
Caste Census -2025| ಮತಾಂತರಗೊಂಡ ದಲಿತ ಕ್ರೈಸ್ತರಿಗೆ ಪರಿಶಿಷ್ಟರ ಸ್ಥಾನಮಾನ; ʼಬೇಕು-ಬೇಡʼ ಚರ್ಚೆ ಏಕೆ?
ಸಂವಿಧಾನದ 341ನೇ ವಿಧಿಯಡಿ ದಲಿತರನ್ನು ಪರಿಶಿಷ್ಟರು ಎಂದು ಗುರುತಿಸಲಾಗಿದೆ. ಜತೆಗೆ ಬೇರೆ ಧರ್ಮಕ್ಕೆ ಮತಾಂತರವಾದರೆ ಪರಿಶಿಷ್ಟ ಜಾತಿಯ ಸ್ಥಾನಮಾನ ಕಳೆದುಕೊಳ್ಳುತ್ತಾರೆ ಎಂತಲೂ ಉಲ್ಲೇಖಿಸಲಾಗಿದೆ. ಹೀಗಿರುವಾಗ ಜಾತಿಗಣತಿಯಲ್ಲೇ ಕ್ರೈಸ್ತ ಉಪಜಾತಿಗಳ ಸೇರ್ಪಡೆ ಎಷ್ಟು ಸರಿ ಎಂಬುದು ದಲಿತ ಸಮುದಾಯಗಳ ಆಕ್ಷೇಪವಾಗಿದೆ.
ಜಾತಿಗಣತಿಯಲ್ಲಿ ದಲಿತ ಕ್ರಿಶ್ಚಿಯನ್ ಜಾತಿಗಳ ಸೇರ್ಪಡೆ ವಿಚಾರ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿದೆ. ದಲಿತ ಕ್ರಿಶ್ಚಿಯನ್ನರು ತಮ್ಮ ಮೂಲ ಜಾತಿಯಲ್ಲೇ ಸೌಲಭ್ಯ ಹಾಗೂ ಮೀಸಲಾತಿ ಪಡೆಯುವ ಪ್ರಯತ್ನಕ್ಕೆ ದಲಿತ ಸಮುದಾಯದವರಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಅನ್ಯ ಧರ್ಮಗಳಿಗೆ ಹೋಗುವ ದಲಿತರನ್ನು ಪರಿಶಿಷ್ಟ ಸ್ಥಾನಮಾನದಿಂದ ಹೊರಗಿಡಬೇಕು. ಸಮೀಕ್ಷೆಗೆ ಪರಿಗಣಿಸಬಾರದು ಎಂಬ ಆಗ್ರಹಗಳೂ ಕೇಳಿ ಬರುತ್ತಿವೆ.
ಮಾದಿಗ ಕ್ರಿಶ್ಚಿಯನ್, ಹೊಲೆಯ ಕ್ರಿಶ್ಚಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್ ಹೀಗೆ ಸೇರುವ 16 ದಲಿತ ಕ್ರೈಸ್ತ ಜಾತಿಗಳ ಸೇರ್ಪಡೆಗೆ ಪರಿಶಿಷ್ಟ ಜಾತಿಗಳ ಮೀಸಲಾತಿ ಹಿತರಕ್ಷಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯವ್ಯಾಪಿ ಹೋರಾಟದ ಎಚ್ಚರಿಕೆ ನೀಡಿದೆ. ಮತ್ತೊಂದೆಡೆ, ಬಿಜೆಪಿ ನಾಯಕರು ಕೂಡ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವುದು ಸಿಎಂ ಸಿದ್ದರಾಮಯ್ಯ ಅವರನ್ನು ಅಡಗತ್ತರಿಯಲ್ಲಿ ಸಿಲುಕಿಸಿದೆ.
"ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿಗಳಿಗೆ ಅನ್ಯಾಯ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮತಾಂತರ ಕ್ರೈಸ್ತರನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಪ್ರಯತ್ನಿಸುತ್ತಿದೆ. ಮತಾಂತರ ದಲಿತ ಕ್ರಿಶ್ಚಿಯನ್ನರು, ಮುಸ್ಲಿಮರಿಗೆ ಪರಿಶಿಷ್ಟರ ಸ್ಥಾನಮಾನ ನೀಡುವುದಾದರೆ ಬೌದ್ಧರಿಗೂ ನೀಡಲಿ, ಕ್ರಿಶ್ಚಿಯನ್ನರನ್ನು ಓಲೈಸುವ ರಾಜಕಾರಣ ಸಹಿಸಲ್ಲ" ಎಂದು ಮಾಜಿ ಸಚಿವ ಎನ್. ಮಹೇಶ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
"ಸಂವಿಧಾನದ 341ನೇ ವಿಧಿಯಡಿ ದಲಿತರನ್ನು ಪರಿಶಿಷ್ಟರು ಎಂದು ಗುರುತಿಸಲಾಗಿದೆ. ಜತೆಗೆ ಬೇರೆ ಧರ್ಮಕ್ಕೆ ಮತಾಂತರವಾದರೆ ಪರಿಶಿಷ್ಟ ಜಾತಿಯ ಸ್ಥಾನಮಾನ ಕಳೆದುಕೊಳ್ಳುತ್ತಾರೆ ಎಂತಲೂ ಉಲ್ಲೇಖಿಸಲಾಗಿದೆ. ಹೀಗಿರುವಾಗ ಜಾತಿಗಣತಿಯಲ್ಲೇ ಕ್ರೈಸ್ತ ಉಪಜಾತಿಗಳ ಸೇರ್ಪಡೆ ಎಷ್ಟು ಸರಿ" ಎಂಬುದು ಅವರ ಆಕ್ಷೇಪವಾಗಿದೆ.
ಕ್ರಿಶ್ಚಿಯನ್ ಮಿಷನರಿಗಳ ಒಳಸಂಚು ಆರೋಪ
"ದಲಿತ ಕ್ರಿಶ್ಚಿಯನ್ನರಿಗೆ ಜಾತಿಪಟ್ಟಿಯಲ್ಲಿ ಯಾವುದೇ ಮಾನ್ಯತೆ ಇಲ್ಲ. ದಲಿತ ಸಮುದಾಯಗಳಿಗೆ ನೀಡಿರುವ ಮೀಸಲಾತಿ ಕಸಿಯುವ ಸಲುವಾಗಿ ಕ್ರಿಶ್ಚಿಯನ್ ಮಿಷನರಿಗಳು ಮಾಡುತ್ತಿರುವ ಹುನ್ನಾರ ಇದು" ಎಂದು ದಲಿತ ಮುಖಂಡ ಹಾಗೂ ವಕೀಲ ಅರುಣ್ ಕುಮಾರ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
"ಮತಾಂತರವಾದ ಕ್ರೈಸ್ತರು ಕೂಡ ಸಾಮಾಜಿಕವಾಗಿ ಹಿಂದುಳಿದಿದ್ದು, ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಈ ಅಂಶವನ್ನು ಮುನ್ನೆಲೆಗೆ ತಂದು ಅವರನ್ನು ಭವಿಷ್ಯದಲ್ಲಿ ಮೀಸಲಾತಿ ವ್ಯಾಪ್ತಿಗೆ ತರುವ ದುರುದ್ದೇಶವಿದೆ. ಒಂದು ವೇಳೆ ರಾಜ್ಯ ಸರ್ಕಾರ ಮತಾಂತರ ಕ್ರಿಶ್ಚಿಯನ್ನರನ್ನು ಜಾತಿಗಣತಿಯಿಂದ ಕೈಬಿಡದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು" ಎಂದು ಎಚ್ಚರಿಸಿದರು.
ಮತಾಂತರ ಕ್ರಿಶ್ಚಿಯನ್ನರ ವಾದವೇನು?
ಹಿಂದೂ ಧರ್ಮದಲ್ಲಿನ ಶೋಷಣೆ ಸಹಿಸದೇ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದರೂ ನಮ್ಮ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿ ಬದಲಾಗಿಲ್ಲ. ಹಾಗಾಗಿ ಪರಿಶಿಷ್ಟ ಜಾತಿಯಲ್ಲೇ ನಮ್ಮನ್ನೂ ಪರಿಗಣಿಸಬೇಕು ಎಂಬುದು ಮತಾಂತರ ಕ್ರಿಶ್ಚಿಯನ್ನರ ದಶಕಗಳ ಬೇಡಿಕೆಯಾಗಿದೆ.
ಮತಾಂತರದಿಂದ ಜೀವನ ಬದಲಾಗಿಲ್ಲ, ದಲಿತರೆಂಬ ಭೇದಭಾವ ಇನ್ನೂ ಜೀವಂತವಾಗಿದೆ. ಧರ್ಮದ ಆಧಾರದ ಮೇಲೆ ಪರಿಶಿಷ್ಟರನ್ನು ಗುರುತಿಸುವುದು ಸಂವಿಧಾನದ 15(1) ವಿಧಿಗೆ (ಧರ್ಮದ ಹೆಸರಿನಲ್ಲಿ ತಾರತಮ್ಯ ಸಲ್ಲದು) ವಿರುದ್ಧವಾಗಿದೆ. ದಲಿತರು ಮತಾಂತರವಾದರೂ ಅವರನ್ನು ಪರಿಶಿಷ್ಟ ಜಾತಿಯಲ್ಲೇ ಮುಂದುವರಿಸಬೇಕು. ಮೀಸಲಾತಿಯನ್ನು ಧರ್ಮಾಧರಿತವಾಗಿ ನೀಡದೇ ಹಿಂದುಳಿದಿರುವಿಕೆ ಮಾನದಂಡದ ಮೇಲೆ ನೀಡಬೇಕು ಎಂಬುದು ಮತಾಂತರ ಕ್ರಿಶ್ಚಿಯನ್ನರ ಆಗ್ರಹವಾಗಿದೆ.
ನ್ಯಾಯಾಲಯದ ತೀರ್ಪುಗಳ ಪ್ರತಿಧ್ವನಿ
ಮತಾಂತರ ದಲಿತ ಕ್ರಿಶ್ಚಿಯನ್ನರ ಕುರಿತಂತೆ ಆಂಧ್ರಪ್ರದೇಶ ಹೈಕೋರ್ಟ್ ಇತ್ತೀಚೆಗೆ ನೀಡಿದ್ದ ಮಹತ್ವದ ತೀರ್ಪು ಮತಾಂತರ ಕ್ರೈಸ್ತರ ದಶಕಗಳ ಬೇಡಿಕೆಗೆ ತಣ್ಣೀರು ಎರಚಿತ್ತು. ದಲಿತರು ಒಮ್ಮೆ ಮತಾಂತರವಾದ ಕೂಡಲೇ ಪರಿಶಿಷ್ಟ ಜಾತಿಯ ಸ್ಥಾನಮಾನ ಹಾಗೂ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ರಕ್ಷಣೆ ಕಳೆದುಕೊಳ್ಳುತ್ತಾರೆ ಎಂದು ತೀರ್ಪು ನೀಡಿತ್ತು.
ಸುಪ್ರೀಂಕೋರ್ಟ್ ಕೂಡ ಮತಾಂತರ ಕ್ರಿಶ್ಚಿಯನ್ನರನ್ನು ಪರಿಶಿಷ್ಟ ಜಾತಿಗಳಿಗೆ ಸೇರಿಸಬೇಕೆಂದು ಶಿಫಾರಸು ಮಾಡಿದ್ದ ನ್ಯಾ.ರಂಗನಾಥ್ ಮಿಶ್ರಾ ಆಯೋಗದ ವರದಿಗೆ ವಿರೋಧ ವ್ಯಕ್ತಪಡಿಸಿತ್ತು. ಇನ್ನು ಈ ವಾದಕ್ಕೆ ಪ್ರತಿಯಾಗಿ 2023 ರಲ್ಲಿ ತಮಿಳುನಾಡು ವಿಧಾನಸಭೆಯು, ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಎಲ್ಲಾ ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ಸೇರಿದಂತೆ ಸಾಮಾಜಿಕ ನ್ಯಾಯದ ಸೌಲಭ್ಯಗಳನ್ನು ಕೇಂದ್ರ ಸರ್ಕಾರ ಒದಗಿಸಬೇಕು ಎಂದು ಒತ್ತಾಯಿಸುವ ನಿರ್ಣಯ ಅಂಗೀಕರಿಸಿತ್ತು.
ಮತಾಂತರ ಕ್ರೈಸ್ತರ ಹೋರಾಟದ ಹಿನ್ನೆಲೆ ಏನು?
ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಧರ್ಮಕ್ಕೆ ಮತಾಂತರವಾದ ದಲಿತರ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ಅಧ್ಯಯನ ನಡೆಸಲು 2005 ರಲ್ಲಿ ನ್ಯಾ. ರಂಗನಾಥ್ ಮಿಶ್ರಾ ಆಯೋಗ ರಚಿಸಲಾಗಿತ್ತು. ಆಯೋಗವು 2007 ರಲ್ಲಿ ವರದಿ ನೀಡಿತ್ತು. ಮತಾಂತರ ದಲಿತರಿಗೆ ಪರಿಶಿಷ್ಟ ಜಾತಿಯಲ್ಲೇ ಸ್ಥಾನಮಾನ ನೀಡಬೇಕೆಂದು ಆಯೋಗ ಶಿಫಾರಸು ಮಾಡಿತ್ತು. ಆದರೆ, ಅಂದಿನ ಯುಪಿಎ ಸರ್ಕಾರ ವರದಿಗೆ ಒಪ್ಪಿಗೆ ಸೂಚಿಸಿರಲಿಲ್ಲ. ಅಲ್ಲಿಂದ ಆರಂಭವಾದ ಹೋರಾಟ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೂರನೇ ಅವಧಿವರೆಗೂ ಮುಂದುವರಿದರೂ ಈವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ.
ದಲಿತ ಕ್ರಿಶ್ಚಿಯನ್ನರಿಗೆ ಮೂಲಭೂತ ಸೌಲಭ್ಯ, ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸುತ್ತಲೇ ಬರಲಾಗಿದೆ. ದಲಿತ ಕ್ರೈಸ್ತರನ್ನು ಸಂವಿಧಾನದ ಪರಿಶಿಷ್ಟ ಜಾತಿಗಳ 1950 ರ ಆದೇಶ ಪಟ್ಟಿಗೆ ಸೇರಿಸುವುದಾಗಿ ಸರ್ಕಾರಗಳು ಭರವಸೆ ನೀಡಿದರೂ ದಶಕಗಳಿಂದ ಬೇಡಿಕೆ ಮಾತ್ರ ಈಡೇರಲಿಲ್ಲ ಎಂಬುದು ಮತಾಂತರ ಕ್ರಿಶ್ಚಿಯನ್ನರ ಅಳಲು.
1935ರ ಪರಿಶಿಷ್ಟ ಜಾತಿಗಳ ಕಾಯ್ದೆಯಡಿ ಪ್ರಕಾರ, ಯಾವುದೇ ಮತಾಂತರ ಕ್ರಿಶ್ಚಿಯನ್ ವ್ಯಕ್ತಿಯು ಪರಿಶಿಷ್ಟ ಜಾತಿಯ ಸದಸ್ಯರೆಂದು ಪರಿಗಣಿಸಬಾರದು ಎಂದು ಹೇಳಿದೆ. ಅಂದಿನಿಂದ ಮತಾಂತರ ದಲಿತ ಕ್ರಿಶ್ಚಿಯನ್ನರು ಪರಿಶಿಷ್ಟ ಜಾತಿಯ ಸ್ಥಾನಮಾನ ಕಳೆದುಕೊಂಡರು.
ಮಂಡಲ್ ಆಯೋಗ ಹೇಳಿದ್ದೇನು?
1980 ರಲ್ಲಿ ಮಂಡಲ್ ಆಯೋಗವು "ಯಾವುದೇ ನಂಬಿಕೆಯಿಂದ ಇನ್ನೊಂದು ಧರ್ಮಕ್ಕೆ ಮತಾಂತರ ಆಗುವುದರಿಂದ ವ್ಯಕ್ತಿಯ ಸಾಮಾಜಿಕ-ಆರ್ಥಿಕ ಸ್ಥಿತಿ ಬದಲಾಗುವುದಿಲ್ಲ. ಆದ್ದರಿಂದ, ಪರಿಶಿಷ್ಟ ಜಾತಿಗಳಿಂದ ಬೌದ್ಧ, ಕ್ರಿಶ್ಚಿಯನ್ ಮತ್ತು ಇತ್ಯಾದಿ ಧರ್ಮಗಳಿಗೆ ಮತಾಂತರವಾಗುವವರನ್ನು ಪರಿಶಿಷ್ಟ ಜಾತಿಗಳೆಂದು ಪರಿಗಣಿಸಬೇಕು. ಈ ಬದಲಾವಣೆಯನ್ನು ಕಾನೂನಿನ ಮೂಲಕ ತರುವವರೆಗೂ ಆ ಜಾತಿಗಳನ್ನು ಇತರ ಹಿಂದುಳಿದ ವರ್ಗಗಳು (ಒಬಿಸಿ) ಎಂದು ಪಟ್ಟಿ ಮಾಡಬೇಕು ಎಂದು ಹೇಳಿತ್ತು.
ಅಧ್ಯಯನಕ್ಕೆ ನ್ಯಾ.ಕೆ.ಜಿ.ಬಾಲಕೃಷ್ಣನ್ ಸಮಿತಿ ನೇಮಕ
ದಲಿತ ಕ್ರಿಶ್ಚಿಯನ್ನರು, ದಲಿತ ಮುಸ್ಲಿಮರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ಗಳು ಸಾಕಷ್ಟು ತೀರ್ಪು ನೀಡಿವೆ. ಆದಾಗ್ಯೂ, ದಲಿತ ಕ್ರಿಶ್ಚಿಯನ್ನರು ದಾಖಲಿಸಿರುವ ರಿಟ್ ಅರ್ಜಿಯ ವಿಚಾರಣೆ ಬಾಕಿ ಉಳಿದಿದೆ.
ಈ ಮಧ್ಯೆ, ದಲಿತ ಕ್ರಿಶ್ಚಿಯನ್ನರು, ಮುಸ್ಲಿಮರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡುವ ಕುರಿತು ಅಧ್ಯಯನ ನಡೆಸಲು 2022ರಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿ ರಚಿಸಿತ್ತು. ಈ ಸಮಿತಿಯು ಕಳೆದ ವರ್ಷ ವರದಿ ನೀಡಬೇಕಿತ್ತು. ಆದರೆ, ಅಧ್ಯಯನ ಪೂರ್ಣವಾಗದ ಹಿನ್ನೆಲೆಯಲ್ಲಿ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ.
ಹಿಂದುಳಿದವರಿಗೂ ತಟ್ಟಿದ ಬಿಸಿ
ಮತಾಂತರ ಕ್ರಿಶ್ಚಿಯನ್ನರ ವಿವಾದದ ಬಿಸಿ ದಲಿತರಿಗಷ್ಟೇ ತಟ್ಟಿಲ್ಲ. ಹಿಂದುಳಿದ ಹಾಗೂ ಮೇಲ್ವರ್ಗದ ಜಾತಿಗಳಲ್ಲೂ ಅಸಮಾಧಾನಕ್ಕೆ ಕಾರಣವಾಗಿದೆ. ಮತಾಂತರ ಕ್ರೈಸ್ತರಿಂದಾಗಿ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಗೆ ಧಕ್ಕೆಯಾಗಲಿದೆ ಎಂಬ ಆತಂಕ ಕಾಡುತ್ತಿದೆ. ಹಾಗಾಗಿ ಹಿಂದೂ ಧರ್ಮ ಹೆಸರು ಬಳಸದಂತೆ ಹಾಗೂ ಮೀಸಲಾತಿಗೆ ಪರಿಗಣಿಸದಂತೆ ಒತ್ತಾಯಿಸಲಾಗಿದೆ. ಇತ್ತೀಚಿನ ಜಾತಿಗಣತಿ ಸಮೀಕ್ಷೆಯಲ್ಲಿ 30ಕ್ಕೂ ಹೆಚ್ಚು ಕ್ರಿಶ್ಚಿಯನ್ ಜಾತಿಗಳನ್ನು ಪ್ರತ್ಯೇಕವಾಗಿ ದಾಖಲಿಸಲಾಗಿದೆ.
ಅಕ್ಕಸಾಲಿಗ ಕ್ರಿಶ್ಚಿಯನ್, ಬೆಸ್ತ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಸೇರಿದಂತೆ ಹಲವಾರು ಉಪಜಾತಿಗಳನ್ನು ಜಾತಿ ಸಂಖ್ಯೆಯೊಂದಿಗೆ ಸಮೀಕ್ಷೆ ಸೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಜನರು ಹೇಳಿಕೊಂಡ ಜಾತಿ, ಧರ್ಮದ ಹೆಸರಷ್ಟೇ ದಾಖಲಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗ ಸ್ಪಷ್ಟನೆ ನೀಡಿದರೂ ವಿವಾದ ತಣ್ಣಗಾಗಿಲ್ಲ.
ಮತಾಂತರ ದಲಿತರನ್ನು ಕೆಲವು ರಾಜ್ಯಗಳಲ್ಲಿ ಒಬಿಸಿ ಪಟ್ಟಿಯಲ್ಲಿ ಸೇರಿಸಲಾಗಿದೆ. ರಾಜ್ಯ ಸರ್ಕಾರಗಳು ದಲಿತ ಕ್ರೈಸ್ತರು ಹಾಗೂ ದಲಿತ ಮುಸ್ಲಿಮರನ್ನು ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಿಸುವ ಅಧಿಕಾರ ಹೊಂದಿವೆ. ಹಾಗಾಗಿ ಕರ್ನಾಟಕದಲ್ಲೂ ಮತಾಂತರ ಕ್ರಿಶ್ಚಿಯನ್ನರನ್ನು ಒಬಿಸಿ ಸೇರಿಸುವ ಕಳವಳ ಶುರುವಾಗಿದೆ.