ʻನೆನಪಿನ ಪುಟಗಳುʼ: ಬಹುಮುಖಿ ʻಟಿಎನ್ನೆಸ್‌ʼ ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು

ಖ್ಯಾತ ಲೇಖಕಿ ಅಮೃತಾ ಪ್ರೀತಂ ತಾವು ತಮ್ಮ ಆತ್ಮಕಥೆಯನ್ನು ಬರೆಯಲು ಇಚ್ಛಿಸುವುದಾಗಿ ಇನ್ನೊಬ್ಬ ಲೇಖಕನ ಬಳಿ ಹೇಳಿದರಂತೆ. ಆದರೆ ಆ ಲೇಖಕ (ಖುಷ್ವಂತ್‌ ಸಿಂಗ್‌ ಎಂದು ನೆನಪು) “ನಿನ್ನ ಬದುಕಿನಲ್ಲಿ ಬರೆಯಲೇ ಬೇಕಾದಂಥದ್ದು ಏನಿದೆ. ಅದನ್ನು ರಸೀದಿ ಟಿಕೆಟ್‌ ಹಿಂದೆ ಬರೆದು ಮುಗಿಸಬಹುದು” ಎಂದರಂತೆ.

Update: 2024-07-21 00:50 GMT

ಇತ್ತೀಚಿನ ದಿನಗಳಲ್ಲಿ ಓದುಗರನ್ನು ತನ್ನತ್ತ ಸೆಳೆದುಕೊಳ್ಳುತ್ತಿರುವ ಸಾಹಿತ್ಯ ಪ್ರಕಾರವೆಂದರೆ ʻಆತ್ಮಕಥೆʼ. ಕನ್ನಡದ ಸಾಹಿತ್ಯ ಪರಂಪರೆಗೆ ಆತ್ಮಕಥೆ ಪ್ರಕಾರ ಹೊಸದೇನಲ್ಲ. ಆಗ ಹಿರಿಯ ಲೇಖಕರು, ಪ್ರಸಿದ್ಧರು, ತಮ್ಮ ಆತ್ಮಕಥೆಯನ್ನು ಬರೆಯುತ್ತಿದ್ದರು. ಶಿವರಾಮ ಕಾರಂತ, ಮಾಸ್ತಿ ಎಂದೇ ಖ್ಯಾತರಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಕುವೆಂಪು, ಯು ಆರ್‌ ಅನಂತಮೂರ್ತಿ, ಗಿರೀಶ ಕಾರ್ನಾಡ, ಲಂಕೇಶ್‌…. ಮುಂತಾದವರು ತಮ್ಮ ಹುಟ್ಟಿನಿಂದ ಒಂದು ಹಂತದವರೆಗೆ ನಡೆದುಬಂದ ದಾರಿಯನ್ನು ತಾವೇ ಬರದೋ, ಅಥವ ಇನ್ನೊಬ್ಬರಿಂದ ಬರೆಸಿಯೋ ದಾಖಲಿಸಿದ್ದಾರೆ. ಆದರೆ, ಒಂದು ಸಂಗತಿಯಂತೂ ಖಚಿತ. ಒಬ್ಬ ಕವಿ, ಕಲಾವಿದ, ಲೇಖಕ..ಹೇಗೋ ತನ್ನ ಬದುಕನ್ನು ತನ್ನ ಕೃತಿಗಳ ಮೂಲಕ ಸೂಕ್ಷ್ಮವಾಗಿಯಾದರೂ ಅಭಿವ್ಯಕ್ತಿಸಿರುತ್ತಾರೆ. ಅಷ್ಟರ ಮಟ್ಟಿಗೆ ಆ ಭಾರದಿಂದ ಮುಕ್ತರಾಗಿರುತ್ತಾರೆ. ಯಾರಿಗಾದರೂ ಸರಿ. ಒಬ್ಬ ಶ್ರೀ ಸಾಮನ್ಯನಿಗೂ ಹೇಳಲಿಕ್ಕೆ ಏನೇನೋ ಇರುತ್ತದೆ ಎನ್ನುವುದು ಸತ್ಯ. ಎಲ್ಲರಿಗೂ ತಮ್ಮ ಬದುಕಿನ ಕಥೆಯನ್ನು ಬೇರೆ ಯಾರಾದರೂ ಕೇಳಲಿ ಎಂದು ಒಳಒಳಗೇ ಅನ್ನಿಸುತ್ತಿರುತ್ತದೆ. ಅದು ತಪ್ಪೇನಲ್ಲ. ಯಾರ ಬದುಕೂ ಕಥೆಯಾಗದೇ ಇರಲು ಸಾಧ್ಯವೇ ಇಲ್ಲ. ಎಲ್ಲರ ಬದುಕೂ ಅವರ ಮಟ್ಟಿಗೆ ಒಂದು ಕಥೆಯೇ .

ಆತ್ಮಕಥೆ ಕುರಿತೊಂದು ವ್ಯಾಖ್ಯಾನ

ಖ್ಯಾತ ಲೇಖಕಿ ಅಮೃತಾ ಪ್ರೀತಂ ತಾವು ತಮ್ಮ ಆತ್ಮಕಥೆಯನ್ನು ಬರೆಯಲು ಇಚ್ಛಿಸುವುದಾಗಿ ಇನ್ನೊಬ್ಬ ಲೇಖಕನ ಬಳಿ ಹೇಳಿದರಂತೆ. ಆದರೆ ಆ ಲೇಖಕ (ಖುಷ್ವಂತ್‌ ಸಿಂಗ್‌ ಎಂದು ನೆನಪು) “ನಿನ್ನ ಬದುಕಿನಲ್ಲಿ ಬರೆಯಲೇ ಬೇಕಾದಂಥದ್ದು ಏನಿದೆ. ಅದನ್ನು ರಸೀದಿ ಟಿಕೆಟ್‌ ಹಿಂದೆ ಬರೆದು ಮುಗಿಸಬಹುದು” ಎಂದರಂತೆ. ಆಗ ಆಮೃತಾ ಪ್ರೀತಂ ತಮ್ಮ ಆತ್ಮಕಥೆ ಬರೆದು ಅದಕ್ಕೆ ʻರಸೀದಿ ಟಿಕೆಟ್‌ʼ ಎಂದೇ ಹೆಸರಿಸಿದರೆಂದು ಕೇಳಿದ ನೆನಪು. ಇನ್ನೊಬ್ಬರು, ಈ ಪ್ರಸಂಗವನ್ನು ಬೇರೆಯದೇ ರೀತಿಯಲ್ಲಿ ಹೇಳುತ್ತಾರೆ. ಅವರ ಪ್ರಕಾರ, ಅಮೃತಾ ಪ್ರೀತಂಗೆ ಒಮ್ಮೆ ಖುಷ್ವಂತ್‌ ಸಿಂಗ್‌ ತಮ್ಮ ಜೀವನವು ಎಷ್ಟು ಅಸಮಂಜಸವಾಗಿದೆಯೆಂದರೆ ಅವರ ಜೀವನದ ಕಥೆಯನ್ನು ರೆವಿನ್ಯೂ ಸ್ಟ್ಯಾಂಪ್‌ ಹಿಂದೆ ಬರೆಯಬಹುದು ಎಂದು ಹೇಳಿದರಂತೆ. ಹಾಗಾಗಿ ಅಮೃತಾ ಪ್ರೀತಂ ತಮ್ಮ ಆತ್ಮಕಥೆ ಬರೆದಾಗ ಅದನ್ನು ರಸೀದಿ ಟಿಕೇಟ್‌ ಎಂದು ಹೆಸರಿಸಿದರಂತೆ.

ಹಾಗೆ ನೋಡಿದರೆ ಆತ್ಮಕಥೆಯನ್ನು ಬರೆಯುವ ಹಕ್ಕು ಕೇವಲ ಪ್ರಸಿದ್ಧರಿಗೆ ಮಾತ್ರ ಸೀಮಿತವಲ್ಲ. ಅದಕ್ಕೆ H Spencer Hodge ಅವರ The Autobiography of a Comman Man ಹಾಗೂ Margaret Faster ಅವರ Diary of an Ordinary Woman ಸಾಕ್ಷಿ. ಹಾಗಾಗಿ ಕನ್ನಡದಲ್ಲಿ ಸಾಮಾನ್ಯರೂ ತಮ್ಮ ಅಸಾಮಾನ್ಯ ಬದುಕನ್ನು ತಮ್ಮ ಆತ್ಮಕಥೆಯನ್ನು ಅನಾವರಣಗೊಳಿಸಿಕೊಂಡು ಸಾಹಿತ್ಯ ಜಗತ್ತಿಗೆ ಅಚ್ಚರಿ ಮೂಡಿಸಿದ್ದಾರೆ. ಅಂಥವರ ಹೆಸರುಗಳನ್ನು ಬರೆದರೆ ಅವರನ್ನು ಸಾಮಾನ್ಯರೆಂದು ವರ್ಗೀಕರಿಸಿದಂತಾಗುತ್ತದೆ. ಇಷ್ಟಂತೂ ನಿಜ. ತಮ್ಮ ಕಥೆಯನ್ನು ಹೇಳಿಕೊಳ್ಳಲು ಬಯಸುವ ಪ್ರತಿಯೊಬ್ಬರ ಉದ್ದೇಶವೂ ಅವರ ಬದುಕನ್ನು ಎದುರಿಸಿದ ದಿಟ್ಟತನದಿಂದ ಎದುರಿಸಿದ ಕಥೆಯಾಗಿರುತ್ತದೆ. ಆದರೆ ಆತ್ಮಕಥೆಯನ್ನು ಬರೆಯುವ ಪ್ರತಿಯೊಬ್ಬರೂ ಆಯ್ಕೆ ಮಾಡಿಕೊಳ್ಳುವ ಮಾದರಿ ಅಥವ ತಂತ್ರ ಏನಾದರೂ ಕರೆಯಿರಿ, ಅದು ಅತ್ಯಂತ ಆಸಕ್ತಿದಾಯಕ. ಏಕೆಂದರೆ ಹೀಗೂ ಬರೆಯಬಹುದೇ? ಎಂಬ ಅಚ್ಚರಿಯನ್ನಂತೂ ಹುಟ್ಟಿಸುತ್ತದೆ.

ಟಿಎನ್ಎಸ್‌ ಎಂಬ ಬಹುರೂಪಿ

ಆತ್ಮಕಥೆಯ ಬಗ್ಗೆ ತುಸು ವಿಸ್ತೃತವಾದ ವಿವರಣೆ ಕಾರಣ ಇತ್ತೀಚೆಗೆ ಪ್ರಕಟವಾಗಿರುವ ನಮ್ಮ ನಡುವಿನ ಸೃಜನಶೀಲ ಮನಸ್ಸು-ತಳಗವಾರ ನಾರಾಯಣರಾವ್‌ ಸೀತಾರಾಮ್‌, ಎಲ್ಲರೂ ಪ್ರೀತಿಯಿಂದ ಕರೆಯುವ ಟಿ ಎನ್‌ ಸೀತಾರಾಮ್‌ ಅವರ ʻನೆನಪಿನ ಪುಟಗಳುʼ. ಅವರ ಬಗ್ಗೆ ವಾಚ್ಯವಾಗಿ ಬರೆಯಬಹುದೆಂದರೆ, ಅವರು ಕನ್ನಡದ ಕಥೆಗಾರ, ನಾಟಕಕಾರ, ಚಿತ್ರಕಥೆಗಾರ, ಸಿನಿಮಾ ಕಥಾ ಮತ್ತು ಸಂಭಾಷಣಾ ಲೇಖಕ, ಚಲನಚಿತ್ರ ದೂರದರ್ಶನ ಧಾರವಾಹಿಗಳ ನಿರ್ದೇಶಕ. ತಮ್ಮ ಅಕ್ಷರ ಮತ್ತು ದೃಶ್ಯ ಕೃತಿಗಳಿಂದಾಗಿ ಮನೆಮಾತಾಗಿರುವವರು.

ಒಂದರ್ಥದಲ್ಲಿ ಕನ್ನಡದ ಸಾಂಸ್ಕೃತಿಕ ಲೋಕದ ದೂರ ಮತ್ತು ಸಮೀಪದ ವೀಕ್ಷಕರು ಹಾಗೂ ದಾಖಲೆದಾರರು. ಲಂಕೇಶ್‌, ಪುಟ್ಟಣ್ಣ ಕಣಗಾಲ್‌ ಸೇರಿದಂತೆ ಹಲವರ ಸಹವಾಸದಲ್ಲಿ ದುಡಿದು ದಣಿದ ಟಿ ಎನ್‌ ಸೀತಾರಾಮ್‌ ಬರೆದ ನಾಟಕಗಳು ಇಂದಿಗೂ ಎಂದಿಗೂ ಪ್ರಸ್ತುತ ಎಂದು ಯಾವ ಎಗ್ಗೂ ಇಲ್ಲದೆ ಹೇಳಬಹುದು. ಅವರು ಬರೆದ ನಾಟಕಗಳು, ಅಭಿನಯಿಸಿದ ನಾಟಕಗಳು, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅವರ ಪಾತ್ರಗಳು, ನಿರ್ದೇಶಿಸಿದ ಚಿತ್ರಗಳಿಗಿಂತ ಅವರು ಹೊರಜಗತ್ತಿನಲ್ಲಿ ಖ್ಯಾತಿಗಳಿಸಿದ್ದು, ಅವರು ಕಿರುತೆರೆಯಲ್ಲಿ ಮಾಡಿದ ಕ್ರಾಂತಿಕಾರಿ ಪ್ರಯೋಗಗಳಿಂದ. 1998ರಲ್ಲಿ ದೂರದರ್ಶನಕ್ಕಾಗಿ ನಿರ್ದೇಶಿಸಿದ 'ಮಾಯಾಮೃಗ' ಧಾರಾವಾಹಿಯು ಸೀತಾರಾಮ್ ಅವರಿಗೆ ಅಪಾರವಾದ ಜನಮನ್ನಣೆಯನ್ನು ತಂದುಕೊಟ್ಟಿತು. ಅಲ್ಲಿಂದ ಶುರುವಾದ ಅವರ 'ಮ' ಅಕ್ಷರದ ಧಾರಾವಾಹಿಗಳು ಒಂದರ ಹಿಂದೊಂದು ಪ್ರಸಾರ ಕಂಡವು ಮತ್ತು ಭಾರಿ ಜನಪ್ರಿಯತೆಯನ್ನು ಪಡೆದುಕೊಂಡವು.

ಈಟಿವಿ ವಾಹಿನಿಗಾಗಿ 'ಮನ್ವಂತರ', 'ಮುಕ್ತ', 'ಮುಕ್ತ ಮುಕ್ತ', 'ಮಹಾಪರ್ವ', 'ಮಗಳು ಜಾನಕಿ', 'ಮತ್ತೆ ಮಾಯಾಮೃಗ' ಧಾರಾವಾಹಿಗಳನ್ನು ಸೀತಾರಾಮ್ ನಿರ್ದೇಶಿಸಿದರು. ಅದರಲ್ಲೂ 'ಮುಕ್ತ' ಧಾರಾವಾಹಿಯಂತೂ ಜನಮನದಲ್ಲಿ ಇಂದಿಗೂ ಅಳಿಸಲಾರದ ನೆನಪನ್ನು ಉಳಿಸಿದೆ. ಹಾಗೆಯೇ ʻಮುಕ್ತ ಮುಕ್ತʼ ಕೂಡ.

ನೆನಪುಗಳ ಮೆರವಣಿಗೆ

ಸೀತಾರಾಮ್‌ ಅವರ ʻನೆನಪಿನ ಪುಟಗಳುʼ ಕೃತಿಯ ಪುಟಗಳನ್ನು ತಿರುವಿ ಹಾಕಿದರೆ ಅಲ್ಲಿ ಕಾಣುವುದು ನೆನಪುಗಳ ಮೆರವಣಿಗೆ. ಕಿರುತೆರೆ, ಸಿನಿಮಾ, ರಂಗಭೂಮಿ, ರಾಜಕೀಯ, ಸಾಹಿತ್ಯ, ಪತ್ರಿಕೋದ್ಯಮ, ವಕೀಲಿಕೆ… ಹೀಗೆ ವಿವಿಧ ಅಭಿವ್ಯಕ್ತಿ ಮಾಧ್ಯಮಗಳನ್ನು ತಾವು ಏನು ಹೇಳಲು ಬಯಸಿದ್ದರೋ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವ ಸೀತಾರಾಮ್‌ ಒಂದರ್ಥದಲ್ಲಿ ಕನ್ನಡದ ಸಾಂಸ್ಕೃತಿಕ ಲೋಕದ ಸಾಕ್ಷಿ ಪ್ರಜ್ಞೆ ಎಂದರೂ ತಪ್ಪಾಗಲಾರದು. ಅವರ ನೆನಪಿನ ಪುಟಗಳಲ್ಲಿ ಅನಾವರಣಗೊಂಡಿರುವ ಅವರ ಅನುಭವದ ಮೂಸೆಯಿಂದ ಬಂದಿರುವ ಮಾತುಗಳು ಇನ್ನೊಂದರ್ಥದಲ್ಲಿ ಅವರ ಮತ್ತು ಕಾಲದ ಜ್ಞಾಪಕ ಚಿತ್ರಶಾಲೆ ಎಂದೂ ಭಾವಿಸಬಹುದು. ಅವರ ಮಾತುಗಳಲ್ಲೇ ಹೇಳಬಹುದಾದರೆ; “ರೈಲು ನಿಧಾನವಾಗಿ ಚಲಿಸುತ್ತಿದೆ. ಕೆಲವೊಮ್ಮೆ ನಿಧಾನಕ್ಕೆ, ಕೆಲವೊಮ್ಮೆ ವೇಗವಾಗಿ ನಿಲ್ದಾಣ ಕಾಣುತ್ತಿದೆ. ಕೆಲವೊಮ್ಮೆ ಸ್ಪಷ್ಟವಾಗಿ, ಕೆಲವೊಮ್ಮೆ ಅಸ್ಪಷ್ಟವಾಗಿ-ನೆನಪುಗಳ ಮೆರವಣಿಗೆ ಮಾತ್ರ ಸ್ಪಷ್ಟವಾಗಿದೆ.

ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು

ಸೀತಾರಾಮ್‌ ಅವರ ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತಿಗೆ ಒಂದು ಅರ್ಥವೂ ಇದೆ. ಅವರೇನನ್ನುತ್ತಾರೆ ಎಂದು ಅವರ ಮಾತುಳಲ್ಲಿಯೇ ಕೇಳೋಣ:

“ಬದುಕಿನ ನೆನಪುಗಳನ್ನು ಹಂಚಿಕೊಂಡಾಗ ಒಂದು ಬಗೆಯ ಒಳಗಿನ ಅಸ್ಪಷ್ಟ ಸರಳುಗಳಿಂದ ಮುಕ್ತಿ ಪಡೆಯುತ್ತಾ ನಿರಾಳವಾಗುವ ಸುಖವನ್ನು ಅನೇಕ ಬಾರಿ ಕಂಡಿದ್ದೇನೆ. ಈ ನೆನಪುಗಳನ್ನು ಕಥೆಯಾಗಿ, ಧಾರಾವಾಹಿಯ ದೃಶ್ಯಗಳಾಗಿ, ಹತ್ತಿರದವರ ಜತೆ ಮೆಲುಮಾತಿನಲ್ಲಿ ಹೇಳುವ ನುಡಿಗಳಾಗಿ, ಫೇಸ್ಬುಕ್‌ ನ ಕೆಲವು ಕಿರು ಬರಹಗಳಾಗಿ, ಹೇಳಲಾಗದ ಮುಖದ ಭಾವಗಳಾಗಿ, ನಾಟಕದ ಪಾತ್ರಗಳಾಗಿ ಹಂಚಿಕೊಂಡಾಗಲೆಲ್ಲ ನಿರಾಳ ಭಾವದ ಸುಖ ಸಿಕ್ಕಿದೆ. ಈ ನೆನಪಿನ ಪುಟಗಳಿಗೆ ಕಥೆಯಾಗುವ ಮಹಾತ್ವಾಕಾಂಕ್ಷೆ ಇಲ್ಲವಾದ್ದರಿಂದ ಇದಕ್ಕೆ ದೊಡ್ಡ ಪದ ಉಪಯೋಗಿಸಲಾರೆ” ಎಂದು ಸೀತಾರಾಮ್‌ ಮೊದಲೇ ಇದು ಆತ್ಮಕಥೆಯಲ್ಲ ಎಂದು ಷರಾ ಬರೆದುಬಿಟ್ಟಿದ್ದಾರೆ.

ಮತ್ತೊಮ್ಮೆ ಬದುಕುವ ಅನುಭವ

“ಇನ್ನೊಬ್ಬರಿಗೆ ಬುದ್ಧಿ ಕಲಿಸಲಾಗಲೀ, ಯಾರನ್ನೋ ನೋಯಿಸುವುದಕ್ಕಾಗಲೀ, ಯಾರ ಮೇಲೋ ಸೇಡು ತೀರಿಸಿಕೊಳ್ಳಲಾಗಲೀ, ಯಾರಿಗಿಂತಲೋ ನಾನು ಶ್ರೇಷ್ಠ ಎಂದು ತೋರಿಸಿಕೊಳ್ಳಲಾಗಲೀ ನಾನು ಇದನ್ನು ಬರೆದಿಲ್ಲ. ನನ್ನ ಬದುಕು ನನಗೆ ಕಲಿಸಿರಬಹುದಾದ ಪಾಠಗಳನ್ನು ಅರಿತುಕೊಳ್ಳಲು, ಅಸ್ಪಷ್ಟತೆ ಸ್ಪಷ್ಟತೆ ಪಡೆಯಲು ಇದನ್ನು ಬರೆದಿದ್ದೇನೆ. ಸತ್ಯವನ್ನೇ ಹೇಳುತ್ತೇನೆ. ಬದುಕಿನ ಸರ್ವ ಸತ್ಯಗಳನ್ನೂ ಹೇಳಲಾರೆ. ಆದರೆ ಇಲ್ಲಿ ಹೇಳಿರುವುದಷ್ಟೂ ಸತ್ಯ” ಎಂದು ತಮ್ಮ ನೆನಪಿನ ಪುಟಗಳ ಬಗ್ಗೆ ತಾವೇ ವಕೀಲಿಕೆ ಮಾಡಿರುವುದರಿಂದ ಮೊದಲೇ Affidavit ಸಲ್ಲಿಸಿ, ಬರಬಹುದಾದ ಆಕ್ಷೇಪಗಳಿಗೆ Caveat ಕೂಡ ಹಾಕಿ ಬಿಟ್ಟಿದ್ದಾರೆ.

ಅದಕ್ಕೆ ಸೂಕ್ತ ಕಾರಣ ನೀಡಿ; “ನೆನಪುಗಳು ಬದುಕನ್ನು ಮತ್ತೊಮ್ಮೆ ಬದುಕುವ ಸುಂದರ ಅನುಭವ ಕೊಡುತ್ತದೆ. ಬದುಕಿನ ಎಲ್ಲ ನೆನಪುಗಳನ್ನೂ ಹೇಳಿಕೊಳ್ಳಲು ಸಾಧ್ಯವಿಲ್ಲ. ಅನೇಕ ಬಗೆಯ ಧರ್ಮ ಸಂಕಟಗಳಿಂದಾಗಿ ಕೆಲವು ನೆನಪುಗಳನ್ನು ಹೇಳಲಾಗುವುದಿಲ್ಲ” ಎಂದು ತಮ್ಮ ನೆನಪಿನ ಪುಟಗಳ ಮಿತಿಗಳ ಬೇಲಿಯನ್ನು ಎಬ್ಬಿಸಿಬಿಟ್ಟಿದ್ದಾರೆ.

ಬಣ್ಣ, ವಿಷಾದ, ಲಘು ಹಾಸ್ಯದ ಗಟ್ಟಿ ಪಾಕ

ಅವರ ನೆನಪುಗಳು 392 ಪುಟಗಳ ತುಂಬಾ 88 ರೂಪರೂಪಗಳನ್ನು ಪಡೆದುಕೊಂಡು, ಓದುಗರನ್ನು ಸೀತಾರಾಮ್‌ ಅವರ ಕಾಲಕೋಶದೊಳಗೊಂದು ಸುತ್ತು ಸುತ್ತಿಸುತ್ತದೆ. ಈ ಕೃತಿಗೆ ಶಕ್ತ ಬೆನ್ನುಡಿ ಬರೆದಿರುವ ಲೇಖಕ-ಪತ್ರಕರ್ತ ಜೋಗಿ ಅವರು ಕೂಡ “ಆ ನೆನಪುಗಳು ನಮ್ಮನ್ನು ಕೂಡ ಅವರ ಕಾಲಕ್ಕೆ ಕರೆದೊಯ್ಯುತ್ತದೆ. ಟೈಮ್‌ ಮೆಷಿನ್‌ ನಲ್ಲಿ ಹಿಂದಕ್ಕೆ ಹೋಗಿ ಕಾಲಾತೀತರಾಗಿ ಅವರು ಕಂಡದ್ದನ್ನು ನಾವೂ ಕಾಣುತ್ತಾ ಹೋಗುತೇವೆ. ಹೇಳುವುದಕ್ಕಿಂತ ತೋರಿಸುವುದರಲ್ಲಿ ಸೀತಾರಾಮ್‌ ಅವರ ಆಸಕ್ತಿ. ಈ ನೆನಪುಗಳಿಗೆ ಹಲವು ಬಣ್ಣ, ವಿಷಾದ ಮೆತ್ತಿದ ಪುಟಗಳು, ತಮಾಷೆ ಲೇಪಿಸಿದ ಅನೇಕ ಪುಟಗಳು, ಬದುಕನ್ನು ಅವುಡುಗಚ್ಚಿ ದಿಟ್ಟತನದಿಂದ ಎದುರಿಸಿದ ಪುಟಗಳು, ಪ್ರಯೋಗಶೀಲತೆಯ ಪುಟಗಳು, ಹುಡುಕಾಟದ ಸಾಲುಗಳು, ಅಂತರಂಗದ ಪಿಸುಮಾತು, ಲೋಕಾಂತದ ಹೊಸ್ತಿಲಿಗೆ ಹಚ್ಚಿದ ಕಿರುದೀಪ ಎಲ್ಲವನ್ನೂ ಟಿಎನ್ನೆಸ್‌ ಸಂತನ ನಿರುಮ್ಮಳ ಧಾಟಿಯಲ್ಲಿ ಮುಂದಿಟ್ಟಿದ್ದಾರೆ. ಟಿಎನ್ನೆಸ್‌ ಅವರ ಐದು ದಶಕಗಳ ಜೀವನ ಚಿತ್ರಗಳಲ್ಲಿ ನೂರಾರು ಜೀವಗಳ ಕಥೆ ಇದೆ. ಇಲ್ಲಿ ನಮಗೆ ಬಹುರೂಪಿ ಟಿಎನ್ನೆಸ್‌ ಸಿಗುತ್ತಾರೆ. ಕೃಷಿಕ, ವಕೀಲ, ಉದ್ಯಮಿ, ನಾಟಕಕಾರ, ನಟ, ನಿರ್ದೇಶಕ, ಸಾಹಿತಿಯಾಗಿ ಅವರನ್ನು ಬಲ್ಲವರಿಗೆ ಮಗ, ತಮ್ಮ ಅಣ್ಣ, ತಂದೆ, ಗಂಡ, ಗೆಳೆಯ, ಟಿಎನ್ನೆಸ್‌ ಕೂಡ ಎದುರಾಗುತ್ತಾರೆ. ಇದು ಟಿಎನ್ನೆಸ್ ಒಬ್ಬರ ನೆನಪಿನ ಪುಟಗಳಲ್ಲ. ಒಂದು ಕಾಲಾವಧಿಯ ಜ್ಞಾಪಕ ಚಿತ್ರಶಾಲೆ” ಎಂದು ಹೇಳಿ, ಓದುಗರ ಆಸಕ್ತಿಯನ್ನು ಮತ್ತಷ್ಟು ಕೆರಳಿಸಿ, ಅವರನ್ನು ಟಿಎನ್ನೆಸ್‌ ಅವರ ಕಾಲಕೋಶದೊಳಗೊಂದು ಸುತ್ತುಹಾಕಿ ಬರಲು ಪ್ರೇರೇಪಿಸುತ್ತಾರೆ. ನಿಜ. ಈ ನೆನಪಿನ ಪುಟಗಳಲ್ಲಿ ಲೀನವಾದರೆ, ಓದುಗರನ್ನು ಒಮ್ಮೆ ಬೆರಗಾಗಿಸಿದರೆ, ಇನ್ನೊಮ್ಮೆ ಮೌನವಾಗಿ ಚಿಂತಿಸುವಂತೆ ಮಾಡುತ್ತದೆ. ಮತ್ತೊಮ್ಮೆ ತಲ್ಲಣಿಸುವಂತೆ ಮಾಡುವ ಭಾವಗೀತಾತ್ಮಕವೂ ಆಗಿದೆ.

ಬದುಕ ಮನ್ನಿಸು ಪ್ರಭುವೇ…

ನೆನಪಿನ ಪುಟಗಳ 88 ನೋಟಗಳೂ, ಒಂದಲ್ಲ ಒಂದು ಕಾರಣಕ್ಕೆ ಓದುಗರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಅವರು ಓದುಗರನ್ನು ತಮ್ಮ ನೆನಪಿನ ಓಣಿಯಲ್ಲಿ ಕರೆದೊಯ್ಯುವಾಗ, ಆ ಕಾಲದ ಬಹಳಷ್ಟು ಮಂದಿಗೆ “ಅರೆ, ಇವರು ನಮ್ಮ ಕಥೆಯನ್ನೇ ಹೇಳುತ್ತಿದ್ದಾರಲ್ಲ” ಎಂದು ಅನ್ನಿಸಿದರೆ, ಅದು ಸೀತಾರಾಮ್‌ ಅವರ ತಪ್ಪಲ್ಲ. ಏಕೆಂದರೆ ಆ ಕಥೆಗಳು, ಅವರ ಕಾಲದ ಸೃಜನಶೀಲ ಮನಸ್ಸುಗಳ ಬಹಳಷ್ಟು ಮಂದಿಯ ಕಥೆಯೆಂದು ನಿರ್ದಾಕ್ಷಿಣ್ಯವಾಗಿ ಹೇಳಬಹುದು. ಉದಾಹರಣೆಗೆ ʻಕಳೆದು ಹೋದ ಚಪ್ಪಲಿʼ. ಪ್ರಭು ಮತ್ತು ವಿಜಯಲಕ್ಷ್ಮಿ ಕಾಲಿಗೆ ಹಾಕಿಕೊಂಡು ಓಡಾಡಿದ ಕೆಂಪು ಬಣ್ಣದ ಬೆಲ್ಟ್‌ ಚಪ್ಪಲಿ. ಆ ಚಪ್ಪಲಿ ಪಡೆಯಲು, ಅನುಭವಿಸಲು ಟಿಎನ್ನೆಸ್‌ ಪಟ್ಟಕಷ್ಟ. ಹಾಗೆಯೇ ʻಬದುಕ ಮನ್ನಿಸು ಪ್ರಭುವೇ…ʼ ಅದು ಟಿಎನ್ನೆಸ್‌ ಬರೆದ ನಾಟಕದ ಶೀರ್ಷಿಕೆ ಕೂಡ. “ಅಂದರೆ, ನಾನು ಬದುಕಿರುವುದನ್ನು ಮನ್ನಿಸು ದೇವಾ ಎಂದು” ಟಿಎನ್ನೆಸ್‌ ಬರೆದಿದ್ದಾರೆ. ಆ ನಾಟಕಕ್ಕೆ ಆ ವರ್ಷ ಪ್ರಜಾವಾಣಿಯ ದೀಪಾವಳಿ ಸಂಚಿಕೆಯ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬರುತ್ತದೆ. ಅದಕ್ಕೆ ಟಿಎನ್ನೆಸ್‌ ಜೀನ್‌ ಪಾಲ್‌ ಸಾರ್ತ್ರೆಯ “Forgive me for living while you are dead” ಎಂಬ ಟ್ಯಾಗ್‌ಲೈನ್‌ (ನೀನು ಇಲ್ಲದಿರುವ ಜಗತ್ತಿನಲ್ಲಿ ನಾನು ಬದುಕಿರುವುದೇ ಅಪರಾಧ) ಕೂಡ ಟಿಎನ್ನೆಸ್‌ ಕೊಟ್ಟಿರುತ್ತಾರೆ. ಇದೇ ಸಂದರ್ಭದಲ್ಲಿ ಟಿಎನ್ನೆಸ್‌ ತಂದೆ ತೀರಿಹೋಗಿ ಅವರು ಪಾಪ ಪ್ರಜ್ಞೆಯಿಂದ ನರಳುತ್ತಿರುತ್ತಾರೆ. ಈ ಪಾಪ ಪ್ರಜ್ಞೆಯ ಕಾಲಘಟ್ಟದಲ್ಲಿಯೇ ಟಿಎನ್ನೆಸ್‌ ಈ ನಾಟಕ ಬರೆದಿರುತ್ತಾರೆ. ಪ್ರಶಸ್ತಿ ಬಂದಾಗ ಅದರೊಂದಿಗೆ ಬಂದದ್ದು ಐನೂರು ರೂಪಾಯಿ ಸಂಭಾವನೆ. “ಪ್ರಶಸ್ತಿ ಬಂದಿದೆ ಎಂದು ಖುಷಿ ಪಡಬೇಕೋ, ಅಪ್ಪ ತೀರಿಕೊಂಡಿದ್ದಾರೆಂದು ದುಃಖ ಪಡಬೇಕೋ ಎಂಬ ಮಿಶ್ರಭಾವದಲ್ಲಿ ನಾನಿದ್ದೆ. ಆ ಐನೂರು ರೂಪಾಯಿ ನೋಟಿನ ಮೇಲೂ ತಂದೆಯ ಸಾವಿಗೆ ಕಾರಣವಾದ ಪಾಪ ಪ್ರಜ್ಞೆ ಮೆತ್ತಿಕೊಂಡಿದೆ ಎಂದು ನನಗನ್ನಿಸುತ್ತಿತ್ತು. ಗೆಳೆಯನೊಬ್ಬ ಅದರ ಬಗ್ಗೆ ಹಾಸ್ಯ ಕೂಡ ಮಾಡಿದ್ದ. ತಂದೆಯನ್ನು ಕೊಂದ ಐನೂರು ರೂಪಾಯಿ ಎಂದು. ಹಾಸ್ಯವೆಂದು ನಕ್ಕರೂ, ಮನಸ್ಸು ಮಂಕಾಗಿತ್ತು. ಆ ವರ್ಷ, ಗೋಪಾಲಕೃಷ್ಣ ಅಡಿಗರು ತೀರ್ಪುಗಾರರಾಗಿದ್ದರು. ನನ್ನ ನಾಟಕವನ್ನು ಮೆಚ್ಚಿಕೊಂಡು ಅವರು ಒಂದು ಪತ್ರ ಬರೆದಿದ್ದರು. ಕಾಲದ ಓಟದಲ್ಲಿ ನೋವಿನ ತೀವ್ರತೆ ಕಡಿಮೆಯಾಗಿದೆ. ಹಾಗೆ ಅಡಿಗರು ಬರೆದಿದ್ದ ಆ ಪತ್ರವೂ ಎಲ್ಲಿಗೋ ಹಾರಿಹೋಗಿದೆ”.

ʻನೆನಪಿನ ಪುಟಗಳʼ ಸತ್ವವನ್ನು ಈ ಒಂದು ನೋಟ ಸಮಗ್ರವಾಗಿ ನೀಡುತ್ತದೆ ಎಂದೆನ್ನಿಸಿ, ಅದರದ್ದೇ ಇಲ್ಲಿ ಪ್ರಸ್ತಾಪ. ಹಾಗಾಗಿ ಹೀಗೆ ಬರೆದದ್ದಕ್ಕೆ ಮನ್ನಿಸಿ ಟಿಎನ್ನೆಸ್….‌

Tags:    

Similar News