Cabinet Expansion | ಸಂಪುಟ ವಿಸ್ತರಣೆ ಉದ್ದೇಶ ಸದ್ಯಕ್ಕಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಸಂಪುಟ ಪುನಾರಚನೆ, ವಿಸ್ತರಣೆ ಕುರಿತಂತೆ ರಾಹುಲ್ ಗಾಂಧಿ ಬಳಿಯಾಗಲಿ, ಮಲ್ಲಿಕಾರ್ಜುನ ಖರ್ಗೆ ಅವರೊಂದಿಗಾಗಲಿ ಯಾವುದೇ ಚರ್ಚೆ ಮಾಡಿಲ್ಲ. ಒಂದು ಸ್ಥಾನ ಖಾಲಿ ಉಳಿದಿದೆ. ಆ ಸ್ಥಾನಕ್ಕೆ ನಾಗೇಂದ್ರ ಅವರು ಸೇರ್ಪಡೆ ಆಗಲಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.;

Update: 2024-11-29 11:15 GMT

ಸಚಿವ ಸಂಪುಟ ವಿಸ್ತರಣೆ, ಪುನಾರಚನೆಯ ಉದ್ದೇಶ ಸದ್ಯಕ್ಕಿಲ್ಲ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಈ ಕುರಿತಾದ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಂಪುಟ ಪುನಾರಚನೆ, ವಿಸ್ತರಣೆ ಕುರಿತಂತೆ ರಾಹುಲ್ ಗಾಂಧಿ ಬಳಿಯಾಗಲಿ, ಮಲ್ಲಿಕಾರ್ಜುನ ಖರ್ಗೆ ಅವರೊಂದಿಗಾಗಲಿ ಯಾವುದೇ ಚರ್ಚೆ ಮಾಡಿಲ್ಲ. ಒಂದು ಸ್ಥಾನ ಖಾಲಿ ಉಳಿದಿದೆ. ಆ ಸ್ಥಾನಕ್ಕೆ ನಾಗೇಂದ್ರ ಅವರು ಸೇರ್ಪಡೆ ಆಗಲಿದ್ದಾರೆ. ಆದರೆ ಅದೂ ಈಗಲೇ ಅಲ್ಲ ಎಂದು ಹೇಳಿದ್ದಾರೆ.

ಸಂಪುಟ ವಿಸ್ತರಣೆ, ಪುನಾರಚನೆ ಕುರಿತಂತೆ ಮಾಧ್ಯಮಗಳೇ ಸುದ್ದಿ ಬಿತ್ತರಿಸುತ್ತಿವೆ. ಸಂಭವನೀಯ ಸಚಿವರ ಪಟ್ಟಿಯನ್ನೂ ಪ್ರಕಟಿಸುತ್ತಿವೆ. ಹೀಗಾಗಿ ಪುನಾರಚನೆ, ವಿಸ್ತರಣೆ ಕುರಿತಾದ ಪ್ರಶ್ನೆಗಳಿಗೆ ಮಾಧ್ಯಮಗಳೇ ಉತ್ತರ ಕೊಡಬೇಕು ಎಂದು ಮಾಧ್ಯಮದವರ ಪ್ರಶ್ನೆಗೆ ತಿರುಗೇಟು ನೀಡಿದ್ದಾರೆ. 

ಹಾಸನ ಸಮಾವೇಶಕ್ಕೆ ರಾಹುಲ್ ಒಪ್ಪಿಗೆ

ಹಾಸನದಲ್ಲಿ ಡಿ.5ರಂದು ಕಾಂಗ್ರೆಸ್ ಪಕ್ಷ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಿರುವ ಸ್ವಾಭಿಮಾನಿ ಸಮಾವೇಶಕ್ಕೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಒಪ್ಪಿಗೆ ಸೂಚಿಸಿದ್ದಾರೆ.

ಮುಂಬರುವ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶಕ್ಕೆ ಮೈಸೂರು ಭಾಗದ 6 ರಿಂದ 7 ಜಿಲ್ಲೆಗಳ ಅಭಿಮಾನಿಗಳು, ಹಿಂದುಳಿದ ವರ್ಗಗಳ ಕಾರ್ಯಕರ್ತರು ಭಾಗವಹಿಸುತ್ತಾರೆ. ಇದರಿಂದ ಅನುಕೂಲವಾಗಲಿದೆ ಎಂದು ರಾಹುಲ್ ಗಾಂಧಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಸಮಾವೇಶಕ್ಕೆ ಒಪ್ಪಿಗೆ ದೊರೆತಿದೆ ಎಂದು ತಿಳಿದುಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸಿಎಂ ಅವರು, ಸಮಾವೇಶಕ್ಕೆ ಕೆಪಿಸಿಸಿ ಅಧ್ಯಕ್ಷರು ಹಾಗೂ ರಾಜ್ಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರನ್ನೂ ಸಂಘಟಕರು ಆಹ್ವಾನಿಸಿದ್ದಾರೆ. ಸಮಾವೇಶ ಕುರಿತಂತೆ ಹೈಕಮಾಂಡ್ ಗೆ ಅನಾಮಧೇಯ ಪತ್ರ ಬರೆದಿರುವ ಮಾಹಿತಿ ಇಲ್ಲ. ಖರ್ಗೆ ಅವರೂ ಈ ಬಗ್ಗೆ ಚರ್ಚೆ ಮಾಡಲಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Tags:    

Similar News