ಜಾತಿಗಣತಿ ವರದಿಗೆ ತಾತ್ವಿಕ ಒಪ್ಪಿಗೆ, ಮರುಗಣತಿಗೆ ಸಿದ್ದರಾಮಯ್ಯ ಸರ್ಕಾರ ನಿರ್ಧಾರ

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆಯೂ ಚರ್ಚಿಸಲಾಗಿದ್ದು, ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ವರಿಷ್ಠರಿಗೆ ವಿವರಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.;

Update: 2025-06-10 16:19 GMT

ಜಾತಿಗಣತಿ ವರದಿ ಬಗ್ಗೆ ವ್ಯಾಪಕ ಅಪಸ್ವರಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಈಗಾಗಲೇ ಸಲ್ಲಿಕೆಯಾಗಿರುವ ಜಾತಿಗಣತಿ ವರದಿಗೆ ತಾತ್ವಿಕ ಒಪ್ಪಿಗೆ ನೀಡಿ, ಸಮೀಕ್ಷೆಯನ್ನು ಮರುಗಣತಿ ನಡೆಸಲು ನಿರ್ಧಾರ ಕೈಗೊಂಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ನವದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮದವರಿಗೆ ತಿಳಿಸಿದರು.

ಕರ್ನಾಟಕದಲ್ಲಿ ನಡೆಯುತ್ತಿರುವ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿದ ಬಳಿಕ ಅವರು ಮಾತನಾಡಿದರು. ವಿವಿಧ ಜಾತಿಗಳ ಸಂಘಸಂಸ್ಥೆಗಳು, ಮಠಾಧೀಶರು, ಸಮುದಾಯಗಳ ಮುಖಂಡರು ಹಾಗೂ ಸಚಿವರು ಜಾತಿಗಣತಿ ವರದಿ ಬಗ್ಗೆ ಅಪಸ್ವರ ಎತ್ತಿದ್ದರಿಂದ, ಈ ವರದಿಯನ್ನು ತಾತ್ವಿಕವಾಗಿ ಒಪ್ಪಿಕೊಂಡು, ದತ್ತಾಂಶವು ಹತ್ತು ವರ್ಷ ಹಳೆಯದಾಗಿರುವುದರಿಂದ ಮರುಗಣತಿ ಮಾಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು. ಈಗಾಗಲೇ ಪರಿಶಿಷ್ಟ ಜಾತಿಗಳ ಜನಗಣತಿ ನಡೆದಂತೆ, ಇತರೆ ಜಾತಿಗಳ ಗಣತಿಯನ್ನು ಹೊಸದಾಗಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಸಮೀಕ್ಷಾ ಕಾರ್ಯವನ್ನು 90 ದಿನದೊಳಗೆ ಪೂರ್ಣಗೊಳಿಸಿ ವರದಿ ನೀಡಬೇಕಾಗುವುದು ಎಂದು ಅವರು ಮಾಹಿತಿ ನೀಡಿದರು.

ಬೆಂಗಳೂರು ಕಾಲ್ತುಳಿತ ಪ್ರಕರಣ: ಸರ್ಕಾರದ ಕ್ರಮಗಳ ಬಗ್ಗೆ ವರಿಷ್ಠರಿಗೆ ವಿವರಣೆ

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆಯೂ ಚರ್ಚಿಸಲಾಗಿದ್ದು, ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ವರಿಷ್ಠರಿಗೆ ವಿವರಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ಪ್ರಕರಣದ ತನಿಖೆಗೆ ಜಿಲ್ಲಾಧಿಕಾರಿಗಳ ನೇತೃತ್ವದ ಮ್ಯಾಜಿಸ್ಟೇರಿಯಲ್ ತನಿಖೆ, ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ’ಕುನ್ಹಾ ನೇತೃತ್ವದ ಏಕಸದಸ್ಯ ಆಯೋಗ ರಚನೆ, ಐದು ಪೊಲೀಸ್ ಅಧಿಕಾರಿಗಳ ಅಮಾನತ್ತು, ಗುಪ್ತಚರ ಇಲಾಖೆಯ ಮುಖ್ಯಸ್ಥರ ಬದಲಾವಣೆ ಮತ್ತು ರಾಜಕೀಯ ಕಾರ್ಯದರ್ಶಿಗಳ ಬದಲಾವಣೆಯಂತಹ ಸರ್ಕಾರದ ಕ್ರಮಗಳು ಸಮರ್ಪಕವಾಗಿವೆ ಎಂದು ವರಿಷ್ಠರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿದರು. ಏಕಸದಸ್ಯ ಆಯೋಗದ ತನಿಖಾ ವರದಿಯನ್ನು ಆಧರಿಸಿ, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ಸಚಿವ ಸಂಪುಟ ಪುನರ್ರಚನೆ ಬಗ್ಗೆ ಚರ್ಚೆಯಾಗಿಲ್ಲ

ಇದೇ ತಿಂಗಳ 13 ರಂದು 16ನೇ ಹಣಕಾಸು ಆಯೋಗದ ಅಧ್ಯಕ್ಷರನ್ನು ಭೇಟಿಯಾಗಲು ನವದೆಹಲಿಗೆ ಆಗಮಿಸುವುದಾಗಿ ತಿಳಿಸಿದ ಸಿದ್ದರಾಮಯ್ಯ, ಸಚಿವ ಸಂಪುಟ ಪುನರ್ರಚನೆಯ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಕುಂಭಮೇಳ ಘಟನೆ: ಉತ್ತರಪ್ರದೇಶ ಸಿಎಂ ಜವಾಬ್ದಾರರಲ್ಲವೇ?

ಕೇಂದ್ರದ ಸಂಸತ್ತಿನಲ್ಲಿ ಬೆಂಗಳೂರಿನ ಕಾಲ್ತುಳಿತದ ಘಟನೆ ಚರ್ಚೆಗೆ ಬರುವ ಸಾಧ್ಯತೆಯಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರ ಮೊದಲು ಕುಂಭಮೇಳದಲ್ಲಿ ನಡೆದ ಕಾಲ್ತುಳಿತ, ಪ್ರಧಾನಿಯವರು ಉದ್ಘಾಟಿಸಿದ ಸೇತುವೆ ಕುಸಿದು ಜನ ಮೃತಪಟ್ಟ ಘಟನೆಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಲಿ ಎಂದು ತಿರುಗೇಟು ನೀಡಿದರು. ಬೆಂಗಳೂರಿನಲ್ಲಿ ಘಟನೆ ನಡೆದಿರುವುದು ಸರ್ಕಾರಕ್ಕೆ ದುಃಖದ ಸಂಗತಿಯಾಗಿದೆ. ಯುವಜನರ ಸಾವು ಎಲ್ಲರಿಗೂ ನೋವು ತರುವ ವಿಚಾರ. ಕುಂಭಮೇಳದ ಘಟನೆಯಲ್ಲಿ ಜನರ ಸಾವಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಜವಾಬ್ದಾರಿಯಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಇಡಿ ತನಿಖಾ ಸಂಸ್ಥೆ ₹100 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕಾನೂನು ಕ್ರಮ ತೆಗೆದುಕೊಂಡಿರುವುದಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು. 

Tags:    

Similar News