ಶಾಸಕರ ಖರೀದಿಗೆ 50 ಕೋಟಿ ಆಮಿಷ ಆರೋಪ; ಕುರಿ, ಕತ್ತೆ, ಕುದುರೆ ವ್ಯಾಪಾರದ ಮಾತು ಮತ್ತೆ ಶುರು
ಶಾಸಕರ ಖರೀದಿ ಅಥವಾ ʼಆಪರೇಷನ್ʼ ಎಂಬುದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಅಧಿಕಾರ ಹಿಡಿಯಲು ಎಲ್ಲ ರಾಜ್ಯಗಳಲ್ಲಿ, ಎಲ್ಲ ಪಕ್ಷಗಳು ಶಾಸಕರ ಖರೀದಿ ನಡೆಸಿರುವ ನಿದರ್ಶನಗಳಿವೆ. ಪಕ್ಷಾಂತರ ಕುರಿತು ನ್ಯಾಯಾಲಯಗಳು ಏನೇ ಆದೇಶ ನೀಡಿದರೂ ಖರೀದಿ ಪ್ರಕ್ರಿಯೆ ನಿಂತಿಲ್ಲ.;
ಕಾಂಗ್ರೆಸ್ ಪಕ್ಷದ 50 ಶಾಸಕರಿಗೆ ತಲಾ 50 ಕೋಟಿ ಆಮಿಷ ಒಡ್ಡಿರುವ ಕುರಿತು ಸಿಎಂ ಸಿದ್ದರಾಮಯ್ಯ ಅವರ ಆರೋಪ ಇದೀಗ ರಾಜ್ಯದಲ್ಲಿ ಮತ್ತೊಮ್ಮೆ ಕುರಿ, ಕತ್ತೆ, ಕುದುರೆ ವ್ಯಾಪಾರದ ಚರ್ಚೆ ಹುಟ್ಟುಹಾಕಿದೆ. ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ನಾಯಕರು ಹಣದ ಆಮಿಷವೊಡ್ಡುತ್ತಿದ್ದಾರೆ ಎಂಬ ಸಿಎಂ ಹೇಳಿಕೆ ಕುರಿತಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಶಾಸಕರನ್ನು ಖರೀದಿಸಲು ಅವರೇನು ʼಕತ್ತೆ, ಕುದುರೆ, ಕೋಳಿಗಳಾ? ಎಂಬ ಬಿಜೆಪಿ ನಾಯಕರ ಪ್ರಶ್ನೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕರು ಈ ಹಿಂದೆ ನೀವು ಖರೀದಿಸಿದ ಶಾಸಕರು ಕತ್ತೆಗಳಾ, ಕುದುರೆಗಳಾ? ಎಂದು ತಿರುಗೇಟು ನೀಡಿದ್ದಾರೆ.
ಪ್ರಹ್ಲಾದ ಜೋಶಿ ಹೇಳಿದ್ದೇನು?
ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಭಾನುವಾರ ಹುಬ್ಬಳ್ಳಿಯಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, 'ಕಾಂಗ್ರೆಸ್ ಶಾಸಕರೇನು ಕುರಿ, ಕೋಣ, ಕತ್ತೆಗಳೇ? ಎಂದು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರು ಜವಾಬ್ದಾರಿಯುತ ಹೇಳಿಕೆ ನೀಡಬೇಕು. ಶಾಸಕರನ್ನು ಖರೀದಿಸಲು ಅವರೇನು ಪ್ರಾಣಿಗಳೇ. ನಮ್ಮನ್ನು ಖರೀದಿಸಲು ಬಂದಿದ್ದರು ಎಂದು ನಿಮ್ಮ ಪಕ್ಷದ ಯಾವ ಶಾಸಕರಾದರೂ ಹೇಳಿದ್ದಾರಾ ಎಂದು ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರದ ಮೇಲೆ ಕೇಳಿಬಂದಿರುವ ಆರೋಪಗಳ ವಿಷಯಾಂತರಕ್ಕಾಗಿ ವೃಥಾ ಅಪಪ್ರಚಾರ ನಡೆಸಲಾಗುತ್ತಿದೆ. ಇಂತಹ ಹುಚ್ಚುತನದ ಮಾತುಗಳು ಪ್ರಜಾಪ್ರಭುತ್ವದ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಕುರಿ, ಕೋಣಗಳನ್ನು ಮಾತ್ರ ಮಾರಾಟ ಮಾಡುತ್ತಾರೆ, ಶಾಸಕರನ್ನು ಯಾರೂ ಮಾರಾಟ ಮಾಡುವುದಿಲ್ಲ. ಸಿ.ಎಂ ಹಾಗೂ ಮತ್ತವರ ತಂಡದ ಆರೋಪ ನೋಡಿದರೆ ಕಾಂಗ್ರೆಸ್ ಶಾಸಕರನ್ನು ಇವರು ಮಾರುಕಟ್ಟೆಯಲ್ಲಿ ಇಟ್ಟಂತೆ ಕಾಣುತ್ತದೆ' ಎಂದು ಗೇಲಿ ಮಾಡಿದ್ದಾರೆ.
ಕಾಂಗ್ರೆಸ್-ಬಿಜೆಪಿ ನಾಯಕರ ವಾಗ್ವಾದ
ಸಿಎಂ ಸಿದ್ದರಾಮಯ್ಯ ಹೇಳಿಕೆ ಇದೀಗ ಉಭಯ ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ ಅವರನ್ನು ಕುರ್ಚಿಯಿಂದ ಕೆಳಗಿಳಿಸಲು ಡಿಕೆಶಿಯವರೇ ಅವರ ಪಕ್ಷದ ಶಾಸಕರಿಗೆ ಹಣ ನೀಡಿರಬಹುದು. ನಾವು ಕಾಂಗ್ರೆಸ್ ಶಾಸಕರನ್ನು ಕರೆದೊಯ್ದರೆ ನೂರಕ್ಕೆ ನೂರು ಭ್ರಷ್ಟರಾಗುತ್ತೇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಶಾಸಕರನ್ನು ಹಣ ಕೊಟ್ಟು ಖರೀದಿ ಮಾಡುವುದು ಡಿ ಕೆ ಶಿವಕುಮಾರ್ ಹಾಗೂ ಬಿ.ವೈ.ವಿಜಯೇಂದ್ರ ಅವರಿಗೆ ಚೆನ್ನಾಗಿ ಗೊತ್ತಿದೆ ಎಂದಿದ್ದಾರೆ. ಇನ್ನು ಇದಕ್ಕೆ ತಿರುಗೇಟು ನೀಡಿದ್ದ ಡಿ.ಕೆ.ಶಿವಕುಮಾರ್ ಅವರು, ಸರ್ಕಾರ ಬೀಳಿಸಲು 1000 ಕೋಟಿ ಹಣ ಮೀಸಲಿಡಲಾಗಿದೆ ಎಂಬ ನಿಮ್ಮ( ಬಸನಗೌಡ ಪಾಟೀಲ ಯತ್ನಾಳ್) ಹೇಳಿಕೆಯೇ ಅಪರೇಷನ್ ಕಮಲಕ್ಕೆ ಸಾಕ್ಷಿ ಎಂದು ಟಾಂಗ್ ನೀಡಿದ್ದರು.
ಚರ್ಚೆಗೆ ಕಾರಣವಾದ ಮಂಡ್ಯ ಶಾಸಕರ ಹೇಳಿಕೆ
ಸಿಎಂ ಹೇಳಿಕೆ ಬೆನ್ನಲ್ಲೇ ಮಂಡ್ಯದ ಶಾಸಕ ಪಿ. ರವಿಕುಮಾರ್ ಅವರು ಬಿಜೆಪಿಯವರು ನಮ್ಮ ಶಾಸಕರಿಗೆ ನೀಡಲು ಬಂದಿದ್ದು 50 ಕೋಟಿ ಅಲ್ಲ. 100 ಕೋಟಿ ಆಫರ್ ಎಂಬ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಹಣದ ಆಮಿಷ ತೋರಿಸಿದ ನಾಯಕರು ಯಾರು, ಎಲ್ಲಿಗೆ ಬಂದಿದ್ದರು, ಯಾವ ಗೆಸ್ಟ್ ಹೌಸ್, ಏರ್ ಪೋರ್ಟ್‌ನಲ್ಲಿ ಭೇಟಿಯಾಗಿದ್ದರು ಎಂಬ ವಿಡಿಯೋ ದಾಖಲೆ ಇದೆ. ಸಮಯ ಬಂದಾಗ ಬಿಡುಗಡೆ ಮಾಡುತ್ತೇವೆ. ಈ ವಿಡಿಯೋ ಸಾಕ್ಷ್ಯವನ್ನು ಸಿಎಂ ಅವರಿಗೆ ತೋರಿಸಲಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆ ರಾಜ್ಯದಲ್ಲಿ ಶಾಸಕರ ಖರೀದಿ, ಸರ್ಕಾರಗಳ ಪತನದಂತಹ ಪ್ರಹಸನಗಳಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬಂದಿತ್ತು. ಈಗ ಮತ್ತದೇ ಕತ್ತೆ, ಕುದುರೆ, ಕೋಳಿ ಹಾಗೂ ಕೋಣ ವ್ಯಾಪಾರದಂತಹ ಮಾತುಗಳು ಮತ್ತೊಮ್ಮೆ ರಾಜ್ಯ ಮಾನವನ್ನು ಮೂರಾಬಟ್ಟೆ ಮಾಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಳಂಕ ತಂದಿದ್ದ 17 ಶಾಸಕರ ಪಕ್ಷಾಂತರ
2019ರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ವೇಳೆ 17 ಮಂದಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಆಪರೇಷನ್ ಕಮಲದ ಮೂಲಕ ಸೆಳೆದು ಬಿಜೆಪಿ ಅಧಿಕಾರಕ್ಕೇರಿತ್ತು. ಪಕ್ಷಾಂತರ ಮಾಡಿದ್ದ 17 ಶಾಸಕರನ್ನು ವಿಧಾನಸಭಾಧ್ಯಕ್ಷರು ಅನರ್ಹಗೊಳಿಸಿದ್ದರು. ಶಾಸಕರ ಅನರ್ಹತೆ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿತ್ತು. ಆದರೆ, ಆ ಶಾಸಕರು ಚುನಾವಣೆಗೆ ಸ್ಪರ್ಧೆಗೆ ಅವಕಾಶ ನೀಡಿತ್ತು.
2008ರಲ್ಲಿ ಆಪರೇಷನ್ ಕಮಲ
2008ರಲ್ಲಿ ಬಿಜೆಪಿ 110 ಸ್ಥಾನಗಳೊಂದಿಗೆ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಬಹುಮತಕ್ಕೆ 3 ಸ್ಥಾನಗಳು ಅಗತ್ಯವಾಗಿದ್ದವು. ಆಗ ಗಣಿಧಣಿ ಜನಾರ್ಧನ ರೆಡ್ಡಿ ಅವರು ಕಾಂಗೆಸ್ ಹಾಗೂ ಜೆಡಿಎಸ್ ಪಕ್ಷಗಳ ಒಟ್ಟು ಆರು ಶಾಸಕರನ್ನು ಆಪರೇಷನ್ ಕಮಲದ ಮೂಲಕ ಖರೀದಿಸಿ ಸರ್ಕಾರ ರಚಿಸಲು ಕಾರಣಕರ್ತರಾಗಿದ್ದರು. ಆಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಕಾಂಗ್ರೆಸ್‌ನಿಂದಲೂ ಶಾಸಕರ ಖರೀದಿ
ಆಪರೇಷನ್ ಕಮಲಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ಕೂಡ ಸಾಕಷ್ಟು ಬಾರಿ ಶಾಸಕರ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿತ್ತು. ಬಿಜೆಪಿ ನಾಯಕರಾಗಿದ್ದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಸೇರಿದಂತೆ ಹಲವರನ್ನು ಕಾಂಗ್ರೆಸ್ ಸೆಳೆದಿತ್ತು. ಕಳೆದ ಲೋಕಸಭೆ ಚುನಾವಣೆಯಲ್ಲಿ ಜಗದೀಶ ಶೆಟ್ಟರ್ ಮರಳಿ ಬಿಜೆಪಿಗೆ ತೆರಳಿದರು. ಇನ್ನು ಸ್ಥಳೀಯ, ಜಿಲ್ಲಾ ಮಟ್ಟದಲ್ಲಿ ಆಪರೇಷನ್ ಹಸ್ತದ ಮೂಲಕ ಬಿಜೆಪಿ –ಜೆಡಿಎಸ್ ಮುಖಂಡರನ್ನು ಕಾಂಗ್ರೆಸ್ಗೆ ಕರೆತರಲಾಗುತ್ತಿದೆ.
2014ರಿಂದ 444 ಶಾಸಕರ ಖರೀದಿ
ಬಿಜೆಪಿ ಪಕ್ಷ ದೇಶದ ವಿವಿಧ ರಾಜ್ಯಗಳಲ್ಲಿ ಆಪರೇಷನ್ ಕಮಲದ ಮೂಲಕ 2014ರಿಂದ ಈವರೆಗೆ 444 ಶಾಸಕರನ್ನು ಖರೀದಿಸಿತ್ತು ಎಂದು ಕಾಂಗ್ರೆಸ್ ಇತ್ತೀಚೆಗೆ ಆರೋಪಿಸಿತ್ತು.
ತನಿಖಾ ಸಂಸ್ಥೆಗಳಾದ ಇಡಿ, ಸಿಬಿಐ ಹಾಗೂ ಐಟಿ ಸಹಾಯದಿಂದ ಆಪರೇಷನ್ ಕಮಲ ನಡೆಸಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ನೇರ ಆರೋಪ ಮಾಡಿ, ಅಂಕಿ ಅಂಶ ಬಿಡುಗಡೆ ಮಾಡಿದ್ದರು. ದೇಶದ 14 ವಿರೋಧ ಪಕ್ಷಗಳು ಜಾರಿ ನಿರ್ದೇಶನಾಲಯದ ವಿರುದ್ಧ ಅರ್ಜಿ ಸಲ್ಲಿಸಿವೆ.121 ರಾಜಕೀಯ ನಾಯಕರ ಮೇಲೆ ಇಡಿ ದಾಳಿ ಮಾಡಿದೆ. ಈ ಪೈಕಿ 115 ದಾಳಿಗಳು ವಿರೋಧ ಪಕ್ಷಗಳ ನಾಯಕರ ಮೇಲೆಯೇ ಆಗಿವೆ ಎಂದು ವಿವರಿಸಿದ್ದರು.