Caste survey confusion | Commission meeting with e-administration officials today
x

ಸಾಂದರ್ಭಿಕ ಚಿತ್ರ

ಜಾತಿ ಗಣತಿ ಗೊಂದಲ| ಇ-ಆಡಳಿತ ಅಧಿಕಾರಿಗಳೊಂದಿಗೆ ಆಯೋಗ ಸಭೆ ಇಂದು

ಬಹುತೇಕ ಕಡೆ ತಂತ್ರಾಂಶ ಓಪನ್ ಆಗದೇ ಜಾತಿಗಣತಿಗೆ ಸಮಸ್ಯೆ ಎದುರಾಗಿದೆ. ಜಿಯೋಟ್ಯಾಗ್ ಮೂಲಕ ಗೂಗಲ್ ಲೊಕೇಷನ್ ಹಾಕಿ ಮನೆ ವಿಳಾಸ ಹುಡುಕುವುದು ಅಸಾಧ್ಯವಾಗಿದೆ ಎಂದು ಗಣತಿದಾರರು ದೂರಿದ್ದಾರೆ.


Click the Play button to hear this message in audio format

ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಆರಂಭದಿಂದಲೂ ಸಮಸ್ಯೆ ಹಾಗೂ ಗೊಂದಲಗಳಲ್ಲೇ ಮುಂದುವರಿಯುತ್ತಿದೆ. ಆ್ಯಪ್‌ ಡೌನ್‌ಲೋಡ್, ಓಟಿಪಿ ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳು ಮುಂದುವರೆದಿವೆ.

ಜಾತಿ ಗಣತಿಗೆ ತೀವ್ರ ಹಿನ್ನೆಡೆ ಕಂಡು ಬಂದಿರುವ ಕಾರಣ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಕಾರ್ಯದರ್ಶಿ ಕೆ.ಎ.ದಯಾನಂದ್‌ ಅವರು ಇ-ಆಡಳಿತ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಲಿದ್ದಾರೆ.

ಸೋಮವಾರ(ಸೆ.22) ರಿಂದ ಆರಂಭವಾಗಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ದಿನದ ಅಂತ್ಯಕ್ಕೆ 2,765 ಕುಟುಂಬಗಳ 10,642 ಮಂದಿಯ ಸಮೀಕ್ಷೆಯಷ್ಟೇ ನಡೆಸಲಾಗಿತ್ತು. ಎರಡನೇ ದಿನವಾದ ಮಂಗಳವಾರ (ಸೆ.23) ಸಂಜೆ 6ಗಂಟೆ ವೇಳೆಗೆ 18,487 ಕುಟುಂಬಗಳ ಸಮೀಕ್ಷೆ ಮಾತ್ರ ಆಗಿತ್ತು. ಹಲವಾರು ತಾಂತ್ರಿಕ ತೊಂದರೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಆಯೋಗವು ಇ-ಆಡಳಿತ ಅಧಿಕಾರಿಗಳೊಂದಿಗೆ ಸಭೆ ನಡೆಸಲಿರುವುದು ಮಹತ್ವ ಪಡೆದುಕೊಂಡಿದೆ.

ಸಮೀಕ್ಷೆಗಿರುವ ತೊಂದರೆಗಳೇನು ?

ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಶಿಕ್ಷಕರು ಎದುರಿಸುತ್ತಿದ್ದಾರೆ. ಗಣತಿಗೆ ಬಳಕೆಯಾಗುವ ಆ್ಯಪ್‌ ಸರಿಯಾಗಿ ಓಪನ್ ಆಗುತ್ತಿಲ್ಲ. ಆ್ಯಪ್‌ನಲ್ಲಿ ಸಾಕಷ್ಟು ಸಮಸ್ಯೆ ಇದೆ. ಆ್ಯಪ್‌ ಓಪನ್ ಆಗಿ ಮತ್ತೆ ಇನ್ ಸ್ಟಾಲ್ ಮಾಡಬೇಕಾಗುತ್ತದೆ. ಬಹುತೇಕ ಕಡೆಗಳಲ್ಲಿ ಆ್ಯಪ್‌ ಓಪನ್ ಆಗದೆ ಸಮಸ್ಯೆ ಎದುರಾಗಿದೆ.

ಜಿಯೋಟ್ಯಾಗ್ ಮೂಲಕ ಗೂಗಲ್ ಲೊಕೇಷನ್ ಹಾಕಿ ಮನೆ ವಿಳಾಸ ಹುಡುಕುವುದು ಅಸಾಧ್ಯವಾಗಿದೆ. ಮ್ಯಾಪ್ ಲೊಕೇಷನ್ ಮೂಲಕ ಸಮೀಕ್ಷೆ ಮಾಡಲು ಆಗುವುದಿಲ್ಲ ಎಂದು ತಹಶಿಲ್ದಾರರಿಗೆ ಮನವಿ ಕೂಡ ಸಲ್ಲಿಸಲಾಗಿದೆ. ಜಿಯೋ ಟ್ಯಾಗ್‌ ಲೊಕೇಷನ್ ಕೆಲವೊಂದು ಕಡೆ ಮನೆ ವಿಳಾಸದ ಬದಲು ಹಳ್ಳ ತೋರಿಸುತ್ತದೆ. ಮತ್ತೆ ಕೆಲವೆಡೆ ಮನೆಯ ವಿಳಾಸ ತಪ್ಪು ತೋರಿಸುತ್ತದೆ. ಪ್ರತಿ ಮನೆಗೂ ಲೊಕೇಷನ್ ಹಾಕಿಕೊಂಡು ಹುಡುವುದು ಕಷ್ಟವಾಗುತ್ತಿದೆ. ಯುಎಚ್‌ಐಡಿ ಸಂಖ್ಯೆ ಹಾಕಿ ಲೊಕೇಷನ್ ಹುಡುಕಿಕೊಂಡು ಹೋಗಲು ಕಷ್ಟವಾಗುತ್ತಿದೆ ಎಂದು ಹೇಳಲಾಗಿದೆ.

175 ಮನೆಗಳು ನಿಗದಿ

ಕೆಲವು ಕಡೆ ಒಂದೇ ಬೀದಿಯಲ್ಲಿ ಎದುರು-ಬದುರು ಮನೆಗಳಿಗೆ ಇಬ್ಬರು ಶಿಕ್ಷಕರು ಸಮೀಕ್ಷೆ ಮಾಡುವ ಪರಿಸ್ಥಿತಿ ಬಂದಿದೆ. ಒಬ್ಬ ಶಿಕ್ಷಕರಿಗೆ 150 ರಿಂದ 175 ಮನೆಗಳನ್ನು ಸಮೀಕ್ಷೆಗೆ ನಿಗದಿಪಡಿಸಲಾಗಿದೆ. ಇಷ್ಟು ಮನೆ ಸಮೀಕ್ಷೆ ನಡೆಸಬೇಕಾದರೆ ಒಂದೂವರೆ ತಿಂಗಳಿಂದ 2 ತಿಂಗಳು ಬೇಕಾಗುತ್ತದೆ. 60 ಪ್ರಶ್ನೆ ಓಪನ್ ಮಾಡುವುದು, ಲೊಕೇಷನ್ ಹುಡುಕುವುದು ಸೇರಿದಂತೆ ಸಮೀಕ್ಷೆಗೆ ದಿನಕ್ಕೆ ಮೊಬೈಲ್ ಡಾಟಾ 5 ಜಿಬಿ ಬೇಕಾಗುತ್ತದೆ. ಲೊಕೇಷನ್ ಮ್ಯಾಪ್ ನೀಡಿ ಹುಡುಕುವ ಬದಲು ಮತಗಟ್ಟೆ ಲಿಸ್ಟ್ ನೀಡಿ ಸಮೀಕ್ಷೆ ನಡೆಸಲು ಸೂಚಿಸಿದರೆ ಸುಲಭ ಆಗುತ್ತಿತ್ತು ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.

ಶಿಕ್ಷಕರಿಗೆ ಸರಿಯಾದ ತರಬೇತಿಯಿಲ್ಲ

ಸಮೀಕ್ಷೆಗೂ ಮುಂಚೆ ಸರಿಯಾಗಿ ತರಬೇತಿಯನ್ನು ಶಿಕ್ಷಕರಿಗೆ ನೀಡಿಲ್ಲ. ಒಂದು ದಿವಸ ಮುಂಚೆ ಮಾತ್ರ ತರಬೇತಿ ನೀಡಿದ್ದಾರೆ. ತಾಂತ್ರಿಕ ಸಮಸ್ಯೆ ಎದುರಾದಾಗ ಯಾರಿಗೆ ಹೇಳಬೇಕು ಎನ್ನುವುದು ಶಿಕ್ಷಕರಿಗೆ ಗೊತ್ತಾಗುತ್ತಿಲ್ಲ.‌ ಯಾರಿಗೆ ಸಂಪರ್ಕ ಮಾಡಬೇಕು ಎಂಬ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿಲ್ಲ ಎಂಬ ದೂರುಗಳು ಕೇಳಿಬಂದಿವೆ.

ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್‌ ಸಮಸ್ಯೆ

ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ದೊರಕಿಸುವ ಮಹತ್ವಾಕಾಂಕ್ಷೆಯೊಂದಿಗೆ ಕಾಂಗ್ರೆಸ್‌‍ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುತ್ತಿದೆ. ತಾಂತ್ರಿಕ ಕಾರಣಗಳಿಂದಾಗಿ ಆಧಾರ ಸಂಖ್ಯೆ ಜೋಡಣೆಯಾಗಿರುವ ಮೊಬೈಲ್‌ ನಂಬರ್‌ಗೆ ಓಟಿಪಿ ರವಾನೆಯಾಗುತ್ತಿಲ್ಲ. ಸರಾಸರಿ ದಿನವೊಂದಕ್ಕೆ ಕನಿಷ್ಠ 10 ಮನೆಗಳನ್ನು ಸಮೀಕ್ಷೆ ಮಾಡುವ ಅನಿವಾರ್ಯತೆ ಇದೆ. ಆದರೆ ಓಟಿಪಿ ರವಾನೆಯಾಗದೆ ವಿಳಂಬವಾಗುತ್ತಿರುವುದರಿಂದ ಹಾಗೂ ಮೊಬೈಲ್‌ ಆ್ಯಪ್‌ ಹ್ಯಾಂಗ್‌ ಆಗುತ್ತಿರುವುದರಿಂದಾಗಿ ನಿಗದಿತ ಸಮಯಕ್ಕೆ ಸಮೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬ ಆಕ್ಷೇಪಗಳು ಕೇಳಿಬರುತ್ತಿವೆ.

ಒಟಿಪಿ ಬರದೆ ಗ್ರಾಮೀಣ ಭಾಗದಲ್ಲಿ ಸಮೀಕ್ಷೆ ನಡೆಸಲಾಗದು. ಮನೆಗಳಿಗೆ ಯುಎಚ್‌ಐಡಿ ಸ್ಟಿಕ್ಕರ್‌ ಅಂಟಿಸುವುದರಲ್ಲೂ ಪೂರ್ಣ ಪ್ರಮಾಣದ ಪ್ರಗತಿಯಾಗಿಲ್ಲ ಎಂದು ದೂರಲಾಗಿದೆ.

Read More
Next Story