The Federal Impact | ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಮನೆ ಖರೀದಿಗೆ ಅಸ್ತು, ದಾಖಲೆ ಕೋರಿದ ಚಿತ್ರದುರ್ಗ ಜಿಲ್ಲಾಡಳಿತ
ʼದ ಫೆಡರಲ್ ಕರ್ನಾಟಕʼದ ವರದಿಗೆ ಸ್ಪಂದಿಸಿರುವ ಚಿತ್ರದುರ್ಗ ಜಿಲ್ಲಾಡಳಿತ ನಿಜಲಿಂಗಪ್ಪ ಅವರ ಕುಟುಂಬದೊಂದಿಗೆ ಪತ್ರ ವ್ಯವಹಾರ ಆರಂಭಿಸಿದೆ.;
ನವ ಕರ್ನಾಟಕ ನಿರ್ಮಾತೃ, ರಾಜ್ಯ ಕಂಡ ಧೀಮಂತ ನಾಯಕ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಚಿತ್ರದುರ್ಗದ ಮನೆ ಮಾರಾಟಕ್ಕೆ ಇಟ್ಟಿರುವ ಕುರಿತು ʼದ ಫೆಡರಲ್ ಕರ್ನಾಟಕʼದ ವರದಿಗೆ ರಾಜ್ಯ ಸರ್ಕಾರ ಸ್ಪಂದಿಸಿದೆ.
ಎಸ್. ನಿಜಲಿಂಗಪ್ಪ ಅವರ ನಿವಾಸವನ್ನು ಸ್ಮಾರಕವಾಗಿ ಅಭಿವೃದ್ಧಿಪಡಿಸುವ ಮೂರೂವರೆ ದಶಕಗಳ ಪ್ರಯತ್ನಕ್ಕೆ ಈಗ ಮತ್ತೆ ಚಾಲನೆ ದೊರೆತಿದೆ. ʼದ ಫೆಡರಲ್ ಕರ್ನಾಟಕʼದ ವರದಿಗೆ ಸ್ಪಂದಿಸಿರುವ ಚಿತ್ರದುರ್ಗ ಜಿಲ್ಲಾಡಳಿತ ನಿಜಲಿಂಗಪ್ಪ ಅವರ ಕುಟುಂಬದೊಂದಿಗೆ ಪತ್ರ ವ್ಯವಹಾರ ಆರಂಭಿಸಿದೆ.
ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಅವರ ಮನೆಯನ್ನು ಖರೀದಿಸಿ ಸಂರಕ್ಷಿಸುವ ಸಂಬಂಧ ಅಗತ್ಯ ದಾಖಲಾತಿ ಒದಗಿಸುವಂತೆ ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್ ಹಾಗೂ ಮೊಮ್ಮಗ ಎಸ್.ಕೆ. ವಿನಯ್ ಅವರಿಗೆ ಜಿಲ್ಲಾಡಳಿತ ಪತ್ರ ಬರೆದಿದೆ.
ನಿಜಲಿಂಗಪ್ಪ ಅವರ ಮನೆಯನ್ನು ಸಂರಕ್ಷಿಸುವ ಪ್ರಸ್ತಾವ ಮೊದಲಿನಿಂದಲೂ ಇದೆ. 2020-21 ನೇ ಸಾಲಿನ ಬಜೆಟ್‌ನಲ್ಲಿಈ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಅದರಂತೆ ಕುಟುಂಬದೊಂದಿಗೆ ಪತ್ರ ವ್ಯವಹಾರ ಸಹ ನಡೆಸಲಾಗಿತ್ತು ಆದರೆ, ಕೆಲ ಆಡಳಿತಾತ್ಮಕ ಕಾರಣಗಳಿಂದಾಗಿ ಪ್ರಸ್ತಾವ ವಿಳಂಬವಾಗಿದೆ. ಇದಕ್ಕೆ ವಿಷಾಧ ವ್ಯಕ್ತಪಡಿಸುತ್ತೇವೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಪತ್ರದಲ್ಲಿ ತಿಳಿಸಿದ್ದಾರೆ.
ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಅವರ ಮನೆಯನ್ನು ಮಾರಾಟಕ್ಕಿಟ್ಟಿರುವ ಕುರಿತು ಸಾಮಾಜಿಕ ಜಾಲತತಾಣ ಫೇಸ್‌ಬುಕ್‌ನಲ್ಲಿ ಕುಟುಂಬಸ್ಥರು ಜಾಹೀರಾತು ಪ್ರಕಟಿಸಿದ್ದರು. ಈ ಕುರಿತು ʼದ ಫೆಡರಲ್ ಕರ್ನಾಟಕʼ ವರದಿ ಪ್ರಕಟಿಸಿ, ಸರ್ಕಾರದ ಗಮನ ಸೆಳೆದಿತ್ತು.
ಈಗಾಗಲೇ ನಿಜಲಿಂಗಪ್ಪ ಅವರ ಮನೆ ಖರೀದಿ ಸಂಬಂಧಿಸಿ ಸರ್ಕಾರದ ನಿರ್ದೇಶನ, ಕಾನೂನು ಇಲಾಖೆಯ ಅಭಿಪ್ರಾಯ ಹಾಗೂ ಲೋಕೋಪಯೋಗಿ ಇಲಾಖೆ ಮೌಲ್ಯಮಾಪನದಂತೆ 4,18,49,016 ರೂ.ಗಳಿಗೆ ಮನೆ ಖರೀದಿಸಲು ತೀರ್ಮಾನಿಸಲಾಗಿದೆ. ಇದನ್ನು ಪರಿಗಣಿಸಿ ಮನೆಗೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರಗಳನ್ನು ಒದಗಿಸಬೇಕು. ಕ್ರಯಪತ್ರಕ್ಕೆ ಸಹಿ ಮಾಡುವವರ ವಿವರ ಹಾಗೂ ಬ್ಯಾಂಕ್ ಖಾತೆಯ ವಿವರವನ್ನು ನೀಡುವಂತೆ ಪತ್ರದಲ್ಲಿ ಕೋರಿದ್ದಾರೆ.
ದಾಖಲೆಪತ್ರ ಒದಗಿಸಿದ ಕೂಡಲೇ ಸರ್ಕಾರದ ಹೆಸರಿಗೆ ನಿಜಲಿಂಗಪ್ಪ ಅವರ ಮನೆಯ ಜಾಗವನ್ನು ನೋಂದಣಿ ಮಾಡಿಕೊಳ್ಳಲಾಗುವುದು. ಆ ಬಳಿಕ ಸ್ಮಾರಕ ಅಭಿವೃದ್ಧಿಗೆ ಕಾರ್ಯಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕೋರಿದ್ದಾರೆ.
ಎಸ್.ನಿಜಲಿಂಗಪ್ಪ ಅವರು ಬದುಕಿದ್ದಾಗಲೇ ತಮ್ಮ ಮೊಮ್ಮಗ ಎಸ್.ಕೆ. ವಿನಯ್ ಹೆಸರಿಗೆ ಮನೆಯ ಆಸ್ತಿಯನ್ನು ವಿಲ್ ಮಾಡಿದ್ದರು. ಪ್ರಸ್ತುತ ವಿನಯ್ ಅವರು ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಮನೆಯ ಮಾಲೀಕತ್ವ ಅಧಿಕೃತವಾಗಿ ಕಿರಣ್ ಶಂಕರ್ ಅವರಿಗೆ ಪುತ್ರ ವಿನಯ್ ಹೆಸರಿಗೆ ವರ್ಗಾವಣೆ ಆಗಿರಲಿಲ್ಲ. ನಾಲ್ಕು ವರ್ಷಗಳ ಹಿಂದೆ ದಾಖಲೆ ವರ್ಗಾವಣೆಗೆ ಪ್ರಯತ್ನಿಸಿದ್ದರೂ ಅಧಿಕಾರಿಗಳು ತಾಂತ್ರಿಕ ಕಾರಣ ನೀಡಿ ನೋಂದಣಿಗೆ ನಿರಾಕರಿಸಿದ್ದರು.