Caste census|ವರದಿ ಸೋರಿಕೆ ತಡೆಯೇ ಸವಾಲು; ಸಚಿವರಿಗೆ ಗಣತಿ ಸಾರಾಂಶ ಒದಗಿಸುವ ಜವಾಬ್ದಾರಿ ಶಿವರಾಜ್ ತಂಗಡಗಿ ಹೆಗಲಿಗೆ
ಜಾತಿ ಜನಗಣತಿ ವರದಿಯ ಪ್ರಮುಖ ಅಂಶಗಳನ್ನು ಒಳಗೊಂಡ ಕೈಪಿಡಿಯನ್ನು ಇಂದು ಅಥವಾ ನಾಳೆ ಸಚಿವರಿಗೆ ತಲುಪಿಸಲು ಸಿಎಂ ಸಿದ್ದರಾಮಯ್ಯ ಅವರು ಶಿವರಾಜ್ ತಂಗಡಗಿ ಅವರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.;
ಜಾತಿ ಜನಗಣತಿ ಮಾಹಿತಿ ಸೋರಿಕೆಯಿಂದ ತೀವ್ರ ವಿರೋಧ ಎದುರಿಸಿದ್ದ ರಾಜ್ಯ ಸರ್ಕಾರ ಕೊನೆಗೂ ಸಂಪುಟದ ಮುಂದೆ ವರದಿ ಮಂಡನೆ ಮಾಡಿದೆ. ಆದರೆ, ಈ ವರದಿಯ ವಿವರಗಳನ್ನು ಸೋರಿಕೆಯಾಗದಂತೆ ತಡೆಯುವುದು ಸರ್ಕಾರಕ್ಕೆ ಸವಾಲಾಗಿದೆ. ಈ ಹಿಂದೆ ವರದಿ ಅಂಶಗಳು ಸೋರಿಕೆಯಾದ ಕಾರಣ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ ಜಾರಿಗೆ ಪ್ರಬಲ ಜಾತಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗ ಸೋರಿಕೆಯಾದ ಅಂಕಿ ಅಂಶಗಳು ಜಾತಿ ಜನಗಣತಿಯದ್ದಲ್ಲ ಎಂದು ಹೇಳುತ್ತಿರುವ ಹಿಂದುಳಿ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು, ಮಂಡನೆಯಾಗಿರುವ ವರದಿಯ ರಹಸ್ಯ ಕಾಪಾಡಿಕೊಳ್ಳುತ್ತಿದ್ದಾರೆ. ಸಂಪುಟದ ಮುಂದೆ ಮಂಡಿಸಿರುವ ವರದಿಯ ವಿವರಗಳು ಬಹಿರಂಗವಾದರೆ ಸಮಾಜದಲ್ಲಿ ಜಾತಿಗಳ ಮಧ್ಯೆ ಕಲಹಕ್ಕೆ ಕಾರಣವಾಗಬಹುದು. ಪ್ರಬಲ ಜಾತಿಗಳಾದ ಲಿಂಗಾಯತ ಹಾಗೂ ಒಕ್ಕಲಿಗರು ಸರ್ಕಾರದ ವಿರುದ್ಧ ತಿರುಗಿ ಬೀಳಬಹುದು ಎಂಬ ಆತಂಕದಿಂದ ವರದಿಯ ಅಂಶಗಳನ್ನು ಗೌಪ್ಯವಾಗಿಡಲು ನಿರ್ಧರಿಸಲಾಗಿದೆ.
ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರೇ ಖುದ್ದು ವರದಿಯ ಜವಾಬ್ದಾರಿ ಹೊತ್ತಿದ್ದು, ಗಣತಿಗೆ ಸಂಬಂಧಿಸಿದ ಸಾರಾಂಶವನ್ನು ಸಚಿವರಿಗೆ ತಲುಪಿಸುವ ಕಾರ್ಯ ನಿಭಾಯಿಸುತ್ತಿದ್ದಾರೆ. ಇಂದು ಅಥವಾ ನಾಳೆ ವರದಿಯ ಪ್ರಮುಖ ಅಂಶಗಳನ್ನು ಒಳಗೊಂಡ ಕೈಪಿಡಿಯನ್ನು ಸಚಿವರಿಗೆ ತಲುಪಿಸಲು ಸಿಎಂ ಸಿದ್ದರಾಮಯ್ಯ ಅವರು ಶಿವರಾಜ್ ತಂಗಡಗಿ ಅವರಿಗೆ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಸಾರಾಂಶ ಸಿದ್ದಪಡಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಾತಿ ಜನಗಣತಿ ವರದಿಯ ಸಾರಾಂಶ ಪಡೆದ ಬಳಿಕ ಸಚಿವರು ಏ.17ರಂದು ನಡೆಯವ ವಿಶೇಷ ಸಂಪುಟ ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡನೆ ಮಾಡಲಿದ್ದಾರೆ. ಆ ಬಳಿಕ ವರದಿ ಪರಿಶೀಲನೆ ನಡೆಸಲು ಸಂಪುಟ ಉಪ ಸಮಿತಿ ರಚಿಸುವ ಅಥವಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯಿಂದ ಪರಿಶೀಲನೆ ನಡೆಸುವ ಕುರಿತು ತೀರ್ಮಾನಿಸಲಾಗುವುದು ಎಂದು ತಿಳಿದು ಬಂದಿದೆ.
ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಳಿಸಿದ ಕೆಲ ದಿನಗಳ ನಂತರ ಜಾತಿ ವಾರು ಅಂಕಿ ಅಂಶಗಳ ಮಾಹಿತಿ ಸೋರಿಕೆಯಾಗಿತ್ತು. ಅಂಕಿ ಅಂಶಗಳಲ್ಲಿ ಪರಿಶಿಷ್ಟರು, ಮುಸ್ಲಿಮರ ಸಂಖ್ಯೆ ಹೆಚ್ಚಿದ್ದು, ಪ್ರಬಲ ಸಮುದಾಯಗಳ ಸಂಖ್ಯೆ ಕಡಿಮೆ ಇತ್ತು. ವರದಿ ಬಹಿರಂಗವಾದರೆ ರಾಜಕೀಯ ಪ್ರಾತಿನಿಧ್ಯ ಕಳೆದುಕೊಳ್ಳಬಹುದು ಎಂಬ ಭೀತಿಯಿಂದ ಒಕ್ಕಲಿಗರು ಹಾಗೂ ಲಿಂಗಾಯತ ಸಮುದಾಯದ ಮುಖಂಡರು ಸಾಮಾಜಿಕ ಹಾಗೂ ಶೈಕ್ಷಣಿಕ ವರದಿ ವಿರೋಧ ವ್ಯಕ್ತಪಡಿಸಿದ್ದರು. 10 ವರ್ಷಗಳ ಹಿಂದೆ ನಡೆದ ಸಮೀಕ್ಷೆ ಇದಾಗಿದೆ. ಅಲ್ಲದೇ ಗಣತಿದಾರರು ಪ್ರತಿ ಮನೆ ಮನೆಗೆ ಭೇಟಿ ನೀಡಿ ದತ್ತಾಂಶ ಸಂಗ್ರಹಿಸದ ಕಾರಣ ವರದಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದ್ದರು.
2024ರಲ್ಲಿ ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಅಂತಿಮ ವರದಿ ಸಲ್ಲಿಸಿದರೂ ಅದು ಸಂಪುಟಕ್ಕೆ ಬಾರದಂತೆ ತಡೆಯುವಲ್ಲಿ ಪ್ರಬಲ ಸಮುದಾಯಗಳು ಯಶಸ್ವಿಯಾಗಿದ್ದರು. ಸಿಎಂ ಸಿದ್ದರಾಮಯ್ಯ ಅವರು ಕೊನೆಗೂ ವರದಿಯನ್ನು ಸಚಿವ ಸಂಪುಟದ ಮುಂದೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ವರದಿಯನ್ನು ಸಂಪುಟ ಸಭೆ ಅಂಗೀಕರಿಸಲಿದೆಯೇ, ಅಥವಾ ಇನ್ನಷ್ಟು ದಿನ ಮೂಲೆಗೆ ತಳ್ಳುವುದೇ ಎಂಬ ಅನುಮಾನ ಕಾಡಲಾರಂಭಿಸಿದೆ.
ಸೋರಿಕೆ ಅಂಕಿ ಅಂಶಗಳು ತಪ್ಪು
ಜಾತಿಗಣತಿ ವರದಿ ಸೋರಿಕೆಯಲ್ಲಿ ನೀಡಿರುವ ಜಾತಿ ವಾರು ಜನಗಣತಿಯ ಅಂಶಗಳು ಸುಳ್ಳು. ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ. ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಮಾಹಿತಿಗೂ, ಜಾತಿಗಣತಿ ವರದಿಗೂ ಸಂಬಂಧವಿಲ್ಲ ಎಂದು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ವಿಶೇಷ ಅಧಿವೇಶನ ಕರೆಯಲು ಸಚಿವರ ಸಲಹೆ
ಜಾತಿ ಜನಗಣತಿ ವರದಿ ಸಂಬಂಧ ಚರ್ಚಿಸಲು ವಿಶೇಷ ಅಧಿವೇಶನ ಕರೆಯುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಆಪ್ತ ಸಚಿವರುಗಳು ಸಲಹೆ ನೀಡಿದ್ದಾರೆ.
ವರದಿಯ ಅನುಷ್ಟಾನಕ್ಕೂ ಮುನ್ನ ಅಧಿವೇಶನ ದಲ್ಲೇ ಚರ್ಚೆ ನಡೆಯುವುದರಿಂದ ರಾಜಕೀಯ ಪಕ್ಷಗಳಲ್ಲಿರುವ ಗೊಂದಲ ನಿವಾರಣೆ ಆಗಲಿವೆ. ಆ ಬಳಿಕ ಯಾವುದೇ ಅಡ್ಡಿ ಇಲ್ಲದೆ ಸಂಪುಟದಅಂಗಿಕಾರ ಪಡೆಯಬಹುದು ಎಂದು ಮಾನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.