ಚಿನ್ನಸ್ವಾಮಿ ದುರಂತ: ಪೊಲೀಸ್​​ ಅಧಿಕಾರಿಗಳ ಅಮಾನತು ರದ್ದು

ಈ ಘಟನೆಯ ಕುರಿತು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಜಿ. (ಐಎಎಸ್) ಅವರ ನೇತೃತ್ವದಲ್ಲಿ ಮ್ಯಾಜಿಸ್ಟೀರಿಯಲ್ ತನಿಖೆ ಮತ್ತು ಕರ್ನಾಟಕ ಹೈಕೋರ್ಟ್​​ನ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರ ಏಕಸದಸ್ಯ ನ್ಯಾಯಾಂಗ ಆಯೋಗದಿಂದಲೂ ತನಿಖೆ ನಡೆಸಲಾಗಿತ್ತು.;

Update: 2025-07-28 13:09 GMT

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಜೂನ್ 4, 2025ರಂದು ಸಂಭವಿಸಿದ್ದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪದ ಆರೋಪದ ಮೇಲೆ ಅಮಾನತುಗೊಂಡಿದ್ದ ಐಪಿಎಸ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳ ಅಮಾನತು ಆದೇಶವನ್ನು ಕರ್ನಾಟಕ ಸರ್ಕಾರ ಸೋಮವಾರ (ಜುಲೈ 28) ರದ್ದುಪಡಿಸಿದೆ. ಆದಾಗ್ಯೂ, ಈ ಅಧಿಕಾರಿಗಳ ವಿರುದ್ಧ ನಿಯಮಗಳ ಪ್ರಕಾರ ಶಿಸ್ತು ಕ್ರಮಗಳನ್ನು ಮುಂದುವರಿಸಲು ಸರ್ಕಾರ ನಿರ್ಧರಿಸಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಕಾಲ್ತುಳಿತ ಘಟನೆ ನಡೆದ ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿ ನಡೆಸಿ ಅಧಿಕಾರಿಗಳ ಅಮಾನತು ನಿರ್ಧಾರವನ್ನು ಪ್ರಕಟಿಸಿದ್ದರು. ಅವರಲ್ಲಿ ನಗರ ಪೊಲೀಸ್​ ಆಯುಕ್ತರಾಗಿದ್ದ ​ ಬಿ. ದಯಾನಂದ್ (ಐಪಿಎಸ್), ಪೊಲೀಸ್ ಅಧೀಕ್ಷಕ ಶೇಖರ್ ಹೆಚ್. ಟೆಕ್ಕಣ್ಣವರ್ (ಐಪಿಎಸ್), ಡಿವೈಎಸ್ಪಿ ಸಿ. ಬಾಲಕೃಷ್ಣ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಎ.ಕೆ. ಗಿರೀಶ್ ಅವರ ಅಮಾನತು ಆದೇಶವನ್ನು ಈಗ ರದ್ದುಪಡಿಸಲಾಗಿದೆ. ಆದರೆ, ಐಜಿಪಿ ವಿಕಾಸ್ ಕುಮಾರ್ ವಿಕಾಶ್ (ಐಪಿಎಸ್) ಅವರ ಅಮಾನತು ರದ್ದತಿಯ ಕುರಿತು ಈ ಆದೇಶದಲ್ಲಿ ಯಾವುದೇ ಉಲ್ಲೇಖವಿಲ್ಲ.

ತನಿಖಾ ವರದಿಗಳ ಆಧಾರ

ಈ ಘಟನೆಯ ಕುರಿತು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಜಿ. (ಐಎಎಸ್) ಅವರ ನೇತೃತ್ವದಲ್ಲಿ ಮ್ಯಾಜಿಸ್ಟೀರಿಯಲ್ ತನಿಖೆ ಮತ್ತು ಕರ್ನಾಟಕ ಹೈಕೋರ್ಟ್​​ನ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರ ಏಕಸದಸ್ಯ ನ್ಯಾಯಾಂಗ ಆಯೋಗದಿಂದಲೂ ತನಿಖೆ ನಡೆಸಲಾಗಿತ್ತು. ಈ ಎರಡೂ ತನಿಖಾ ಸಮಿತಿಗಳು ತಮ್ಮ ವರದಿಗಳನ್ನು ಕ್ರಮವಾಗಿ ಜುಲೈ 10 ಮತ್ತು ಜುಲೈ 11ರಂದು ಸರ್ಕಾರಕ್ಕೆ ಸಲ್ಲಿಸಿದ್ದವು. ಅಲ್ಲದೆ, ಅಮಾನತುಗೊಂಡಿದ್ದ ಅಧಿಕಾರಿಗಳು ತಮ್ಮ ಅಮಾನತು ಆದೇಶವನ್ನು ರದ್ದುಪಡಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಸರ್ಕಾರವು ಈ ಅಧಿಕಾರಿಗಳನ್ನು ಸೇವೆಗೆ ಮರುಸ್ಥಾಪಿಸಿದೆ. ಆದರೆ, ಅವರ ವಿರುದ್ಧದ ಶಿಸ್ತು ಕ್ರಮಗಳ ಪ್ರಕ್ರಿಯೆ ಮುಂದುವರಿಯಲಿದೆ.

Tags:    

Similar News