ಶಕ್ತಿ ಯೋಜನೆಗೆ ಹೊಸ ಮೈಲಿಗಲ್ಲು: 500 ಕೋಟಿಯ ಟಿಕೆಟ್ ವಿತರಿಸಿದ ಸಿಎಂ

ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಸೇರಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತರುವುದಾಗಿ ಕಾಂಗ್ರೆಸ್‌ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿತ್ತು.;

Update: 2025-07-14 12:52 GMT

ಸಿಎಂ ಸಿದ್ದರಾಮಯ್ಯ ಮಹಿಳಾ ಪ್ರಯಾಣಿಕರಿಗೆ ಟಿಕೆಟ್‌ ವಿತರಿಸಿದರು.

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಶಕ್ತಿ ' ಇಂದು ಐತಿಹಾಸಿಕ ಮೈಲಿಗಲ್ಲನ್ನು ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವತಃ ಬಸ್‌ ಕಂಡಕ್ಟರ್‌ ಆಗಿ ಮಹಿಳೆಯರಿಗೆ 500 ಕೋಟಿಯ ಟಿಕೆಟ್​ ವಿತರಿಸುವ ಮೂಲಕ ಯೋಜನೆಯ ಯಶಸ್ಸನ್ನು ಸಂಭ್ರಮಿಸಿದರು.

ಬೆಂಗಳೂರಿನ ಕುಮಾರಕೃಪಾದ ವಿಂಡ್ಸರ್‌ ವೃತ್ತದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸ್‌ನಲ್ಲಿದ್ದ ಮಹಿಳಾ ಪ್ರಯಾಣಿಕರಿಗೆ ಟಿಕೆಟ್‌ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸಿಹಿ ಮತ್ತು ಇಳಕಲ್‌ ಸೀರೆಗಳನ್ನು ಹಂಚುವ ಮೂಲಕ ಯೋಜನೆಯ ಯಶಸ್ಸನ್ನು ಆಚರಿಸಲಾಯಿತು.

ಶಕ್ತಿ ಯೋಜನೆ: ಮಹಿಳೆಯರ ಬದುಕಿಗೆ ಹೊಸ ಬೆಳಕು

ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉಚಿತ ಪ್ರಯಾಣದ 'ಶಕ್ತಿ ಯೋಜನೆ' ಸೇರಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತರುವುದಾಗಿ ಕಾಂಗ್ರೆಸ್‌ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಬಹುಮತ ಗಳಿಸಿದ ನಂತರ, ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಮೊದಲ ಸಚಿವ ಸಂಪುಟ ಸಭೆಯಲ್ಲೇ ಈ ನಿರ್ಧಾರವನ್ನು ಪ್ರಕಟಿಸಿ, 2023ರ ಜೂನ್ 11ರಂದು ಶಕ್ತಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿತ್ತು.

ದಾಖಲೆ ಬರೆದ ಪ್ರಯಾಣಿಕರ ಸಂಖ್ಯೆ

ಈ ಯೋಜನೆಯಡಿಯಲ್ಲಿ ರಾಜ್ಯಾದ್ಯಂತ ಇದುವರೆಗೂ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಂದ ಒಟ್ಟು 500 ಕೋಟಿಗೂ ಹೆಚ್ಚು ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ. ಈ ಯೋಜನೆಯ ಅನುಷ್ಠಾನಕ್ಕೆ ಸಾರಿಗೆ ಇಲಾಖೆಯು ಸುಮಾರು 12,669 ಕೋಟಿ ರೂ. ವೆಚ್ಚ ಮಾಡಿದೆ.

ನಾಲ್ಕು ನಿಗಮಗಳ ಪೈಕಿ, ಬಿಎಂಟಿಸಿ ಬಸ್‌ಗಳಲ್ಲಿ ಅತಿ ಹೆಚ್ಚು, ಅಂದರೆ 159 ಕೋಟಿ ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ. ನಂತರದ ಸ್ಥಾನದಲ್ಲಿ ಕೆಎಸ್‌ಆರ್‌ಟಿಸಿ ವಿಭಾಗವಿದೆ.

ಪ್ರತಿದಿನ 30 ಲಕ್ಷ ಪ್ರಯಾಣಿಕರ ಹೆಚ್ಚಳ

'ಶಕ್ತಿ ಯೋಜನೆ' ಜಾರಿಯಾದ ನಂತರ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಯೋಜನೆಯ ಜಾರಿಯಾಗುವುದಕ್ಕೂ ಮುನ್ನ 2022-23ನೇ ಸಾಲಿನಲ್ಲಿ ಸಾರಿಗೆ ಬಸ್‌ಗಳಲ್ಲಿ ಪ್ರತಿದಿನ ಸರಾಸರಿ 85 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದರು. ಆದರೆ, 'ಶಕ್ತಿ ಯೋಜನೆ' ಜಾರಿಯಾದ ನಂತರ ಈ ಸಂಖ್ಯೆ ಪ್ರತಿ ವರ್ಷ 1.17 ಕೋಟಿ ಜನರಿಗೆ ಏರಿಕೆಯಾಗಿದೆ. ಇದು ಪ್ರತಿದಿನ ಸುಮಾರು 30 ಲಕ್ಷ ಪ್ರಯಾಣಿಕರ ಹೆಚ್ಚಳವನ್ನು ಸೂಚಿಸುತ್ತದೆ.

ಈ ಯೋಜನೆಯು ರಾಜ್ಯಾದ್ಯಂತ ನಗರ, ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ವಿದ್ಯಾರ್ಥಿನಿಯರು, ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿದ್ದು, ಶಾಲಾ-ಕಾಲೇಜುಗಳು ಮತ್ತು ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಹೆಚ್ಚು ಅನುಕೂಲವಾಗಿದೆ. 'ಶಕ್ತಿ ಯೋಜನೆ' ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಸಂಚಾರ ಸ್ವಾತಂತ್ರ್ಯಕ್ಕೆ ದೊಡ್ಡ ಕೊಡುಗೆ ನೀಡಿದೆ ಎಂದು ಸರ್ಕಾರ ಹೇಳಿಕೊಂಡಿದೆ.

Tags:    

Similar News