ಫ್ರಾನ್ಸ್‌ನಲ್ಲಿ ಕೂಗಿದ ʼನಮ್ಮೂರ ಅಜ್ಜಿ ಹುಂಜʼ| ಕಾನ್‌ ಪ್ರಶಸ್ತಿ ತಂದ ಚಿದಾನಂದ ಎಸ್. ನಾಯಕ್ ಸಂದರ್ಶನ

77ನೇ ಕಾನ್ ಸಿನಿಮೋತ್ಸವದಲ್ಲಿ ಈ ಬಾರಿ ಕನ್ನಡದ ʼಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು..(Sunflowers Were the First Ones to Know…)ʼ ಕಿರುಚಿತ್ರ ವಿದ್ಯಾರ್ಥಿ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಪಡೆದು ಅಂತಾರಾಷ್ಟ್ರೀಯ ಸಿನಿಮಾ ವಲಯದ ಗಮನ ಸೆಳೆದಿದೆ. ಈ ಸಿನಿಮಾದ ನಿರ್ದೇಶಕರಾದ ಪುಣೆಯ ಎಫ್‌ಟಿಐಐ ವಿದ್ಯಾರ್ಥಿ ಚಿದಾನಂದ ಎಸ್‌ ನಾಯಕ್‌ ಅವರೊಂದಿಗಿನ ಸಂದರ್ಶನ ಇಲ್ಲಿದೆ

Update: 2024-06-09 02:00 GMT

ಮುಂಗೋಳಿ ಕೂಗದೆಯೂ ಬೆಳಗಾಗುತ್ತೆ ಎನ್ನೋದು ಗೊತ್ತಿರುವ ವಿಷಯ. ಆದರೆ, ನಮ್ಮೂರ ಅಜ್ಜಿ ಹುಂಜ ಫ್ರಾನ್ಸ್‌ನಲ್ಲೂ ಕೂಗಿ ಈ ಬಾರಿ ಕನ್ನಡದತ್ತ ಜಗತ್ತಿನ ಸಿನಿ ರಸಿಕರು ತಿರುಗಿ ನೋಡುವಂತೆ ಮಾಡಿದೆ ಎಂಬುದು ಈ ಬಾರಿಯ ʼಕಾನ್ ಚಿತ್ರೋತ್ಸವʼದ ವಿಶೇಷ. ಹೀಗೆ ಕನ್ನಡ ಹುಂಜವನ್ನು ಪ್ರತಿಷ್ಠಿತ ಕಾನ್ ಉತ್ಸವದಲ್ಲಿ ಕೂಗಿಸಿದ ಹೆಗ್ಗಳಿಕೆ ಚಿದಾನಂದ ಎಸ್ ನಾಯಕ್ ಅವರದು.

ಫ್ರಾನ್ಸ್‌ನ 77ನೇ ಕಾನ್ ಸಿನಿಮೋತ್ಸವದಲ್ಲಿ ಈ ಬಾರಿ ಕನ್ನಡದ ಹುಂಜನ ಕದ್ದ ಅಜ್ಜಿಯ ಜಾನಪದ ಕಥೆಯನ್ನು ಆಧರಿಸಿದ ʼಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು..(Sunflowers Were the First Ones to Know…)ʼ ಕಿರುಚಿತ್ರ ವಿದ್ಯಾರ್ಥಿ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಪಡೆದು ಅಂತಾರಾಷ್ಟ್ರೀಯ ಸಿನಿಮಾ ವಲಯದ ಗಮನ ಸೆಳೆದಿದೆ. ಜಗತ್ತಿನ ವಿವಿಧ ಸಿನಿಮಾ ಅಧ್ಯಯನ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪ್ರತಿಭೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಉದ್ದೇಶದಿಂದಲೇ ಕಾನ್‌ ಚಿತ್ರೋತ್ಸವದಲ್ಲಿ ವಿದ್ಯಾರ್ಥಿ ವಿಭಾಗದ ಅವಕಾಶ ನೀಡಲಾಗಿದ್ದು, ಇದೇ ಮೊದಲ ಬಾರಿಗೆ ಆ ವಿಭಾಗದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬರ ಚೊಚ್ಚಲ ಸಿನಿಮಾ, ವಿಮರ್ಶಕರ ಮೆಚ್ಚುಗೆ ಪಡೆದು ಪ್ರಥಮ ಬಹುಮಾನ ಪಡೆದಿದೆ.

ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ(FTII) ಯ ಮೊದಲ ವರ್ಷದ ವರ್ಷದ ವಿದ್ಯಾರ್ಥಿಯಾಗಿ‌ ಚಿದಾನಂದ‌ ಎಸ್ ನಾಯಕ್ ನಿರ್ಮಿಸಿದ 15 ನಿಮಿಷಗಳ ʼಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು..ʼ ಸಿನಿಮಾ ಕಾನ್‌ ಚಿತ್ರೋತ್ಸವಕ್ಕೆ ಆಯ್ಕೆಯಾಗಿ, ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಜಗತ್ತಿನ 555 ಸಿನಿಮಾ ಅಧ್ಯಯನ ಸಂಸ್ಥೆಗಳ 2,263 ವಿದ್ಯಾರ್ಥಿ ಕಿರುಚಿತ್ರಗಳ ಪೈಕಿ 18 ಸಿನಿಮಾಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು. ಆ ಪೈಕಿ ಕನ್ನಡದಲ್ಲಿ ನಿರ್ಮಾಣವಾಗಿರುವ ʼಸೂರ್ಯಕಾಂತಿ..ʼ ಪ್ರಥಮ ಬಹುಮಾನ ಪಡೆದಿದೆ.


ಅಜ್ಜಿಯೊಬ್ಬಳು ಕೋಳಿ ಹುಂಜವನ್ನು ಕದ್ದ ಬಳಿಕ ಆ ಊರಿನಲ್ಲಿ ಬೆಳಗಾಗುವುದೇ ಇಲ್ಲ ಎಂದು ಜಗತ್ತೇ ಕತ್ತಲೆ ಜಾರಿ ಆಗುವ ಅಲ್ಲೋಲಕಲ್ಲೋಲ, ಅನಾಹುತಗಳ ಸುತ್ತ ಇರುವ ಕನ್ನಡ ಜಾನಪದ ಕಥೆಯನ್ನು ಆಧರಿಸಿದ ಈ ಕಿರುಚಿತ್ರದಲ್ಲಿ ಪ್ರತಿಭಾವಂತ ನಟ ಎಂ ಎಸ್‌ ಜಹಾಂಗೀರ್‌, ವಸುಧಾ, ವಿಶ್ವ ಮತ್ತಿತರು ಅಭಿಯನಯಿಸಿದ್ದಾರೆ.

ಕನ್ನಡ ಮತ್ತು ಭಾರತೀಯ ಸಿನಿಮಾ ರಂಗಕ್ಕೆ ಅಂತಾರಾಷ್ಟ್ರೀಯ ಪ್ರತಿಷ್ಠಿತ ವೇದಿಕೆಯಲ್ಲಿ ಹೆಸರು ತಂದಿರುವ ಕಿರುಚಿತ್ರದ ನಿರ್ದೇಶಕರಾದ ಚಿದಾನಂದ‌ ಎಸ್ ನಾಯಕ್‌ ಅವರೊಂದಿಗೆ ʼದ ಫೆಡರಲ್‌ ಕರ್ನಾಟಕʼ ನಡೆಸಿದ ಮಾತುಕತೆಯಲ್ಲಿ ಅವರು, ತಮ್ಮ ಸಿನಿಮಾ ಆಸಕ್ತಿ, ಪ್ರೇರಣೆ, ಪ್ರಶಸ್ತಿ ಪುರಸ್ಕೃತ ತಮ್ಮ ಚೊಚ್ಚಲ ಸಿನಿಮಾದ ನಿರ್ಮಾಣ, ಮುಂದಿನ ತಮ್ಮ ಕನಸುಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಸಂದರ್ಶನದ ಆಯ್ದ ಭಾಗ ಇಲ್ಲಿದೆ..

ಸಿನಿಮಾ ಜಗತ್ತಿನ ಪ್ರತಿಷ್ಠಿತ ವೇದಿಕೆ ಕಾನ್‌ನಲ್ಲಿ ಕನ್ನಡ ಕಿರುಚಿತ್ರಕ್ಕೆ ಪ್ರಶಸ್ತಿ ತಂದುಕೊಟ್ಟು ಕನ್ನಡಿಗರೊಂದಿಗೆ ಎಲ್ಲ ಭಾರತೀಯರಿಗೆ ಹೆಮ್ಮೆ ತಂದಿದ್ದೀರಿ. ಅದಕ್ಕಾಗಿ ಧನ್ಯವಾದಗಳು. ಚೊಚ್ಚಲ ಸಿನಿಮಾಕ್ಕೆ ಜಾಗತಿಕ ಮನ್ನಣೆ ಪಡೆದ ಬಗ್ಗೆ ಹೇಗೆನಿಸುತ್ತಿದೆ?

ನಾನೊಬ್ಬ ಸಿನಿಮಾ ನಿರ್ದೇಶಕ. ನನ್ನ ಏಕೈಕ ಗುರಿ; ಒಳ್ಳೆಯ ಸಿನೆಮಾ ಮಾಡುವುದು. ಅಂತಹ ಆಸೆಯ ಹಿನ್ನೆಲೆಯಲ್ಲಿ ಮಾಡಿದ ಈ ಸಿನಿಮಾಕ್ಕೆ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಸಿಕ್ಕಿರುವುದಕ್ಕೆ ನಾನು ಬಹಳ ಕೃತಜ್ಞ. ಹಾಗೆ ನೋಡಿದರೆ ಇದು ನನ್ನ ಒಬ್ಬನ ಯಶಸ್ಸಲ್ಲ. ಇದು ಎಲ್ಲರಿಗೂ ಸೇರಿದ್ದು. ಈ ಸಿನಿಮಾ ಕಾನ್‌ ಉತ್ಸವಕ್ಕೆ ಆಯ್ಕೆಯಾದಾಗಿನಿಂದಲೂ ಕನ್ನಡಿಗರೂ ಸೇರಿದಂತೆ ಇಡೀ ದೇಶದ ಸಿನಿಪ್ರಿಯರು ನಮ್ಮನ್ನು ಬೆಂಬಲಿಸಿದ್ದಾರೆ, ಪ್ರೋತ್ಸಾಹಿಸಿದ್ದಾರೆ. ಅದಕ್ಕಾಗಿ ಎಲ್ಲರಿಗೂ ನಾನು ಆಭಾರಿ.

ʼಸೂರ್ಯಕಾಂತಿ ಹೂ...ʼನ ಮುಂದಿನ ಪಯಣ ಏನು? ಮತ್ತೆ ಯಾವೆಲ್ಲಾ ಚಿತ್ರೋತ್ಸವ, ಸ್ಪರ್ಧೆಗಳು ಇವೆ?

ಈ ಸಿನಿಮಾವನ್ನು ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ(FTII) ನಿರ್ಮಿಸಿದೆ, ಸಿನಿಮಾದ ಹಕ್ಕುಗಳು ಕೂಡ ಅದರದ್ದೇ. ಹಾಗಾಗಿ ಸಿನಿಮಾದ ಮುಂದಿನ ಭವಿಷ್ಯದ ಬಗ್ಗೆ ಎಫ್ಟಿಐಐ ನಿರ್ಧರಿಸುತ್ತದೆ. ಆದರೆ, ಜನರ ತೆರಿಗೆ ಹಣದಲ್ಲಿ ಈ ಸಿನಿಮಾವನ್ನು ನಿರ್ಮಿಸಿದ್ದೇವೆ. ಹಾಗಾಗಿ ಇದು ಪ್ರತಿಯೊಬ್ಬರಿಗೂ ತಲುಪಬೇಕು ಎಂಬುದು ನನ್ನ ಆಸೆ. ಆದರೆ, ಅಂತಿಮವಾಗಿ ಸಿನಿಮಾದ ಕುರಿತ ಎಲ್ಲಾ ನಿರ್ಧಾರವನ್ನು ಎಫ್ಟಿಐಐ ಕೈಗೊಳ್ಳಲಿದೆ. ನಿಯಮದ ಪ್ರಕಾರ ನಾನು ಯಾವುದೇ ನಿರ್ಧಾರಗಳಲ್ಲಿ ಭಾಗಿಯಾಗುವಂತಿಲ್ಲ. ಹಾಗಾಗಿ ಸಿನಿಮಾದ ಮುಂದಿನ ಪಯಣ, ಭವಿಷ್ಯದ ಕುರಿತು ನನಗೂ ಕುತೂಹಲವಿದೆ.


ಸಿನಿಮಾದ ಮೇಕಿಂಗ್, ಕಥೆ ಆಯ್ಕೆ, ತಂತ್ರಜ್ಞರ ಬಗ್ಗೆ ಹೇಳಿ

ಈ ಸಿನಿಮಾ ಶುರುವಾಗಿದ್ದು ನನ್ನಿಂದಲೇ. ನಮ್ಮ ಸಂಕಲನಕಾರರಾದ ಮನೋಜ್‌ ಅವರಿಗೂ ಎಫ್‌ಟಿಐಐನಲ್ಲಿ ಒಂದು ಕನ್ನಡ ಸಿನಿಮಾ ಮಾಡುವ ಆಸೆ ಇತ್ತು. ಹೀಗೆ ಯಾವ ಸಿನಿಮಾ ಮಾಡುವುದು ಎಂಬ ಚರ್ಚೆಯ ವೇಳೆ, ನಾನು ಈ ಕಥೆಯ ಕುರಿತು ಪ್ರಸ್ತಾಪಿಸಿದೆ. ಆಗ ಎಲ್ಲರೂ ಸೇರಿ ಅದನ್ನೇ ಸಿನಿಮಾ ಮಾಡುವ ನಿರ್ಧಾರ ಮಾಡಿದೆವು. ನಾನು ಕಥೆ ಮತ್ತು ಚಿತ್ರಕಥೆ ಬರೆದೆ. ಕನ್ನಡದ ಜಾನಪದ ಕಥೆಯನ್ನಾಧರಿಸಿದ ಕಥೆಗೆ ಸೂರಜ್‌ ಠಾಕೂರ್‌ ಛಾಯಾಗ್ರಾಹಕರಾಗಿ ಮತ್ತು ಅಭಿಷೇಕ್‌ ಕದಮ್‌ ಅವರು ಸೌಂಡ್‌ ಡಿಸೈನರ್‌ ಆಗಿ ಕೈಜೋಡಿಸಿದ್ದಾರೆ.

ಕಾನ್ ಚಿತ್ರೋತ್ಸವದ ಅನುಭವದ ಬಗ್ಗೆ..

ಅದೊಂದು ಅದ್ಭುತ ಅನುಭವ. ಇಡೀ ಜಗತ್ತಿನ ಸಿನಿಮಾಪ್ರಿಯರ ಕನಸು ಅದು. ಅಲ್ಲಿ ಭಾರತವನ್ನು ಪ್ರತಿನಿಧಿಸುವುದು ಎಂದರೆ ಅದೊಂದು ದೊಡ್ಡ ಗೌರವ. ಹಾಗೇ ಕಾನ್‌ನಲ್ಲಿ ಭಾರತೀಯರ ಐತಿಹಾಸಿಕ ದಿಗ್ವಿಜಯಕ್ಕೂ ಈ ಬಾರಿಯ ಉತ್ಸವ ಸಾಕ್ಷಿಯಾಗಿದ್ದನ್ನು ಕಣ್ಣು ತುಂಬಿಕೊಳ್ಳುವುದೂ ಮತ್ತೊಂದು ವಿಶೇಷವಾಗಿತ್ತು(ಪಾಯಲ್‌ ಕಪಾಡಿಯಾ, ಅನಸೂಯಾ ಸೇನ್‌ ಗುಪ್ತಾ ಮತ್ತು ಮೋಯ್ಸಮ್‌ ಅಲಿ ಕೂಡ ಈ ಬಾರಿ ಪ್ರಶಸ್ತಿಗೆ ಭಾಜನರಾದರು). ನನ್ನ ಕಣ್ಣೆದುರಿನಲ್ಲೇ ಚರಿತ್ರೆ ನಿರ್ಮಾಣವಾಗುತ್ತಿರುವುದಕ್ಕೆ ನಾನು ಸಾಕ್ಷಿಯಾಗಿದ್ದೆ. ಅಬ್ಬಾ.. ಈ ವರ್ಷದ ಕಾನ್‌ ಭಾರತದ ಪಾಲಿಗೆ ಎಂತಹ ಅವಿಸ್ಮರಣೀಯ..!

ಶಿವಮೊಗ್ಗದಿಂದ ಆರಂಭವಾದ ನಿಮ್ಮ ಜರ್ನಿ, ಮೈಸೂರು, ಬಳಿಕ ಪುಣೆ ಎಫ್ ಟಿಐಐ ಮತ್ತು ಅಲ್ಲಿಂದ ಕಾನ್ ಪ್ರಶಸ್ತಿವರೆಗೆ ಬೆಳೆದಿದೆ. ಈ ಜರ್ನಿ ಬಗ್ಗೆ ಹೇಳಿ

ನಾನು ಶಿವಮೊಗ್ಗದಲ್ಲಿ 1995ರಲ್ಲಿ ಹುಟ್ಟಿದೆ. ಮುಂದೆ ಮೈಸೂರಿನಲ್ಲಿ ಎಂಬಿಬಿಎಸ್‌ ಓದಿ, ಅಲ್ಲಿಯೇ ವೈದ್ಯಕೀಯ ವೃತ್ತಿ ಆರಂಭಿಸಿದೆ. ವೈದ್ಯನಾಗಿ ರೋಗಿಗಳ ಸಾವು- ಬದುಕಿನ ಹೋರಾಟವನ್ನು ಹತ್ತಿರದಿಂದ ಕಂಡ ನನಗೆ ಆದ ಅನುಭವಗಳು ಮನುಷ್ಯ ಬದುಕಿನ ಏರಿಳಿತಗಳು, ಅಸಂಗತತೆಯ ಕುರಿತ ಜಿಜ್ಞಾಸೆಗೆ ಹಚ್ಚಿದವು. ಅದೇ ಅಂತಿಮವಾಗಿ ನಾನು ಸಿನಿಮಾ ನಿರ್ಮಾಣದತ್ತ ಹೊರಳುವಂತೆ ಮಾಡಿತು. ಸಿನಿಮಾದ ಬಗೆಗೆ ನನಗೆ ಆಗ ಹುಟ್ಟಿದ ಆ ಪ್ಯಾಷನ್‌ ನಿಂದಾಗಿಯೇ ನಾನು ಪುಣೆಗೆ ಬಂದು ಎಫ್‌ಟಿಐಐನಲ್ಲಿ ನಿರ್ದೇಶನ ಕಲಿಯುವಂತಾಯಿತು. ಇದು ನನ್ನ ಜರ್ನಿ..

ಓದಿದ್ದು ವೈದ್ಯಕೀಯ, ವೃತ್ತಿ ಆರಂಭಿಸಿದ್ದು ವೈದ್ಯರಾಗಿ, ಈಗ ಗೆದ್ದಿದ್ದು ಸಿನಿಮಾ ರಂಗದಲ್ಲಿ.. ಯಾಕೆ ದಿಢೀರನೆ ಸಿನಿಮಾದತ್ತ ಹೊರಳಿದಿರಿ? ಏನು ಪ್ರೇರಣೆ?

ನಾವು ಹುಟ್ಟುವಾಗ ಯಾವ ನಿರೀಕ್ಷೆ, ಕನಸುಗಳಿಲ್ಲದೆ ಹುಟ್ಟುತ್ತೇವೆ. ನಂತರ, ನಮ್ಮ ಬದುಕು ಹೇಗಿರಬೇಕು ಎಂದು ನಿರ್ಧರಿಸುತ್ತೇವೆ. ಆದರೆ, ಜೀವನದಲ್ಲಿ ಏನು ಮಾಡಬೇಕು ಎಂದು ಹೇಳುವ ಯಾವ ನೀಲನಕ್ಷೆಯೂ ಯಾರ ಮುಂದೆಯೂ ಇರುವುದಿಲ್ಲ. ಹಾಗಾಗಿ, ಖುಷಿಯಾಗಿರಬೇಕು ಎಂಬುದಷ್ಟೇ ನನ್ನ ನಿರ್ಧಾರವಾಗಿತ್ತು. ಹಾಗೇ ನನ್ನ ಮತ್ತು ಸುತ್ತಲಿನ ಜನರನ್ನು ಖುಷಿಗಾಗಿ ಏನು ಬೇಕೊ ಅದನ್ನು ಮಾಡೋಣ ಎಂದು ನಿರ್ಧರಿಸಿದೆ. ಅಷ್ಟೇ.. ಹಾಗಾಗಿ ಬದುಕಿನಲ್ಲಿ ತಿರುವುಗಳಾಗಲೀ, ಬದಲಾವಣೆಗಳಾಗಲೀ ಇರಲಿಲ್ಲ. ನನ್ನೊಂದಿಗೆ ನಾನು ಬದುಕುವುದು ಮತ್ತು ಬದುಕಿನ ಕುರಿತ ನನ್ನದೇ ಅಭಿವ್ಯಕ್ತಿಯನ್ನು ಕಂಡುಕೊಳ್ಳುವುದು ಅಷ್ಟೇ ನನ್ನ ಆದ್ಯತೆ ಅಷ್ಟೇ.

ಮುಂದೆ ಕಮರ್ಷಿಯಲ್ ಸಿನಿಮಾ ಮಾಡುವ ಯೋಚನೆ ಇದೆಯೇ? ಅಥವಾ ಕಲಾತ್ಮಕ, ಬ್ರಿಜ್ ಸಿನಿಮಾಗಳು ಮಾತ್ರವೇ ನಿಮ್ಮ ಆಯ್ಕೆಯಾ?

ಉತ್ತಮ ಕಮರ್ಷಿಯಲ್‌ ಸಿನಿಮಾ ಮಾಡಲು ಆಸಕ್ತನಾಗಿದ್ದೇನೆ. ಅವಕಾಶಗಳು ಸಿಕ್ಕಲ್ಲಿ ಖಂಡಿತಾ ಮಾಡುವೆ.

ನಿಮ್ಮ ಮುಂದಿನ ಕನಸು ಏನು?

ನಮ್ಮ ಸಿನಿಮಾಗಳನ್ನು ಜಗತ್ತಿನ ಉದ್ದಗಲಕ್ಕೆ ಜನ ನೋಡಬೇಕು, ಸಂಭ್ರಮಿಸಬೇಕು ಎಂಬುದಷ್ಟೇ ನನ್ನ ಕನಸು.

Tags:    

Similar News