ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಸಿ ಬಿ ಸುರೇಶ್‌ ಬಾಬು ನೇಮಕ

Update: 2024-07-15 11:50 GMT

ರಾಜ್ಯ ವಿಧಾನ ಮಂಡಲ ಅಧಿವೇಶನ ಆರಂಭವಾದ ಬೆನ್ನಲ್ಲೇ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಚಿಕ್ಕನಾಯಕನಹಳ್ಳಿ ಶಾಸಕ ಸಿ ಬಿ ಸುರೇಶ್‌ ಬಾಬು ಅವರನ್ನು ನೇಮಕ ಮಾಡಿ ಪಕ್ಷ ಆದೇಶ ಹೊರಡಿಸಿದೆ.

ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠರಾದ ಹೆಚ್‌ ಡಿ ದೇವೇಗೌಡ ಹಾಗೂ ಹೆಚ್‌ ಡಿ ಕುಮಾರಸ್ವಾಮಿ ಅವರುಗಳು ಪಕ್ಷದ ನಾಯಕರ ಜೊತೆಗೆ ಚರ್ಚೆ ನಡೆಸಿ ಈ ನಿರ್ಧಾರ ತೆಗೆದುಕೊಂಡು ನೇಮಕಾತಿ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಹೆಚ್‌ ಡಿ ಕುಮಾರಸ್ವಾಮಿ ಅವರು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರಾಗಿದ್ದರು. ಇದೀಗ ಅವರು ಲೋಕಸಭೆಗೆ ಆಯ್ಕೆಯಾದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಾಗಾಗಿ ದೇವೇಗೌಡರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಂಡು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಚಿಕ್ಕನಾಯಕನಹಳ್ಳಿ ಶಾಸಕ ಸಿಬಿ ಸುರೇಶ್ ಬಾಬು ನೇಮಕ ಮಾಡಲಾಗಿದೆ.

ಈ ಬಗ್ಗೆ ಮಾತನಾಡಿದ್ದ ಕುಮಾರಸ್ವಾಮಿ ಅವರು, ʻʻಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ, ನನ್ನ ಸ್ಥಾನಕ್ಕೆ ನಾಯಕನ ಆಯ್ಕೆಯಾಗಬೇಕಿದೆ. ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನನ್ನ ಹೆಗಲ ಮೇಲಿದೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಜೊತೆ ಚರ್ಚಿಸಿ ಅಂತಿಮಗೊಳಿಸುವುದಾಗಿʼʼ ಹೇಳಿದ್ದರು. ಇದೀಗ ಶಾಸಕ ಸಿಬಿ ಸುರೇಶ್‌ ಬಾಬು ಅವರನ್ನ ಜೆಡಿಎಸ್‌ ಶಾಸಕಾಂಗ ಪಕ್ಷ ನಾಯಕರನ್ನಾಗಿ ನೇಮಕ ಮಾಡಲಾಗಿದೆ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನ ಹುದ್ದೆಗೆ ಹಲವಾರು ಹೆಸರುಗಳು ಕೇಳಿ ಬಂದಿದ್ದವು. ಮಾಜಿ ಸಚಿವ, ಹೊಳೆನರಸೀಪುರದ ಶಾಸಕ ಎಚ್.ಡಿ. ರೇವಣ್ಣ ಹೆಸರು ಮುಂಚೂಣಿಯಲ್ಲಿತ್ತು. ಆದರೆ ರೇವಣ್ಣ ಅವರ ಮೇಲೆ ಪ್ರಜ್ವಲ್‌ ರೇವಣ್ಣ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯ ಅಪಹರಣದಂತಹ ಗುರುತರ ಆರೋಪ ಇರುವುದರಿಂದ ಅವರ ಹೆಸರನ್ನು ಕೈಬಿಡಲಾಗಿದೆ.

Tags:    

Similar News