ತಲೆಹಿಡುಕ ರಾಜಕಾರಣ ನನ್ನದಲ್ಲ; ಯತ್ನಾಳ್‌ಗೆ ಬಿ.ವೈ.ವಿಜಯೇಂದ್ರ ತಿರುಗೇಟು
ಕೆಲ ತಲೆ ಹಿಡುಕರು ಸ್ವಂತ ಕೆಲಸಗಳಿಗಾಗಿ ಲೆಟರ್ ಹೆಡ್ ಹಿಡಿದುಕೊಂಡು ಸಿಎಂ ಬಳಿಗೆ ಹೋಗುತ್ತಾರೆ. ಆದರೆ, ನಾನಂತೂ ಆ ಕೆಲಸ ಮಾಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಶಾಸಕ ಯತ್ನಾಳ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.;
ನನ್ನ ರಾಜಕೀಯ ಜೀವನದಲ್ಲಿ ಎಂದಿಗೂ ತಲೆಹಿಡುಕ ರಾಜಕಾರಣ ಮಾಡಿಲ್ಲ, ಮಾಡುವ ಅಗತ್ಯವೂ ಇಲ್ಲ. ಅಧ್ಯಕ್ಷನಾಗಿ ಪಕ್ಷವನ್ನು ಹೇಗೆ ಮುನ್ನಡೆಸಬೇಕೆಂಬ ಸ್ಪಷ್ಟತೆ ನನಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಸೋಮವಾರ ಶಿಕಾರಿಪುರದ ಮುಖಂಡರೊಂದಿಗೆ ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ನಾನೆಂದೂ ಸಿಎಂ ಮನೆಗೆ ಲೆಟರ್ ಹೆಡ್ ಹಿಡಿದುಕೊಂಡು ಹೋಗಿಲ್ಲ ಎಂಬ ಶಾಸಕ ಬಸನಗೌಡ ಪಾಟೀಲ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದ ಅವರು, ನಾನು ಶಿಕಾರಿಪುರ ಕ್ಷೇತ್ರದ ಶಾಸಕ. ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಜವಾಬ್ದಾರಿ. ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಲೋಕೋಪಯೋಗಿ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಕೆಲ ತಲೆ ಹಿಡುಕರು ಸ್ವಂತ ಕೆಲಸಗಳಿಗಾಗಿ ಲೆಟರ್ ಹೆಡ್ ಹಿಡಿದುಕೊಂಡು ಸಿಎಂ ಬಳಿಗೆ ಹೋಗುತ್ತಾರೆ. ಆದರೆ, ನಾನಂತೂ ಆ ಕೆಲಸ ಮಾಡಿಲ್ಲ ಎಂದು ಹೇಳಿದರು.
ಶಿಕಾರಿಪುರದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ 57ರ ಶಿವಮೊಗ್ಗ- ಶಿಕಾರಿಪುರ -ಹಾನಗಲ್ -ತಡಸ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿರುವ ಕುಟ್ರಳ್ಳಿ ಸುಂಕ ವಸೂಲಾತಿ ಕೇಂದ್ರದಿಂದ ರೈತರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಶೀಘ್ರ ಟೋಲ್ ಸ್ಥಳಾಂತರಿಸುವಂತೆ ಸಚಿವರಿಗೆ ಮನವಿ ಮಾಡಿದ್ದೇವೆ. ಇದಕ್ಕೆ ಸಚಿವರು ಕೂಡ ಸದ್ಯದಲ್ಲೇ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಪರಿಹರಿಸುವುದಾಗಿ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭ್ರಷ್ಟಚಾರದಲ್ಲಿ ಮುಳುಗಿದೆ. ಅಭಿವೃದ್ಧಿ ಕುಂಠಿತವಾಗಿವೆ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಮುಡಾ ಹಗರಣದಲ್ಲಿ ಪಾರದರ್ಶಕ ತನಿಖೆ ನಡೆಯಬೇಕಾದರೆ ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ವಿರೋಧಾಭಿಪ್ರಾಯಕ್ಕೆ ಮನ್ನಣೆ ಕೊಡಿ
ಜಾತಿವಾರು ಜನಗಣತಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾಯಯುತವಾಗಿ ನಡೆದುಕೊಳ್ಳಬೇಕು, ವರದಿ ಸಂಪೂರ್ಣ ಅವೈಜ್ಞಾನಿಕ ಎಂದು ಸಾಕಷ್ಟು ಸಮುದಾಯಗಳ ನಾಯಕರು ವಿರೋಧಿಸಿದ್ದಾರೆ. ಮುಡಾ ಹಗರಣದಲ್ಲಿ ಸಿಎಂ ಅವರ ಕುರ್ಚಿ ಅಲುಗಾಡಲು ಆರಂಭವಾದ ನಂತರ ಜಾತಿ ಗಣತಿ ವರದಿ ಜಾರಿಯ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಕುಟುಕಿದರು.
ವರದಿ ಜಾರಿಯಿಂದ ಹಿಂದುಳಿದ ವರ್ಗಗಳು ಹಾಗೂ ಶೋಷಿತರಿಗೆ ನ್ಯಾಯ ಒದಗಿಸಿದಂತಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಇತರೆ ಸಮುದಾಯಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಸಿದ್ದರಾಮಯ್ಯ ಅವರು ಇಡೀ ರಾಜ್ಯಕ್ಕೇ ಮುಖ್ಯಮಂತ್ರಿ ಹೊರತು ಸಮುದಾಯಕ್ಕಲ್ಲ ಎಂಬುದನ್ನು ಮರೆಯಬಾರದು. ಕಾಂಗ್ರೆಸ್ ಸರ್ಕಾರಕ್ಕೆ ಪ್ರಾಮಾಣಿಕತೆ, ಬದ್ಧತೆ ಇದ್ದಿದ್ದರೆ ಜಾತಿಗಣತಿ ವರದಿ ಕೈಸೇರಿದ ದಿನವೇ ಅನುಷ್ಠಾನ ಮಾಡಬಹುದಿತ್ತು. ಬರೀ ಚುನಾವಣೆ ಮಾತ್ರ ಬಳಸಿಕೊಳ್ಳುವ ಅವರ ತಂತ್ರಗಾರಿಕೆ ಎಲ್ಲರಿಗೂ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಜಾತಿಗಣತಿ ಕುರಿತು ಒಕ್ಕಲಿಗರ ಸಂಘದ ಅಧ್ಯಕ್ಷ ಬಾಲಕೃಷ್ಣ, ಡಿ.ಕೆ.ಶಿವಕುಮಾರ್, ಶಾಮನೂರು ಶಿವಶಂಕರಪ್ಪ, ವೀರಶೈವ ಮಹಾಸಭಾದವರು ಏನು ಹೇಳಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಜಾತಿಗಣತಿ ವಿಚಾರದಲ್ಲಿ ರಾಜಕೀಯ ಹೊರತಾಗಿ ನಡೆದುಕೊಳ್ಳಬೇಕು. ವಿರೋಧ ವ್ಯಕ್ತಪಡಿಸುತ್ತಿರುವವರ ಮಾತಿಗೂ ಮನ್ನಣೆ ನೀಡಬೇಕು ಎಂದು ಹೇಳಿದರು.