
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ
ಜಾತಿಗಣತಿ ತಂತ್ರಾಂಶ ಗೊಂದಲ ಶೀಘ್ರ ನಿವಾರಣೆ; ಹೈಕೋರ್ಟ್ ನಿರ್ದೇಶನಕ್ಕೆ ಬದ್ಧ
ಕೆಲವೆಡೆ ಗಣತಿಗೆ ಸರ್ವರ್ ಸಮಸ್ಯೆ ಆಗುತ್ತಿದ್ದು, ಅದನ್ನೂ ಸರಿಪಡಿಸಲಾಗುವುದು. ಬುಧವಾರ ಅಥವಾ ಗುರುವಾರ ಎಲ್ಲವೂ ಸರಿ ಹೋಗಲಿದೆ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಗೊಂದಲ ಶೀಘ್ರದಲ್ಲೇ ಸರಿಪಡಿಸಲಾಗುವುದು. ನಿಗದಿತ ಅವಧಿಯಲ್ಲೇ ಸಮೀಕ್ಷಾ ಕಾರ್ಯ ನಡೆಯಲಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವೆಡೆ ಗಣತಿಗೆ ಸರ್ವರ್ ಸಮಸ್ಯೆ ಆಗುತ್ತಿದ್ದು, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸರಿಪಡಿಸಲಾಗುವುದು. ಬುಧವಾರ ಅಥವಾ ಗುರುವಾರ ಎಲ್ಲವೂ ಸರಿ ಹೋಗಲಿದೆ. ಎರಡು ದಿನಗಳಿಂದ ಸರ್ವೆ ಕಾರ್ಯ ನಡೆಯುತ್ತಿದೆ. ಬೆಂಗಳೂರಿನಲ್ಲಿ ಕೆಲ ಕಾರಣಕ್ಕೆ ಇನ್ನೂ ಆರಂಭವಾಗಿಲ್ಲ. ಸಮೀಕ್ಷೆ ಪ್ರಶ್ನಿಸಿ ಕೆಲವರು ಕೋರ್ಟ್ ಮೆಟ್ಟಿಲೇರಿದ್ದು, ಆದೇಶ ಬರದೇ ಏನೂ ಪ್ರತಿಕ್ರಿಯೆ ನೀಡಲು ಆಗದು. ಕಾನೂನು ಪಾಲನೆ ಮಾಡಬೇಕಿರುವುದು ನಮ್ಮ ಕರ್ತವ್ಯ ಎಂದರು.
ಗಣತಿದಾರರಿಗಿರುವ ಸಮಸ್ಯೆಗಳೇನು ?
ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಶಿಕ್ಷಕರು ಎದುರಿಸುತ್ತಿದ್ದಾರೆ. ಗಣತಿಗೆ ಬಳಕೆಯಾಗುವ ತಂತ್ರಾಂಶ ಸರಿಯಾಗಿ ಓಪನ್ ಆಗುತ್ತಿಲ್ಲ. ತಂತ್ರಾಂಶದಲ್ಲಿ ಸಾಕಷ್ಟು ಸಮಸ್ಯೆ ಇದೆ. ತಂತ್ರಾಂಶ ಓಪನ್ ಆಗಿ ಮತ್ತೆ ಇನ್‌ಸ್ಟಾಲ್ ಮಾಡಬೇಕಾಗುತ್ತದೆ. ಬಹುತೇಕ ಕಡೆಗಳಲ್ಲಿ ತಂತ್ರಾಂಶ ಓಪನ್ ಆಗದೆ ಸಮಸ್ಯೆ ಎದುರಾಗಿದೆ.
ಜಿಯೋಟ್ಯಾಗ್ ಮೂಲಕ ಗೂಗಲ್ ಲೊಕೇಷನ್ ಹಾಕಿ ಮನೆ ವಿಳಾಸ ಹುಡುಕುವುದು ಅಸಾಧ್ಯವಾಗಿದೆ. ಮ್ಯಾಪ್ ಲೊಕೇಷನ್ ಮೂಲಕ ಸಮೀಕ್ಷೆ ಮಾಡಲು ಆಗುವುದಿಲ್ಲ ಎಂದು ತಹಶಿಲ್ದಾರರಿಗೆ ಮನವಿ ಕೂಡ ಸಲ್ಲಿಸಲಾಗಿದೆ. ಜಿಯೋ ಟ್ಯಾಗ್ ಲೊಕೇಷನ್ ಕೆಲವೊಂದು ಕಡೆ ಮನೆ ವಿಳಾಸದ ಬದಲು ಹಳ್ಳ ತೋರಿಸುತ್ತದೆ. ಮತ್ತೆ ಕೆಲವೆಡೆ ಮನೆಯ ವಿಳಾಸ ತಪ್ಪು ತೋರಿಸುತ್ತದೆ. ಪ್ರತಿ ಮನೆಗೂ ಲೊಕೇಷನ್ ಹಾಕಿಕೊಂಡು ಹುಡುವುದು ಕಷ್ಟವಾಗುತ್ತಿದೆ. ಯುಎಚ್‌ಐಡಿ ಸಂಖ್ಯೆ ಹಾಕಿ ಲೊಕೇಷನ್ ಹುಡುಕಿಕೊಂಡು ಹೋಗಲು ಕಷ್ಟವಾಗುತ್ತಿದೆ ಎಂದು ಹೇಳಲಾಗಿದೆ.
175 ಮನೆಗಳು ನಿಗದಿ
ಕೆಲವು ಕಡೆ ಒಂದೇ ಬೀದಿಯಲ್ಲಿ ಎದುರು-ಬದುರು ಮನೆಗಳಿಗೆ ಇಬ್ಬರು ಶಿಕ್ಷಕರು ಸಮೀಕ್ಷೆ ಮಾಡುವ ಪರಿಸ್ಥಿತಿ ಬಂದಿದೆ. ಒಬ್ಬ ಶಿಕ್ಷಕರಿಗೆ 150 ರಿಂದ 175 ಮನೆಗಳನ್ನು ಸಮೀಕ್ಷೆಗೆ ನಿಗದಿಪಡಿಸಲಾಗಿದೆ. ಇಷ್ಟು ಮನೆ ಸಮೀಕ್ಷೆ ನಡೆಸಬೇಕಾದರೆ ಒಂದೂವರೆ ತಿಂಗಳಿಂದ 2 ತಿಂಗಳು ಬೇಕಾಗುತ್ತದೆ. 60 ಪ್ರಶ್ನೆ ಓಪನ್ ಮಾಡುವುದು, ಲೊಕೇಷನ್ ಹುಡುಕುವುದು ಸೇರಿದಂತೆ ಸಮೀಕ್ಷೆಗೆ ದಿನಕ್ಕೆ ಮೊಬೈಲ್ ಡಾಟಾ 5 ಜಿಬಿ ಬೇಕಾಗುತ್ತದೆ. ಲೊಕೇಷನ್ ಮ್ಯಾಪ್ ನೀಡಿ ಹುಡುಕುವ ಬದಲು ಮತಗಟ್ಟೆ ಲಿಸ್ಟ್ ನೀಡಿ ಸಮೀಕ್ಷೆ ನಡೆಸಲು ಸೂಚಿಸಿದರೆ ಸುಲಭ ಆಗುತ್ತಿತ್ತು ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.
ಗಣತಿ ಕಡ್ಡಾಯವಲ್ಲ: ಸರ್ಕಾರ ಸ್ಪಷ್ಟನೆ
ರಾಜ್ಯದಲ್ಲಿ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಜಾತಿ ಗಣತಿಯಲ್ಲ ಮತ್ತು ಇದರಲ್ಲಿ ಭಾಗವಹಿಸುವುದು ಸಂಪೂರ್ಣವಾಗಿ ಜನರ ಸ್ವಯಂಪ್ರೇರಿತ ನಿರ್ಧಾರ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಸ್ಪಷ್ಟನೆ ನೀಡಿದೆ. ಈ ಸಮೀಕ್ಷೆಯು ಕಡ್ಡಾಯ ಪ್ರಕ್ರಿಯೆಯಲ್ಲ, ಬದಲಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಗತ್ಯವಾದ ದತ್ತಾಂಶ ಸಂಗ್ರಹಿಸುವ ಒಂದು ಪ್ರಯತ್ನವಷ್ಟೇ ಎಂದು ಸೆ.23ರಂದು ಸರ್ಕಾರ ಪ್ರತಿಪಾದಿಸಿತ್ತು.
ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮಾಜಿ ಶಾಸಕ ಕೆ.ಎನ್. ಸುಬ್ಬಾರೆಡ್ಡಿ ಸೇರಿದಂತೆ ಹಲವರು ಸಲ್ಲಿಸಿರುವ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ಪೀಠ ಎರಡನೇ ದಿನವೂ ವಿಚಾರಣೆ ನಡೆಸಿತ್ತು. ಈ ವೇಳೆ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, "ಅರ್ಜಿದಾರರು ಇದನ್ನು 'ಜಾತಿ ಸಮೀಕ್ಷೆ' ಎಂದು ತಪ್ಪಾಗಿ ವ್ಯಾಖ್ಯಾನಿಸುತ್ತಿದ್ದಾರೆ. ದತ್ತಾಂಶವಿಲ್ಲದೆ ಯಾವುದೇ ಸರ್ಕಾರ ತರ್ಕಬದ್ಧ ನೀತಿಗಳನ್ನು ರೂಪಿಸಲು ಸಾಧ್ಯವಿಲ್ಲ," ಎಂದು ವಾದಿಸಿದರು.
ಹಿಂದುಳಿದ ವರ್ಗಗಳ ಆಯೋಗದ ಪರ ವಾದಿಸಿದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್, "ಜನರು ಸ್ವ-ಇಚ್ಛೆಯಿಂದ ಮಾಹಿತಿ ನೀಡಿದರೆ ಮಾತ್ರ ದಾಖಲಿಸಲಾಗುವುದು. ಇದು ಯಾವುದೇ ರೀತಿಯಲ್ಲೂ ಕಡ್ಡಾಯ ಗಣತಿಯಲ್ಲ," ಎಂದು ನ್ಯಾಯಾಲಯಕ್ಕೆ ತಿಳಿಸಿದರು.