ಹುಬ್ಬಳ್ಳಿ-ಧಾರವಾಡ ಬೈಪಾಸ್‌ ರಸ್ತೆ ವಿಸ್ತರಣೆ: ಕಾಮಗಾರಿ ಪೂರ್ಣಕ್ಕೆ ಗಡುವು ನೀಡಿದ ಮುಖ್ಯ ಕಾರ್ಯದರ್ಶಿ

ರಾಷ್ಟ್ರೀಯ ಹೆದ್ದಾರಿ-48ರ ಬೈಪಾಸ್ ರಸ್ತೆ ಕಾಮಗಾರಿಯನ್ನು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಪರಿಶೀಲಿಸಿದರು. ವಿಳಂಬ ಮಾಡದೇ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅವರು ನಿರ್ದೇಶನ ನೀಡಿದರು.

Update: 2024-12-14 12:44 GMT

ಧಾರವಾಡದ ನರೇಂದ್ರ ಕ್ರಾಸ್‌ನಿಂದ ಹುಬ್ಬಳ್ಳಿಯ ಗಬ್ಬೂರುವರೆಗಿನ ಬೈಪಾಸ್ ರಸ್ತೆಯ ವಿಸ್ತರಣೆ ಕಾಮಗಾರಿಯನ್ನು 2025 ಡಿಸೆಂಬರ್ ಒಳಗೆ ಮುಗಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.

ಶನಿವಾರ ರಾಷ್ಟ್ರೀಯ ಹೆದ್ದಾರಿ-48ರ ಬೈಪಾಸ್ ರಸ್ತೆ ಕಾಮಗಾರಿ ಪರಿಶೀಲಿಸಿದ ಅವರು, ಮೊದಲ ಹಂತದಲ್ಲಿ ಅಗತ್ಯವಿರುವ ಭೂಮಿ ನೀಡಿದರೂ, ಗುತ್ತಿಗೆದಾರರು ಅನಗತ್ಯ ವಿಳಂಬ ಮಾಡುತ್ತಿರುವುದು ಕಂಡುಬರುತ್ತಿದೆ. ವಿಳಂಬ ಮಾಡದೇ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ನಿರ್ದೇಶನ ನೀಡಿದರು.

ಮುಂದಿನ 15 ದಿನಗಳಲ್ಲಿ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಬೇಕು. ಈ ಬಗ್ಗೆ ಅಧಿಕಾರಿಗಳು ವರದಿ ಸಲ್ಲಿಸಬೇಕು. ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿಯ ಪ್ರತಿ ಹಂತದಲ್ಲಿ ಅಧಿಕಾರಿಗಳು ಮೇಲುಸ್ತುವಾರಿ ಹಾಗೂ ನಿಗಾ ವಹಿಸಬೇಕು ಎಂದು ಹೇಳಿದರು.

ಒಪ್ಪಂದದಂತೆ 2025 ಡಿಸೆಂಬರ್ ತಿಂಗಳೊಳಗೆ ರಸ್ತೆ ಕಾಮಗಾರಿ ಮುಗಿಸಿ, ಸಾರ್ವಜನಿಕರ ಪ್ರಯಾಣಕ್ಕೆ ಮುಕ್ತವಾಗಿಸಬೇಕು. ಒಂದು ವೇಳೆ ಭೂಸ್ವಾದೀನ ಪ್ರಕ್ರಿಯೆಗೆ ಅಡೆತಡೆ ಇದ್ದರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಕ್ಷಣ ಸರಿಪಡಿಸಬೇಕು. ಅಗತ್ಯ ಹಣ ಬಿಡುಗಡೆಗೂ ಕ್ರಮ ಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ಕೆಲಗೇರಿ ಬಳಿಯ ರೈಲ್ವೆ ಮೇಲ್ಸೇತುವೆ, ನರೇಂದ್ರ ಟೋಲ್ ಪ್ಲಾಜಾ, ತಾರಿಹಾಳ ಸೇತುವೆ ಸೇರಿದಂತೆ ಬೈಪಾಸ್ ಉದ್ದಕ್ಕೂ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯನ್ನು ಆರು ಪಥದ ರಸ್ತೆಯನ್ನಾಗಿ ವಿಸ್ತರಣೆ ಮಾಡಲಾಗುತ್ತಿದೆ. ಇದಕ್ಕಾಗಿ ಅಗತ್ಯ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಮೊದಲ ಹಂತವಾಗಿ 14.26 ಹೆಕ್ಟೇರ್ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದಕ್ಕಾಗಿ 98 ಕೋಟಿ ರೂ. ಭೂ ಪರಿಹಾರ ಬಿಡುಗಡೆಯಾಗಿದೆ. ಈ ಪೈಕಿ 27 ಕೋಟಿ ರೂ. ಪರಿಹಾರವನ್ನು ರೈತರು ಹಾಗೂ ಭೂ ಮಾಲೀಕರಿಗೆ ವಿತರಿಸಲಾಗಿದೆ. ಉಳಿದ ಪರಿಹಾರವನ್ನು ಶೀಘ್ರ ವಿತರಿಸಲಾಗುವುದು ಎಂದು ವಿವರಿಸಿದರು.

ಎರಡನೇ ಹಂತದಲ್ಲಿ 10 ಹೆಕ್ಟೇರ್ ಭೂಸ್ವಾದೀನ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ. ಮೂರನೇ ಹಂತದಲ್ಲಿ 14 ಹೆಕ್ಟರ್ ಭೂ ಭೂಸ್ವಾಧೀನಕ್ಕೆ ಪ್ರಸ್ತಾವನೆ ಸಿದ್ದಗೊಳಿಸಲಾಗಿದೆ ಎಂದು ತಿಳಿಸಿದರು.

ಈ ವೇಳೆ ರಾಷ್ಟ್ರೀಯ ಹೆದ್ದಾರಿ-48 ರ ವಿಶೇಷ ಭೂಸ್ವಾಧೀನಾಧಿಕಾರಿ ದೇವರಾಜ ಆರ್., ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ್, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾಂವಿ, ಭೂಸ್ವಾದೀನ ವಿಭಾಗದ ಯೋಜನಾ ನಿರ್ದೇಶಕ ಭುವನೇಶ್ ಕುಮಾರ, ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಇತರರು ಇದ್ದರು.

Tags:    

Similar News