Caste survey from today: Writ hearing in High Court today
x

ಜಾತಿ ಸಮೀಕ್ಷೆ

Caste Census- 2025|ಜಾತಿ ಗಣತಿ: ಗೊಂದಲ, ತಾಂತ್ರಿಕ ಸಮಸ್ಯೆ ನಡುವೆ ಎರಡನೇ ದಿನ 71 ಸಾವಿರ ದತ್ತಾಂಶ ಸಂಗ್ರಹ

ಎರಡನೇ ದಿನದ ಸಮೀಕ್ಷೆ ಕಾರ್ಯ ಮುಕ್ತಾಯಗೊಳಿಸಿದಾಗ ಗುರುತಿಸಲಾದ ಯುಎಚ್‌ಐಡಿ ಸ್ಟಿಕ್ಕರ್‌ ಅಂಟಿಸಲಾದ 18,487 ಮನೆಗಳಲ್ಲಿ ಸಮೀಕ್ಷೆ ಕಾರ್ಯ ನಡೆಸಲಾಗಿದ್ದು, 71,004 ಮಂದಿಯ ಸಮೀಕ್ಷೆ ನಡೆಸಲಾಗಿದೆ.


ತಾಂತ್ರಿಕ ಸಮಸ್ಯೆ, ಮೊಬೈಲ್‌ ಆ್ಯಪ್‌ ಜಂಜಾಟ, ಗೊಂದಲದ ನಡುವೆಯೇ ಎರಡನೇ ದಿನವೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮುಂದುವರಿಸಲಾಗಿದ್ದು, 71,004 ಮಂದಿಯನ್ನು ಸಮೀಕ್ಷೆಗೊಳಪಡಿಸಲಾಗಿದೆ.

ಮಂಗಳವಾರವು ಸಹ ತಾಂತ್ರಿಕ ಸಮಸ್ಯೆ ಮುಂದುವರಿದಿದ್ದು, ಅದರ ನಡುವೆಯೇ ಸಮೀಕ್ಷೆ ಕಾರ್ಯವನ್ನು ನಡೆಸಲಾಯಿತು. ಮಂಗಳವಾರ ಸಂಜೆ 6 ಗಂಟೆಗೆ ಸಮೀಕ್ಷೆ ಮುಕ್ತಾಯಗೊಳಿಸಿದಾಗ ಗುರುತಿಸಲಾದ ಯುಎಚ್‌ಐಡಿ ಸ್ಟಿಕ್ಕರ್‌ ಅಂಟಿಸಲಾದ 18,487 ಮನೆಗಳಲ್ಲಿ ಸಮೀಕ್ಷೆ ಕಾರ್ಯ ನಡೆಸಲಾಗಿದ್ದು, 71,004 ಮಂದಿಯ ಸಮೀಕ್ಷೆ ನಡೆಸಲಾಗಿದೆ.

31 ಜಿಲ್ಲೆಗಳ ಪೈಕಿ ತುಮಕೂರು ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಸಮೀಕ್ಷೆಯಾಗಿದ್ದು, ಯುಎಚ್‌ಐಡಿ ಸ್ಟಿಕ್ಕರ್‌ ಅಂಟಿಸಲಾದ 7 ಮನೆಗಳಲ್ಲಿ 21 ಮಂದಿಯ ಸಮೀಕ್ಷೆ ನಡೆಸಲಾಗಿದೆ. ಹಾವೇರಿಯಲ್ಲಿ ಹೆಚ್ಚು ಸಮೀಕ್ಷೆ ಕಾರ್ಯ ನಡೆದಿದೆ. ಯುಎಚ್‌ಐಡಿ ಸ್ಟಿಕ್ಕರ್‌ ಅಂಟಿಸಲಾದ 2783 ಮನೆಗಳಲ್ಲಿ 10820 ಮಂದಿಯ ಸಮೀಕ್ಷೆ ನಡೆಸಲಾಗಿದೆ. ಬೆಂಗಳೂರು ನಗರದಲ್ಲಿ ಯುಎಚ್‌ಐಡಿ ಸ್ಟಿಕ್ಕರ್‌ ಅಂಟಿಸಲಾದ 53 ಮನೆಗಳಲ್ಲಿ187 ಮಂದಿಯ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಯುಎಚ್‌ಐಡಿ ಸ್ಟಿಕ್ಕರ್‌ ಅಂಟಿಸಲಾದ 77 ಮನೆಗಳಲ್ಲಿ 284 ಮಂದಿಯ ಸಮೀಕ್ಷೆ ನಡೆಸಲಾಗಿದೆ ಎಂದು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಮಾಹಿತಿ ನೀಡಿದೆ.


ಸೋಮವಾರದಿಂದ ಆರಂಭಗೊಂಡ ಸಮೀಕ್ಷೆಯು ನಿರೀಕ್ಷಿತ ಮಟ್ಟದಲ್ಲಿ ನಡೆಯದೆ ಗೊಂದಲಮಯವಾಗಿತ್ತು. ತಾಂತ್ರಿಕ ಸಮಸ್ಯೆಗಳಿಂದ ಶಿಕ್ಷಕರು ರೋಸಿ ಹೋಗಿದ್ದು, ಜನರಲ್ಲಿಯೂ ಅಸಹನೆ, ಆಕ್ರೋಶಗಳು ಮಡುಗಟ್ಟಿವೆ. ಮೊದಲ ದಿನ ಕೇವಲ 10 ಸಾವಿರ ಮಂದಿಯ ಸಮೀಕ್ಷೆ ನಡೆಸಿದರೆ, ಎರಡನೇ ದಿನ ಕೊಂಚ ಸುಧಾರಿಸಿಕೊಂಡು 71,004 ಮಂದಿಯನ್ನು ಸಮೀಕ್ಷೆ ನಡೆಸಲಾಗಿದೆ.

ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಶಿಕ್ಷಕರು ಎದುರಿಸುತ್ತಿದ್ದಾರೆ. ಗಣತಿಗೆ ಬಳಕೆಯಾಗುವ ಆಪ್ ಸರಿಯಾಗಿ ಓಪನ್ ಆಗುತ್ತಿಲ್ಲ. ಆಪ್ ನಲ್ಲಿ ಸಾಕಷ್ಟು ಸಮಸ್ಯೆ ಇದೆ. ಆಪ್ ಓಪನ್ ಆಗಿ ಮತ್ತೆ ಇನ್ ಸ್ಟಾಲ್ ಮಾಡಬೇಕಾಗುತ್ತದೆ. ಬಹುತೇಕ ಕಡೆ ಆಪ್ ಓಪನ್ ಆಗದೆ ಸಮಸ್ಯೆ ಎದುರಾಗಿದೆ. ಜಿಯೋಟ್ಯಾಗ್ ಮೂಲಕ ಗೂಗಲ್ ಲೊಕೇಷನ್ ಹಾಕಿ ಮನೆ ವಿಳಾಸ ಹುಡುಕುವುದು ಅಸಾಧ್ಯವಾಗಿದೆ. ಅದು ಎಷ್ಟರ ಮಟ್ಡಿಗೆ ಸಮಸ್ಯೆಯಾಗಿದೆ ಎಂದರೆ ಮ್ಯಾಪ್ ಲೊಕೇಷನ್ ಮೂಲಕ ಸಮೀಕ್ಷೆ ಮಾಡಲು ಆಗುವುದಿಲ್ಲ ಎಂದು ತಹಶಿಲ್ದಾರರಿಗೆ ಮನವಿಕೊಟ್ಟಿದ್ದಾರೆ. ಮ್ಯಾಪ್ ಲೊಕೇಷನ್ ಮೂಲಕ ಮನೆ ವಿಳಾಸ ಪತ್ತೆ ಮಾಡಿ ಹೋದರೆ ಅಲ್ಲಿ ಮನೆ ಬದಲು ಹಳ್ಳ ಇದೆ. ಮತ್ತೆ ಕೆಲವು ಕಡೆ ಮನೆಯ ವಿಳಾಸ ತಪ್ಪು ತೋರಿಸುತ್ತದೆ. ಕೆಲವು ಕಡೆ ಬೇರೆಯ ವಿಳಾಸ ತೋರಿಸುತ್ತದೆ. ಪ್ರತಿ ಮನೆಗೂ ಲೊಕೇಷನ್ ಹಾಕಿಕೊಂಡು ಹುಡುವುದು ಕಷ್ಟವಾಗುತ್ತಿದೆ. ಯುಎಚ್‌ಐಡಿ ಸಂಖ್ಯೆ ಹಾಕಿ ಲೊಕೇಷನ್ ಹುಡುಕಿಕೊಂಡು ಹೋಗಲು ಕಷ್ಟವಾಗುತ್ತಿದೆ ಎಂದು ಹೇಳಲಾಗಿದೆ.

ಕೆಲವು ಕಡೆ ಒಂದೇ ಬೀದಿಯಲ್ಲಿ ಎದುರು-ಬದುರು ಮನೆಗಳಿಗೆ ಇಬ್ಬರು ಶಿಕ್ಷಕರು ಸಮೀಕ್ಷೆ ಮಾಡುವ ಪರಿಸ್ಥಿತಿ ಬಂದಿದೆ. ಒಬ್ಬ ಶಿಕ್ಷಕರಿಗೆ 150 ರಿಂದ 175 ಮನೆಗಳನ್ನು ಸಮೀಕ್ಷೆಗೆ ನಿಗದಿಪಡಿಸಲಾಗಿದೆ. ಇಷ್ಟು ಮನೆ ಸಮೀಕ್ಷೆ ನಡೆಸಬೇಕಾದರೆ ಒಂದೂವರೆ ತಿಂಗಳಿಂದ 2 ತಿಂಗಳು ಬೇಕಾಗುತ್ತದೆ. 60 ಪ್ರಶ್ನೆ ಓಪನ್ ಮಾಡುವುದು, ಲೊಕೇಷನ್ ಹುಡುಕುವುದು ಸೇರಿದಂತೆ ಸಮೀಕ್ಷೆಗೆ ದಿನಕ್ಕೆ ಮೊಬೈಲ್ ಡಾಟಾ 5 ಜಿಬಿ ಬೇಕಾಗುತ್ತದೆ. ಲೊಕೇಷನ್ ಮ್ಯಾಪ್ ನೀಡಿ ಹುಡುಕುವ ಬದಲು ಮತಗಟ್ಟೆ ಲಿಸ್ಟ್ ನೀಡಿ ಸಮೀಕ್ಷೆ ನಡೆಸಲು ಸೂಚಿಸಿದರೆ ಸುಲಭ ಆಗುತ್ತಿತ್ತು ಎಂದು ಶಿಕ್ಷಕರ ಅಳಲು ತೋಡಿಕೊಂಡಿದ್ದಾರೆ.

ಸಮೀಕ್ಷೆಗೂ ಮುಂಚೆ ಸರಿಯಾಗಿ ತರಬೇತಿಯನ್ನು ಶಿಕ್ಷಕರಿಗೆ ನೀಡಿಲ್ಲ. ಒಂದು ದಿವಸ ಮುಂಚೆ ಮಾತ್ರ ತರಬೇತಿ ನೀಡಿದ್ದಾರೆ. ತಾಂತ್ರಿಕ ಸಮಸ್ಯೆ ಎದುರಾದಾಗ ಯಾರಿಗೆ ಹೇಳಬೇಕು ಎನ್ನುವುದು ಶಿಕ್ಷಕರಿಗೆ ಗೊತ್ತಾಗುತ್ತಿಲ್ಲ.‌ ಯಾರಿಗೆ ಸಂಪರ್ಕ ಮಾಡಬೇಕು ಎಂಬ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿಲ್ಲ ಎಂಬ ದೂರುಗಳು ಕೇಳಿಬಂದಿವೆ.

ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ದೊರಕಿಸುವ ಮಹತ್ವಾಕಾಂಕ್ಷೆಯೊಂದಿಗೆ ಕಾಂಗ್ರೆಸ್‌‍ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುತ್ತಿದೆ. ತಾಂತ್ರಿಕ ಕಾರಣಗಳಿಂದಾಗಿ ಆಧಾರ ಸಂಖ್ಯೆ ಜೋಡಣೆಯಾಗಿರುವ ಮೊಬೈಲ್‌ ನಂಬರ್‌ಗೆ ಓಟಿಪಿ ರವಾನೆಯಾಗುತ್ತಿಲ್ಲ. ಸರಾಸರಿ ದಿನವೊಂದಕ್ಕೆ ಕನಿಷ್ಠ 10 ಮನೆಗಳನ್ನು ಸಮೀಕ್ಷೆ ಮಾಡುವ ಅನಿವಾರ್ಯತೆ ಇದೆ. ಆದರೆ ಓಟಿಪಿ ರವಾನೆಯಾಗದೆ ವಿಳಂಬವಾಗುತ್ತಿರುವುದರಿಂದ ಹಾಗೂ ಮೊಬೈಲ್‌ ಆ್ಯಪ್‌ ಹ್ಯಾಂಗ್‌ ಆಗುತ್ತಿರುವುದರಿಂದಾಗಿ ನಿಗದಿತ ಸಮಯಕ್ಕೆ ಸಮೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬ ಆಕ್ಷೇಪಗಳು ಕೇಳಿಬರುತ್ತಿವೆ. ಅಲ್ಲದೇ, ಒಟಿಪಿ ಬರದೆ ಗ್ರಾಮೀಣ ಭಾಗದಲ್ಲಿ ಸಮೀಕ್ಷೆ ನಡೆಸಲಾಗದೆ ಶಿಕ್ಷಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಗಳಿಗೆ ಯುಎಚ್‌ಐಡಿ ಸ್ಟಿಕ್ಕರ್‌ ಅಂಟಿಸುವುದರಲ್ಲೂ ಪೂರ್ಣ ಪ್ರಮಾಣದ ಪ್ರಗತಿಯಾಗಿಲ್ಲ ಎಂಬ ದೂರುಗಳು ಬಂದಿವೆ.

Read More
Next Story