ಕಿತ್ತೂರು ಉತ್ಸವ | ಜ್ಯೋತಿ ರಥಯಾತ್ರೆ ಸಮಾರಂಭದಲ್ಲಿ ಸಿಎಂ ಶಲ್ಯಕ್ಕೆ ತಗುಲಿದ ಬೆಂಕಿ

Update: 2024-10-02 08:17 GMT

ಕಿತ್ತೂರು ಉತ್ಸವದ ರಥಕ್ಕೆ ಹಸಿರು ನಿಶಾನೆ ತೋರಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಲ್ಯಕ್ಕೆ ಬೆಂಕಿ ತಗುಲಿದ ಘಟನೆ  ನಡೆದಿದೆ.

ವಿಧಾನಸೌಧದ ಮುಂದಿನ ಮೆಟ್ಟಿಲುಗಳ ಮೇಲೆ ಕಿತ್ತೂರು ವಿಜಯೋತ್ಸವದ ಜ್ಯೋತಿಗೆ ಚಾಲನೆ ನೀಡಿ, ರಥಕ್ಕೆ ಹಸಿರು ನಿಶಾಲೆ ತೋರುವಾಗ ಶಲ್ಯಕ್ಕೆ ಬೆಂಕಿ ತಗುಲಿದೆ. ಕೂಡಲೇ ಸಿಎಂ ಅವರ ಗನ್‌ ಮ್ಯಾನ್‌ ಬೆಂಕಿ ನಂದಿಸಿದ್ದು, ಅನಾಹುತ ತಪ್ಪಿದಂತಾಗಿದೆ.

ಇತ್ತೀಚಿಗಷ್ಟೇ ಕಾವೇರಿ ನಿವಾಸದಲ್ಲಿ ಜನರ ಸಮಸ್ಯೆ ಆಲಿಸಿ ಅರ್ಜಿ ಸ್ವೀಕರಿಸುವ ವೇಳೆ ಸಿಎಂ ಸಿದ್ದರಾಮಯ್ಯ ಅವರ ಕೈಗೆ ಗುಂಡುಸೂಜಿ ಚುಚ್ಚಿ ಗಾಯವಾಗಿತ್ತು. ಗಾಯವಾಗಿದ್ದ ಬೆರಳಿಗೆ ಕರವಸ್ತ್ರ ಸುತ್ತಿಕೊಂಡು ವಿಧಾನಸೌಧಕ್ಕೆ ತೆರಳಿದ್ದರು. ಆದರೆ, ರಕ್ತ ಮಾತ್ರ ನಿಂತಿರಲಿಲ್ಲ. ಕೂಡಲೆ ವೈದ್ಯರು ಸಿದ್ದರಾಮಯ್ಯ ಅವರ ಬೆರಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು.

ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ರಾಣಿ ಚನ್ನಮ್ಮ

ಇನ್ನು "ಕಿತ್ತೂರು ವಿಜಯೋತ್ಸವದ ಜ್ಯೋತಿ" ಗೆ ಚಾಲನೆ ನೀಡಿ ಮಾತನಾಡಿದ ಸಿದ್ದರಾಮಯ್ಯ ಅವರು, ಜ್ಯೋತಿ ರಥಯಾತ್ರೆ ಎಲ್ಲಾ ಜಿಲ್ಲೆಗಳನ್ನು ಹಾದು ಕಿತ್ತೂರು ತಲುಪಲಿದೆ.

ಬ್ರಿಟಿಷರ ವಿರುದ್ಧ ನೇರ ಸವಾಲೊಡ್ಡಿದ ದಿಟ್ಟ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ. ಸಂಗೊಳ್ಳಿ ರಾಯಣ್ಣ ಕೂಡ ಅವರ ಸೈನ್ಯದಲ್ಲಿದ್ದರು. ಬ್ರಿಟೀಷರಿಗೆ ತೆರಿಗೆ ಕೊಡಲು ವಿರೋಧಿಸಿ ವಿರೋಚಿತವಾಗಿ ಹೋರಾಡಿದ ದೇಶಪ್ರೇಮಿ ಕಿತ್ತೂರು ಚನ್ನಮ್ಮ ಎಂದರು.

ನಾಡಪ್ರೇಮ, ದೇಶಪ್ರೇಮ, ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ರಾಣಿ ಚನ್ನಮ್ಮ. ಕಿತ್ತೂರಿನಲ್ಲಿ ಆಚರಿಸಲಾಗುವ ಕಿತ್ತೂರು ಉತ್ಸವಕ್ಕೆ ಮತ್ತು ಕಿತ್ತೂರಿನ‌ ಅಭಿವೃದ್ಧಿಗೆ ಸರ್ಕಾರ ಸಕಲ ನೆರವನ್ನು ನೀಡುತ್ತಿದೆ. ಅಗತ್ಯ ಅನುದಾನವನ್ನೂ ನೀಡುತ್ತಿದೆ ಎಂದೂ ಸಿದ್ದರಾಮಯ್ಯ ಹೇಳಿದರು.

ಇಂದು ಮಹಾತ್ಮ ಗಾಂಧಿಯವರ ಜಯಂತಿ. ಜೊತೆಗೆ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನುಮದಿನವೂ ಹೌದು. ಗಾಂಧಿ ನಡಿಗೆ ಮೂಲಕ ಗಾಂಧಿ ತತ್ವಾದರ್ಶಗಳನ್ನು ಇವತ್ತಿನ ಯುವ ಪೀಳಿಗೆಗೆ ತಲುಪಿಸುವ ಪ್ರಯತ್ನ ಮಾಡಿದ್ದೇವೆ ಎಂದರು.

ಗಾಂಧೀಜಿಯವರು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನೇತೃತ್ವ ವಹಿಸಿ ಶಾಂತಿಯುತವಾಗಿ ಸ್ವಾತಂತ್ರ್ಯ ದೊರಕಿಸಿಕೊಟ್ಟರು. 1920 ರಿಂದ 1947 ರ ವರೆಗಿನ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದರು ಎಂದು ವಿವರಿಸಿದರು.

Tags:    

Similar News