ಉಪ ಚುನಾವಣೆ ಸೋಲು | ಕಾರ್ಯಕರ್ತರಿಗೆ ಪತ್ರ ಬರೆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ಉಪ ಚುನಾವಣೆ ಸೋಲಿನಿಂದ ಕಾರ್ಯಕರ್ತರು ಎದೆಗುಂದಬೇಕಿಲ್ಲ, ಇಂದಿನ ಸೋಲೇ ಮುಂದಿರುವ ಸವಾಲುಗಳನ್ನು ಎಚ್ಚರಿಸುವ ಸಂಕೇತ ಎಂದು ಭಾವಿಸೋಣ ಎಂದು ಬಿ.ವೈ. ವಿಜಯೇಂದ್ರ ಕಾರ್ಯಕರ್ತರಿಗೆ ಪತ್ರ ಬರೆದಿದ್ದಾರೆ.;

Update: 2024-11-26 10:31 GMT

ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಸೋಲಿನ ಹತಾಶೆಯಲ್ಲಿರುವ ಬಿಜೆಪಿ ಕಾರ್ಯಕರ್ತರಿಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬಹಿರಂಗ ಪತ್ರ ಬರೆದಿದ್ದಾರೆ.

ಉಪ ಚುನಾವಣೆ ಸೋಲಿನಿಂದ ಕಾರ್ಯಕರ್ತರು ಎದೆಗುಂದಬೇಕಿಲ್ಲ, ಇಂದಿನ ಸೋಲೇ ಮುಂದಿರುವ ಸವಾಲುಗಳನ್ನು ಎಚ್ಚರಿಸುವ ಸಂಕೇತ ಎಂದು ಭಾವಿಸೋಣ, ಮುನ್ನಡೆಯೋಣ. ಫಲಿತಾಂಶಗಳು ಪಕ್ಷ ಸಂಘಟನೆಯ ಸಾಮರ್ಥ್ಯ ಹಾಗೂ ಪ್ರಭಾವವನ್ನು ಬಿಂಬಿಸುವ ಅಳತೆಗೋಲು ಅಲ್ಲ. ಸ್ಥಳೀಯ ಸಮಸ್ಯೆಗಳು ಹಾಗೂ ಸರ್ಕಾರದ ಪ್ರಭಾವವನ್ನು ಆಧರಿಸಿರುತ್ತವೆ. ಕಾಂಗ್ರೆಸ್ ಸರ್ಕಾರ ಆಡಳಿತ ದುರುಪಯೋಗ ಮಾಡಿಕೊಂಡು ದುರ್ಮಾರ್ಗದಲ್ಲಿ ಜಯ ಸಾಧಿಸಿದೆ. ಕಾಂಗ್ರೆಸ್ಸಿಗೆ ಇದು ಹೊಸತಲ್ಲ. ಬಿಜೆಪಿಯ ಸೋಲನ್ನು ನಾವ್ಯಾರು ಹಿನ್ನಡೆ ಎಂದು ಪರಿಗಣಿಸುವ ಅಗತ್ಯವಿಲ್ಲ ಎಂದು ವಿಜಯೇಂದ್ರ ಪತ್ರದಲ್ಲಿ ಹೇಳಿದ್ದಾರೆ.

ಬಿಜೆಪಿ ಅಧಿಕಾರದ ಬೆನ್ನುಹತ್ತಿ ರಾಜಕಾರಣ ಮಾಡಲು ಜನ್ಮ ತಳೆದಿಲ್ಲ. ಉದಾತ್ತ ಉದ್ದೇಶ ಹಾಗೂ ಗುರಿ ಇಟ್ಟುಕೊಂಡು ಯೋಜಿತವಾಗಿ ಬೆಳೆದು, ದೇಶ ಕಟ್ಟುವ ಬದ್ಧತೆಗಾಗಿ ಸಜ್ಜುಗೊಂಡ ಪಕ್ಷವಾಗಿದೆ. ಕಾರ್ಯಕರ್ತರಾಗಿ ನಾವೆಲ್ಲರೂ ಹೆಮ್ಮೆ ಪಡಬೇಕು. ಕಳೆದ ಒಂದೂವರೆ ವರ್ಷದಿಂದ ಅಧಿಕಾರದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನ ವಿರೋಧಿ ಹಾಗೂ ಅಭಿವೃದ್ಧಿ ಶೂನ್ಯ ಆಡಳಿತ ನಡೆಸುತ್ತಿದೆ. ಹತ್ತು ಹಲವು ಹಗರಣಗಳಲ್ಲಿ ಭಾಗಿಯಾಗಿ ರಾಜ್ಯದ ಗೌರವ ಹಾಗೂ ಘನತೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಮಣ್ಣುಪಾಲು ಮಾಡಿದೆ ಎಂದು ಕಿಡಿಕಾರಿದ್ದಾರೆ.

ಹಣ ಬಲ, ಅಧಿಕಾರ ಬಲದ ಜೊತೆಗೆ ಚುನಾವಣೆಯ ಹಿಂದಿನ ದಿನ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಮತದಾರರ ಖಾತೆಗೆ ಹಾಕಿದ್ದು ದುರ್ಮಾರ್ಗ ಬಳಸಿರುವುದಕ್ಕೆ ಸಾಕ್ಷಿ. ಇದೇ ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಏಕೆ ಧೂಳೀಪಟವಾಯಿತು ಎಂಬ ಬಗ್ಗೆ ಮುಖ್ಯಮಂತ್ರಿಗಳು ಉತ್ತರಿಸಬೇಕು. ತಮ್ಮ ಭ್ರಷ್ಟತೆಯ ಕರಾಳ ಮುಖ ಒರೆಸಿಕೊಳ್ಳಲು ಉಪ ಫಲಿತಾಂಶ ಯಾವುದೇ ಕಾರಣಕ್ಕೂ ವಸ್ತ್ರವೂ ಆಗುವುದಿಲ್ಲ, ಅಸ್ತ್ರವೂ ಆಗುವುದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿಯಲ್ಲಿ ಅಭಿಪ್ರಾಯ ಭೇದಗಳಿಗೆ ಮುಕ್ತ ಅವಕಾಶ ಇದೆ. ಪ್ರತಿ ಕಾರ್ಯಕರ್ತರು, ಮುಖಂಡರು, ಹಿರಿಯರೊಂದಿಗೆ ವಿಶ್ವಾಸ ಹಾಗೂ ಪ್ರೀತಿ ಗಳಿಸಿಕೊಂಡು ಪಕ್ಷ ಸಂಘಟಿಸಬೇಕೆಂಬ ಹಂಬಲ ನನ್ನದು ಎಂದಿದ್ದಾರೆ.

ಕಾಂಗ್ರೆಸ್ಸಿಗರು ಉಪ ಚುನಾವಣೆ ಗೆಲುವಿಗಾಗಿ ತಮ್ಮ ಬೆನ್ನು ತಟ್ಟಿಕೊಂಡು ಸಂಭ್ರಮಿಸಬೇಕಾಗಿಲ್ಲ, ಅವರ ಮುಂದೆ ದೊಡ್ಡ ಜವಾಬ್ದಾರಿಯಿದೆ. ಒಂದೇ ಒಂದು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿಲ್ಲ. ಗ್ಯಾರಂಟಿ ಯೋಜನೆಗಳನ್ನು ನಿರ್ವಹಿಸಲಾಗದ ಸ್ಥಿತಿಯಲ್ಲಿ ಸರ್ಕಾರ ಇದೆ. ಹೀಗಿರುವಾಗ ಮೂರು ಉಪಚುನಾವಣೆಯ ಫಲಿತಾಂಶ ತಮ್ಮ ಸಾಧನೆ ಎಂದು ಬೀಗುತ್ತಿರುವ ಕಾಂಗ್ರೆಸ್ ನಾಯಕರಿಗೆ ಗೆಲುವನ್ನು ಸಂಭ್ರಮಿಸಲು ನೈತಿಕತೆ ಇದೆಯಾ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಹಾರಾಷ್ಟ್ರದ ಐತಿಹಾಸಿಕ ಮಹಾ ವಿಜಯವನ್ನು ನಾವು ಪ್ರೇರಣೆಯಾಗಿ ಸ್ವೀಕರಿಸಿ, ಭವಿಷ್ಯದ ದಿನಗಳಲ್ಲಿ ಒಂದು ದಿನವೂ ವ್ಯಯ ಮಾಡದೇ ರಾಜ್ಯದಲ್ಲಿ ಮತ್ತೆ ಭಾರತೀಯ ಜನತಾ ಪಾರ್ಟಿಯ ಸರ್ಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಂಕಲ್ಪ ತೊಡಬೇಕು. ಮಿತ್ರ ಪಕ್ಷ ಜೆಡಿಎಸ್ ಜತೆಗೆ ಸಹಕಾರದ ಹೆಜ್ಜೆಗಳನ್ನು ಇಡಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.

Tags:    

Similar News