CAFE BLAST CASE | ದಿನೇಶ್ ಗುಂಡೂರಾವ್ ಕ್ಷಮಾಪಣೆಗೆ ಆರ್. ಅಶೋಕ್ ಆಗ್ರಹ
ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಆರೋಪಿಗಳ ಬಂಧನವಾಗುತ್ತಿದ್ದಂತೆಯೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಕೆಸರೆರಚಾಟ ಶುರುವಾಗಿದೆ. ಆರ್. ಅಶೋಕ್ ಅವರು ಸಚಿವ ದಿನೇಶ್ ಗುಂಡೂರಾವ್ ಕ್ಷಮಾಪಣೆಗೆ ಆಗ್ರಹಿಸಿದ್ದಾರೆ.;
ʻಬೆಂಗಳೂರಿನ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತನ ತೇಜೋವಧೆ ಮಾಡಿರುವ ಸಚಿವ ದಿನೇಶ್ ಗುಂಡೂರಾವ್ ಕ್ಷಮೆ ಕೇಳಬೇಕುʼ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ʻರಾಮೇಶ್ವರಂ ಕೆಫೆ ಪ್ರಕರಣದಲ್ಲಿ ಬಾಂಬ್ ಇಟ್ಟಿದ್ದ ಕಾಂಗ್ರೆಸ್ ಪಕ್ಷದ ಬ್ರದರ್ಸ್ ಮುಸಾವೀರ್ ಶಾಜೀಬ್ ಹಾಗೂ ಸಂಚು ರೂಪಿಸಿದ್ದ ಅಬ್ದುಲ್ ಮಥೀನ್ ತಾಹಾ ಎಂಬವನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ. ತನಿಖೆಯಲ್ಲಿ ಸಾಕ್ಷಿಯಾಗಿದ್ದ ಬಿಜೆಪಿ ಕಾರ್ಯಕರ್ತನ ತೇಜೋವಧೆ ಮಾಡಲು ಹೊರಟಿದ್ದ ಸಚಿವ ದಿನೇಶ್ ಗುಂಡೂರಾವ್ ಅವರು ಆ ಅಮಾಯಕ ಯುವಕನ ಕ್ಷಮೆ ಕೇಳಬೇಕುʼ ಎಂದು ಆಗ್ರಹಿಸಿದ್ದಾರೆ.
ʻಜವಾಬ್ದಾರಿಯುತ ಮಂತ್ರಿ ಸ್ಥಾನದಲ್ಲಿರುವವರು ಸೂಕ್ಷ್ಮ ಹಾಗೂ ರಾಷ್ಟ್ರೀಯ ಸುರಕ್ಷತೆಯ ವಿಷಯದಲ್ಲೂ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಬೇಕುʼ ಎಂದು ಆಗ್ರಹಿಸಿದ್ದಾರೆ.