ನಮ್ಮೂರ ಜಾತ್ರೆಯಲ್ಲಿ ಕುಣಿಯುವ ಕೆಲಸಕ್ಕೆ ಅರ್ಜಿ ಹಾಕಿ: ಬಾವ ಶಿವರಾಜ್‌ಕುಮಾರ್‌ ಗೆ ಕುಮಾರ್‌ ಬಂಗಾರಪ್ಪ ಟಾಂಗ್

Update: 2024-06-05 12:34 GMT

ʻʻಅವನ (ಮಧು ಬಂಗಾರಪ್ಪ) ಬಾವ, ನನ್ನ ತಂಗಿಯ ಗಂಡ ಡಾ. ಶಿವರಾಜ್‌ಕುಮಾರ್‌ ನಿರುದ್ಯೋಗಿಯಾಗಬೇಕಿಲ್ಲ, ನಮ್ಮೂರ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಿಕೊಳ್ಳಬಹುದುʼʼ ಎಂದು ಮಾಜಿ ಸಿಎಂ ದಿ. ಎಸ್‌ ಬಂಗಾರಪ್ಪ ಅವರ ಹಿರಿಯ ಪುತ್ರ, ಬಿಜೆಪಿ ನಾಯಕ ಕುಮಾರ ಬಂಗಾರಪ್ಪ ಅವರು ನಟ ಶಿವರಾಜ್‌ಕುಮಾರ್‌ಗೆ ಟಾಂಗ್‌ ಕೊಟ್ಟಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ನಟ ಶಿವರಾಜಕುಮಾರ್‌ ಅವರ ಪತ್ನಿ ಹಾಗೂ ಮಧು ಬಂಗಾರಪ್ಪ ಅವರ ಸಹೋದರಿಯಾಗಿರುವ ಗೀತಾ ಶಿವರಾಜ್‌ಕುಮಾರ್ ಅವರು ಬಿಜೆಪಿಯ ಬಿ ವೈ ರಾಘವೇಂದ್ರ ವಿರುದ್ಧ ಸೋಲು ಕಂಡಿದ್ದಾರೆ. ಈ ಬಗ್ಗೆ ಅವರ ಹಿರಿಯ ಸಹೋದರ ಹಾಗೂ ಬಿಜೆಪಿ ನಾಯಕ, ನಟ ಕುಮಾರ್‌ ಬಂಗಾರಪ್ಪ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕುಮಾರ್‌ ಬಂಗಾರಪ್ಪ ಪೋಸ್ಟ್‌ನಲ್ಲಿ ಏನಿದೆ?

ʻಕರ್ನಾಟಕ ಕಂಡ ಧೀಮಂತ ರಾಜಕಾರಣಿ ಬಡವರ ಬಂಧು ಎಂಬ ಸಾರ್ಥಕ ಬಿರುದಾವಳಿಯನ್ನು ತಮ್ಮ ಹೆಸರಿನೊಡನೆ ನಡೆಸಿಕೊಂಡು ಬದುಕಿದವರು ಸಾರೆಕೊಪ್ಪ ಬಂಗಾರಪ್ಪ ಅವರು. ಹಿಂದುಳಿದ ವರ್ಗಗಳಿಗೆ ಆಶಾಕಿರಣವಾಗಿದ್ದ, ರೈತಬಂಧುವೂ, ಗೇಣಿದಾರರ ಜೀವಜಲವೆನಿಸಿದ್ದ ಹೋರಾಟಗಾರ, ನಾಡು ನುಡಿ ಸಂಸ್ಕೃತಿಗಳ ರಕ್ಷಾ ಧೀಕ್ಷೆಯನ್ನು ತೊಟ್ಟಿದ್ದ ವೀರಯೋಧನೆನಿಸಿದ್ದ ಕರ್ನಾಟಕದ ಈ ಮಾಜಿ ಮುಖ್ಯಮಂತ್ರಿಯು ಲಿಂಗಾಯತ, ಬ್ರಾಹ್ಮಣ, ಒಕ್ಕಲಿಗರೆಲ್ಲರಲ್ಲಿಯೂ ಸಮ ಭಾವ, ಸಮಚಿತ್ತದಿಂದ ಬೆರೆತಿದ್ದವರು. ಇವರ ಆಡಳಿತ ವ್ಯೆಖರಿಯು ಅನುಕರಣೀಯ. ಮಾತ್ರವಲ್ಲದೆ ಆದರ್ಶರೂಪದ್ದಾಗಿತ್ತು. ಇವರು ಜಾರಿಗೆ ತಂದಿದ್ದ ಪಂಚಮುಖಿ ಕಾರ್ಯಕ್ರಮಗಳಾದ ವಿಶ್ವ, ಸುಶ್ರತ, ಆರಾಧನ, ಆಶ್ರಯ, ಅಕ್ಷಯ ಮುಂತಾದವನ್ನು ಇಡೀ ರಾಜ್ಯ ನೆನೆಯುತ್ತಾ ಆರಾಧಿಸುತ್ತಿದೆ, ಬೇರೆ ರಾಜ್ಯಗಳೂ ಅನುಕರಿಸುತ್ತಿವೆ. ಇಂತಹ ಒಬ್ಬ ಧೀರೋದ್ಧಾತ ನಾಯಕನನ್ನು ನನ್ನ ತಮ್ಮ ಹಾಗೂ ತಂಗಿ ತಮ್ಮ ಸ್ವಾರ್ಥಸಾಧನೆಗಾಗಿ, ಕೇವಲ ಒಂದು ಲೋಕಸಭಾ ಕ್ಷೇತ್ರಕ್ಕೆ ಅಂದರೆ ಶಿವಮೊಗ್ಗ ಕ್ಷೇತ್ರಕ್ಕೆ ಸೀಮಿತಗೊಳಿಸಿದ್ದು ಇವರ ಸಂಕುಚಿತ ಸ್ವಭಾವದಿಂದ. ಬಂಗಾರಪ್ಪನವರನ್ನು ಕೇವಲ ಪ್ರಚಾರ ಸಾಮಗ್ರಿಯನ್ನಾಗಿ ಬಳಸಿಕೊಂಡ ಇವರಿಗೆ ತಕ್ಕ ಶಾಸ್ತಿಯಾಯಿತು. ಈ ಮಹಾಪರಾಧಕ್ಕಾಗಿ ಜಿಲ್ಲೆಯ, ಕ್ಷೇತ್ರದ ಜನರ ಕ್ಷಮಾಪಣೆ ಕೇಳಿ ಹೋಗಿಬರಲಿ, ಟಾಟಾ!ʼʼ ಎಂದು ಸೋಲು ಕಂಡಿರುವ ತನ್ನ ಸಹೋದರಿ ಗೀತಾ ಶಿವರಾಜ್‌ಕುಮಾರ್‌ಗೆ ಹೇಳಿದ್ದಾರೆ.

Full View

ʻʻಕನ್ನಡದ ಕಣ್ಮಣಿ ಡಾ. ರಾಜಕುಮಾರ್ ರವರ ಹೆಸರನ್ನು ದುರುಪಯೋಗ ಪಡಿಸಿಕೊಂಡಿದ್ದಲ್ಲದೆ, ಅವರಿಗಿಲ್ಲದಿದ್ದ ಇಂಗಿತವನ್ನು ಇತ್ತೆoದು ಪ್ರಚುರಪಡಿಸಿ ಲಾಭ ಮಾಡಿಕೊಳ್ಳಬಯಸಿದ ಇವರಿಗೆ ಮಾಡಿದ್ದುಣ್ಣೋ ಮಹಾರಾಯ ಎಂಬಂಥ ಸ್ಥಿತಿಯಾಗಿದೆ. ಉತ್ತಮ ಉದ್ದೇಶ ಇವರದ್ದಾಗಿದ್ದರೆ, ಖಂಡಿತ ವಿಜಯಲಕ್ಷ್ಮಿ ಒಲಿಯುತ್ತಿದ್ದಳು. ಸ್ವಂತ ಸಹೋದರನ ಭವಿಷ್ಯಕ್ಕೆ ತೊಡರುಗಾಲು ಹಾಕಲೆಂದೇ ಬೆಂಗಳೂರಿನಿಂದ ಧಾವಿಸಿಬಂದು ತಿಳಿಯಾಗಿಸಬೇಕಿದ್ದ ವಾತಾವರಣವನ್ನು ಕಲುಷಿತಗೊಳಿಸಿ, ದಿಕ್ಕು ದೆಸೆ ಇಲ್ಲದಂತಾಗಿ ಹೋಗಿ ಗೂಡು ಸೇರಿಕೊಂಡಿದ್ದಾರೆ ಬೆಂಗಳೂರಿಗೆ, ಹಿಂತಿರುಗಿ ಬರುವುದು ಕನಸಿನ ಮಾತು. ಅವರ ಕ್ಷೇತ್ರ ಸಿನಿಮಾ. ಅದನ್ನು ನಿಭಾಯಿಸಿಕೊಂಡಿರುವುದು ಆರೋಗ್ಯಕರʼʼ ಎಂದು ತಮ್ಮ ಸಹೋದರಿ ಗೀತಾ ಅವರನ್ನು ಕುಟುಕಿದ್ದಾರೆ.

ʻʻಇನ್ನು ನನ್ನ ತಮ್ಮ ಮಧು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಇಲ್ಲವೇ ಮುಖ್ಯಮಂತ್ರಿಗಳು ಅವನನ್ನು ಸಂಪುಟದಿಂದ ವಜಾ ಮಾಡಬೇಕು. ಕನ್ನಡಕ್ಕೆ, ಕನ್ನಡನಾಡಿಗೆ ಅವಮಾನಪಡಿಸಿದಾತ, ಟ್ರೊಲ್ ಮಾಡಿದವರಿಗೆ, ಮಾಧ್ಯಮದವರಿಗೆ ಶಾಪ ಹಾಕಿ ತಾನೇ ಶಾಪಗ್ರಸ್ತನಾದ. ಅವನ ಬಾವ, ನನ್ನ ತಂಗಿಯ ಗಂಡ ಡಾ. ಶಿವರಾಜಕುಮಾರ್ ನಿರುದ್ಯೋಗಿಯಾಗಬೇಕಿಲ್ಲ, ನಮ್ಮೂರ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಿಕೊಳ್ಳಬಹುದುʼʼ ಎಂದು ವ್ಯಂಗ್ಯವಾಡಿದ್ದಾರೆ.

ʻʻನನ್ನ ತಂಗಿ ಸಿನಿಮಾ ಡಾನ್ ಆಗಿರುವುದರಿಂದ ಬೇಸರಕ್ಕೆ ಕಾರಣವಿಲ್ಲ. ದೊಡ್ಡಮನೆಯ ವ್ಯವಹಾರ ಸಾಕಷ್ಟಿರುತ್ತದೆ, ಬೇರೆಯವರಿಗೆ ಅವಕಾಶ ಸಿಗಲಾರದು. ಹೆದರಿಸುವ, ಬೆದರಿಸುವ, ಹುಷಾರ್ ಅನ್ನುವ ಮಾತುಗಳೇನಿದ್ದರೂ ಗಂಟಲೋಳಗೇ, ನಾಲ್ಕು ಗೋಡೆಗಳೊಳಗೆ, ತಮ್ಮ ಪಟಾಲಂ ಮುಂದೆ ಮಾತ್ರ ಚಾಲ್ತಿಯಲ್ಲಿರಬೇಕು. ದಿಕ್ಕು ಗೆಟ್ಟು ದಿಕ್ಕಾಪಾಲಾಗಿ ಹೋಗಿ ಬೆಂಗಳೂರು ಸೇರಿಕೊಂಡವರಿಗೆ ಕೊನೆಯ ಎಚ್ಚರಿಕೆ, ನೀವು ಹಿಂತಿರುಗಿ ಬರುವುದು ಕನಸಿನ ಮಾತು. ಜೈಹಿಂದ್, ಜೈ ಕರ್ನಾಟಕ!ʼʼ ಎಂದು ಶಿವರಾಜ್‌ಕುಮಾರ್‌ ದಂಪತಿ ವಿರುದ್ಧ ಕಿಡಿಕಾರಿದ್ದಾರೆ.

Tags:    

Similar News