ಜಾತಿ ಗಣತಿ| ಸಮುದಾಯದ ಗೊಂದಲ ನಿವಾರಣೆಗೆ ಒಬಿಸಿ ನಾಯಕರ ಸಭೆ ಇಂದು
ಗಣತಿದಾರರು ಮನೆಗಳಿಗೆ ಭೇಟಿ ನೀಡಿದಾಗ ಯಾವ ದಾಖಲೆ ಹೊಂದಿರಬೇಕು. ನೀಡಬೇಕಾದ ಮಾಹಿತಿ ಏನು ಎಂಬುದರ ಕುರಿತು ಹಿಂದುಳಿದ ವರ್ಗಗಳ ಸಮುದಾಯದವರಿಗೆ ಮನವರಿಕೆ ಮಾಡಿಕೊಡಲಾಗುವುದು.
ಸಚಿವ ಬೈರತಿ ಬಸವರಾಜು ಹಾಗೂ ಸಚಿವ ಸಂತೋಷ್ ಲಾಡ್
ಹಲವು ಅಡೆತಡೆಗಳ ನಡುವೆಯೂ ರಾಜ್ಯದಲ್ಲಿ ಜಾತಿಗಣತಿ ಆರಂಭವಾಗಿದೆ. ಸರ್ವರ್ ಸಮಸ್ಯೆ, ಜಾತಿ ಸಂಖ್ಯೆ ಸೇರಿದಂತೆ ಹಲವು ಗೊಂದಲಗಳ ನಿವಾರಣೆ ಸಲುವಾಗಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಚಿವರು ಹಾಗೂ ನಾಯಕರು ಗುರುವಾರ ಸಭೆ ಕರೆದಿದ್ದಾರೆ.
ಬೆಂಗಳೂರಿನ ಖಾಸಗಿ ಹೊಟೇಲ್ ಇಂದು ಸಂಜೆ ನಡೆಯುವ ಸಭೆಯಲ್ಲಿ ಸಚಿವರಾದ ಎನ್. ಎಸ್.ಭೋಸರಾಜು, ಸಂತೋಷ್ ಲಾಡ್, ಮಧು ಬಂಗಾರಪ್ಪ, ಬಿ.ಎ. ಸುರೇಶ್, ಮಂಕಾಳ ವೈದ್ಯ, ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಸದಸ್ಯರು, ಸಂಸದರು ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಹಿರಿಯ ನಾಯಕರು ಭಾಗವಹಿಸಲಿದ್ದು ಸರ್ಕಾರ ನಡೆಸುತ್ತಿರುವ ಜಾತಿ ಗಣತಿ ಬಗ್ಗೆ ಸಮುದಾಯಕ್ಕೆ ಸಂದೇಶ ನೀಡಲು ನಿರ್ಧರಿಸಲಾಗಿದೆ.
ಸಭೆಯ ಉದ್ದೇಶ ಏನು?
ರಾಜ್ಯ ಸರ್ಕಾರವು ಸೆ.22 ರಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದೆ. ಆದರೆ, ಜನರಲ್ಲಿ ಧರ್ಮ, ಜಾತಿ ಹಾಗೂ ಉಪಜಾತಿಗಳ ಕಾಲಂಗಳ ಬಗ್ಗೆ ಗೊಂದಲವಿದ್ದು, ಗಣತಿದಾರರು ಮನೆಗಳಿಗೆ ಭೇಟಿ ನೀಡಿದಾಗ ಯಾವ ದಾಖಲೆ ಹೊಂದಿರಬೇಕು. ನೀಡಬೇಕಾದ ಮಾಹಿತಿ ಏನು ಎಂಬುದರ ಕುರಿತು ಹಿಂದುಳಿದ ವರ್ಗಗಳ ಸಮುದಾಯದವರಿಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ.
ಗೊಂದಲವೇಕೆ ?
ಹಿಂದುಳಿದ ವರ್ಗಗಳ ಆಯೋಗವು ಜಾತಿಗಣತಿಗೂ ಮುನ್ನ ರಾಜ್ಯದಲ್ಲಿರುವ 1561 ಜಾತಿಗಳ ಪಟ್ಟಿ ನೀಡಿತ್ತು. ಆಯೋಗ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಕ್ರೈಸ್ತ ಸಮುದಾಯಕ್ಕೆ ಮತಾಂತರವಾದ 48 ಹಿಂದೂ ಜಾತಿಗಳನ್ನು ಹೆಸರಿಸಿತ್ತು. ಈ ಪಟ್ಟಿ ವಿರುದ್ದ ಪ್ರತಿಪಕ್ಷಗಳು ಸೇರಿದಂತೆ ವಿವಿಧ ಸಮುದಾಯಗಳ ನಾಯಕರು ವಿರೋಧಿಸಿದ್ದರು. ಹಿಂದೂ ಜಾತಿಗಳನ್ನು ಉದ್ದೇಶಪೂರ್ವಕವಾಗಿ ಕ್ರೈಸ್ತ ಸಮುದಾಯಕ್ಕೆ ಸೇರಿಸಲು ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ಹಲವು ಸಂಘಟನೆಗಳು ಆರೋಪಿಸಿದ್ದವು. ಸಾರ್ವಜನಿಕವಾಗಿ ವಿರೋಧ ವ್ಯಕ್ತವಾದ ಹಿನ್ನೆಲೆ ಆಯೋಗ ಮೊದಲ ಹಂತವಾಗಿ 33 ಹಿಂದುಳಿದ ವರ್ಗಗಳ ಜಾತಿಗಳು ಹಾಗೂ ಎರಡನೇ ಹಂತದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 15 ಕ್ರೈಸ್ತ ಜಾತಿಗಳನ್ನು ಪಟ್ಟಿಯಿಂದ ಕೈ ಬಿಟ್ಟಿತ್ತು.
ಕ್ರೈಸ್ತ ಧರ್ಮಕ್ಕೆ ಸೇರಿಸಿದ್ದ ಒಬಿಸಿ ಜಾತಿಗಳು
ವೈಶ್ಯ ಬ್ರಾಹ್ಮಣ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ವಿಶ್ವಕರ್ಮ ಕ್ರಿಶ್ಚಿಯನ್, ರೆಡ್ಡಿ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಈಡಿಗ ಕ್ರಿಶ್ಚಿಯನ್, ಬಿಲ್ಲವ ಕ್ರಿಶ್ಚಿಯನ್, ಅಕ್ಕಸಾಲಿಗ ಕ್ರಿಶ್ಚಿಯನ್, ಬಣಜಿಗ ಕ್ರಿಶ್ಚಿಯನ್, ಬಾರಿಕಾರ್‌ಕ್ರಿಶ್ಚಿಯನ್, ಬೆಸ್ತರು ಕ್ರಿಶ್ಚಿಯನ್, ಚರೋಡಿ ಕ್ರಿಶ್ಚಿಯನ್, ದೇವಾಂಗ ಕ್ರಿಶ್ಚಿಯನ್, ಗೊಲ್ಲ ಕ್ರಿಶ್ಚಿಯನ್, ಗೊಂಡ ಲಾಲಗೊಂಡ ಕ್ರಿಶ್ಚಿಯನ್, ಗೌಡಿ ಕ್ರಿಶ್ಚಿಯನ್, ಚಲಗಾರ ಕ್ರಿಶ್ಚಿಯನ್, ಜಂಗಮ ಕ್ರಿಶ್ಚಿಯನ್, ಕಮ್ಮ ಕ್ರಿಶ್ಚಿಯನ್, ಕಮ್ಮ ನಾಯ್ಡು ಕ್ರಿಶ್ಚಿಯನ್, ಕಂಸಾಳೆ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್, ಮಾಂಗ ಕ್ರಿಶ್ಚಿಯನ್, ಮೊದಲಿಯಾರ್‌ಕ್ರಿಶ್ಚಿಯನ್, ನಾಡಾರ್‌ಕ್ರಿಶ್ಚಿಯನ್, ನೇಕಾರ ಕ್ರಿಶ್ಚಿಯನ್, ಪಡಯಾಚಿ ಕ್ರಿಶ್ಚಿಯನ್, ರೆಡ್ಡಿ ಕ್ರಿಶ್ಚಿಯನ್, ಶೆಟ್ಟಿ ಬಲಿಜ ಕ್ರಿಶ್ಚಿಯನ್, ಸುದ್ರಿ ಕ್ರಿಶ್ಚಿಯನ್, ತಿಗಳ ಕ್ರಿಶ್ಚಿಯನ್, ತುಳು ಕ್ರಿಶ್ಚಿಯನ್, ವೈಶ್ಯ ಶೆಟ್ರು ಕ್ರಿಶ್ಚಿಯನ್ ಜಾತಿಗಳನ್ನು ಸೇರಿಸಿದ್ದರು.
ಗೊಂದಲ ನಿವಾರಣೆಗೆ ಸಭೆ ನಡೆಸಿದ್ದ ಪ್ರಬಲ ಸಮುದಾಯಗಳು
ಜಾತಿಗಣತಿಯ ವೇಳೆ ಜನರು ಗೊಂದಲಕ್ಕೆ ಒಳಗಾಗಬಾರದು ಎಂಬ ಉದ್ದೇಶದಿಂದ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ನಾಯಕರು ಹಾಗೂ ಸ್ವಾಮೀಜಿಗಳು ಸಭೆ ಸೇರಿ ಗಣತಿ ವೇಳೆ ಧರ್ಮ, ಜಾತಿ ಹಾಗೂ ಉಪಜಾತಿಗಳ ಕುರಿತು ನಿಖರವಾಗಿ ಬರೆಸಬೇಕು. ಯಾರು ತಪ್ಪು ಮಾಹಿತಿ ನೀಡಬಾರದು ಹಾಗೂ ಗೊಂದಲಕ್ಕೆ ಒಳಗಾಗಬಾರದು ಎಂದು ತಿಳಿಸಿದ್ದರು.