ಟಾರ್ಪಾಲ್ ವಿಚಾರಕ್ಕೆ ಜಗಳ: ಸಾರಕ್ಕಿ ಮಾರುಕಟ್ಟೆಯಲ್ಲಿ ಕಾರ್ಮಿಕನ ಬರ್ಬರ ಕೊಲೆ

ಜಗಳ ತಾರಕಕ್ಕೇರಿದಾಗ, ಆರೋಪಿಯು ನಿರ್ಮಾಣ ಹಂತದ ಕಟ್ಟಡದಲ್ಲಿದ್ದ ದೊಣ್ಣೆಯೊಂದನ್ನು ತೆಗೆದುಕೊಂಡು ಬಂದಿದ್ದಾನೆ. ಚಿಕ್ಕಣ್ಣ ಅವರ ತಲೆ ಹಾಗೂ ದೇಹದ ಇತರ ಭಾಗಗಳ ಮೇಲೆ ಮನಬಂದಂತೆ ಹಲ್ಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ.;

Update: 2025-08-16 04:33 GMT

ಸಾಂದರ್ಭಿಕ ಚಿತ್ರ

ಟಾರ್ಪಾಲ್​ನ ಒಂದು ಸಣ್ಣ ವಿಚಾರಕ್ಕೆ ಆರಂಭವಾದ ಗಲಾಟೆ ಬರ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜೆ.ಪಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಾರಕ್ಕಿ ಮಾರುಕಟ್ಟೆಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ರಾಮನಗರ ತಾಲ್ಲೂಕಿನ ನಿವಾಸಿ, 60 ವರ್ಷ ವಯಸ್ಸಿನ ಚಿಕ್ಕಣ್ಣ ಕೊಲೆಯಾದ ದುರ್ದೈವಿ.

ಚಿಕ್ಕಣ್ಣ ಅವರು ಬನಶಂಕರಿಯ ಸಾರಕ್ಕಿ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು, ಅಲ್ಲೇ ಎಲ್ಲೆಂದರಲ್ಲಿ ಮಲಗುತ್ತಿದ್ದರು. ಗುರುವಾರ ರಾತ್ರಿ ಮಳೆ ಬಂದ ಕಾರಣ, ಅವರು ಮಾರುಕಟ್ಟೆ ಸಮೀಪದಲ್ಲಿರುವ ನಿರ್ಮಾಣ ಹಂತದ ಕಟ್ಟಡವೊಂದಕ್ಕೆ ಹೋಗಿದ್ದರು. ಅಲ್ಲಿ ದೊರೆತ ಟಾರ್ಪಾಲ್ ಒಂದನ್ನು ತೆಗೆದುಕೊಂಡು ಹಾಸಿಕೊಂಡು ಮಲಗಿದ್ದರು.

ಶುಕ್ರವಾರ ಮುಂಜಾನೆ, ಚಿಂದಿ ಆಯುವ ವ್ಯಕ್ತಿಯೊಬ್ಬ ಸ್ಥಳಕ್ಕೆ ಬಂದಿದ್ದಾನೆ. ಚಿಕ್ಕಣ್ಣ ಮಲಗಿದ್ದ ಟಾರ್ಪಾಲ್ ತನ್ನದೆಂದು ಹೇಳಿ, "ನಾನು ಹಾಸಿಕೊಂಡು ಮಲಗುವ ಟಾರ್ಪಾಲ್ ಅನ್ನು ನೀನು ಏಕೆ ತೆಗೆದುಕೊಂಡು ಮಲಗಿದ್ದೀಯ?" ಎಂದು ಪ್ರಶ್ನಿಸಿ ಜಗಳ ತೆಗೆದಿದ್ದಾನೆ. ಆರಂಭದಲ್ಲಿ ಮಾಮೂಲಿ ಜಗಳದಂತೆ ಕಾಣಿಸಿದ್ದು, ಕೆಲವೇ ಕ್ಷಣಗಳಲ್ಲಿ ವಿಕೋಪಕ್ಕೆ ತಿರುಗಿದೆ.

ದೊಣ್ಣೆಯಿಂದ ಹೊಡೆದು ಪರಾರಿ

ಜಗಳ ತಾರಕಕ್ಕೇರಿದಾಗ, ಆರೋಪಿಯು ನಿರ್ಮಾಣ ಹಂತದ ಕಟ್ಟಡದಲ್ಲಿದ್ದ ದೊಣ್ಣೆಯೊಂದನ್ನು ತೆಗೆದುಕೊಂಡು ಬಂದಿದ್ದಾನೆ. ಚಿಕ್ಕಣ್ಣ ಅವರ ತಲೆ ಹಾಗೂ ದೇಹದ ಇತರ ಭಾಗಗಳ ಮೇಲೆ ಮನಬಂದಂತೆ ಹಲ್ಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಚಿಕ್ಕಣ್ಣ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜೆ.ಪಿ. ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೊಲೆ ಮಾಡಿ ಪರಾರಿಯಾದ ಆರೋಪಿಯನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ. ಟಾರ್ಪಾಲ್ ವಿಚಾರಕ್ಕೆ ಒಬ್ಬ ಅಮಾಯಕ ಕಾರ್ಮಿಕನ ಜೀವ ಕಳೆದುಕೊಂಡಿರುವುದು ಸಾರಕ್ಕಿ ಮಾರುಕಟ್ಟೆ ಪ್ರದೇಶದಲ್ಲಿ ಆತಂಕ ಮತ್ತು ದುಃಖದ ವಾತಾವರಣ ಮೂಡಿಸಿದೆ.

Tags:    

Similar News