ್ಲಿದ್ದ ಭೂಮಿಯನ್ನು ಕೃಷಿ ಭೂಮಿಯಾಗಿ ಪರಿವರ್ತಿಸಿದ್ದರು. ನಂತರ 2004ರಲ್ಲಿ ಸಿಎಂ ಭಾಮೈದ ಮಲ್ಲಿಕಾರ್ಜುನ ಸ್ವಾಮಿಗೆ ದೇವರಾಜು ಭೂಮಿ ಮಾರಾಟ ಮಾಡಿದ್ದರು. ಇದಾದ ಬಳಿಕ ಭೂಮಿಯನ್ನು ಮತ್ತೆ ಮುಡಾ ಸ್ವಾಧೀನಕ್ಕೆ ಪಡೆದಿತ್ತು. ಈ ಎಲ್ಲಾ ಅಂಶಗಳನ್ನು ಆಧರಿಸಿ ಸಂಸದ ಕುಮಾರ್ ನಾಯಕ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.