Karnataka By-Election |ಚನ್ನಪಟ್ಟಣಕ್ಕೆ ಕಾಂಗ್ರೆಸ್ ʼಅಚ್ಚರಿ ಅಭ್ಯರ್ಥಿʼ ಸಿ.ಪಿ. ಯೋಗೇಶ್ವರ್?
ಶನಿವಾರ ರಾತ್ರಿ ಬೆಂಗಳೂರಿನಲ್ಲಿ ನಡೆದ ಜೆಡಿಎಸ್-ಬಿಜೆಪಿ ಸಮನ್ವಯ ಸಮಿತಿ ಸಭೆಯಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲಿಸುವ ವಿಚಾರವಾಗಿಯೇ ಪ್ರಮುಖವಾಗಿ ಚರ್ಚಿಸಲಾಗಿದೆ. ಸಿ.ಪಿ. ಯೋಗೇಶ್ವರ್ ಸ್ಪರ್ಧೆ ಕುರಿತಂತೆ ಚರ್ಚೆ ನಡೆದರೂ ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟುಕೊಡದಿರಲು ಜೆಡಿಎಸ್ ಪಟ್ಟು ಹಿಡಿದಿದೆ.;
ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಘೋಷಣೆ ವಿಚಾರ ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಸಂಡೂರು ಹಾಗೂ ಶಿಗ್ಗಾವಿ ಕ್ಷೇತ್ರಗಳಿಗೆ ಬಿಜೆಪಿ ಈಗಾಗಲೇ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ, ಚನ್ನಪಟ್ಟಣ ಅಭ್ಯರ್ಥಿಯ ಆಯ್ಕೆ ಕಗ್ಗಂಟು ಮುಂದುವರೆದಿದ್ದು, ಭಾನುವಾರ ಸಂಜೆ ವೇಳೆಗೆ ಸ್ಪಷ್ಟ ಚಿತ್ರಣ ಹೊರಬೀಳುವ ಸಾಧ್ಯತೆ ಇದೆ. ಈ ಮಧ್ಯೆ ಚನ್ನಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಚ್ಚರಿ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದ್ದು, ಉಪಚುನಾವಣೆ ಕಾವೇರತೊಡಗಿದೆ.
ಶನಿವಾರ ರಾತ್ರಿ ಬೆಂಗಳೂರಿನಲ್ಲಿ ನಡೆದ ಜೆಡಿಎಸ್-ಬಿಜೆಪಿ ಸಮನ್ವಯ ಸಮಿತಿ ಸಭೆಯಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲಿಸುವ ವಿಚಾರವಾಗಿಯೇ ಪ್ರಮುಖವಾಗಿ ಚರ್ಚಿಸಲಾಗಿದೆ. ಸಿ.ಪಿ. ಯೋಗೇಶ್ವರ್ ಸ್ಪರ್ಧೆ ಕುರಿತಂತೆ ಚರ್ಚೆ ನಡೆದರೂ ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟುಕೊಡದಿರಲು ಜೆಡಿಎಸ್ ಪಟ್ಟು ಹಿಡಿದಿದೆ.
ಸಿಪಿವೈಗೆ ಜೆಡಿಎಸ್ ಆಫರ್
ಶಿಗ್ಗಾವಿ, ಸಂಡೂರು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿ ಘೋಷಿಸಲಾಗಿದೆ. ಚನ್ನಪಟ್ಟಣ ಕ್ಷೇತ್ರದಿಂದಲೂ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಜೆಡಿಎಸ್ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಲಿದೆ. ಬದಲಿಗೆ ಸಿ.ಪಿ. ಯೋಗೇಶ್ವರ್ ಅವರು ಜೆಡಿಎಸ್ ಚಿಹ್ನೆಯಡಿ ಸ್ಪರ್ಧಿಸಿದರೆ ಈ ಕುರಿತು ಚರ್ಚಿಸಬಹುದು ಎಂದು ಜೆಡಿಎಸ್ ನಾಯಕರು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಸಿ.ಪಿ.ಯೋಗೇಶ್ವರ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೋ, ಇಲ್ಲವೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೋ ಎಂಬುದು ಅ.24 ರಂದು ಕರೆದಿರುವ ಬೆಂಬಲಿಗರ ಸಭೆ ಬಳಿಕ ತೀರ್ಮಾನವಾಗಲಿದೆ.
ಸಿಪಿವೈ ಕಾಂಗ್ರೆಸ್‌ನಿಂದ ಸ್ಪರ್ಧೆ?
ಇನ್ನು ಚನ್ನಪಟ್ಟಣದಲ್ಲಿ ಶನಿವಾರ ರಾತ್ರಿ ಸಭೆ ನಡೆಸಿರುವ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದಿಂದ ಸಿ.ಪಿ.ಯೋಗೇಶ್ವರ್ ಅವರನ್ನು ಕಣಕ್ಕಿಳಿಸುವ ಸುಳಿವು ನೀಡಿದ್ದಾರೆ. ಮುಖಂಡರ ಸಭೆಯಲ್ಲಿ ಡಿ.ಕೆ.ಸುರೇಶ್ ಅವರ ಸ್ಪರ್ಧೆಗೆ ಒತ್ತಾಯ ಕೇಳಿ ಬಂದರೂ, ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿ. ನನ್ನ ಹೆಸರಲ್ಲೇ ಚುನಾವಣೆ ನಡೆಸುತ್ತೇವೆ. ನಮ್ಮ ಕುಟುಂಬದಿಂದ ಯಾರೂ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ನಾವು ಸೂಚಿಸುವ ಅಭ್ಯರ್ಥಿಯೇ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಈ ಕುರಿತು ́ದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿದ ರಾಮನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಅವರು, ಅಭ್ಯರ್ಥಿ ಘೋಷಣೆ ಕುರಿತಂತೆ ರಾಜ್ಯ ನಾಯಕರು ಸಾಕಷ್ಟು ಚರ್ಚೆ ನಡೆಸಿದ್ದಾರೆ. ಡಿ.ಕೆ.ಸುರೇಶ್ ಅವರ ಸ್ಪರ್ಧೆಗೆ ನಾವು ಒತ್ತಾಯಿಸಿದ್ದೇವೆ. ಆದರೆ, ಯಾವುದೂ ಕೂಡ ಇನ್ನು ಅಂತಿಮವಾಗಿಲ್ಲ. ಒಂದು ವೇಳೆ ಡಿ.ಕೆ.ಸುರೇಶ್ ಅವರು ಕಣದಿಂದ ಹಿಂದೆ ಸರಿದರೆ ನಾನು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ರಘುನಂದನ್ ರಾಮ್, ತೇಜಸ್ವಿನಿ ರಮೇಶ್ ಅವರು ಕೂಡ ಆಕಾಂಕ್ಷಿಯಾಗಿದ್ದು, ಹೈಕಮಾಂಡ್ ನಿರ್ಧಾರವೇ ಅಂತಿಮವಾಗಲಿದೆ ಎಂದರು.
ಡಿ.ಕೆ.ಸುರೇಶ್ ಅವರ ಅಚ್ಚರಿ ಅಭ್ಯರ್ಥಿ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎರಡು ದಿನದಲ್ಲಿ ಅಭ್ಯರ್ಥಿ ಕುರಿತು ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದರು. ಸಿ.ಪಿ.ಯೋಗೇಶ್ವರ್ ಸ್ಪರ್ಧೆ ಕುರಿತು ಕೇಳಲಾಗಿ, ಅವರು ಎರಡು ಬಾರಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅವರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸುವ ಕುರಿತು ಈವರೆಗೆ ಚರ್ಚೆಯಾಗಿಲ್ಲ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಒಂದು ವೇಳೆ ಯೋಗೇಶ್ವರ್ ಸ್ಪರ್ಧೆಗೆ ಹೈಕಮಾಂಡ್ ಸೂಚಿಸಿದರೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬದಿಗಿರಿಸಿ ಗೆಲುವಿಗೆ ಶ್ರಮಿಸುತ್ತೇವೆ ಎಂದು ಹೇಳಿದರು. .
ಎನ್‌ಡಿಎ ಅಭ್ಯರ್ಥಿ ಘೋಷಣೆ ನಂತರ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು. ಯೋಗೇಶ್ವರ್ ಸ್ಪರ್ಧಿಸುವ ವಿಚಾರವನ್ನು ತಳ್ಳಿ ಹಾಕುವಂತಿಲ್ಲ ಎಂದು ಹೇಳಿದರು.
ಟಿಕೆಟ್ ನೀಡುವಂತೆ ಪತ್ರ ಬರೆದ ತೇಜಸ್ವಿನಿ
ಮಾಜಿ ಸಂಸದೆ ತೇಜಸ್ವಿನಿ ಗೌಡ ಅವರು ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ಟಿಕೆಟ್ ನೀಡಲು ತಮ್ಮನ್ನೂ ಪರಿಗಣಿಸುವಂತೆ ಒತ್ತಾಯಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರಿಗೆ ಪತ್ರ ಬರೆದಿದ್ದಾರೆ. ಬಿಜೆಪಿಯಿಂದ ವಿಧಾನಪರಿಷತ್ ಸದಸ್ಯೆಯಾಗಿದ್ದ ಅವರು, ಈಚೆಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರು.
2004 ರಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರನ್ನು ಕನಕಪುರ ಲೋಕಸಭೆ ಕ್ಷೇತ್ರದಲ್ಲಿ ಸೋಲಿಸಿದ ನಂತರ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಲೋಕಸಭಾ ಕ್ಷೇತ್ರದಲ್ಲಿ ನಿರ್ಣಾಯಕ ವಿಧಾನಸಭಾ ಕ್ಷೇತ್ರವಾದ ಚನ್ನಪಟ್ಟಣದಲ್ಲೇ ಅತಿ ಹೆಚ್ಚು ಮತ ಗಳಿಸಿದ್ದರು.