ಜಾತಿಗಣತಿ | ಸಮೀಕ್ಷೆ ಮುಂದೂಡಲ್ಲ; ಸುಳ್ಳು ಸುದ್ದಿ ಹರಡುವವರ ವಿರುದ್ಧ ಕೋರ್ಟ್‌ ಮೊರೆ  - ಆರ್‌. ಮಧುಸೂದನ್‌ ನಾಯ್ಕ್‌ ಎಚ್ಚರಿಕೆ
x

ಜಾತಿಗಣತಿ | ಸಮೀಕ್ಷೆ ಮುಂದೂಡಲ್ಲ; ಸುಳ್ಳು ಸುದ್ದಿ ಹರಡುವವರ ವಿರುದ್ಧ ಕೋರ್ಟ್‌ ಮೊರೆ - ಆರ್‌. ಮಧುಸೂದನ್‌ ನಾಯ್ಕ್‌ ಎಚ್ಚರಿಕೆ

ಸಮೀಕ್ಷೆ ಮುಂದೂಡುವ ಅವಶ್ಯಕತೆ ಇಲ್ಲ. ಬೇಕಿದ್ದರೆ ಒಂದೆರಡು ದಿನ ಹೆಚ್ಚುವರಿಯಾಗಿ ವಿಸ್ತರಣೆ ಮಾಡಬಹುದು. ಇದರ ಹೊರತಾಗಿ ಇಡೀ ಸಮೀಕ್ಷೆ ಮುಂದೂಡಿಕೆ ಪ್ರಸ್ತಾವ ನಮ್ಮ ಮುಂದಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗ ಸ್ಪಷ್ಟಪಡಿಸಿದೆ.


ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮುಂದೂಡುವ ಪ್ರಶ್ನೆಯೇ ಇಲ್ಲ, ನಮ್ಮದು ಕಾನೂನುಬದ್ಧ ಸಾಂವಿಧಾನಿಕ ಸಂಸ್ಥೆ, ಯಾರೂ ನಮ್ಮ ಮೇಲೆ ಒತ್ತಡ ಹಾಕಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಜಾತಿಗಣತಿ ಮುಂದೂಡಿಕೆ ವದಂತಿಯನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಡಾ. ಮಧುಸೂದನ್ ನಾಯ್ಕ್ ತಳ್ಳಿ ಹಾಕಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮೀಕ್ಷೆ ಮುಂದೂಡುವ ಅವಶ್ಯಕತೆ ಇಲ್ಲ. ಬೇಕಿದ್ದರೆ ಒಂದೆರಡು ದಿನ ಹೆಚ್ಚುವರಿಯಾಗಿ ವಿಸ್ತರಣೆ ಮಾಡಬಹುದು. ಇದರ ಹೊರತಾಗಿ ಇಡೀ ಸಮೀಕ್ಷೆ ಮುಂದೂಡಿಕೆ ಪ್ರಸ್ತಾವ ನಮ್ಮ ಮುಂದಿಲ್ಲ. ಸಮೀಕ್ಷೆ ಮುಂದೂಡುವಂತೆ ಒತ್ತಡ ಹಾಕುವುದಿದ್ದರೆ ನಮ್ಮಲ್ಲೇ ಬರಬೇಕು. ಇದರ ಹೊರತಾಗಿ ಯಾವುದೇ ಕಾರಣಕ್ಕೂ ಮುಂದೂಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯಾದ್ಯಂತ ಸೋಮವಾರ ಬೆಳಿಗ್ಗೆಯಿಂದಲೇ ಸಮೀಕ್ಷೆ ಆರಂಭವಾಗಿದೆ. ಕೇಂದ್ರ ಕಚೇರಿ ಹಾಗೂ ಜಿಲ್ಲಾ ಮಟ್ಟದಲ್ಲಿ ಸಮೀಕ್ಷೆಯ ಮಾನಿಟರಿಂಗ್ ನಡೆಯುತ್ತಿದೆ. ಸಂಪೂರ್ಣ ಮಾಹಿತಿ ಸಂಜೆ 4 ಗಂಟೆಯ ನಂತರ ಲಭ್ಯವಾಗಲಿದೆ. ಆದರೆ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ ಹಿನ್ನೆಲೆಯಲ್ಲಿ ಕೆಲ ಆಡಳಿತಾತ್ಮಕ ಬದಲಾವಣೆಗಳಿವೆ. ಹಾಗಾಗಿ ಬೆಂಗಳೂರಿನಲ್ಲಿ ತಡವಾಗಿ ಸಮೀಕ್ಷೆ ಆರಂಭವಾಗಲಿದೆ. ರಾಜ್ಯಾದ್ಯಂತ ಅ.7ಕ್ಕೆ ಸಮೀಕ್ಷೆ ಮುಗಿಯಲಿದೆ. ಆದರೆ, ಬೆಂಗಳೂರಿನಲ್ಲಿ ಅ.10ಕ್ಕೆ ಸಮೀಕ್ಷೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಶಿಕ್ಷಕರಿಗೆ ಹೊರೆಯಾಗದಂತೆ ಯೋಜನೆ ರೂಪಿಸಲಾಗಿದೆ. ಬ್ಲಾಕ್‌ಗಳನ್ನು ಸಿದ್ಧಪಡಿಸಿ ಸರ್ವೇಯರ್‌ಗಳಿಗೆ ಜವಾಬ್ದಾರಿ ನೀಡಲಾಗಿದೆ. ಸಮೀಕ್ಷೆಗೆ ಜನರು ಸಹಕಾರ ನೀಡುತ್ತಿದ್ದಾರೆ. ರಾಜಕಾರಣದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.

ಕೋರ್ಟ್‌ ಮಧ್ಯಪ್ರವೇಶಿಸಲ್ಲ ಎಂಬ ಭಾವನೆ ಇದೆ

ಜಾತಿಗಣತಿ ಮುಂದೂಡುವ ವಿಚಾರವಾಗಿ ಕೆಲವರು ನ್ಯಾಯಾಲಯದಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ಆಯೋಗವನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ದೂರುದಾರರು ಮಧ್ಯಂತರ ಆದೇಶಕ್ಕಾಗಿ ಮನವಿ ಮಾಡಿದ್ದಾರೆ. ಆದರೆ, ನಾವು ಸಮೀಕ್ಷೆಯಲ್ಲಿ ಯಾವುದೇ ಹೊಸ ಜಾತಿ ಸೇರಿಸಿಲ್ಲ. ಜಾತಿಯ ಬಗ್ಗೆ ಪ್ರಾಮುಖ್ಯತೆ ಕೂಡ ನೀಡಿಲ್ಲ. ಹೀಗಾಗಿ ಕೋರ್ಟ್ ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಭಾವಿಸಿದ್ದೇವೆ ಎಂದು ಹೇಳಿದರು.

ಸಮೀಕ್ಷೆ ಬಗ್ಗೆ ತಪ್ಪುಕಲ್ಪನೆ

ಹಿಂದುಳಿದ ವರ್ಗಗಳ ಆಯೋಗವು ಯಾವುದೇ ಜಾತಿಗಣತಿ ಮಾಡುತ್ತಿಲ್ಲ. ನಾವು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರದ ಗಣತಿ ಇರುವುದರಿಂದ ಕೆಲವರು ನಾವು ಜಾತಿಗಣತಿ ಮಾಡುತ್ತಿದ್ದೇವೆ ಎಂದು ತಪ್ಪು ಕಲ್ಪನೆ ಮೂಡಿಸುತ್ತಿದ್ದಾರೆ. ಇದು ರಾಜಕೀಯ ವಿರೋಧ ಇರಬಹುದು ಅಥವಾ ತಪ್ಪುಕಲ್ಪನೆಯಿಂದ ಕೂಡರಬಹುದು ಎಂದು ಮಧುಸೂದನ್‌ ನಾಯ್ಕ್‌ ಹೇಳಿದರು.

ಸಮೀಕ್ಷೆ ಬಗ್ಗೆ ಗೊಂದಲ ಇರುವವರು ನಮ್ಮ ಬಳಿ ಬಂದು ಕೇಳಿದರೆ ಸ್ಪಷ್ಟೀಕರಣ ಕೊಡುತ್ತೇವೆ. ನಮ್ಮ ಗಣತಿಯಿಂದ ಯಾರಿಗೂ ತೊಂದರೆ ಇಲ್ಲ. ಕೆಲ ಸಚಿವರಿಗೂ ಮಾಹಿತಿಯ ಕೊರತೆ ಇತ್ತು, ಸಭೆಯಲ್ಲಿ ಅದನ್ನೂ ಸ್ಪಷ್ಟಪಡಿಸಿದ್ದೇವೆ. ಈಗ ಯಾವುದೇ ಗೊಂದಲವಿಲ್ಲ ಎಂದರು.

ನ್ಯಾಯಾಲಯದ ಮೊರೆ ಹೋಗುವ ಎಚ್ಚರಿಕೆ

ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಸಮೀಕ್ಷೆ ಕುರಿತಂತೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಇದು ಏಳು ಕೋಟಿ ಜನರಿಗೆ ಮಾಡುವ ದ್ರೋಹ. ಇಂತಹ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರ್ಟ್ ಮೊರೆ ಹೋಗಲಾಗುವುದು ಎಂದು ಡಾ. ಮಧುಸೂದನ್ ನಾಯ್ಕ್ ಎಚ್ಚರಿಸಿದರು.

Read More
Next Story