CAFE BLAST CASE | ಬಾಂಬರ್ ಸೇರಿ ತೀರ್ಥಹಳ್ಳಿ ಮೂಲದ ಇಬ್ಬರ ಬಂಧನ
ಪ್ರಮುಖ ಬಾಂಬರ್ ಮುಸ್ಸಾವಿರ್ ಹುಸೇನ್ ಶಾಜಿಬ್ ಮತ್ತು ಸ್ಫೋಟದ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹಾನನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿದೆ.;
ಬೆಂಗಳೂರು: ಕಳೆದ ತಿಂಗಳು ಸಂಭವಿಸಿದ್ದ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಬಾಂಬ್ ಇಟ್ಟಿದ್ದ ಪ್ರಮುಖ ಉಗ್ರ ಸೇರಿದಂತೆ ಇಬ್ಬರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ( ಏ.12) ಬಂಧಿಸಿದೆ.
ಪ್ರಮುಖ ಬಾಂಬರ್ ಮುಸ್ಸಾವಿರ್ ಹುಸೇನ್ ಶಾಜಿಬ್ ಮತ್ತು ಸ್ಫೋಟದ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹಾನನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಿವಾಸಿಗಳಾದ ಶಾಜೇಬ್ ಮತ್ತು ತಾಹಾ ಅವರನ್ನು ಕಳೆದ ವಾರ ಪ್ರಮುಖ ಆರೋಪಿಗಳೆಂದು ಎನ್‌ಐಎ ಗುರುತಿಸಿತ್ತು ಮತ್ತು ಅವರನ್ನು ಬಂಧಿಸಲು ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶದ 18 ಸ್ಥಳಗಳಲ್ಲಿ ಶೋಧ ನಡೆಸಿತು. ಖಚಿತ ಮಾಹಿತಿ ಮತ್ತು ಗುಪ್ತಚರ ಇಲಾಖೆಗೆ ದೊರೆತ ಸುಳಿವಿನ ಆಧಾರದಲ್ಲಿ ಎನ್ಐಎ ತಂಡವು ತಿಂಗಳಿಂದ ತಲೆಮರೆಸಿಕೊಂಡಿದ್ದ ಭಯೋತ್ಪಾದಕರನ್ನು ಪಶ್ಚಿಮ ಬಂಗಾಳದಲ್ಲಿ ಪತ್ತೆ ಮಾಡಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಎನ್‌ಐಎ ತಿಳಿಸಿದೆ.
ಉಗ್ರರು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಗಡಿಯ ಪೂರ್ವ ಮಿಡ್ನಾಪುರ್‌ದ ಹೋಟೆಲ್ ಕಾಂತಿಯಲ್ಲಿ ನಕಲಿ ಗುರುತಿನ ಮೇಲೆ ಹೆಸರು ಬದಲಾಯಿಸಿಕೊಂಡು ತಲೆಮರೆಸಿಕೊಂಡಿದ್ದರು, ಕೇಂದ್ರ ಗುಪ್ತಚರ ಮಾಹಿತಿ ಮತ್ತು ಕರ್ನಾಟಕ, ಪಶ್ಚಿಮಬಂಗಾಳ, ತೆಲಂಗಾಣ ಮತ್ತು ಕೇರಳ ಪೊಲೀಸ್ ತಂಡಗಳ ಸಹಕಾರದಲ್ಲಿ ಶಂಕಿತರನ್ನು ಬಂಧಿಸಲಾಗಿದೆ ಎಂದು ಎನ್‌ಐಎ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಟ್ವೀಟ್ ಸಮರಕ್ಕೆ ಕಾರಣವಾದ ಬಂಧನ
ಇನ್ನು ರಾಮೇಶ್ವರಂ ಕೆಫೆ ಬಾಂಬ್ ಸ್ಟೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ವಿಮಬಂಗಾಳದಲ್ಲಿ ಶಂಕಿತರನ್ನು ಬಂಧಿಸಿರುವುದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪಶ್ಚಿಮಬಂಗಾಳ ಪೊಲೀಸರು ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಅಮಿತ್ ಮಾಳವಿಯಾ ನಡುವೆ ಈ ವಿಷಯ ಪರಸ್ಪರ ಕೆಸರೆರಚಾಟಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ಪೂರ್ವ ಮೇದಿನಿಪುರ ಜಿಲ್ಲೆಯ ಕಂಠಿಯಿಂದ ಇಬ್ಬರು ಶಂಕಿತರನ್ನು ಕರೆದೊಯ್ದ ಕೂಡಲೇ, ಮಾಳವಿಯಾ ತಮ್ಮ ಎಕ್ಸ್ ಖಾತೆಯಲ್ಲಿ, “ದುರಾದೃಷ್ಟವಶಾತ್, ಮಮತಾ ಬ್ಯಾನರ್ಜಿ ಅಡಿಯಲ್ಲಿ ಪಶ್ಚಿಮ ಬಂಗಾಳವು ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿದೆ” ಎಂದು ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ತಮ್ಮ ಪ್ರತಿಕ್ರಿಯಿಸಿರುವ ಪಶ್ವಿಮ ಬಂಗಾಳದ ಪೊಲೀಸರು ತಮ್ಮ ʼಎಕ್ಸ್ʼ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ʼʼಅಸತ್ಯವು ಅತ್ಯಂತ ಕೆಟ್ಟದಾಗಿದೆ! ವಾಸ್ತವ ಏನೆಂದರೆ, ಪಶ್ಚಿಮ ಬಂಗಾಳ ಪೊಲೀಸರು ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳ ಜಂಟಿ ಕಾರ್ಯಾಚರಣೆಯಲ್ಲಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಇಬ್ಬರು ಶಂಕಿತರನ್ನು ಪುರ್ಬಾ ಮೇದಿನಿಪುರದಿಂದ ಬಂಧಿಸಲಾಗಿದೆ. ಈ ವಿಷಯದಲ್ಲಿ ಪಶ್ವಿಮ ಬಂಗಾಳದ ಪೊಲೀಸರ ಪ್ರಮುಖ ಪಾತ್ರವನ್ನು ಕೇಂದ್ರೀಯ ಏಜೆನ್ಸಿಗಳು ಅಧಿಕೃತವಾಗಿ ಒಪ್ಪಿಕೊಂಡಿವೆ. ಪಶ್ಚಿಮ ಬಂಗಾಳವು ಎಂದಿಗೂ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿರಲಿಲ್ಲ ಮತ್ತು ರಾಜ್ಯ ಪೊಲೀಸರು ರಾಜ್ಯದ ಜನರನ್ನು ಸುರಕ್ಷಿತವಾಗಿರಿಸುವಲ್ಲಿ ಸದಾ ಜಾಗರೂಕತೆ ಹೊಂದಿದ್ದಾರೆ" ಎಂದು ತಿರುಗೇಟು ನೀಡಿದ್ದಾರೆ.
ಬಾಂಬರ್ನನ್ನು ಪತ್ತೆಹಚ್ಚಿದ್ದು ಹೇಗೆ?
ಬಾಂಬರ್ ಮುಸ್ಸಾವಿರ್ ಹುಸೇನ್ ಶಾಜಿಬ್ ಪತ್ತೆಗೆ ಆತ ಧರಿಸಿದ್ದ ಕ್ಯಾಪ್‌ನ ಸಹಾಯದಿಂದ ಕಾರ್ಯಾಚಣೆ ನಡೆಸಲಾಗಿತ್ತು. ಮತೀನ್ ತಾಹಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮುಸ್ಸಾವಿರ್ ಹುಸೇನ್ ಶಾಜಿಬ್ನದ್ದೇ ಕೃತ್ಯ ಎಂಬುದು ದೃಢಪಟ್ಟಿತ್ತು. ನಂತರ ಆತನ ಪತ್ತೆಗೆ ಬಲೆಬೀಸಲಾಗಿತ್ತು. ಶಂಕಿತ ಭಯೋತ್ಪಾದಕ ಕರ್ನಾಟಕ ಮೂಲದವನಾಗಿದ್ದು, ಮಲೆನಾಡು ಪ್ರದೇಶದಲ್ಲಿ ಉಗ್ರಗಾಮಿ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಇದೆ.
ಸದ್ಯ ವಶಕ್ಕೆ ಪಡೆಯಲಾಗಿರುವ ಇಬ್ಬರನ್ನು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ. ಪಶ್ಚಿಮ ಬಂಗಾಳದ ಪರಗಣ ಜಿಲ್ಲೆಯ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗೆ ವಶಕ್ಕೆ ನೀಡುವಂತೆ ಕೋರ್ಟ್ಗೆ ಮನವಿ ಮಾಡಲಿದೆ.
ಈಗಾಗಲೇ ಭಯೋತ್ಪಾದನೆ ಚಟುವಟಿಕೆಗಳ ಶಂಕೆಯ ಮೇಲೆ ಜೈಲಿನಲ್ಲಿರುವ ಶಂಕಿತ ಉಗ್ರ ಶಾರಿಕ್, ಮತೀನ್ ಮತ್ತು ಈಗ ವಶಕ್ಕೆ ಪಡೆಯಲಾಗಿರುವ ಮುಸ್ಸಾವಿರ್ ಹುಸೇನ್ ನಡುವೆ ಸಂಪರ್ಕ ಇರುವುದೂ ಬಹಿರಂಗಗೊಂಡಿತ್ತು. ಈಗಾಗಲೇ ವಿವಿಧ ಪ್ರಕರಣದಡಿ ಬಂಧನದಲ್ಲಿರುವ ಉಗ್ರಗಾಮಿಗಳನ್ನು ವಿಚಾರಣೆಗೆ ಒಳಪಡಿಸಿದ್ದೂ ಸಹ ಬಾಂಬರ್ನ ಪತ್ತೆಗೆ ನೆರವಾಗಿತ್ತು.
ಮಾರ್ಚ್ ಒಂದರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಟೋಟ ನಡೆದಿದ್ದು, ಐದಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಬಾಂಬ್ ಇಟ್ಟಿದ್ದ ವ್ಯಕ್ತಿಯ ಪತ್ತೆಗೆ ನಂತರ ಶೋಧ ಕಾರ್ಯ ತೀವ್ರಗೊಳಿಸಲಾಗಿತ್ತು. ಬಳಿಕ ತನಿಖೆಯ ಹೊಣೆಯನ್ನು ಎನ್ಐಎಗೆ ವಹಿಸಲಾಗಿತ್ತು.