Booker Award 2025| ವೈವಿಧ್ಯತೆಗೆ ಸಂದ ಗೆಲುವು; ಬಾನು ಮುಷ್ತಾಕ್‌ ಬಣ್ಣನೆ

ಹಸೀನಾ ಮತ್ತು ಕತೆಗಳ ಭಾಷಾಂತರ ಕೃತಿಯಾಗಿರುವ ಹಾರ್ಟ್‌ಲ್ಯಾಂಡ್‌ನಲ್ಲಿ ಯಾವ ಕಥೆಯೂ ಸಣ್ಣದಲ್ಲ, ಅನುಭವದ ವಸ್ತ್ರದಲ್ಲಿನ ಪ್ರತಿ ಎಳೆಯೂ ಇಡೀ ಕಥೆಯ ತೂಕವನ್ನು ಹೆಚ್ಚಿಸಿವೆ ಎಂಬ ನಂಬಿಕೆಯಿಂದಲೇ ಈ ಪುಸ್ತಕ ರೂಪುಗೊಂಡಿದೆ ಎಂದು ಬಾನು ಮುಷ್ತಾಕ್‌ ಹೇಳಿದ್ದಾರೆ.;

Update: 2025-05-21 06:45 GMT

'ಸಾವಿರ ಮಿಂಚು ಹುಳುಗಳು ಒಮ್ಮೆಲೆ ಬಾನಂಗಳದಲ್ಲಿ ಬೆಳಗಿದಂತೆ ಈ ಕ್ಷಣ ಭಾಸವಾಗುತ್ತಿದೆ. ಬೂಕರ್ ಪ್ರಶಸ್ತಿಯ ಗೌರವವು ನನ್ನೊಬ್ಬಳಿಗೆ ಸಂದ ಶ್ರೇಯಸ್ಸು ಎಂದು ಭಾವಿಸಲಾರೆ. ವಿಶ್ವದ ನನ್ನೆಲ್ಲ ಸನ್ಮಿತ್ರ ಲೇಖಕರು, ಅನುವಾದಕರನ್ನು ಒಳಗೊಂಡವರ ಒಗ್ಗಟ್ಟಿಗೆ ಸಂದ ಗೌರವವಾಗಿದೆ.ʼ 

-ಇದು 2025 ನೇ ಸಾಲಿನ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಖ್ಯಾತ ಲೇಖಕಿ ಬಾನು ಮುಷ್ತಾಕ್ ಅವರ ಮನದಾಳದ ನುಡಿಗಳು.

ಲಂಡನ್‌ನ ಟೇಟ್ ಮಾಡರ್ನ್ ಗ್ಯಾಲರಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂತಸ ಹಂಚಿಕೊಂಡ ಅವರು, "ನನ್ನ ಕಥೆಗಳು ಮಹಿಳೆಯರ ಕುರಿತದ್ದಾಗಿದೆ. ಧರ್ಮ, ಸಮಾಜ ಹಾಗೂ ರಾಜಕೀಯ ಕ್ಷೇತ್ರವು ಮಹಿಳೆಯರಿಂದ ಪ್ರಶ್ನಾತೀತ ವಿಧೇಯತೆ ಬಯಸುತ್ತಿದೆ. ಮಹಿಳೆಯರನ್ನು ತಮ್ಮ ಆಣತಿಯಲ್ಲಿ ಇಟ್ಟುಕೊಳ್ಳುವಾಗ ಅವರ ಮೇಲೆ ಅಮಾನವೀಯ ಕ್ರೌರ್ಯ ಹೇರಿ ಅಧೀರರನ್ನಾಗಿ ಮಾಡುತ್ತಿದೆ ಎಂಬುದನ್ನು ಅಕ್ಷರರೂಪದಲ್ಲಿ ತೋರಿಸಲಾಗಿದೆ. ಈ ಗೆಲುವು ವೈವಿಧ್ಯತೆಗೆ ದೊರೆತ ಜಯ ಎಂದು ಬಣ್ಣಿಸಿದ್ದಾರೆ.

ಹಸೀನಾ ಮತ್ತು ಕತೆಗಳ ಭಾಷಾಂತರ ಕೃತಿಯಾಗಿರುವ ಹಾರ್ಟ್‌ಲ್ಯಾಂಡ್‌ನಲ್ಲಿ ಯಾವ ಕಥೆಯೂ ಸಣ್ಣದಲ್ಲ, ಅನುಭವದ ವಸ್ತ್ರದಲ್ಲಿನ ಪ್ರತಿ ಎಳೆಯೂ ಇಡೀ ಕಥೆಯ ತೂಕವನ್ನು ಹೆಚ್ಚಿಸಿವೆ ಎಂಬ ನಂಬಿಕೆಯಿಂದಲೇ ಈ ಪುಸ್ತಕ ರೂಪುಗೊಂಡಿದೆ. ಹಳ್ಳಿಯಲ್ಲಿನ ಆಲದ ಮರದ ಕೆಳಗಿನ ಕಥೆಗಳೇ ಕಥಾ ವಸ್ತುಗಳಾಗಿವೆ ಎಂದು ಹೇಳಿದ್ದಾರೆ.

ನನ್ನ ಕೃತಿಯನ್ನು ಬೂಕರ್ ಪ್ರಶಸ್ತಿಗೆ ಆಯ್ಕೆ ಮಾಡಿದ ಆಯ್ಕೆ ಸಮಿತಿ, ಕೃತಿಯನ್ನು ಅನುವಾದದ ಮೂಲಕ ಪದಗಳ ಸೇತುವೆ ನಿರ್ಮಾಣ ಮಾಡಿದ ದೀಪಾ ಭಾಸ್ತಿ, ನಮಗೆ ಬೆನ್ನುಲುಬಾಗಿ ನಿಂತ ತಾರಾ ಹಾಗೂ ಸ್ಟೀಫನ್ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

ಅನುವಾದಕಿ ದೀಪಾ ಭಾಸ್ತಿ ಮಾತನಾಡಿ, ನನ್ನ ಸುಂದರವಾದ ಭಾಷೆಗೆ ದೊರೆತ ಸೊಗಸಾದ ಗೆಲುವು ಇದು' ಎಂದು ಹರ್ಷ ವ್ಯಕ್ತಪಡಿಸಿದರು. ಈ ವೇದಿಕೆಯನ್ನು ನನ್ನ ಜೀವನದಲ್ಲಿ ಮರೆಯಲ್ಲ. ಇದು ವಿಶ್ವದ ಕಥೆ. ಮಹಿಳೆಯರ ಜೀವನ ಹಾಗೂ ಪ್ರೀತಿಗೆ ಸಂಬಂಧಿಸಿದ ಕಥೆ. ಲೇಖಕರ ಜೊತೆಗೆ ಅನುವಾದಕರನ್ನೂ ಗುರುತಿಸಿರುವುದು ನನ್ನ ಸೌಭಾಗ್ಯ ಎಂದು ಹೇಳಿದರು.

Full View

ಕನ್ನಡ ಸಾಹಿತ್ಯದ ಸೊಗಸನ್ನು ʼಜೇನಿನ ಮಳೆಯೊ, ಹಾಲಿನ ಹೊಳೆಯ, ಸುಧೆಯೋ ಕನ್ನಡ ಸವಿನುಡಿಯೋʼ ಎಂಬ ಕನ್ನಡ ಹಾಡಿನ ಸಾಲು ಉಲ್ಲೇಖಿಸಿ ಬಣ್ಣಿಸಿದರು. ಕನ್ನಡ ಅತ್ಯಂತ ಹಳೆಯ ಭಾಷೆ. ಲೇಖಕರು, ಓದುಗರು ಹಾಗೂ ಅನುವಾದಕರಿಂದ ಪ್ರಶಂಸೆಗೆ ಒಳಗಾದ ಭಾಷೆ ಎಂದ ಅವರು, ದಕ್ಷಿಣ ಏಷ್ಯಾ ಒಳಗೊಂಡಿರುವ ಹಲವು ಜಾದೂಗಾರ ಭಾಷೆಗಳಲ್ಲಿ ಕನ್ನಡವೂ ಒಂದು ಎಂದು ತಿಳಿಸಿದರು.

ಬಾನು ಮುಷ್ತಾಕ್ ಅವರ ʼಹಸೀನಾ ಮತ್ತು ಕತೆಗಳುʼ ಕೃತಿಯು 1990 ಮತ್ತು 2023ರ ನಡುವೆ ಪ್ರಕಟಗೊಂಡಿದ್ದು, 12 ಕತೆಗಳನ್ನು ಒಳಗೊಂಡಿದೆ. ಈ ಕಥಾ ಸಂಕಲನವನ್ನು ದೀಪಾ ಭಸ್ತಿ ಅವರು ಕನ್ನಡದಿಂದ ಇಂಗ್ಲಿಷ್ಗೆ ಅನುವಾದಿಸಿದ್ದಾರೆ. ಇದು ಮುಸ್ಲಿಂ ಸಮುದಾಯದ ಬಾಲಕಿಯರು ಹಾಗೂ ಹೆಣ್ಣುಮಕ್ಕಳ ದೈನಂದಿನ ಬದುಕಿನ ಕುರಿತ ಕಥಾವಸ್ತು ಒಳಗೊಂಡಿದೆ.

Tags:    

Similar News