ಜಾತಿ ಪ್ರಮಾಣ ಪತ್ರ ಪ್ರಕರಣ | ಪುತ್ರಿ ಪ್ರಕರಣದ ಬಳಿಕ ಈಗ ಎಂ.ಪಿ.ರೇಣುಕಾಚಾರ್ಯ ಸಹೋದರನ ಸರದಿ
ಬಿಜೆಪಿ ನಾಯಕ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರ ಎಂ.ಪಿ ದ್ವಾರಕೇಶ್ವರಯ್ಯ ಅವರು ಬೇಡಜಂಗಮ ಪ್ರಮಾಣ ಪತ್ರ ಬಳಸದಂತೆ ಹೈಕೋರ್ಟ್ ನಿರ್ಬಂಧ ಹೇರಿದೆ. ಈ ಬೆಳವಣಿಗೆ ರೇಣುಕಾಚಾರ್ಯ ರಾಜಕೀಯ ಜೀವನದ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ.;
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಚಿತ್ರದುರ್ಗ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಬೇಡ ಜಂಗಮ ಜಾತಿ ಪ್ರಮಾಣಪತ್ರವನ್ನು ಬಳಸಿಕೊಂಡು ಸ್ಪರ್ಧಿಸಲು ಮುಂದಾಗಿದ್ದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರ ಎಂ.ಪಿ.ದಾರಕೇಶ್ವರಯ್ಯ ಅವರಿಗೆ ಹಿನ್ನಡೆ ಉಂಟಾಗಿದೆ. ಬೇಡ ಜಂಗಮ ಜಾತಿ ಪ್ರಮಾಣ ಪತ್ರವನ್ನು ಬಳಸುವುದಕ್ಕೆ ಹೈಕೋರ್ಟ್ ತಡೆ ನೀಡಿದೆ.
ಎಂ.ಪಿ ದ್ವಾರಕೇಶ್ವರಯ್ಯ ಅವರು ಬೇಡಜಂಗಮ ಜಾತಿ ಪ್ರಮಾಣ ಪತ್ರ ಬಳಸದಂತೆ ಹೈಕೋರ್ಟ್ ನಿರ್ಬಂಧ ಹೇರಿದೆ. ಅವರು ಪರಿಶಿಷ್ಟ ಜಾತಿ ಪಟ್ಟಿಗೆ ಸೇರುವ ಬೇಡಜಂಗಮ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಿ, ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದರು. ಈ ನಾಮಪತ್ರ ಚುನಾವಣಾಧಿಕಾರಿಗಳಿಂದ ಅಂಗೀಕಾರವೂ ಆಗಿತ್ತು. ಇದೀಗ ಅವರಿಗೆ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ.
ಕೆಲವು ತಿಂಗಳುಗಳ ಹಿಂದೆ ದ್ವಾರಕೇಶ್ವರಯ್ಯ ಬೆಂಗಳೂರು ಉತ್ತರ ತಹಸೀಲ್ದಾರ್ ಅವರಿಂದ ಪಡೆದಿದ್ದ ಬೇಡ ಜಂಗಮ ಪ್ರಮಾಣಪತ್ರ ಸಹ ರದ್ದಾಗಿತ್ತು. ಹೊಸದಾಗಿ ಬೆಂಗಳೂರು ದಕ್ಷಿಣ ತಹಸೀಲ್ದಾರ್ ಅವರಿಂದ ಪ್ರಮಾಣ ಪತ್ರ ಪಡೆದಿದ್ದು, ಈ ಪ್ರಮಾಣ ಪತ್ರವನ್ನೂ ರದ್ದು ಮಾಡುವಂತೆ ಕೋರಲಾಗಿತ್ತು. ದ್ವಾರಕೇಶ್ವರಯ್ಯ ಅವರು ಪಡೆದಿರುವ ಬೇಡಜಂಗಮ ಪ್ರಮಾಣ ಪತ್ರ ರದ್ದು ಮಾಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಸಹ ಹೈಕೋರ್ಟ್ ಮೊರೆ ಹೋಗಿದ್ದರು.
ಹೈಕೋರ್ಟ್‌ನಲ್ಲಿ ವಿಚಾರಣೆಯ ವೇಳೆ ದಾರಕೇಶ್ವರಯ್ಯ ಅವರು ಮೊದಲು ಬೆಂಗಳೂರು ಉತ್ತರ ತಹಶೀಲ್ದಾರ್ ಅವರಿಂದ ಬೇಡ ಜಂಗಮ ಜಾತಿ ಪ್ರಮಾಣಪತ್ರವನ್ನು ಪಡೆದಿದ್ದು, ಅದನ್ನು ರದ್ದುಪಡಿಸಲಾಗಿದೆ. ಇದೀಗ ಬೆಂಗಳೂರು ದಕ್ಷಿಣ ತಹಶೀಲ್ದಾರ್ ಅವರಿಂದ ಅದೇ ಮಾದರಿಯ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ. ಇದು ಕಾನೂನುಬಾಹಿರ ಮತ್ತು ಕಾನೂನಿನ ದುರ್ಬಳಕೆ ಎಂದು ಅರ್ಜಿ ದಾರರ ಪರ ವಕೀಲರು ವಾದ ಮಂಡಿಸಿದರು.
ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್, ದಾರಕೇಶ್ವರಯ್ಯ ಅವರಿಗೆ ಮುಂದಿನ ವಿಚಾರಣೆವರೆಗೆ ಬೇಡ ಜಂಗಮ ಜಾತಿ ಪ್ರಮಾಣಪತ್ರವನ್ನು ಬಳಸದಂತೆ ನಿರ್ಬಂಧ ವಿಧಿಸಿದೆ. ಇನ್ನು ಈ ಪ್ರಕರಣದ ಪ್ರತಿವಾದಿಗಳಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ, ಬೆಂಗಳೂರು ಉತ್ತರ ತಾಲ್ಲೂಕು ತಹಶೀಲ್ದಾರ್ ಹಾಗೂ ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್ ಅವರ ಪರವಾಗಿ ವಕೀಲ ಸಿ.ಜಗದೀಶ್ ಅವರು ನೋಟಿಸ್ ತೆಗೆದುಕೊಳ್ಳುವಂತೆ ನ್ಯಾಯಪೀಠ ಆದೇಶ ನೀಡಿದ್ದು, ಪ್ರಕರಣದ ವಿಚಾರಣೆಯನ್ನು ಏ.10ಕ್ಕೆ ನಿಗದಿ ಮಾಡಿದೆ.
ರೇಣುಕಾಚಾರ್ಯ ಪುತ್ರಿ ಪ್ರಮಾಣಪತ್ರ ವಿವಾದ
ಇದರಿಂದ ಮುಂದಿನ ದಿನಗಳಲ್ಲಿ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಎಂ.ಪಿ.ದಾರಕೇಶ್ವರಯ್ಯ ಅವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಅಲ್ಲದೆ, ಕಳೆದ ವರ್ಷ ಮಾಜಿ ಸಚಿವ ಹಾಗೂ ದ್ವಾರಕೇಶ್ವರಯ್ಯ ಸಹೋದರ ಎಂ ಪಿ ರೇಣುಕಾಚಾರ್ಯ ಅವರ ಮಗಳು ಎಂ ಆರ್ ಚೇತನಾ ಅವರು ಕೂಡ ಬೇಡ ಜಂಗಮ ಜಾತಿಯ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣಪತ್ರ ಪಡೆದಿರುವುದು ವಿವಾದಕ್ಕೀಡಾಗಿತ್ತು. ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ್ದರೂ, ಬೇಡ ಜಂಗಮ ಜಾತಿ ಎಂದು ಸುಳ್ಳು ಹೇಳಿ, ತಾವು ವಾಸವಿರುವ ಹೊನ್ನಾಳಿ ತಾಲೂಕಿನ ಬದಲಾಗಿ ಬೆಂಗಳೂರಿನಲ್ಲಿ ನಕಲಿ ವಿಳಾಸ ನೀಡಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ ಎಂಬ ದೂರು ದಾಖಲಾಗಿತ್ತು.
ಆ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ತಮ್ಮ ಮಗಳ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಅಂದಿನ ಶಾಸಕ ಎಂ ಪಿ ರೇಣುಕಾಚಾರ್ಯ ಅವರು "ನಮ್ಮ ಪುತ್ರಿ ಬೆಂಗಳೂರಿನ ವಿಳಾಸ ನೀಡಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ನನ್ನ ಸಹೋದರ ಬೇಡ ಜಂಗಮ ಹೆಸರಿನಲ್ಲಿ ಪ್ರಮಾಣಪತ್ರ ಕೊಡಿಸಿದ್ದಾರೆ. ಆದರೆ, ನಾನು ಅದು ತಪ್ಪು ಎಂದು ಮಗಳಿಗೆ ತಿಳಿಹೇಳಿ, ಪ್ರಮಾಣಪತ್ರ ವಾಪಸು ಮಾಡಿಸಿದ್ದೇನೆ. ನನ್ನ ಸಹೋದರ ಚುನಾವಣೆಗೆ ನಿಂತಾಗಲೂ ಬೇಡ ಜಂಗಮ ಹೆಸರಿನಲ್ಲಿ ಪ್ರಮಾಣಪತ್ರ ಸಲ್ಲಿಸಿದ್ದರು. ಆಗಲೂ ನಾನು ಅವರಿಗೆ ತಿಳಿಹೇಳಿದ್ದೆ" ಎಂದು ಹೇಳಿದ್ದರು.
ಇದೀಗ ಮತ್ತೊಮ್ಮೆ ಅವರ ಸಹೋದರನ ಹೆಸರು ನಕಲಿ ಜಾತಿ ಪ್ರಮಾಣಪತ್ರ ವಿವಾದದಲ್ಲಿ ತಳುಕು ಹಾಕಿಕೊಂಡಿದೆ.