ಕ್ಯಾಬಿನೆಟ್ ತೀರ್ಮಾನ | ಕೋವಿಡ್ ಹಗರಣ ತನಿಖೆ, ಕಲಬುರಗಿಯಲ್ಲಿ ಸಂಪುಟ ಸಭೆ
ಕೋವಿಡ್ ಹಗರಣದ ಕುರಿತ ಆಯೋಗದ ವರದಿ ಅಧ್ಯಯನ ಮಾಡಲು ಸಮಿತಿ ರಚನೆ, ಕಲಬುರಗಿಯಲ್ಲಿ ಮುಂದಿನ ಸಚಿವ ಸಂಪುಟ ಸಭೆ ನಡೆಸುವುದು, ಮಹದಾಯಿ ಯೋಜನೆಗೆ ಅನುಮತಿ ಕೋರಿ ಪ್ರಧಾನಿ ಮೋದಿ ಬಳಿಗೆ ನಿಯೋಗ ತೆರಳುವುದು ಸೇರಿದಂತೆ ಗುರುವಾರದ ಸಚಿವ ಸಂಪುಟ ಸಭೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.;
ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಕೋವಿಡ್ ಹಗರಣದ ಕುರಿತ ಆಯೋಗದ ವರದಿಯನ್ನು ಅಧ್ಯಯನ ಮಾಡಲು ಸಮಿತಿ ರಚನೆ, ಮುಂದಿನ ಸಚಿವ ಸಂಪುಟ ಸಭೆಯನ್ನು ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ನಡೆಸುವುದು, ಮಹದಾಯಿ ಯೋಜನೆಗೆ ಅನುಮತಿ ನಿರಾಕರಿಸಿರುವ ಕೇಂದ್ರ ವನ್ಯಜೀವಿ ಮಂಡಳಿಯ ನಿಲುವನ್ನು ಪ್ರಶ್ನಿಸಿ ಪ್ರಧಾನಿ ಮೋದಿ ಬಳಿಗೆ ನಿಯೋಗ ತೆರಳುವುದು ಸೇರಿದಂತೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಕೋವಿಡ್ ಹಗರಣದ ಕುರಿತು ವಿಚಾರಣೆಗಾಗಿ ಕಾಂಗ್ರೆಸ್ ಸರ್ಕಾರ ಕಳೆದ ವರ್ಷ ನೇಮಕ ಮಾಡಿದ್ದ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ನೇತೃತ್ವದ ಆಯೋಗ, ಕಳೆದ ವಾರ ತನ್ನ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ ಹಿನ್ನೆಲೆಯಲ್ಲಿ ಮಧ್ಯಂತರ ವರದಿಯ ಅಧ್ಯಯನಕ್ಕೆ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ರಚಿಸಲಾಗಿದೆ.
ಸಮಿತಿ ಒಂದು ತಿಂಗಳ ಒಳಗೆ ಮುಖ್ಯಮಂತ್ರಿಗೆ ವರದಿ ಸಲ್ಲಿಸಲಿದೆ. ಈ ನಡುವೆ ವಿಚಾರಣಾ ಆಯೋಗದ ಅವಧಿಯನ್ನು ಇನ್ನೂ ಆರು ತಿಂಗಳು ಮುಂದುವರಿಸಲು ಕೂಡ ಸಚಿವ ಸಂಪುಟ ಸಭೆ ಅನುಮೋದಿಸಿತು ಎಂದು ಸಂಪುಟ ತೀರ್ಮಾನಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಾನೂನು ಸಚಿವ ಎಚ್ ಕೆ ಪಾಟೀಲ ತಿಳಿಸಿದರು. ಸಚಿವ ಸಂಪುಟ ಸಭೆಯಲ್ಲಿ ಕೋವಿಡ್ ಅಕ್ರಮದ ವಿಷಯವನ್ನು ಹೆಚ್ಚುವರಿ ವಿಷಯವಾಗಿ ಸೇರಿಸಿ ಚರ್ಚಿಸಲಾಗಿದೆ ಎಂದೂ ಅವರು ಹೇಳಿದರು.
ಕುನ್ಹಾ ಸಮಿತಿ ವರದಿ
ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಸಮಿತಿ ವರದಿಯಲ್ಲಿ ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 'ಕೋಟಿ ರೂಪಾಯಿಗಳ' ಅಕ್ರಮಗಳನ್ನು ಉಲ್ಲೇಖಿಸಿದೆ . ಐದರಿಂದ ಆರು ಸಂಪುಟಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಲಾಗಿದೆ. ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಬಗ್ಗೆ ನ್ಯಾಯಮೂರ್ತಿ ಡಿ’ಕುನ್ಹಾ ಪ್ರಸ್ತಾಪಿಸಿದ್ದಾರೆ. ಕಾಣೆಯಾದ ಫೈಲ್‌ಗಳ ಉಲ್ಲೇಖವೂ ಇದೆ. ವರದಿಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವರದಿ ಮತ್ತು ಹಲವು ವಿವರಗಳನ್ನು ಗಣನೆಗೆ ತೆಗೆದುಕೊಂಡಿದೆ. ವಿವರಗಳನ್ನು ವಿಶ್ಲೇಷಿಸಿದ ನಂತರ, ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಇತರ ಮಾಹಿತಿಯನ್ನು ಬಹಿರಂಗಪಡಿಸಲಾಗುತ್ತದೆ. ಮುಖ್ಯ ಕಾರ್ಯದರ್ಶಿ ಮತ್ತು ಸಿಎಂ ಪ್ರಧಾನ ಕಾರ್ಯದರ್ಶಿ ಮತ್ತು ಇತರ ಕೆಲವು ಅಧಿಕಾರಿಗಳಿಗೆ ಇದನ್ನು ವಹಿಸಲಾಗಿದೆ. ಒಂದು ತಿಂಗಳೊಳಗೆ ಅವರು ವರದಿ ಸಲ್ಲಿಸುತ್ತಾರೆ ಎಂದು ಅವರು ತಿಳಿಸಿದರು.ಪ್ರಾಥಮಿಕ ತನಿಖಾ ವರದಿಯನ್ನು ವಿಶ್ಲೇಷಿಸಿ ಒಂದು ತಿಂಗಳಲ್ಲಿ ವರದಿ ಸಲ್ಲಿಸಲು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯ ಕಾರ್ಯದರ್ಶಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಇತರ ಕೆಲವು ಅಧಿಕಾರಿಗಳನ್ನೊಳಗೊಂಡ ಅಧಿಕಾರಿಗಳ ತಂಡ ನಿಯೋಜಿಸಲಾಗಿದೆ ಎಂದು ಅವರು ಪಾಟೀಲ್ ತಿಳಿಸಿದರು
ಮುಂದಿನ ಸಚಿವ ಸಂಪುಟ ಸಭೆ ಕಲಬುರಗಿಯಲ್ಲಿ
ಕಲ್ಯಾಣ ಕರ್ನಾಟಕ ಭಾಗದ ವಿಷಯಗಳ ಕುರಿತು ಚರ್ಚಿಸಲು ಮುಂದಿನ ಸಚಿವ ಸಂಪುಟ ಸಭೆಯನ್ನು ಕಲಬುರಗಿಯಲ್ಲಿ ನಡೆಸಲು ಕೂಡ ಸಚಿವ ಸಂಪುಟ ತೀರ್ಮಾನಿಸಿದೆ.
ಕಲಬುರಗಿಯಲ್ಲಿ ನಡೆಯುವ ಈ ಸಚಿವ ಸಂಪುಟ ಸಭೆ, ವಿಶೇಷ ಸಂಪುಟ ಸಭೆಯಾಗಿರಲಿದ್ದು, ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಉದ್ದೇಶದಿಂದ ಸಿಎಂ ಅವರಿಗೆ ಕಲಬುರಗಿ ಯಲ್ಲಿ ಸಚಿವ ಸಂಪುಟ ಸಭೆ ನಡೆಸಲು ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಆ ಭಾಗದ ಸಚಿವರು, ಶಾಸಕರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಹಾಗೂ ಸಚಿವರು ಸಭೆ ನಡೆಸಲು ಒಪ್ಪಿಗೆ ಸೂಚಿಸಿದ್ದು ಸಭೆಯ ದಿನಾಂಕ ಸದ್ಯದಲ್ಲೇ ನಿಗದಿಪಡಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಮಹದಾಯಿ ಯೋಜನೆ: ಪ್ರಧಾನಿ ಬಳಿ ನಿಯೋಗ
ಇನ್ನು ಮಹದಾಯಿ ಯೋಜನೆಗೆ ವನ್ಯಜೀವಿ ಮಂಡಳಿ ಅನುಮತಿ ನಿರಾಕರಿಸಿರುವ ಹಿನ್ನಲೆಯಲ್ಲಿ ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ಕೂಡ ಸಚಿವ ಸಂಪುಟ ತೀರ್ಮಾನಿಸಲಾಯಿತು.
‘ಗೋವಾದ ವಿದ್ಯುತ್ ಯೋಜನೆಗೆ ಕರ್ನಾಟಕದ 435 ಎಕರೆ ಅರಣ್ಯ ಭೂಮಿ ಬಳಕೆಯಾಗುವ ಯೋಜನೆಗೆ ವನ್ಯಜೀವಿ ಮಂಡಳಿ ಅನುಮತಿ ಕೊಟ್ಟಿದೆ. ಆದರೆ, ನಮ್ಮ ರಾಜ್ಯದ ಮಹದಾಯಿ ಯೋಜನೆಗೆ ಅನುಮತಿ ಕೊಟ್ಟಿಲ್ಲ. ಇದರಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಆ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಸಲಹೆಯಂತೆ ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ಸಂಪುಟ ತೀರ್ಮಾನಿಸಿದೆ ಎಂದು ಎಚ್ ಕೆ ಪಾಟೀಲ್ ಹೇಳಿದರು.
ಸಂಪುಟದ ಇತರೆ ತೀರ್ಮಾನಗಳು
ಅಷ್ಟೇ ಅಲ್ಲದೆ, ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಇನ್ನೂ ಕೆಲವು ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.
- ರಾಜ್ಯದ ಒಳಾಡಳಿತ ಇಲಾಖೆ ಸನ್ನಡತೆ ಆಧಾರದ ಮೇಲೆ 59 ಜನ ಕೈದಿಗಳನ್ನು ಅವಧಿಗೆ ಮುನ್ನ ಬಿಡುಗಡೆಗೆ ನಿರ್ಧಾರ.
- ಕಾರ್ಮಿಕ ಇಲಾಖೆಯ ಬಳಕೆದಾರರಿಂದ ಸಂಗ್ರಹಿಸುವ, ದಂಡವನ್ನು ಶೇ.30 ರಷ್ಟು ಹೆಚ್ಚಳಕ್ಕೆ ನಿರ್ಧಾರ.
- ವೈದ್ಯಕೀಯ ಶಿಕ್ಷಣ ಇಲಾಖೆ, ಕಿಮ್ಸ್ ಆಸ್ಪತ್ರೆಗೆ ಸಲಕರಣೆ ಖರೀದಿಗೆ 75 ಕೋಟಿ ಅನುದಾನ ನೀಡಲು ಅನುಮೋದನೆ.
- ಕಲಬುರಗಿಯ ಮಕ್ಕಳ ಆಸ್ಪತ್ರೆಯನ್ನ ಇಂದಿರಾಗಾಂಧಿ ಆಸ್ಪತ್ರೆ ಸಹಯೋಗದಲ್ಲಿ 150 ಹಾಸಿಗೆ ಆಸ್ಪತ್ರೆ ಸ್ಥಾಪನೆಗೆ 221 ಕೋಟಿ ಬಿಡುಗಡೆಗೆ ಅನುಮೋದನೆ.
- ಅನ್ನಭಾಗ್ಯ ಯೋಜನೆ ಅಡಿ 5k.g ಅಕ್ಕಿಯ ಹಣವನ್ನು ನೀಡುವ ಯೋಜನೆ ಮುಂದುವರೆಸಲು ನಿರ್ಧಾರ(ವ್ಯಕ್ತಿಗೆ 170 ರೂ ಹಣವನ್ನು ನೀಡಲಿರುವ ಸರ್ಕಾರ).
- ಬೆಂಗಳೂರು ನೆಪ್ರೋ- ಯುರಾಲಜಿ ಆಸ್ಪತ್ರೆಯ ಹೊರ ರೋಗಿಗಗಳ ವಿಭಾಗಗಕ್ಕೆ ನೂತನ ಕಟ್ಟಡಕ್ಕೆ 16.15 ಕೋಟಿಗೆ ಅನುಮೋದನೆ.
- ಕಂದಾಯ ಇಲಾಖೆಯ ಸಹಾಯಕ ಉಪನೋಂದಣ ಅಧಿಕಾರಿ ವರ್ಗಾವಣೆ ಅವಧಿಯನ್ನು 30-09-24ರ ವರೆಗೂ ವಿಸ್ತರಣೆಗೆ ಅನುಮೋದನೆ.
- ಸ್ವಸಹಾಯ ಗುಂಪಿನ ಮಹಿಳೆಯರಿಗೆ ಹೊಸ ಉದ್ಯೋಗ ಅವಕಾಶ ಒಂದು ಲಕ್ಷ ಮಹಿಳೆಯರಿಗೆ 2500 ಕಾಫಿ ಕಿಯೋಸ್ಕ್ಗಳನ್ನ ಒದಗಿಸಲು ಕ್ರಮ 25 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ.
- ರಾಜ್ಯದ 32 ಸ್ಥಳಗಳಲ್ಲಿ ಸ್ವಯಂ ಚಾಲಿತ ನೂತನ ವಾಹನ ಪಿಟ್ನಸ್ ಕೇಂದ್ರಗಳ ಸ್ಥಾಪನೆಗೆ ಅನುಮೋದನೆ.
- ಉಡುಪಿಯ ಕಾರ್ಕಳದಲ್ಲಿ ಪಿಪಿಪಿ ಮಾದರಿಯಲ್ಲಿ ಟೆಕ್ಸ್ಟೈಲ್ಸ್ ಪಾರ್ಕ್ ಮಾಡಲು ಅನುಮೋದನೆ.
- ಸ್ಥಳೀಯ ಉದ್ಯೋಗಿಗಳಿಗೆ ನಿಪುಣ ಕರ್ನಾಟಕ ಉಪಕ್ರಮ ಹೆಸರಲ್ಲಿ 100 ಕೋಟಿ ವೆಚ್ಚದಲ್ಲಿ ಕೌಶಲ್ಯ ಟ್ರೈನಿಂಗ್ ನೀಡಲು ಅನುಮೋದನೆ.
- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳ ನೀಡಲು ಅನುಮೋದನೆ.