ಡಿಕೆಶಿ ವಿರುದ್ಧದ ಪ್ರಕರಣ ಲೋಕಾಯುಕ್ತಕ್ಕೆ: ಸಿಬಿಐ ಆಕ್ಷೇಪ

ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದ ಪ್ರಕರಣದ ತನಿಖೆಗಾಗಿ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ಹಿಂಪಡೆದ ಕ್ರಮವನ್ನು ಸಿಬಿಐ ನ್ಯಾಯಾಲಯದಲ್ಲಿ ಪ್ರಶ್ನಿಸಿದೆ;

Update: 2024-04-19 06:43 GMT

ಡಿಸಿಎಂ ಡಿ.ಕೆ.ಶಿವಕುಮಾ‌ರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐಯಿಂದ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರದ ನಡೆಗೆ ಸಿಬಿಐ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದೊಂದು ಕಣ್ಣೊರೆಸುವ ತಂತ್ರ ಎಂದು ಹೇಳಿದೆ.

ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದ ಪ್ರಕರಣದ ತನಿಖೆಗಾಗಿ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ಹಿಂಪಡೆದ ಕ್ರಮವನ್ನು ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಲ್ಲಿಸಿದ್ದರು. ಈ ಅರ್ಜಿಗಳನ್ನು ನ್ಯಾಯಮೂರ್ತಿ ಕೆ.ಸೋಮಶೇಖ‌ರ್ ಮತ್ತು ಉಮೇಶ್ ಎಂ.ಅಡಿಗ ಅವರಿದ್ದ ವಿಭಾಗೀಯ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿದೆ.

ವಿಚಾರಣೆ ವೇಳೆ ಸಿಬಿಐ ಪರ ವಾದ ಮಂಡಿಸಿದ ವಕೀಲ ಪಿ.ಪ್ರಸನ್ನ ಕುಮಾರ್, “ತನಿಖೆಯನ್ನು ಲೋಕಾಯುಕ್ತಕ್ಕೆ ವರ್ಗಾಯಿಸಿರುವುದಕ್ಕೆ ಯಾವುದೇ ಕಾನೂನಿನ ಬೆಂಬಲವಿಲ್ಲ. ತನಿಖೆಯನ್ನು ದಾರಿ ತಪ್ಪಿಸುವ ಮೂಲಕ ಡಿಕೆ ಶಿವಕುಮಾರ್‌ ಗೆ ಅನುಕೂಲ ಮಾಡಿಕೊಡಲು ಸರ್ಕಾರ ಪ್ರಕರಣದ ತನಿಖೆಯಯನ್ನು ಲೋಕಾಯುಕ್ತಕ್ಕೆ ವರ್ಗಾಯಿಸಿದೆ' ಎಂದು ಆರೋಪಿಸಿದರು.

ಪ್ರಕರಣದ ಬಗ್ಗೆ ಸಿಬಿಐ ಹಲವು ತಿಂಗಳ ಕಾಲ ಪ್ರಾಥಮಿಕ ತನಿಖೆ ನಡೆಸಿದೆ. ಹೀಗಾಗಿ, ರಾಜ್ಯ ಸರ್ಕಾರದ ಆದೇಶವನ್ನು ವಜಾ ಮಾಡಬೇಕು. ತನಿಖೆ ಪೂರ್ಣಗೊಳಿಸಲು ಗಾಊ ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಬೇಕು ಎಂದು ಅವರು ಅನುಮತಿ ಕೋರಿದ್ದಾರೆ.

ಯತ್ನಾಳ್‌ ಪರ ಹಾಜರಾದ ವಕೀಲರೂ ಡಿಸಿಎಂ ವಿರುದ್ಧದ ಪ್ರಕರಣವನ್ನು ಲೋಕಾಯುಕ್ತಕ್ಕೆ ವರ್ಗಾಯಿಸಿರುವುದರ ಬಗ್ಗೆ ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ.

ಡಿಕೆಶಿ ವಿರುದ್ಧದ ಪ್ರಕರಣವನ್ನು ಸರ್ಕಾರವೇ ದಾರಿ ತಪ್ಪಿಸುತ್ತಿರುವುದು ಆಘಾತಕಾರಿ ಬೆಳವಣಿಗೆ. ನಾವು ಅರ್ಜಿ ಸಲ್ಲಿಸಿದ ನಂತರ ರಾಜ್ಯ ಸರ್ಕಾರ ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸಿದೆ. ಸರ್ಕಾರದ ಆದೇಶ ಸ್ಟೇಚ್ಛೆಯಿಂದ ಕೂಡಿದೆ. ಪ್ರಕರಣವನ್ನು ಸಿಬಿಐಯಿಂದ ಹಿಂಪಡೆಯುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಡಿ.ಕೆ.ಶಿವಕುಮಾರ್ ರಕ್ಷಿಸಲು ಸರ್ಕಾರ ಈ ಕೆಲಸ ಮಾಡಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರ ವಾದ ಮಂಡಿಸಿದ ವಕೀಲ ವೆಂಕಟೇಶ್ ಪಿ.ದಳವಾಯಿ ವಾದಿಸಿದರು.

ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಮೇ 27ಕ್ಕೆ ಮುಂದೂಡಿತು.

Tags:    

Similar News