Karnataka By-Election | ಬಹಿರಂಗ ಪ್ರಚಾರ ಅಂತ್ಯ; ಮೂರೂ ಕ್ಷೇತ್ರಗಳಲ್ಲಿ ಅಭ್ಯರ್ಥಿ ಗೆಲುವಿಗಾಗಿ ನಡೆದಿದೆ ಕಸರತ್ತು
ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾವಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಸೋಮವಾರ ಸಂಜೆಯಿಂದ ಮನೆ ಮನೆ ಪ್ರಚಾರ ನಡೆಯಲಿದೆ. ನ. 13 ರಂದು ನಡೆಯುವ ಚುನಾವಣೆಯಲ್ಲಿ ಮತದಾರರ ಭವಿಷ್ಯ ಮತಯಂತ್ರ ಸೇರಲಿದೆ.
ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರ ಸೋಮವಾರ (ನ.11) ಸಂಜೆ 6ಕ್ಕೆ ಅಂತ್ಯವಾಗಲಿದೆ. ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷದ ನಾಯಕರು ಪ್ರತಿಷ್ಠೆಯನ್ನೇ ಪಣಕ್ಕಿಟ್ಟು ಮತದಾರರ ಮನವೊಲಿಕೆಗೆ ಕಸರತ್ತು ನಡೆಸಿದ್ದಾರೆ. ಸೋಮವಾರ ಸಂಜೆಯಿಂದ ಮನೆ ಮನೆ ಪ್ರಚಾರ ನಡೆಯಲಿದೆ. ನ. 13 ರಂದು ನಡೆಯುವ ಚುನಾವಣೆಯಲ್ಲಿ ಮತದಾರರ ಭವಿಷ್ಯ ಮತಯಂತ್ರ ಸೇರಲಿದೆ.
ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯು ಡಿ.ಕೆ. ಸಹೋದರರು ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ. ಹಳೆ ಮೈಸೂರು ಭಾಗದ ಒಕ್ಕಲಿಗರ ಪ್ರಾಬಲ್ಯವಿರುವ ಚನ್ನಪಟ್ಟಣದ ಮೇಲೆ ಹಿಡಿತ ಸಾಧಿಸಲು ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳು ಪಣತೊಟ್ಟಿವೆ. ಜೆಡಿಎಸ್- ಬಿಜೆಪಿ ನಾಯಕರು ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಮತಬೇಟೆ ನಡೆಸಿದ್ದು, ಗೆಲುವಿನ ವಿಶ್ವಾಸದಲ್ಲಿದ್ದಾರೆ. ಆದರೆ, ಎದುರಾಳಿ ಪಕ್ಷದ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪ್ರಬಲ ಸ್ಪರ್ಧಿಯಾಗಿರುವುದು ಮೈತ್ರಿ ಪಕ್ಷದ ನಾಯಕರಲ್ಲಿ ಕೊಂಚ ಆತಂಕ ಮೂಡಿಸಿದೆ.
ಸಿ.ಪಿ. ಯೋಗೇಶ್ವರ್ ಅವರಿಗೆ ಪಕ್ಷದಿಂದ ಟಿಕೆಟ್ ಕೊಡಿಸಲು ಸ್ಥಳೀಯ ಬಿಜೆಪಿ ನಾಯಕರು ಸಾಕಷ್ಟು ಲಾಬಿ ನಡೆಸಿದ್ದರು. ಪ್ರತ್ಯೇಕ ಸಭೆ ನಡೆಸಿ ರಾಜ್ಯ ನಾಯಕತ್ವದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಪಕ್ಷಕ್ಕಿಂತ ವ್ಯಕ್ತಿಯೇ ಮುಖ್ಯ ಎಂಬ ಮಾತುಗಳನ್ನಾಡಿದ್ದರು. ಸ್ಥಳೀಯ ಬಿಜೆಪಿ ನಾಯಕರ ಜೊತೆಗಿನ ಸಿ.ಪಿ. ಯೋಗೇಶ್ವರ್ ಅವರ ನಂಟು ಎನ್‌ಡಿಎ ಅಭ್ಯರ್ಥಿಗೆ ಒಳ ಏಟು ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.
ಆದರೆ, ಇದ್ಯಾವುದಕ್ಕೂ ತಲೆ ಕೊಡಿಸಿಕೊಳ್ಳದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ, ನಿಖಿಲ್ ಪತ್ನಿ ರೇವತಿ ಸೇರಿದಂತೆ ವಿವಿಧ ತಾಲೂಕು ಮಟ್ಟದ ಮುಖಂಡರು ಕೂಡ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಜೆಪಿ ನಾಯಕರು ಕೂಡ ಇದಕ್ಕೆ ಸಾಥ್ ನೀಡಿದ್ದಾರೆ.
ಮೈತ್ರಿ ಅಬ್ಬರಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ನಾಯಕರು ಕೂಡ ತನ್ನ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪರ ಅಬ್ಬರದ ಪ್ರಚಾರ ನಡೆಸಿದ್ದಾರೆ. ಕ್ಷೇತ್ರದಲ್ಲಿ ಈ ಹಿಂದಿನಿಂದಲೂ ಸಾಂಪ್ರದಾಯಿಕ ಎದುರಾಳಿಗಳಂತಿದ್ದ ಸಿ.ಪಿ. ಯೋಗೇಶ್ವರ್ ಹಾಗೂ ಡಿ.ಕೆ. ಶಿವಕುಮಾರ್ ಅವರು ಈಗ ಜಂಟಿಯಾಗಿದ್ದು, ʼಶತ್ರುವಿನ ಶತ್ರು ಮಿತ್ರʼ ಎಂಬಂತೆ ಎಚ್‌ಡಿಕೆಗೆ ತಿರುಗೇಟು ನೀಡಲು ಕಾತರಿಸುತ್ತಿದ್ದಾರೆ.
ರಾಮನಗರದಂತೆ ಚನ್ನಪಟ್ಟಣ ಕ್ಷೇತ್ರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಡಿಕೆ ಸಹೋದರರು ತಮ್ಮದೇ ರಣತಂತ್ರ ಹೆಣೆದು, ಅಭ್ಯರ್ಥಿ ಗೆಲುವಿಗಾಗಿ ಕಾರ್ಯ ಪ್ರವೃತ್ತರಾಗಿದ್ದಾರೆ.
ಸಂಡೂರು ಉಪ ಚುನಾವಣೆ
ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಫೋಟಿ ಇದೆ. ಕಾಂಗ್ರೆಸ್ ಸಂಸದ ಇ.ತುಕಾರಾಂ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಪತ್ನಿ ಅನ್ನಪೂರ್ಣ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು, ಕ್ಷೇತ್ರ ಮರು ವಶಪಡಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಆದರೆ, ವಾಲ್ಮೀಕಿ ಹಗರಣದ ಹಣವನ್ನು ಲೋಕಸಭೆ ಚುನಾವಣೆಗೆ ಖರ್ಚು ಮಾಡಿದ ಆರೋಪ ಇ.ತುಕಾರಾಂ ಅವರಿಗೆ ಕೊಂಚ ಹಿನ್ನಡೆ ಉಂಟು ಮಾಡಲಿದೆ ಎನ್ನಲಾಗಿದೆ.
ಬಿಜೆಪಿ ನಾಯಕರು ಇದೇ ವಿಚಾರ ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿರುವುದು ಭೀತಿಗೆ ಕಾರಣವಾಗಿದೆ. ಇನ್ನು ಗಣಿಧಣಿ ಜನಾರ್ಧನರೆಡ್ಡಿ ಅವರಿಗೆ ಈ ಉಪಚುನಾವಣೆ ನಿರ್ಣಾಯಕದಂತಿದೆ. ಬಳ್ಳಾರಿಯಲ್ಲಿ ತಮ್ಮ ಗತವೈಭವ ಮರಳಿ ಪಡೆಯಲು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರನ್ನು ಗೆಲ್ಲಿಸಿಕೊಂಡು ಬರಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ವಿಪರ್ಯಾಸವೆಂದರೆ, ಕಾಂಗ್ರೆಸ್ ನಾಯಕರು ಜನಾರ್ಧನ ರೆಡ್ಡಿ ವಿರುದ್ಧದ ಗಣಿ ಹಗರಣವನ್ನೇ ಪ್ರಚಾರದ ದಾಳವಾಗಿ ಬಳಸಿ, ಬಿಜೆಪಿಗೆ ಸೋಲಿನ ರುಚಿ ತೋರಿಸಲು ಸನ್ನದ್ಧರಾಗಿದ್ದಾರೆ.
ಶಿಗ್ಗಾವಿಯಲ್ಲಿ ಬೊಮ್ಮಾಯಿ ಪ್ರತಿಷ್ಠೆ
ಶಿಗ್ಗಾವಿ ಕ್ಷೇತ್ರದಿಂದ ಅನಾಯಾಸ ಗೆಲುವು ಸಾಧಿಸಲು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಕ್ಫ್ ವಿವಾದ ಹಾಗೂ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟು ಮತದಾರರನ್ನು ತಲುಪುತ್ತಿದ್ದಾರೆ. ಕಳೆದ ಮೂರ್ನಾಲ್ಕು ಅವಧಿಯಿಂದ ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯೇ ಗೆಲುವು ಸಾಧಿಸುತ್ತಿರುವುದು ಗೆಲುವಿನ ವಿಶ್ವಾಸ ಹೆಚ್ಚಿಸಿದೆ. ಹಾಗಾಗಿ ತಮ್ಮ ಪುತ್ರ ಭರತ್ ಬೊಮ್ಮಾಯಿ ಗೆಲುವಿನ ವಿಶ್ವಾಸ ಬಿಜೆಪಿ ಪಾಳಯದಲ್ಲಿದೆ.
ಆದರೆ, ಕಳೆದ ಚುನಾವಣೆಯಲ್ಲಿ ಮತ ಪ್ರಾಬಲ್ಯ ಹೆಚ್ಚಿಸಿಕೊಂಡಿರುವ ಕಾಂಗ್ರೆಸ್, ಈ ಬಾರಿ ಶತಾಯಗತಾಯ ಕ್ಷೇತ್ರ ಬಿಟ್ಟುಕೊಡದಿರಲು ನಿರ್ಧರಿಸಿ ಪ್ರಚಾರ ನಡೆಸಿದೆ. ಬೊಮ್ಮಾಯಿ ಅವರ ಕುಟುಂಬ ರಾಜಕಾರಣ, ಗ್ಯಾರೆಂಟಿ ಯೋಜನೆಗಳನ್ನೇ ಅಸ್ತ್ರವಾಗಿ ಬಳಸಿ ಮತದಾರರನ್ನು ತಲುಪುತ್ತಿದೆ. ಆರಂಭದಲ್ಲಿ ಅಭ್ಯರ್ಥಿ ಆಯ್ಕೆ ಗೊಂದಲ ಹಾಗೂ ಬಂಡಾಯ ಕಂಡುಬಂದರೂ ಜಮೀರ್ ಅಹಮದ್ ಮೂಲಕ ಅದನ್ನು ತಣ್ಣಗಾಗಿಸಿ, ನಾಸಿರ್ ಪಠಾಣ್ ಗೆಲುವಿಗೆ ಒಗ್ಗಟ್ಟಿನ ಮಂತ್ರ ಜಪಿಸಿದೆ. ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಅವರನ್ನು ಮನವೊಲಿಸಿ ಪ್ರಚಾರ ನಡೆಸಿರುವುದು ವರವಾಗಿ ಪರಿಣಮಿಸಬಹುದು ಎನ್ನಲಾಗಿದೆ. ಕ್ಷೇತ್ರದಲ್ಲಿ ಪ್ರತಿ ಬಾರಿ ಕೆಲಸ ಮಾಡುತ್ತಿದ್ದ ಜಾತಿ ಪ್ರಾಬಲ್ಯವನ್ನು ಮೀರಿ ಚುನಾವಣೆ ಗೆಲ್ಲುವ ವಿಶ್ವಾಸ ಕಾಂಗ್ರೆಸ್ ನಾಯಕರಲ್ಲಿದೆ. ಒಟ್ಟಾನೆ ನ.೧೩ ರಂದು ನಡೆಯುವ ಮತದಾನದಲ್ಲಿ ಕಾಂಗ್ರೆಸ್-ಮೈತ್ರಿ ಪಕ್ಷಗಳ ಬಲಾಬಲ ದಾಖಲಾಗಲಿದ್ದು, ನ. ೨೦ ರಂದು ಅಭ್ಯರ್ಥಿಗಳ ಭವಿಷ್ಯ ಬಯಲಾಗಲಿದೆ.
ಸೋಮವಾರ ಸಂಜೆ ೫.೩೦ ರೊಳಗೆ ಹೊರಗಿನವರು ಕ್ಷೇತ್ರ ಬಿಟ್ಟು ಹೋಗುವಂತೆ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾಧಿಕಾರಿ ಆದೇಶಿಸಿದ್ದಾರೆ.
ಭರ್ಜರಿ ಸಮಾವೇಶ ಆಯೋಜನೆ
ಕೊನೆದಿನ ಬಹಿರಂಗ ಪ್ರಚಾರದ ಹಿನ್ನೆಲೆಯಲ್ಲಿ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರಿನಲ್ಲಿ ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳು ಬೃಹತ್ ಸಮಾವೇಶ ಆಯೋಜಿಸಿ ಮತಬೇಟೆ ನಡೆಸಿದವು. ಶಿಗ್ಗಾವಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿ,ಎಸ್., ಯಡಿಯೂರಪ್ಪ ಸೇರಿದಂತೆ ಘಟಾನುಘಟಿ ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಚನ್ನಪಟ್ಟಣದಲ್ಲಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬೃಹತ್ ಸಮಾವೇಶ ನಡೆಸಿದರು. ಸಂಡೂರಿನಲ್ಲಿ ಕಾಂಗ್ರೆಸ್ ಸಚಿವರು ಹಾಗೂ ಬಿಜೆಪಿ ನಾಯಕರು ಪ್ರತ್ಯೇಕ ಪ್ರಚಾರ ಸಭೆಯಗಳಲ್ಲಿ ಭಾಗವಹಿಸಿದರು.
ಬಹಿರಂಗ ಸಭೆ ಅಂತ್ಯವಾಗುವ ಹಿನ್ನೆಲೆಯಲ್ಲಿ ಹೊರಗಿನವರು ಕ್ಷೇತ್ರ ಬಿಟ್ಟು ಹೋಗುವಂತೆ ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.