ಜಾತಿ ಗಣತಿ : ಮೂರು ದಿನದಲ್ಲಿ 3,19,829 ಮಂದಿಯ ದತ್ತಾಂಶ ಸಂಗ್ರಹ, ಮುಂದುವರಿದ ಗೊಂದಲ

ಕೊರತೆಗಳ ನಡುವೆ ಪ್ರಾರಂಭವಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಮೂರನೇ ದಿನ ಬುಧವಾರ ಕೊಂಚಮಟ್ಟಿಗೆ ಸುಧಾರಣೆ ಕಂಡಿದೆ. ಮೂರನೇ ದಿನದಂದು 98,876 ಮಂದಿಯ ದತ್ತಾಂಶವನ್ನು ಸಂಗ್ರಹಿಸಲಾಗಿದೆ.

Update: 2025-09-25 01:30 GMT

ಶಿಕ್ಷಕರ ತರಬೇತಿ, ತಾಂತ್ರಿಕ ಸಮಸ್ಯೆ ಸೇರಿದಂತೆ ಹಲವು ಕೊರತೆಗಳ ನಡುವೆ ಪ್ರಾರಂಭವಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಮೂರನೇ ದಿನ ಬುಧವಾರ ಕೊಂಚಮಟ್ಟಿಗೆ ಸುಧಾರಣೆ ಕಂಡಿದೆ. ಮೂರನೇ ದಿನದಂದು 98,876 ಮಂದಿಯ ದತ್ತಾಂಶವನ್ನು ಸಂಗ್ರಹಿಸಲಾಗಿದೆ. 

ಕಳೆದ ಮೂರು ದಿನಗಳಿಂದ ನಡೆದ ಸಮೀಕ್ಷೆಯಲ್ಲಿ ಯುಎಚ್‌ಐಡಿ ಸ್ಟಿಕ್ಕರ್‌ ಅಂಟಿಸಲಾದ 84,180 ಮನೆಗಳಲ್ಲಿ ಸಮೀಕ್ಷೆ ಕಾರ್ಯ ನಡೆಸಲಾಗಿದ್ದು, 3,19,829 ಮಂದಿಯ ದತ್ತಾಂಶ ಪಡೆದುಕೊಳ್ಳಲಾಗಿದೆ. ಗಣತಿ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಕಾರಣ  ನ್ಯಾಯಾಲಯ ತಡೆಯಾಜ್ಞೆ ನೀಡುತ್ತದೆಯೇ ಅಥವಾ ಇಲ್ಲವೇ ಎಂಬ ಗೊಂದಲದಲ್ಲೇ ಅಧಿಕಾರಿಗಳು, ಗಣತಿ ಸಿಬ್ಬಂದಿ ತೊಡಗಿದ್ದರು. ಆದರೆ, ನ್ಯಾಯಾಲಯವು ಗುರುವಾರಕ್ಕೆ ಮುಂದೂಡಿದೆ. 

ಮೂರನೇ ದಿನವು ಸರ್ವರ್‌ ಸಮಸ್ಯೆ, ನೆಟ್ವರ್ಕ್‌ ಸಮಸ್ಯೆ, ಆ್ಯಪ್‌ ಡೌನ್‌ಲೋಡ್‌ ಸಮಸ್ಯೆ, ಕ್ರ್ಯಾಶ್ ಆಗುವುದು. ಓಟಿಪಿ ಸಮಸ್ಯೆ ಸೇರಿದಂತೆ ಗಣತಿದಾರರು ಹಲವು ಸಮಸ್ಯೆ ಎದುರಿಸಿದರು. ಗಣತಿಗೆ 1.85 ಲಕ್ಷ ಶಿಕ್ಷಕರು, ಮೇಲ್ವಿಚಾರಕರು 2 ಲಕ್ಷ ಸಿಬ್ಬಂದಿಯನ್ನು ನೇಮಿಸಲಾಗಿದೆ. ಪ್ರತಿ ಗಣತಿದಾರರಿಗೆ 120 ರಿಂದ 150 ಮನೆಗಳ ಒಂದು ಬ್ಲಾಕ್‌ ಮಾತ್ರ ಸಮೀಕ್ಷೆಗೆ ನಿಗದಿ ಮಾಡಿದೆ. ಒಂದು ದಿನಕ್ಕೆ ಕನಿಷ್ಠ 7 ರಿಂದ 8 ಮನೆಗಳ ಸಮೀಕ್ಷೆ ನಡೆಸಿದರೂ ಸುಲಭವಾಗಿ ನಿಗದಿತ 16 ದಿನದಲ್ಲಿ ಸಮೀಕ್ಷೆ ಪೂರ್ಣಗೊಳ್ಳುವ ಭರವಸೆಯಲ್ಲಿ ಆಯೋಗ ಇದೆ. ಆದರೆ ವಾಸ್ತವಾಂಶದಲ್ಲಿ ಇದು ಕಷ್ಟಕರ ಎಂಬುದು ಸಮೀಕ್ಷೆಯಲ್ಲಿ ತೊಡಗಿರುವವರ ಅಳಲಾಗಿದೆ. 

ಮೂರನೇ ದಿನದ ವೇಳೆ ಬೆಳಗಾವಿಯಲ್ಲಿ ಹೆಚ್ಚು ಗಣತಿ ಕಾರ್ಯ ನಡೆದಿದ್ದು, 26,494 ಮಂದಿಯ ಸಮೀಕ್ಷೆ ನಡೆಸಲಾಗಿದೆ. ನಂತರ ಬಾಗಲಕೋಟೆಯಲ್ಲಿ 23,593 ಮಂದಿಯ ಸಮೀಕ್ಷೆ ನಡೆಸಲಾಗಿದೆ ಎಂದು ಆಯೋಗವು ತಿಳಿಸಿದೆ. 



ಅಧಿಕಾರಿಗಳೊಂದಿಗೆ ಸಭೆ: 

ಮೊಬೈಲ್‌ ಆಪ್‌ನಲ್ಲಿ ತಾಂತ್ರಿಕ ಸಮಸ್ಯೆ ಇರುವ ಕಾರಣ ಬುಧವಾರ ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ.ದಯಾನಂದ್‌ ಅವರು ಇ-ಆಡಳಿತದೊಂದಿಗೆ ಸಭೆ ನಡೆಸಲಾಗಿದೆ. ಆ್ಯಪ್‌ ಸಮಸ್ಯೆ, ಡೌನ್‌ಲೋಡ್ ಸಮಸ್ಯೆ, ಓಟಿಪಿ ಸಮಸ್ಯೆಗಳಂತಹ ಕುರಿತು ಚರ್ಚೆ ನಡೆಸಲಾಯಿತು. ಈ ವೇಳೆ ಇ-ಆಡಳಿತದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಭೆಯ ಬಳಿಕ ಬಹುತೇಕ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಹೇಳಲಾಗಿದೆ. ಗುರುವಾರದಿಂದ ತಾಂತ್ರಿಕ ಸಮಸ್ಯೆ ಬಗೆಹರಿಯಲಿದೆ ಎಂಬ ವಿಶ್ವಾಸವನ್ನು ಅಧಿಕಾರಿಗಳು ನೀಡಿದ್ದಾರೆ. 

ಈ ನಡುವೆ, ಶಿಕ್ಷಕರು ಎಂದಿನಂತೆ ಸಮಸ್ಯೆಗಳನ್ನು ಎದುರಿಸಿದ್ದು, ಬಹುತೇಕ ಜಿಲ್ಲೆಯಲ್ಲಿ ಅರ್ಧ ದಿನಕ್ಕೆ ಕೆಲಸವನ್ನು ಮೊಟಕುಗೊಳಿಸಲಾಗಿದೆ. ತಾಂತ್ರಿಕ ಸಮಸ್ಯೆ ತಲೆದೋರಿರುವ ಕಾರಣ ಸರಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ. ಆ್ಯಪ್ ಡೌನ್‌ ಲೋಡ್ ಮಾಡಿದರೂ ಲಾಗ್‌ಇನ್ ಆಗಲು ಒಟಿಪಿ ಸಿಗುತ್ತಿರಲಿಲ್ಲ. ಕೆಲವು ಕಡೆ ಗಣತಿದಾರರ ಮೊಬೈಲ್‌ ಕೈ ಕೊಡುವುದು, ಆ್ಯಪ್‌ ಗೆ ಅಗತ್ಯ ಸ್ಟೋರೇಜ್‌ ಇಲ್ಲದಿರುವುದು ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳು ಮುಂದುವರೆದಿದ್ದವು. ಹೀಗಾಗಿ ಮೂರನೇ ದಿನವೂ ಸಹ ಹೇಳಿಕೊಳ್ಳುವಂತಹ ಬೆಳವಣಿಗೆಗಳು ಕಂಡಿಲ್ಲ ಎಂದು ತಿಳಿದುಬಂದಿದೆ. 

Tags:    

Similar News