ಬಿಸಿಗಾಳಿ ಪರಿಣಾಮ | ಕಾಲರಾ ಉಲ್ಬಣಿಸಿಲ್ಲ: ಆರೋಗ್ಯ ಇಲಾಖೆ ಸ್ಪಷ್ಟನೆ

ಆರೋಗ್ಯ ಇಲಾಖೆಯಿಂದ ಕಾಲರಾ ಮುನ್ನೆಚ್ಚರಿಕೆ ಮಾರ್ಗಸೂಚಿ ಬಿಡುಗಡೆ, ಬಿಸಿಲಾಘಾತಕ್ಕೆ ಎಚ್ಚರಿಕೆ ವಹಿಸಲು ಜಿಲ್ಲಾಸ್ಪತ್ರೆಗಳಿಗೆ ಸೂಚನೆ. ಬಿಸಿಲಿನಿಂದ 500ಕ್ಕೂ ಹೆಚ್ಚು ಜನರಿಗೆ ಆರೋಗ್ಯ ಸಮಸ್ಯೆ.

Update: 2024-04-05 14:44 GMT
ಡಿ.ರಂದೀಪ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕಾಲರಾ ಉಲ್ಬಣಿಸಿಲ್ಲ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ.ರಂದೀಪ್ ತಿಳಿಸಿದ್ದಾರೆ. 

ರಾಜ್ಯದಲ್ಲಿ ಬಿಸಿಲ ಬೇಗೆಯಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆ, ಕಾಲರಾ ಸೇರಿದಂತೆ ವರದಿ ಆಗುತ್ತಿರುವ ವಿವಿಧ ಆರೋಗ್ಯ ಸಮಸ್ಯೆಗಳ ಬಗ್ಗೆ ಶುಕ್ರವಾರ ಅವರು ಪತ್ರಿಕಾಗೋಷ್ಠಿ ನಡೆಸಿದರು.  

ರಾಜ್ಯದಲ್ಲಿ ಈ ವರ್ಷ ಏ.4ರ ವರೆಗೆ 6 ಕಾಲರಾ ಪ್ರಕರಣಗಳು ದೃಢಪಟ್ಟಿವೆ. ಅವುಗಳಲ್ಲಿ ಬೆಂಗಳೂರು ನಗರದಲ್ಲಿ 2, ರಾಮನಗರದಲ್ಲಿ 1 ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ 3 ವರದಿಯಾಗಿವೆ. 5 ಪ್ರಕರಣಗಳು ಮಾರ್ಚ್ ತಿಂಗಳಲ್ಲಿಯೇ ವರದಿಯಾಗಿವೆ. ಈ ಎಲ್ಲಾ ಪ್ರಕರಣಗಳು ಬಿಡಿ   ಪ್ರಕರಣಗಳಾಗಿದ್ದು, ಸಮುದಾಯಕ್ಕೆ (Outbreak) ವ್ಯಾಪಿಸಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ 2023 ಡಿಸೆಂಬರ್ ವರದಿಯಾದ 15 ಕಾಲರಾ ಪ್ರಕರಣಗಳೇ ರಾಜ್ಯದಲ್ಲಿ ವರದಿಯಾದ ಕೊನೆಯ ಕಾಲರಾ ಸಾಂಕ್ರಾಮಿಕ ಪ್ರಕರಣವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಹಿಂದಿನ 3 ವರ್ಷಗಳ ಮೊದಲ ತ್ರೈಮಾಸಿಕದ (ಮೂರು ತಿಂಗಳ) ಅಂಕಿ- ಅಂಶಗಳಿಗೆ ಹೋಲಿಸಿದರೆ ವಾಂತಿ ಬೇಧಿ ಹಾಗೂ ಕಾಲರಾ ಪ್ರಕರಣಗಳಲ್ಲಿ ಯಾವುದೇ ಏರಿಕೆ ವರದಿಯಾಗಿಲ್ಲ. ಬೇಸಿಗೆ ಕಾಲದಲ್ಲಿ ನೀರಿನ ಅಭಾವ ಹಾಗೂ ತಾಪಮಾನ ಹೆಚ್ಚಾಗುವ ಕಾರಣದಿಂದಾಗಿ ಅತಿಸಾರ - ಕಾಲರಾ ಮಾದರಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ, ಪರೀಕ್ಷೆ ಮಾಡಿದ ನಂತರವಷ್ಟೇ ಕಾಲರಾ ಎಂದು ದೃಢಪಡಿಸಬೇಕು ಎಲ್ಲ ಆಸ್ಪತ್ರೆಗಳಿಗೂ ಸೂಚನೆ ನೀಡಲಾಗಿದೆ ಎಂದರು.

ಸುಳ್ಳು ಮಾಹಿತಿ ನೀಡಬೇಡಿ

ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದು ಕಾಲರಾ ಉಲ್ಬಣವಾಗಿದೆ ಎಂದು ತಿಳಿಸಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆ ಖಾಸಗಿ ಆಸ್ಪತ್ರೆಯಿಂದ ಕಾಲರಾಕ್ಕೆ ಚಿಕಿತ್ಸೆ ಪಡೆದವರ ವಿವರ ಕೇಳಿದ್ದೇವೆ. ಆದರೆ, ಖಾಸಗಿ ಆಸ್ಪತ್ರೆ ಬಳಿ ವರದಿ ಇಲ್ಲ. ಹೀಗಾಗಿ, ಅನವಶ್ಯಕವಾಗಿ ಮಾಧ್ಯಮ ಮತ್ತು ಖಾಸಗಿ ಆಸ್ಪತ್ರೆಗಳು ವರದಿ ಮಾಡಬಾರದು ಎಂದು ಮನವಿ ಮಾಡಿದರು. ಕಾಲರಾ ಹೆಚ್ಚಾಗಿದೆ, ದಿನ ನಿತ್ಯ ವರದಿಯಾಗುತ್ತಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂದು ಅವರು ಹೇಳಿದರು.

ಇನ್ನು ಕಲುಷಿತ ನೀರನ್ನು ಕುಡಿಯುವುದು, ನೀರನ್ನು ಕುದಿಸದೆ ಕುಡಿಯುವುದು, ಇಕ್ಕಟ್ಟಿನ ಜಾಗ ಹಾಗೂ ಶುದ್ಧ ನೀರಿನ ಸಮಸ್ಯೆ ಇರುವ ಭಾಗದಲ್ಲಿ ಕಾಲರಾ ಉಲ್ಬಣಿಸುತ್ತದೆ. ಕಲುಷಿತ ನೀರನ್ನು ಕುಡಿಯುವುದರಿಂದ, ಕಲುಷಿತ ಆಹಾರ ಸೇವಿಸಿದರೆ ಅಥವಾ ಶುದ್ಧ ಕುಡಿಯುವ ನೀರಿನಲ್ಲಿ ಕಲುಷಿತ ನೀರು ಸೇರ್ಪಡೆಯಾಗಿ ಅದನ್ನು ಜನ ಕುಡಿದರೂ ಕಾಲರಾ ಬರುವ ಸಾಧ್ಯತೆ ಇದೆ. ಹೀಗಾಗಿ ಜನ ಎಚ್ಚರಿಕೆ ವಹಿಸಬೇಕು ಎಂದು ಡಿ.ರಂದೀಪ್ ತಿಳಿಸಿದರು.

ಬೆಂಗಳೂರಿನಲ್ಲಿ ಕಾಲರಾ ದೃಢಪಟ್ಟಿಲ್ಲ

ಬೆಂಗಳೂರಿನ ಮಲ್ಲೇಶ್ವರಂನ ಖಾಸಗಿ ಪಿಜಿಯೊಂದರಲ್ಲಿ 27 ವರ್ಷದ ಮಹಿಳೆಯೊಬ್ಬರಿಗೆ ಮಾ. 30ರಂದು ವಾಂತಿ ಬೇಧಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಆದರೆ, ಅವರಿಗೆ ಕಾಲರಾ ದೃಢಪಟ್ಟಿಲ್ಲ. ಅವರು ಚಿಕಿತ್ಸೆ ಪಡೆದು ಊರಿಗೆ ಹೋಗಿದ್ದಾರೆ. ಹೀಗಾಗಿ, ಮಾಧ್ಯಮಗಳಲ್ಲಿ ವರದಿಯಾದಂತೆ ಕಾಲರಾ ದೃಢಪಟ್ಟಿಲ್ಲ. ಮಾಧ್ಯಮಗಳಲ್ಲಿ ವರದಿಯಾಗಿರುವುದು ಸುಳ್ಳು. ಚಿಕಿತ್ಸೆ ಪಡೆದ ಮಹಿಳೆ ವಾಸವಿದ್ದ ಪಿಜಿಯಲ್ಲಿ ಒಟ್ಟು 32 ಜನ ಮಹಿಳೆಯರು ವಾಸವಿದ್ದು, ಯಾರಿಗೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ. ಪಿಜಿಯ ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪಬ್ಲಿಕ್ ಹೆಲ್ತ್ ಇನ್ಸ್ ಟಿಟ್ಯೂಟ್‌ಗೆ ಕಳುಹಿಸಲಾಗಿದ್ದು, ವರದಿ ಇನ್ನಷ್ಟೇ ಬರಬೇಕಿದೆ ಎಂದರು.  

ಕಾಲರಾ: ಮಾರ್ಗಸೂಚಿ ಬಿಡುಗಡೆ

ಇನ್ನು ಕಾಲರಾಗೆ ಸಂಬಂಧಿಸಿದಂರೆ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಕೈಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳಬೇಕು, ಕೈ ಸ್ವಚ್ಛ ಮಾಡಿದ ನಂತರವೇ ಆಹಾರ ಸೇವನೆ ಮಾಡಬೇಕು. ಶುದ್ಧ ಕುಡಿಯುವ ನೀರನ್ನೇ ಬಳಸಬೇಕು ಹಾಗೂ ನೀರಿನ ಪೈಪ್‌ (ಒಳಚರಂಡಿ ಹಾಗೂ ಕುಡಿಯುವ ನೀರಿನ ಪೈಪ್‌) ಒಂದಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದೆ.

ಬಿಸಿಲಿನಿಂದ ಯಾರು ಸಾವನ್ನಪ್ಪಿಲ್ಲ

ಇನ್ನು ಕರ್ನಾಟಕದಲ್ಲಿ ಬಿಸಿಗಾಳಿಯಿಂದ ಯಾರು ಸಾವನ್ನಪ್ಪಿಲ್ಲ ಎಂದು ಡಿ.ರಂದೀಪ್‌ ತಿಳಿಸಿದ್ದಾರೆ. ಬಿಸಿಗಾಳಿ ಅಲೆ ಇರುವ ಹಿನ್ನೆಲೆಯಲ್ಲಿ ಕರ್ನಾಟಕದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಐದು ಹಾಸಿಗೆಗಳು ಹಾಗೂ ಸ್ಥಳೀಯ ಆಸ್ಪತ್ರೆಗಳಲ್ಲಿ ಎರಡು ಹಾಸಿಗೆಗಳನ್ನು ತುರ್ತು ಚಿಕಿತ್ಸೆಗೆ ಮೀಸಲಿಡಲು ಸೂಚಿಸಲಾಗಿದೆ ಎಂದರು.

ಬಿಸಿಲಿನಿಂದ 521 ಜನರಿಗೆ ಆರೋಗ್ಯ ಸಮಸ್ಯೆ

ಕರ್ನಾಟಕದಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಬಿಸಿಲಿನಿಂದ ಒಟ್ಟು 521 ಆರೋಗ್ಯ ಸಮಸ್ಯೆಗಳು ವರದಿಯಾಗಿವೆ. ಬಿಸಿಲಿನಿಂದ ದೇಹದ ಚರ್ಮದ ಸಮಸ್ಯೆಗೆ ಒಳಪಟ್ಟವರು 342, ದೇಹದ ಸ್ನಾಯು ಭಾಗದಲ್ಲಿ ಸಮಸ್ಯೆ ಬಂದವರು 121ಜನ ಹಾಗೂ ಉಷ್ಣಾಂಶದಿಂದ ನಿತ್ರಾಣ ಸಮಸ್ಯೆಯಿಂದ 58 ಜನ ಚಿಕಿತ್ಸೆ ಪಡೆದಿದ್ದಾರೆ. ಆದರೆ, ಬಿಸಿಲಿನಿಂದ ಸಾವನ್ನಪ್ಪಿದ ಯಾವುದೇ ಪ್ರಕರಣ ವರದಿಯಾಗಿಲ್ಲ. ಬಿಸಿಲಿನಿಂದ ಕಲಬುರಗಿ ಹಾಗೂ ಬಾಗಲಕೋಟೆಯಲ್ಲಿ ತಲಾ ಒಬ್ಬರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿತ್ತು. ಆದರೆ, ಇಬ್ಬರ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇಬ್ಬರು ಸಹ ನೇರವಾಗಿ ಬಿಸಿಲಾಘಾತದಿಂದ ಸಾವನ್ನಪ್ಪಿಲ್ಲ ಎನ್ನುವುದು ಖಚಿತವಾಗಿದೆ. ಇದರಲ್ಲಿ ಒಬ್ಬರು ಹೃದಯ ಸಂಬಂಧಿ ಸಮಸ್ಯೆ, ಮತ್ತೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದರು. 

ಉತ್ತರ ಕರ್ನಾಟಕ ಭಾಗದಲ್ಲಿ ನಿಗಾ

ಉತ್ತರ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಬಿಸಿಲ ಝಳ ಹೆಚ್ಚಳವಾಗಿರುವುದರಿಂದ ಈ ಭಾಗದಲ್ಲಿ ಹೆಚ್ಚಿನ ನಿಗಾ ಇರಿಸಲಾಗಿದೆ. ಅಲ್ಲದೇ ಬಿಸಿಲಿನಿಂದ ಬಳಲಿದವರ ಆರೋಗ್ಯ ಸುರಕ್ಷತೆಗಾಗಿ ಹೆಚ್ಚಿನ ಮುತುವರ್ಜಿ ವಹಿಸುವುದಕ್ಕೆ ಸೂಚಿಸಲಾಗಿದ್ದು, ಎಲ್ಲ ಸಲಕರಣೆ ಹಾಗೂ ಔಷಧಿಗಳನ್ನು ಸಿದ್ಧವಾಗಿ ಇರಿಸಿಕೊಳ್ಳುವಂತೆ ಎಲ್ಲ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಬಿಸಿಲಿನಿಂದ ಯಾರಾದರು ಸಮಸ್ಯೆ ಎದುರಿಸಿದರೆ ಆ ಪ್ರಕರಣಗಳನ್ನು ಲಘುವಾಗಿ ಪರಿಗಣಿಸಬೇಡಿ ಎಂದೂ ಸೂಚನೆ ನೀಡಲಾಗಿದೆ ಎಂದು ಹೇಳಿದರು.

Tags:    

Similar News