ಚಿಟ್‌ಫಂಡ್‌ ಹೆಸರಲ್ಲಿ ಕೋಟ್ಯಂತರ ರೂ. ವಂಚಿಸಿ ಕೇರಳ ಮೂಲದ ದಂಪತಿ ಪರಾರಿ

ಎ ಆ್ಯಂಡ್ ಎ ಚಿಟ್ ಫಂಡ್ ಮತ್ತು ಫೈನಾನ್ಸ್ ಹೆಸರಿನಲ್ಲಿ ಕೇರಳ ಮೂಲದ ದಂಪತಿ ಅಧಿಕ ಬಡ್ಡಿ ಆಸೆ ತೋರಿಸಿ ಹಲವರಿಂದ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದಾರೆ.;

Update: 2025-07-09 03:31 GMT

ಚಿಟ್‌ಫಂಡ್‌ ಮತ್ತು ಫೈನಾನ್ಸ್‌ ವ್ಯವಹಾರದ ಸೋಗಿನಲ್ಲಿ ಜನರಿಗೆ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ವಂಚಿಸಿ ಕೇರಳ ಮೂಲದ ದಂಪತಿ ಪರಾರಿಯಾಗಿದ್ದು, ಆರೋಪಿಗಳ ವಿರುದ್ಧ ರಾಮಮೂರ್ತಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎ ಆ್ಯಂಡ್ ಎ ಚಿಟ್ ಫಂಡ್ ಮತ್ತು ಫೈನಾನ್ಸ್ ಹೆಸರಿನಲ್ಲಿ ಕೇರಳ ಮೂಲದ ದಂಪತಿ ಅಧಿಕ ಬಡ್ಡಿ ಆಸೆ ತೋರಿಸಿ ಹಲವರಿಂದ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.  ರಾಮಮೂರ್ತಿನಗರದ ಪಿ.ಟಿ.ಸ್ಯಾವಿಯೋ ಎಂಬುವವರು ನೀಡಿದ ದೂರಿನ ಮೇರೆಗೆ ರಾಮಮೂರ್ತಿನಗರ 8ನೇ ಮುಖ್ಯರಸ್ತೆಯ ಎ ಆ್ಯಂಡ್ ಎ ಚಿಟ್ ಫಂಡ್ ಮತ್ತು ಫೈನಾನ್ಸ್ ಸಂಸ್ಥೆಯ ಮಾಲೀಕರಾದ ಎ.ವಿ.ಟಾಮಿ ಮತ್ತು ಆತನ ಪತ್ನಿ ಶಿನಿ ಟಾಮಿ ವಿರುದ್ಧ ಚಿಟ್ ಫಂಡ್ ಕಾಯ್ದೆ, ಬಿಎನ್‌ಎಸ್ ವಿವಿಧ ಕಲಂಗಳ ಅಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ವರ್ಷಕ್ಕೆ ಶೇ. 15 ರಿಂದ ಶೇ. 20ರಷ್ಟು ಬಡ್ಡಿಯ ಆಸೆ ತೋರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೋಟ್ಯಂತರ ವಂಚನೆ:

ಕೇರಳ ಮೂಲದ ಎ.ವಿ.ಟಾಮಿ ಮತ್ತು ಶಿನಿ ಟಾಮಿ 2005ನೇ ಸಾಲಿನಿಂದ ಬೆಂಗಳೂರಿನ ರಾಮಮೂರ್ತಿನಗರದಲ್ಲಿ ಎ ಆ್ಯಂಡ್ ಎ ಚಿಟ್ ಫಂಡ್ ಮತ್ತು ಫೈನಾನ್ಸ್ ಸಂಸ್ಥೆ ನಡೆಸುತ್ತಿದ್ದರು. ಅಧಿಕ ಬಡ್ಡಿ ಆಸೆ ತೋರಿಸಿ ತನ್ನನ್ನು ಸೇರಿದಂತೆ ಹಲವರಿಂದ ಠೇವಣಿ ಮತ್ತು ಚೀಟಿ ರೂಪದಲ್ಲಿ ಹಣ ಸಂಗ್ರಹಿಸಿ ಸಂಸ್ಥೆ ನಡೆಸುತ್ತಿದ್ದರು. ದೂರುದಾರರು ಈವರೆಗೆ 70 ಲಕ್ಷ ರೂಪಾಯಿ ಕಟ್ಟಿದ್ದು, ಇದೇ ರೀತಿ ಹಲವರು ಕೋಟ್ಯಂತರ ರೂಪಾಯಿ ಸಂಸ್ಥೆಗೆ ಪಾವತಿಸಿದ್ದಾರೆ.

ಕಚೇರಿ ಬಂದ್ ಮಾಡಿ ಪರಾರಿ:

ಸಂಸ್ಥೆಯ ಕಚೇರಿಗೆ ಹೋಗಿ ಗಮನಿಸಿದಾಗ ಕಚೇರಿ ಬಂದ್ ಆಗಿರುವುದು ಗಮನಕ್ಕೆ ಬಂದಿತು. ಅಕ್ಕಪಕ್ಕದವರನ್ನು ವಿಚಾರಿಸಿದಾಗ ಟಾಮಿ ದಂಪತಿ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇಬ್ಬರ ಮೊಬೈಲ್‌ಗಳಿಗೆ ಕರೆ ಮಾಡಿದರೆ, ಸ್ವಿಚ್ಡ್ ಆಫ್ ಬರುತ್ತಿದೆ. ಅಧಿಕ ಬಡ್ಡಿ ಆಸೆ ತೋರಿಸಿ ತನ್ನನ್ನು ಸೇರಿದಂತೆ ಹಲವರಿಂದ ಠೇವಣಿ ಹಾಗೂ ಚೀಟಿ ರೂಪದಲ್ಲಿ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿ ಪರಾರಿಯಾಗಿರುವ ಟಾಮಿ ದಂಪತಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ದೂರುದಾರರು ಮನವಿ ಮಾಡಿದ್ದಾರೆ. ದೂರಿನನ್ವಯ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫ್ಲಾಟ್‌ ಮಾರಾಟ ಮಾಡಿ ನಾಪತ್ತೆ

ಕಳೆದ 25 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ದಂಪತಿ ಕೆಆರ್ ಪುರಂ ಬಳಿಯ ಭಟ್ಟರಹಳ್ಳಿಯಲ್ಲಿ 1 ಕೋಟಿ ರೂ. ಮೌಲ್ಯದ ಫ್ಲಾಟ್ ಖರೀದಿಸಿದ್ದರು. ಫ್ಲಾಟ್‌ ಸೇರಿದಂತೆ ತಮ್ಮ ಚರ ಮತ್ತು ಸ್ಥಿರಾಸ್ತಿಗಳನ್ನು ಮಾರಾಟ ಮಾಡಿ ನಾಪತ್ತೆಯಾಗಿದ್ದಾರೆ. ಎಲ್ಲಾ ಪೀಠೋಪಕರಣಗಳೊಂದಿಗೆ 1 ಕೋಟಿ ರೂಪಾಯಿಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದರು. ಅಲ್ಲದೇ, ತಮ್ಮ ಕಾರುಗಳನ್ನು ಸಹ ಮಾರಾಟ ಮಾಡಿರುವುದು ಗೊತ್ತಾಗಿದೆ.  ಪೊಲೀಸರು ಸಿಸಿಟಿವಿಗಳನ್ನು ವೀಕ್ಷಿಸಿದಾಗ  ಜುಲೈ 3 ರಂದು ಸೂಟ್‌ಕೇಸ್‌ಗಳೊಂದಿಗೆ ಹೊರಟು ಹೋಗುತ್ತಿರುವುದನ್ನು ಕಂಡು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. 

ಆರೋಪಿಗಳು ಪರಾರಿಯಾಗುವ ಮುನ್ನ ಬ್ಯಾಂಕ್ ಖಾತೆಗಳಿಂದ ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ. ದಂಪತಿಯ ಮಗಳು ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೆ, ಒಬ್ಬ ಮಗ ಗೋವಾದಲ್ಲಿ ಮತ್ತು ಇನ್ನೊಬ್ಬ ಮಗ ಕೆನಡಾದಲ್ಲಿ ವಾಸಿಸುತ್ತಿದ್ದಾರೆ. ಮಗಳು ಕೂಡ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ. 


Tags:    

Similar News