Cafe Blast Case: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಮುಜಾಮೀಲ್ ಷರೀಫ್
ಮುಜಾಮೀಲ್ ಷರೀಫ್ ಕಾರ್ಯವೈಖರಿ ಕಂಡು ಐಸಿಸ್‌ನ ದಕ್ಷಿಣ ಭಾರತದ ಕಮಾಂಡೋಗಳು ಈತನನ್ನು ಸಂಪರ್ಕಿಸಿದ್ದರು ಎಂಬುದು ಆತನ ಬಳಿ ಜಪ್ತಿ ಮಾಡಿದ ಮೊಬೈಲ್‌ಗಳಲ್ಲಿ ಪತ್ತೆಯಾಗಿದೆ.;
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚಿಕ್ಕಮಗಳೂರಿನ ಮುಜಾಮೀಲ್ ಷರೀಫ್ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ. ರಾಜ್ಯದ ಇನ್ನೂ ಕೆಲವೆಡೆ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದನು ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿ ಮುಜಾಮೀಲ್ ಷರೀಫ್ ನಗರದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದನು. ಈತನಿಗೆ ಬೆಂಗಳೂರಿನ ಹಲವು ಪ್ರತಿಷ್ಠಿತ ಪ್ರದೇಶಗಳು, ಹೋಟೆಲ್ ಹಾಗೂ ಇತರೆ ಪ್ರಮುಖ ಸ್ಥಳಗಳ ಬಗ್ಗೆ ಹೆಚ್ಚು ಪರಿಚಯವಿತ್ತು. ಸದ್ಯ ತಲೆಮರೆಸಿಕೊಂಡಿರುವ ಶಂಕಿತ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮತೀನ್ ತಾಹಾ ಜತೆಗೂ ಚರ್ಚೆ ನಡೆಸುತ್ತಿದ್ದನು. ಈ ಸಂದರ್ಭದಲ್ಲಿ ಯಾವೆಲ್ಲ ಸ್ಥಳದಲ್ಲಿ ಬಾಂಬ್ ಇರಿಸಬಹುದೆಂದು ಪರಸ್ಪರ ಮಾತನಾಡಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಅಷ್ಟೇ ಅಲ್ಲದೇ ಮುಜಾಮೀಲ್ ಷರೀಫ್ ಕಾರ್ಯವೈಖರಿ ಕಂಡು ಐಸಿಸ್‌ನ ದಕ್ಷಿಣ ಭಾರತದ ಕಮಾಂಡೋಗಳು ಈತನನ್ನು ಸಂಪರ್ಕಿಸಿದ್ದರು ಎಂಬುದು ಆತನ ಬಳಿ ಜಪ್ತಿ ಮಾಡಿದ ಮೊಬೈಲ್‌ಗಳಲ್ಲಿ ಪತ್ತೆಯಾಗಿದೆ.
ಅಬ್ದುಲ್ ಮತೀನ್ ತಾಹಾ ಮತ್ತು ಮುಸಾವೀರ್ ಹುಸೇನ್ ಶಾಜೀಬ್ ಈ ಇಬ್ಬರು ಸುಧಾರಿತ ಸ್ಫೋಟಕ ಸಾಧನ ತಯಾರಿಸುವಲ್ಲಿ ಪರಿಣಿತರಾಗಿದ್ದಾರೆ. ಶಿವಮೊಗ್ಗ ಪ್ರಾಯೋಗಿಕ ಸ್ಫೋಟ ಮತ್ತು ರಾಮೇಶ್ವರಂ ಕೆಫೆ ಸ್ಫೋಟದ ಬಾಂಬ್‌ಗಳನ್ನು ಮುಜಾಮೀಲ್ ಷರೀಫ್ ಸಮ್ಮುಖದಲ್ಲೇ ಸಿದ್ಧಪಡಿಸಿದ್ದರು.
ಇನ್ನು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಬಾಂಬ್ ಅನ್ನು ಮುಜಾಮೀಲ್ ಷರೀಫ್ ಸಮ್ಮುಖದಲ್ಲಿ ಮೊಹಮ್ಮದ್ ಶಾರೀಕ್ ತಯಾರಿಸಿದ್ದ ಎಂಬುದು ಗೊತ್ತಾಗಿದೆ. ಏಕೆಂದರೆ, ಈ ಮೂರು ಸ್ಫೋಟದಲ್ಲಿ ಪತ್ತೆಯಾದ ಅವಶೇಷಗಳಿಗೆ ಪರಸ್ಪರ ಸಾಮ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.