ಬಿಜೆಪಿ ಟಿಕೆಟ್‌ ವಂಚನೆ ಪ್ರಕರಣ | ಚೈತ್ರಾ ಕುಂದಾಪುರ ಬಂಟರಿಂದ ಸಾಕ್ಷಿದಾರನ ಕೊಲೆ ಯತ್ನ?

ಕರಾವಳಿ ಮೂಲದ ʼಹಿಂದೂ ಫೈರ್‌ ಬ್ರಾಂಡ್‌ʼ ಎಂದು ಗುರುತಿಸಿಕೊಂಡಿದ್ದ ಚೈತ್ರಾ, ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿ ಗೋವಿಂದ ಪೂಜಾರಿ ಎಂಬುವರಿಗೆ 7 ಕೋಟಿ ರೂ. ವಂಚನೆ ಮಾಡಿರುವ ಆರೋಪದಲ್ಲಿ ಬಂಧಿತೆಯಾಗಿದ್ದಾಳೆ. ಪ್ರಕರಣದ ಸಾಕ್ಷಿದಾರರ ಕೊಲೆ ಯತ್ನ ನಡೆಸಿದ ಆರೋಪದಲ್ಲಿ ಈಗ ಮತ್ತೆ ಸುದ್ದಿಗೆ ಬಂದಿದ್ದಾಳೆ

Update: 2024-03-27 14:12 GMT

ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿ ಗೋವಿಂದ ಪೂಜಾರಿ ಎಂಬುವರಿಗೆ 7 ಕೋಟಿ ರೂ. ವಂಚನೆ ಮಾಡಿರುವ ಆರೋಪದಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತಳಾಗಿದ್ದ ಕರಾವಳಿ ಮೂಲದ ʼಹಿಂದೂ ಫೈರ್‌ ಬ್ರಾಂಡ್‌ʼ ಚೈತ್ರಾ ಕುಂದಾಪುರ ಈಗ ಮತ್ತೆ ಸುದ್ದಿಗೆ ಬಂದಿದ್ದಾಳೆ.

ಆಕೆಯ ಮೇಲಿರುವ ಪ್ರಕರಣದಲ್ಲಿ ಆಕೆಯ ವಿರುದ್ಧ ಸಾಕ್ಷ್ಯ ನೀಡಿರುವ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಸೆಲೂನ್‌ ಒಂದರ ಮಾಲೀಕನಾಗಿರುವ ರಾಮಕುಮಾರ್‌ ಎಂಬವರನ್ನು ಹತ್ಯೆ ಮಾಡಲು ʼಚೈತ್ರಾ  ಗ್ಯಾಂಗ್‌ʼ ಬುಧವಾರ ಪ್ರಯತ್ನಿಸಿದೆ ಎಂದು ದೂರು ದಾಖಲಾಗಿದೆ. ರಾಮ್‌ ಕುಮಾರ್‌ ಎಂಬವರಿಗೆ ಸಂಘದ ಪ್ರಚಾರಕನೆಂದು ನಕಲಿ ವೇಷ ಹಾಕಿ ಉದ್ಯಮಿಗೆ ಪರಿಚಯ ಮಾಡಿಸಿ ವಂಚಿಸಲಾಗಿತ್ತು. ಆ ಪ್ರಕರಣದಲ್ಲಿ ರಾಮ್‌ ಕುಮಾರ್ ಪ್ರಮುಖ ಸಾಕ್ಷಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಚೈತ್ರಾ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯಾಗಿರುವ ಗಗನ್‌ ಕಡೂರು ಎಂಬುವನ ಕಡೆಯಿಂದ ಸಾಕ್ಷಿ ರಾಮ್‌ ಕುಮಾರ್‌ ಮೇಲೆ ಮಾ.25 ರಂದು ರಾತ್ರಿ ದಾಳಿ ನಡೆದಿದೆ ಎನ್ನಲಾಗಿದೆ. ತನ್ನ ಮೇಲೆ ಹಲ್ಲೆಯಾಗಿದ್ದು, ಪೊಲೀಸರಿಗೆ ದೂರು ನೀಡಿದರೂ ಎಫ್‌ಐಆರ್‌ ದಾಖಲಿಸಿಲ್ಲ ಎಂದು ರಾಮ್‌ ಕುಮಾರ್‌ ಚಿಕ್ಕಮಗಳೂರು ಜಿಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

 

ದೂರಿನಲ್ಲಿ ಏನಿದೆ?

"ಚೈತ್ರಾ ಕುಂದಾಪುರ ವಿರುದ್ಧ ದಾಖಲಾಗಿರುವ ಈ ಹಿಂದಿನ ಸಿಸಿಬಿ ಪ್ರಕರಣದಲ್ಲಿ ಆರೋಪಿಗಳು ನನ್ನನ್ನು ಆರ್‌ಎಸ್‌ಎಸ್‌ ಪ್ರಚಾರಕನಂತೆ ನಟಿಸಲು ಹೇಳಿ ಬಳಸಿಕೊಂಡಿದ್ದರು. ಚೈತ್ರಾ ಕುಂದಾಪುರ, ಗಗನ್ ಕಡೂರ್ ಮತ್ತು ಇತರರು ನನ್ನನ್ನು ಆರ್‌ಎಸ್‌ಎಸ್‌ ಮುಖಂಡರ ಸೋಗು ಹಾಕಲು ಬಳಸಿಕೊಂಡರು. ನಂತರ ನಾನು ಆ ಪ್ರಕರಣದಲ್ಲಿ ಸಾಕ್ಷಿದಾರನಾಗಿದ್ದೇನೆ," ಎಂದು ದೂರಿನಲ್ಲಿ ತಿಳಿಸಿದ್ದಾನೆ.

"ಮಾ. 25 ರಂದು ರಾತ್ರಿ ನಾನು ನಾಗೇಶ್, ಸಂಜಯ್ ಅಲಿಯಾಸ್‌ ಸಂಜು ಕುಮಾರ್ ಮತ್ತು ಗೋವಿಂದ ಜೊತೆಗೆ ಕಡೂರಿನ ಶಾನ್ ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದೆ. ಚೈತ್ರಾ ಪ್ರಕರಣದ ಇನ್ನೊಬ್ಬ ಪ್ರಮುಖ ಆರೋಪಿ ಧನರಾಜ್ ಮತ್ತು ಮನು ಸೇರಿ 8 ಮಂದಿ ನನ್ನ ಮೇಲೆ ದೌರ್ಜನ್ಯ ಎಸಗಿದ್ದು, ನಾನು ಆತನ ಭವಿಷ್ಯ ಹಾಳು ಮಾಡಿದ್ದೇನೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಈತನು ಕಡಗ (ಸ್ಟೀಲ್ ಬಳೆ) ಯನ್ನು ಉಪಯೋಗಿಸಿ ಬಹಳ ಬಲವಾಗಿ ನನಗೆ ಹೊಡೆದಿದ್ದಾನೆ. ಅವನ ಕಿರಿಯ ಸಹೋದರ ಮನು ಸಹ ನನಗೆ ಹೊಡೆದಿದ್ದಾನೆ. ಮತ್ತು ಧನರಾಜ್ ಜೊತೆಗೆ ಬಂದ ಇತರ 8 ಜನರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಣಾಮವಾಗಿ ನನ್ನ ಕಿವಿ ಹರಿದಿದೆ. ಇದಲ್ಲದೆ ಸಂಜಯ್ ಅಲಿಯಾಸ್ ಸಂಜು ಕುಮಾರ್ ಅವರ ಮೇಲೂ ಹಲ್ಲೆ ನಡೆಸಿದ್ದು, ಮೂಗಿನ ರಕ್ತಸ್ರಾವವಾಗಿದೆ," ಎಂದು ದೂರಿನಲ್ಲಿ ವಿವರಿಸಲಾಗಿದೆ.

"ಘಟನೆ ನಡೆದ ಸ್ಥಳದಿಂದ ಹೊರಡುವ ಮೊದಲು, ತಮ್ಮ ಮತ್ತು ಚೈತ್ರಾ ಕುಂದಾಪುರ ವಿರುದ್ಧದ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಸತ್ಯವನ್ನು ಹೇಳಿದರೆ ನಿನ್ನನ್ನು ಕೊಲ್ಲುತ್ತೇವೆ ಎಂದು ಆರೋಪಿಗಳು ಬೆದರಿಕೆ ಹಾಕಿದರು. ಈ ಹಿಂದೆ ಧನರಾಜ್ ನನ್ನ ಹೇರ್ ಕಟಿಂಗ್ ಸಲೂನ್ ಬಳಿ 3 ಬಾರಿ ಬಂದು ನ್ಯಾಯಾಲಯಕ್ಕೆ ಸಾಕ್ಷಿ ಹೇಳದಂತೆ ಬೆದರಿಕೆ ಹಾಕಿದ್ದ. ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ್ ಅವರಿಗೆ ಶಿಕ್ಷೆಯಾಗದಂತೆ ನೋಡಿಕೊಳ್ಳಲು ನನ್ನ ವಿರುದ್ಧ ಈ ಅಪರಾಧಕ್ಕೆ ಕುಮ್ಮಕ್ಕು ನೀಡಿದ್ದಾರೆ," ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ.

 

 

"ನಾನು ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆದರೆ ಅವರು ಅಧಿಕಾರ ವ್ಯಾಪ್ತಿ ಹೊಂದಿಲ್ಲ ಎಂದು ಹೇಳಿ ನನ್ನನ್ನು ವಾಪಸ್ ಕಳುಹಿಸಿದ್ದಾರೆ. ನಂತರ ಬೀರೂರು ಪೊಲೀಸ್ ಠಾಣೆಗೆ ದೂರು‌ ನೀಡಲು ತೆರಳಿದಾಗ, ನನ್ನನ್ನು ಕಾಯುವಂತೆ ಮಾಡಿದರು ಮತ್ತು ನನ್ನ ದೂರನ್ನು ಬಹಳ ತಡವಾಗಿ ಸ್ವೀಕರಿಸಿದ್ದಾರೆ. ಮತ್ತು ಎನ್‌ಸಿಆರ್ ಅನ್ನು ದಾಖಲಿಸಿದ್ದಾರೆ. ಆದರೆ ದಾಳಿಕೋರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ," ಎಂದು ರಾಮಕುಮಾರ್‌ ಆರೋಪಿಸಿದ್ದಾನೆ.

ಏನಿದು ಚೈತ್ರಾ ಪ್ರಕರಣ?

ಉಡುಪಿ ಜಿಲ್ಲೆ ಬೈಂದೂರಿನ ಉದ್ಯಮಿ ಹಾಗೂ ಸಮಾಜ ಸೇವಕ ಗೋವಿಂದ ಬಾಬು ಪೂಜಾರಿ ಎಂಬುರಿಗೆ ಚೈತ್ರಾ ಕುಂದಾಪುರ ಮೋಸ ಮಾಡಿದ ಆರೋಪವಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ 7 ಕೋಟಿ ರೂಪಾಯಿ ವಸೂಲಿ ಮಾಡಿದ ಆರೋಪ ಆಕೆಯ ಮೇಲಿದೆ. ಗೋವಿಂದ ಪೂಜಾರಿ ದೂರಿನ ಮೇರೆಗೆ ಬೆಂಗಳೂರು ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಆಕೆ ಸೇರಿದಂತೆ ಒಟ್ಟು 8 ಮಂದಿ ಮೇಲೆ ಪ್ರಕರದ ದಾಖಲಾಗಿತ್ತು.

ಪೊಲೀಸರಿಂದ ಆಕೆ ಬಂಧಿತಳಾದ ಬಳಿಕ ಆಕೆಯ ಸಂಗಡಿಗರಾದ ಪ್ರಸಾದ್, ಗಗನ್ ಕಡೂರು, ಪ್ರಜ್ವಲ್ ಶೆಟ್ಟಿ, ಆರ್. ಎಸ್. ಧನರಾಜ್, ರಮೇಶ್ ಹಾಗೂ ಶ್ರೀಕಾಂತ್ ಕೂಡಾ ಪೊಲೀಸರ ಅತಿಥಿಯಾಗಿದ್ದರು. ಜೊತೆಗೆ ಉತ್ತರಕರ್ನಾಟಕದ ಪ್ರಮುಖ ಲಿಂಗಾಯತ ಮಠವಾದ ವಿಜಯನಗರ ಜಿಲ್ಲೆಯ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ ಕೂಡ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಬಂಧನಕ್ಕೆ ಒಳಗಾಗಿದ್ದರು. ಹಿಂದಿನ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಮತ್ತು ಹಾಲಸ್ವಾಮಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. 

Tags:    

Similar News