Internal Reservation -2 | ಜಾತಿ ಸೂಚಕ ಪದಗಳಿಗೆ ಉಪ ಜಾತಿಗಳಲ್ಲೇ ಅಪಸ್ವರ; ಗೊಂದಲ ಸೃಷ್ಟಿಸಿದ ವರ್ಗೀಕರಣ ಪ್ರಕ್ರಿಯೆ
101 ಉಪಜಾತಿಗಳ ಪಟ್ಟಿಯಿಂದ ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಜಾತಿ ಸೂಚಕ ಪದಗಳನ್ನು ಬೇರ್ಪಡಿಸಿ ಉಳಿದ 98 ಉಪ ಜಾತಿಗಳನ್ನು ಮೂಲ ಜಾತಿಯ ಆಧಾರದ ಮೇಲೆ ಸಮೀಕ್ಷೆ ನಡೆಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.;
ಪರಿಶಿಷ್ಟ ಜಾತಿಯ ಸಮುದಾಯದ ಉಪ ಜಾತಿಗಳಲ್ಲೇ ಎಡ -ಬಲ ಗೊಂದಲದ ಬಗ್ಗೆ ಭಿನ್ನಾಭಿಪ್ರಾಯ ತಲೆದೋರಿದ್ದು, ಇದರಿಂದ ಇಡೀ ಮೀಸಲಾತಿ ವರ್ಗೀಕರಣ ಪ್ರಕ್ರಿಯೆ ಗೊಂದಲಮಯವಾಗಿದೆ.
ಮೀಸಲಾತಿ ವರ್ಗೀಕರಣಕ್ಕೆ ಅಡ್ಡಿಯಾಗಿರುವ ಜಾತಿ ಸೂಚಕಗಳಾದ ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಪದಗಳನ್ನು ಸಮೀಕ್ಷೆಯಿಂದ ಕೈ ಬಿಡಬೇಕೆಂದು ಎಡಗೈ ಗುಂಪಿನ ಹೋರಾಟಗಾರರು ಆಗ್ರಹಿಸಿದರೆ, ದಲಿತರ ಅಸ್ಮಿತೆಯಂತಿರುವ ಜಾತಿ ಸೂಚಕ ಪದಗಳ ಜೊತೆಯಲ್ಲೇ ಮೂಲ ಜಾತಿಗಳ ಗಣತಿ ನಡೆಸಬೇಕು ಎಂದು ಬಲಗೈ ಗುಂಪಿನ ಹೋರಾಟಗಾರರ ಒತ್ತಾಯವಾಗಿದೆ. ಇನ್ನು ಜಾತಿ ಸೂಚಕ ಪದಗಳ ಬಳಕೆ ವಿಚಾರದಲ್ಲಿ ದಲಿತ ಸಮುದಾಯದ ಚಿಂತಕರ ವಾದವೂ ಭಿನ್ನವಾಗಿದೆ.
ಜಾತಿ ಸೂಚಕಗಳನ್ನು ಉಳಿಸಿಕೊಂಡೇ ಮೂಲ ಜಾತಿಗಳ ಆಧಾರದ ಮೇಲೆ ಸಮೀಕ್ಷೆ ನಡೆಸಿದಾಗ ಕರಾರುವಕ್ಕಾದ ದತ್ತಾಂಶ ಸಿಗಲಿದೆ. ಮೀಸಲಾತಿ ಜನ್ಮಾಂತರವಲ್ಲ, ದಲಿತರನ್ನು ಒಟ್ಟುಗೂಡಿಸುವ ಚಳವಳಿ ರೂಪದ ಈ ಪದಗಳನ್ನು ಉಳಿಸಿಕೊಂಡು ಸಮೀಕ್ಷೆ ನಡೆಸಬೇಕು ಎಂದು ಚಿಂತಕ ಅರವಿಂದ ಮಾಲಗತ್ತಿ ಅವರು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.
ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಎಂಬುದು ಜಾತಿಗಳಲ್ಲ. ದಲಿತರ ಏಕತೆಯ ಧ್ಯೋತಕ ಎಂಬುದು ಅವರ ಅಭಿಪ್ರಾಯ.
ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಮಾವಳ್ಳಿ ಶಂಕರ್ ಹೇಳುವುದೇ ಬೇರೆ. ಈಗಾಗಲೇ ಜಾತಿಗಣತಿಗಳಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಹೆಸರಿನಲ್ಲಿ ಉಪ ಜಾತಿಗಳನ್ನು ಕಡೆಗಣಿಸಲಾಗಿದೆ. ಒಳ ಮೀಸಲಾತಿ ಕುರಿತ ಹೊಸ ಸಮೀಕ್ಷೆಯಲ್ಲಿ ಈ ಜಾತಿಸೂಚಕಗಳನ್ನು ಕೈಬಿಟ್ಟು ಮೂಲ ಜಾತಿಗಳ ಆಧಾರದ ಮೇಲೆ ಗಣತಿ ನಡೆಸಬೇಕು ಎಂದು ಹೇಳುತ್ತಾರೆ.
ಚಿಂತಕ ಎಲ್. ಹನುಮಂತಯ್ಯ ಅವರು ಪ್ರತಿಕ್ರಿಯಿಸಿ, ಜಾತಿಸೂಚಕಗಳನ್ನು ಕೈಬಿಡಲು ಬರುವುದಿಲ್ಲ. ಮೂಲ ಜಾತಿಗಳ ಆಧಾರದ ಮೇಲೆ ಹೊಸ ಸಮೀಕ್ಷೆ ನಡೆಸಿದರೆ ನಿಖರ ದತ್ತಾಂಶ ಸಿಗಲಿದೆ ಎಂದು ಹೇಳಿದ್ದಾರೆ.
ಇನ್ನು ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಈ ಜಾತಿಸೂಚಕಗಳಿಗೆ ಮಾನ್ಯತೆ ಇಲ್ಲದಿದ್ದರೂ ಅವುಗಳ ಚಾರಿತ್ರಿಕ ಹಿನ್ನೆಲೆಯಿಂದಾಗಿ ಪರಿಶಿಷ್ಟ ಜಾತಿಯಲ್ಲಿ ಪ್ರಸ್ತುತವಾಗಿವೆ. 101 ಉಪಜಾತಿಗಳ ಪಟ್ಟಿಯಿಂದ ಈ ಮೂರು ಜಾತಿ ಸೂಚಕ ಪದಗಳನ್ನು ಬೇರ್ಪಡಿಸಿ ಉಳಿದ 98 ಉಪ ಜಾತಿಗಳನ್ನು ಮೂಲ ಜಾತಿಯ ಆಧಾರದ ಮೇಲೆ ಸಮೀಕ್ಷೆ ನಡೆಸಬೇಕು. ನ್ಯಾ.ಎ.ಜೆ.ಸದಾಶಿವ ಆಯೋಗವಾಗಲಿ, ಕಾಂತರಾಜ ಅವರ ವರದಿಯಾಗಲಿ ಒಳ ಮೀಸಲಾತಿ ವರ್ಗೀಕರಣಕ್ಕೆ ಮಾನದಂಡವಲ್ಲ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.
ಸಂವಿಧಾನದ ಪರಿಚ್ಛೇದ 15(4) ಹಾಗೂ 16(4)ರ ಅಡಿ ಶೈಕ್ಷಣಿಕ ಹಾಗೂ ಉದ್ಯೋಗ ಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ. ರಾಜ್ಯಗಳು ವಿವೇಚನೆ ಬಳಸುವಾಗ ಸುಪ್ರೀಂಕೋರ್ಟ್ ನೀಡಿರುವ ಮಾನದಂಡಗಳನ್ನು ಪಾಲಿಸಬೇಕು ಎಂಬ ಷರತ್ತು ವಿಧಿಸಿತ್ತು. ಸುಪ್ರೀಂಕೋರ್ಟ್ ಮಾನದಂಡಗಳಂತೆ ಸಮೀಕ್ಷೆ ನಡೆದಲ್ಲಿ ಮೀಸಲಾತಿ ಪ್ರಯೋಜನ ಪಡೆದು ಬೆಳೆದಿರುವ ಹಲವರಿಗೆ ಒಳ ಮೀಸಲಾತಿ ಸಿಗುವುದಿಲ್ಲ. ಆಗ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗೆ ಇದರ ಪ್ರಯೋಜನ ಸಿಗಲಿದೆ.
ನಿಖರ ಸಮೀಕ್ಷೆಯಿಂದ ಕರಾರುವಕ್ಕಾದ ದತ್ತಾಂಶ
ಪರಿಶಿಷ್ಟ ಜಾತಿಯಲ್ಲಿರುವ 101 ಉಪ ಜಾತಿಗಳ ಶೈಕ್ಷಣಿಕ, ಔದ್ಯೋಗಿಕ ಹಾಗೂ ಸಾಮಾಜಿಕ ಸ್ಥಿತಿಗತಿ ಅಧರಿಸಿ ಒಳ ಮೀಸಲಾತಿ ಕಲ್ಪಿಸಬೇಕೆಂದು ಸುಪ್ರೀಂಕೋರ್ಟ್ ಸ್ಪಷ್ಟ ಆದೇಶ ನೀಡಿದೆ. ಅದರಂತೆ ಒಳ ಮೀಸಲಾತಿ ವರ್ಗೀಕರಣದ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ವಹಿಸಿದೆ. ರಾಜ್ಯ ಸರ್ಕಾರದ ಬಳಿ ಮೂಲ ಜಾತಿಗಳ ದತ್ತಾಂಶ ಲಭ್ಯವಿಲ್ಲದ ಕಾರಣ ಹೊಸ ಸಮೀಕ್ಷೆಗೆ ಸೂಚಿಸಲಾಗಿದೆ.
ನ್ಯಾ.ನಾಗಮೋಹನದಾಸ್ ನೇತೃತ್ವದ ಹೊಸ ಸಮಿತಿ ಉಪ ಜಾತಿಗಳ ಪ್ರಾಯೋಗಿಕ ದತ್ತಾಂಶ ಸಂಗ್ರಹಿಸಬೇಕಾದರೆ ಮೂಲ ಜಾತಿಗಳ ತಲೆವಾರು ಗಣತಿ ನಡೆಸಬೇಕು. ಪರಿಶಿಷ್ಟ ಜಾತಿಯ ಗಣತಿ ಮಾತ್ರ ನಡೆಯುತ್ತಿರುವುದರಿಂದ ಸಮೀಕ್ಷೆ ಸುಲಭವಾಗಲಿದೆ.
ಕಾಂತರಾಜ ನೇತೃತ್ವದ ಸಾಮಾಜಿಕ ಆರ್ಥಿಕ ಜನಗಣತಿಯಲ್ಲಿ ಬಹಳಷ್ಟು ಉಪಜಾತಿಗಳು ಮೂಲ ಜಾತಿಯನ್ನು ಮರೆ ಮಾಚಿದ್ದು, ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಪದವನ್ನೇ ದಾಖಲಿಸಿವೆ. ಒಳ ಮೀಸಲಾತಿ ಹಂಚಿಕೆಗೆ ಇದರಿಂದ ಸಮಸ್ಯೆಯಾಗಿದ್ದು, ಮೂಲ ಜಾತಿಗಳ ಆಧಾರದ ಮೇಲೆ ಸಮೀಕ್ಷೆ ನಡೆಸಿದರೆ ನಿಖರವಾದ ದತ್ತಾಂಶ ಸಿಗಲಿದೆ ಎಂದು ಹೇಳಲಾಗಿದೆ.
ಜಾತಿ ಸೂಚಕಗಳಿಂದಲೇ ಗೊಂದಲ
ಪರಿಶಿಷ್ಟ ಜಾತಿಯ ಉಪಪಂಗಡಗಳ ಗಣತಿಗೆ ಜಾತ ಸೂಚಕಗಳೇ ಅಡ್ಡಿಯಾಗಿದ್ದು, ಅವರನ್ನು ಗಣತಿಯಿಂದ ಕೈ ಬಿಡಬೇಕು ಎಂಬುದು ದಲಿತ ಹೋರಾಟಗಾರರ ಒತ್ತಾಯವಾಗಿದೆ. ಗ್ರಾಮೀಣ ಹಾಗೂ ನಗರ ಭಾಗದ ಬಹುತೇಕ ಉಪ ಜಾತಿಗಳು ಹಿಂಜರಿಕೆ, ಅವಮಾನ ಎಂದು ಭಾವಿಸಿ ಮೂಲ ಜಾತಿಗಳ ವಿವರ ನೀಡುವುದಿಲ್ಲ. ಮೂಲ ಜಾತಿಯ ದತ್ತಾಂಶ ಇಲ್ಲದೇ ಹೋದರೆ ಮೀಸಲಾತಿ ವರ್ಗೀಕರಣ ಕಷ್ಟವಾಗಲಿದೆ. ಹಾಗಾಗಿ ಜಾತಿ ಸೂಚಕಗಳಾದ ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಪದಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ. ಇತ್ತೀಚೆಗೆ ಮಾವಳ್ಳಿ ಶಂಕರ್ ನೇತೃತ್ವದ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಈ ವಾದವನ್ನು ಮುನ್ನೆಲೆ ತಂದಿತ್ತು.
ಮೀಸಲಾತಿ ವಂಚಿತ ಮೂಲ ಜಾತಿಗಳು
ಆದಿ ಕರ್ನಾಟಕ, ಆದಿ ಆಂಧ್ರ ಹಾಗೂ ಆದಿ ದ್ರಾವಿಡದಲ್ಲಿ ಸಾಕಷ್ಟು ವೈವಿಧ್ಯತೆಗಳಿವೆ. ಸಂವಿಧಾನ ಒದಗಿಸಿರುವ ಬಹುಪಾಲು ಮೀಸಲಾತಿಯು ಈ ಮೂರು ಜಾತಿಗಳಲ್ಲೇ ಬಳಕೆಯಾಗಿದೆ. ಬಲಗೈ ಹಾಗೂ ಎಡಗೈ ಗುಂಪಿನಲ್ಲಿ ಸಾಕಷ್ಟು ಮೂಲ ಜಾತಿಗಳಿಗೆ ಇದುವರೆಗೂ ಮೀಸಲಾತಿ ಸೌಲಭ್ಯ ದಕ್ಕಿಲ್ಲ.
ಎಡಗೈ ಹಾಗೂ ಎಡಗೈ ಗುಂಪಿನ ಆದಿಯ, ಬಂಧಿ, ಜಂಗಮ, ಹೊಲೆಯ ದಾಸರಿ ಸೇರಿದಂತೆ ಇತರೆ 42 ಉಪಜಾತಿಗಳಲ್ಲಿ ಬಹುತೇಕರಿಗೆ ಮೀಸಲಾತಿ ಸೌಲಭ್ಯ ಮರೀಚಿರಿಕೆಯಾಗಿದೆ. ಹಾಗಾಗಿ ಈ ಎಲ್ಲಾ ಮೂಲ ಜಾತಿಗಳನ್ನು ಅವುಗಳ ಹೆಸರಿನಲ್ಲೇ ಗಣತಿ ನಡೆಸಬೇಕು. ಆಗ ನಿಖರವಾದ ದತ್ತಾಂಶ ಸಿಗಲಿದೆ. ನಾಗಮೋಹನ ದಾಸ್ ನೇತೃತ್ವದ ಸಮಿತಿ ಈಗಾಗಲೇ ಸಮೀಕ್ಷೆ ಆರಂಭಿಸಿದ್ದು, ನಿಖರ ದತ್ತಾಂಶ ಸಂಗ್ರಹಕ್ಕೆ ಯಾವ ಮಾನದಂಡಗಳನ್ನು ಅನುಸರಿಸುತ್ತಿದೆ ಎಂಬುದು ಕುತೂಹಲ ಮೂಡಿಸಿದೆ.