ದೇವನಹಳ್ಳಿ: ಎಸ್ಎಪಿಯ ಬೃಹತ್ ಇನ್ನೋವೇಶನ್ ಪಾರ್ಕ್ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

"ಬೆಂಗಳೂರು ಇಂದು ಕೇವಲ ಸಿಲಿಕಾನ್ ವ್ಯಾಲಿಯಲ್ಲ, ಅದು ದೇಶದ ಜ್ಞಾನ, ಕೃತಕ ಬುದ್ಧಿಮತ್ತೆ (AI) ಮತ್ತು ಕ್ವಾಂಟಮ್ ರಾಜಧಾನಿಯಾಗಿ ಬೆಳೆದಿದೆ" ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.;

Update: 2025-08-05 07:29 GMT

ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.

ಜರ್ಮನಿ ತಂತ್ರಜ್ಞಾನ ದೈತ್ಯ ಎಸ್ಎಪಿ (SAP) ಕಂಪನಿ ದೇವನಹಳ್ಳಿಯಲ್ಲಿ ನಿರ್ಮಿಸಿರುವ 41 ಎಕರೆ ವಿಸ್ತೀರ್ಣದ ಬೃಹತ್ "ಇನ್ನೋವೇಶನ್ ಪಾರ್ಕ್" ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ವಿಶ್ವದರ್ಜೆಯ ಕ್ಯಾಂಪಸ್ ಸ್ಥಾಪನೆಯು ಕರ್ನಾಟಕದ ತಂತ್ರಜ್ಞಾನ ಮತ್ತು ನಾವೀನ್ಯತೆಯ ಪಯಣದಲ್ಲಿ ಹೊಸ ಅಧ್ಯಾಯವಾಗಿದೆ ಎಂದು ಬಣ್ಣಿಸಿದರು.

"ಬೆಂಗಳೂರು ಇಂದು ಕೇವಲ ಸಿಲಿಕಾನ್ ವ್ಯಾಲಿಯಲ್ಲ, ಅದು ದೇಶದ ಜ್ಞಾನ, ಕೃತಕ ಬುದ್ಧಿಮತ್ತೆ (AI) ಮತ್ತು ಕ್ವಾಂಟಮ್ ರಾಜಧಾನಿಯಾಗಿ ಬೆಳೆದಿದೆ" ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ರಾಜ್ಯ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಜರ್ಮನಿಯ ರಾಯಭಾರಿ ಡಾ. ಫಿಲಿಪ್ ಆಕರ್‌ಮನ್ ಮತ್ತು ಎಸ್ಎಪಿ ಕಂಪನಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕರ್ನಾಟಕದ ತಾಂತ್ರಿಕ ಶಕ್ತಿ ಮತ್ತು ಸರ್ಕಾರದ ದೃಷ್ಟಿ

ತಮ್ಮ ಭಾಷಣದಲ್ಲಿ ಕರ್ನಾಟಕದ ತಾಂತ್ರಿಕ ಶಕ್ತಿಯನ್ನು ಒತ್ತಿ ಹೇಳಿದ ಸಿಎಂ, ರಾಜ್ಯವು ಭಾರತದ ಜಿಡಿಪಿಗೆ ಶೇ.8 ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿದ್ದು, ದೇಶದ ಐಟಿ ರಫ್ತಿನಲ್ಲಿ ಶೇ.35 ಪಾಲು ಹೊಂದಿದೆ ಎಂದು ತಿಳಿಸಿದರು.

ಬೆಂಗಳೂರು ಭಾರತದ ಶೇ.40 ಯುನಿಕಾರ್ನ್‌ಗಳಿಗೆ ಮತ್ತು 500ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳಿಗೆ (GCC) ನೆಲೆಯಾಗಿದೆ. ಅಲ್ಲದೆ, ದೇವನಹಳ್ಳಿಯನ್ನು ಮುಂದಿನ ನಾವೀನ್ಯತಾ ಕೇಂದ್ರವನ್ನಾಗಿ ಮಾಡಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ 2029ರೊಳಗೆ ಏರ್‌ಪೋರ್ಟ್ ಮೆಟ್ರೋ ಲೈನ್ ಮತ್ತು ಉಪನಗರ ರೈಲು ಸಂಪರ್ಕವನ್ನು ತ್ವರಿತಗೊಳಿಸುವುದಾಗಿ ಭರವಸೆ ನೀಡಿದರು.

ಉದ್ಯೋಗ ಮತ್ತು ಸುಸ್ಥಿರತೆ

ದೀರ್ಘಾವಧಿಯಲ್ಲಿ 15,000 ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿರುವ ಈ ಕ್ಯಾಂಪಸ್, ಯುವಕರಿಗೆ ಉತ್ತಮ ಅವಕಾಶಗಳನ್ನು ಒದಗಿಸಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

ಅಲ್ಲದೆ, ಈ ಕ್ಯಾಂಪಸ್ ನೆಟ್-ಜೀರೋ, ವಾಟರ್-ಪಾಸಿಟಿವ್ ಮತ್ತು ಕಾರ್ಬನ್-ನ್ಯೂಟ್ರಲ್ ಆಗುವ ಗುರಿ ಹೊಂದಿರುವುದು ಸುಸ್ಥಿರ ಕೈಗಾರಿಕಾ ಅಭಿವೃದ್ಧಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ಹೊಸ ಒಪ್ಪಂದಗಳು

ಇದೇ ಸಂದರ್ಭದಲ್ಲಿ, ಕರ್ನಾಟಕ ಸರ್ಕಾರ ಮತ್ತು ಗತಿ ಶಕ್ತಿ ವಿಶ್ವವಿದ್ಯಾಲಯದ ನಡುವೆ ಹಾಗೂ ಎಸ್ಎಪಿ ಲ್ಯಾಬ್ಸ್ ಇಂಡಿಯಾ ಮತ್ತು ಮ್ಯೂನಿಕ್ ತಾಂತ್ರಿಕ ವಿಶ್ವವಿದ್ಯಾಲಯದ ನಡುವೆ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಈ ಪಾಲುದಾರಿಕೆಗಳು ರಾಜ್ಯದಲ್ಲಿ ಕೌಶಲ್ಯಪೂರ್ಣ ಉದ್ಯೋಗಿಗಳನ್ನು ಸೃಷ್ಟಿಸಲು ಸಹಕಾರಿಯಾಗಲಿವೆ ಎಂದು ಸಿಎಂ ಅಭಿಪ್ರಾಯಪಟ್ಟರು. ಈ ಪಾರ್ಕ್ ಕೇವಲ ಕಚೇರಿಯಾಗದೆ, 'ಕರ್ನಾಟಕದಲ್ಲಿ, ಜಗತ್ತಿಗಾಗಿ' ಜಾಗತಿಕ ಪರಿಹಾರಗಳನ್ನು ಸೃಷ್ಟಿಸುವ ವೇದಿಕೆಯಾಗಲಿ ಎಂದು ಅವರು ಆಶಿಸಿದರು.

Tags:    

Similar News