ಕಬ್ಬು ಬೆಲೆ ನಿಗದಿ: ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಸಾಧ್ಯತೆ
ಕಾರ್ಖಾನೆಗಳು ಹಿಂದಿನ ಬಾಕಿ ಹಣವನ್ನೂ ಕಟ್ಟಿಲ್ಲ. ನೆರೆಯ ಮಹಾರಾಷ್ಟ್ರದಲ್ಲಿ ಟನ್‌ಗೆ 300 ರಿಂದ 400 ರೂ. ಹೆಚ್ಚು ಸಿಗುತ್ತಿದ್ದು, ರಾಜ್ಯದ ಕಬ್ಬು ಅಲ್ಲಿಗೆ ರವಾನೆಯಾಗುತ್ತಿದೆ.
ಕಬ್ಬು ಬೆಳೆಗಾರರ ಬೇಡಿಕೆಯ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕಬ್ಬಿಗೆ ಬೆಲೆ ನಿಗದಿ ಬಗ್ಗೆ ತೀರ್ಮಾನ ಸಾಧ್ಯತೆಯಿದೆ. ಬೆಳಗಾವಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಗಳು ಸರ್ಕಾರದ ಮೇಲೆ ಒತ್ತಡ ಹೇರಿವೆ.
ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ದರ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ಧರಣಿ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಇಂದು ಸಂಜೆಯವರೆಗೆ ಗಡುವು ನೀಡಿರುವ ರೈತರು, ನಾಳೆಯಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನ ಸಭೆಯಲ್ಲಿ ಬೆಲೆ ನಿಗದಿ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ನಿನ್ನೆ ಸಚಿವ ಎಚ್.ಕೆ. ಪಾಟೀಲ್ ನಡೆಸಿದ ಸಂಧಾನ ವಿಫಲವಾಗಿದೆ. ಸಂಧಾನಕ್ಕೆ ಬಂದ ಸಚಿವ ಪಾಟೀಲ್, ಸಿಎಂ ಸಿದ್ದರಾಮಯ್ಯ ಅವರ ಬಳಿ ರೈತರ ನಿಯೋಗ ಕರೆದುಕೊಂಡು ಬನ್ನಿ ಎಂದು ಮನವಿ ಮಾಡಿದ್ದರು. ಆದರೆ, ರೈತರು 'ನಾವು ಬರೋದಿಲ್ಲ, ನೀವೇ 3,500 ರೂ. ಬೆಲೆ ನಿಗದಿ ಮಾಡಿ. ಗುರುವಾರ ಸಂಜೆ 7 ಗಂಟೆಯೊಳಗೆ ನಿರ್ಧಾರ ಮಾಡಿ' ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಸಂಧಾನ ವಿಫಲಗೊಂಡು ಸಚಿವ ಪಾಟೀಲ್ ವಾಪಸ್ ಆಗಿದ್ದರು.
ಹೋರಾಟದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರು, ಇಂದು 8ನೇ ದಿನಕ್ಕೆ ಕಾಲಿಟ್ಟಿದ್ದಾರೆ. ಗುರ್ಲಾಪುರ ಮಾತ್ರವಲ್ಲ, ಅಥಣಿ, ರಾಯಬಾಗ, ಬೆಳಗಾವಿ ಸೇರಿದಂತೆ ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಹೋರಾಟ ನಡೆಯುತ್ತಿದೆ. ವಿಜಯಪುರ, ಬಾಗಲಕೋಟೆಯಲ್ಲೂ ರಸ್ತೆ ತಡೆಯಾಗಿ ಉಗ್ರ ಪ್ರತಿಭಟನೆ ನಡೆದಿದೆ.
ಕಬ್ಬು ಬೆಲೆ ನಿಗದಿ ಕಗ್ಗಂಟು ಯಾಕೆ?
ಕಬ್ಬು ಬೆಲೆ ನಿಗದಿ ಕಗ್ಗಂಟು ಆಗಿರುವುದಕ್ಕೆ ಮುಖ್ಯ ಕಾರಣ ಸಕ್ಕರೆ ಕಾರ್ಖಾನೆಗಳ ದ್ವಂದ್ವ ನೀತಿ. ಕೇಂದ್ರ ಸರ್ಕಾರವು ಶೇ. 10.25 ಇಳುವರಿ ಇರುವ ಕಬ್ಬಿಗೆ ಟನ್‌ಗೆ 3,550 ರೂ. ಎಫ್‌ಆರ್‌ಪಿ (ನ್ಯಾಯಸಮ್ಮತ ದರ) ನಿಗದಿ ಮಾಡಿದೆ. ಆದರೂ ಕಾರ್ಖಾನೆಗಳು 2,700ರಿಂದ 3,200 ರೂ.ರವರೆಗೆ ಮಾತ್ರ ನೀಡುತ್ತಿವೆ. ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚವನ್ನು 800ರಿಂದ 900 ರೂ. ಕಡಿತ ಮಾಡಿ ದರವನ್ನು ಕಡಿಮೆ ಮಾಡುತ್ತಿವೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ.
ಇದಲ್ಲದೆ, ಕಾರ್ಖಾನೆಗಳು ಹಿಂದಿನ ಬಾಕಿ ಹಣವನ್ನೂ ಕಟ್ಟಿಲ್ಲ. ನೆರೆಯ ಮಹಾರಾಷ್ಟ್ರದಲ್ಲಿ ಟನ್‌ಗೆ 300 ರಿಂದ 400 ರೂ. ಹೆಚ್ಚು ಸಿಗುತ್ತಿದ್ದು, ರಾಜ್ಯದ ಕಬ್ಬು ಅಲ್ಲಿಗೆ ರವಾನೆಯಾಗುತ್ತಿದೆ. ಅಂದಾಜು 10 ಲಕ್ಷ ಟನ್ ಕಬ್ಬು ಮಹಾರಾಷ್ಟ್ರಕ್ಕೆ ಹೋಗಿದೆ. ರಾಜ್ಯ ಸರ್ಕಾರದ ಎಫ್‌ಆರ್‌ಪಿ ಪರಿಷ್ಕರಣೆ ಅಧಿಕಾರವಿಲ್ಲದಿದ್ದು, ಕೇಂದ್ರದ ಮೇಲೆ ಆಧಾರಪಡಿಸಿರುವುದು ಕಗ್ಗಂಟು ಹೆಚ್ಚಿಸಿದೆ.