Bomb Threat | ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ
ಶುಕ್ರವಾರ ಮಧ್ಯಾಹ್ನ ಮೂರು ಗಂಟೆಯೊಳಗೆ ಡಿಸಿ ಕಚೇರಿ ಸ್ಫೋಟಿಸುವುದಾಗಿ ಸಂದೇಶ ಕಳುಹಿಸಿದ್ದು, ಕ್ರಮ ಕೈಗೊಳ್ಳುವಂತೆ ಡಿಸಿ ಶಿಲ್ಪನಾಗ್ ಅವರು ಜಿಲ್ಲಾ ಎಸ್‌ಪಿ ಡಾ.ಬಿ.ಟಿ. ಕವಿತಾ ಅವರಿಗೆ ಸೂಚನೆ ನೀಡಿದ್ದಾರೆ.;
ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ
ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಶುಕ್ರವಾರ ಮಧ್ಯಾಹ್ನ ಮೂರು ಗಂಟೆಯೊಳಗೆ ಜಿಲ್ಲಾಡಳಿತ ಕಚೇರಿ ಸ್ಫೋಟಿಸುವುದಾಗಿ ಸಂದೇಶ ರವಾನೆಯಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪನಾಗ್ ಅವರು ಎಸ್‌ಪಿ ಡಾ.ಬಿ.ಟಿ. ಕವಿತಾ ಅವರಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ಸಿಎಂ, ಡಿಸಿಎಂಗೂ ಬೆದರಿಕೆ
ಏಪ್ರಿಲ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ಅನಾಮಿಕ ಇ-ಮೇಲ್ ಸಂದೇಶ ಕಳಿಸಿದ್ದು, ಕೊಲೆ ಮಾಡಿ ರೆಫ್ರಿಜರೇಟರ್ ಹಾಗೂ ಟ್ರ್ಯಾಲಿ ಬ್ಯಾಗ್‌ನಲ್ಲಿ ತುಂಬುತ್ತೇನೆ ಎಂಬ ಹುಸಿ ಸಂದೇಶದ ಕಳುಹಿಸಿದ್ದರು.
ವಿಮಾನಯಾನ ಸಂಸ್ಥೆಗಳಿಗೆ ಬೆದರಿಕೆ
2024 ರಲ್ಲಿ ವಿಮಾನಯಾನ ಸಂಸ್ಥೆಗಳಿಗೆ ಒಟ್ಟು 728 ಹುಸಿ ಬೆದರಿಕೆ ಕರೆಗಳು ಬಂದಿದ್ದವು. ಇದರಲ್ಲಿ ಹೆಚ್ಚು ಕರೆಗಳು ಇಂಡಿಗೋ ವಿಮಾನಯಾನ ಸಂಸ್ಥೆಗೆ ಬಂದಿದ್ದವು. ಜೊತೆಗೆ ಏರ್ ಇಂಡಿಯಾ ಹಾಗೂ ವಿಸ್ತಾರ ವಿಮಾನಯಾನ ಸಂಸ್ಥೆಗೂ ಬೆದರಿಕೆ ಸಂದೇಶ ಕಳುಹಿಸಲಾಗಿತ್ತು. 728 ಹುಸಿ ಬೆದರಿಕೆಗಳ ಸಂಬಂಧ 13 ಮಂದಿಯನ್ನು ಪೊಲೀಸರು ಬಂಧಿಸಿದ್ದರು.
ಬ್ಯಾಂಕ್, ಶಾಲಾ - ಕಾಲೇಜುಗಳಿಗೆ ಬೆದರಿಕೆ
2024 ರ ನವೆಂಬರ್‌ನಲ್ಲಿ ಬೆಂಗಳೂರಿನ ಬ್ಯಾಂಕ್, ಶಾಲಾ-ಕಾಲೇಜುಗಳಿಗೆ ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶಗಳು ಬಂದಿದ್ದವು. ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಬಿಷಪ್ ಕಾಟನ್ ಬಾಲಕ ಹಾಗೂ ಬಾಲಕಿಯರ ಶಾಲೆಗಳು, ಮಹಾತ್ಮ ಗಾಂಧಿ ರಸ್ತೆಯ ಎಚ್‌ಎಸ್‌ಬಿಸಿ ಬ್ಯಾಂಕ್, ಸದಾಶಿವನಗರ ಠಾಣಾ ವ್ಯಾಪ್ತಿಯಲ್ಲಿರುವ ಎಂ.ಎಸ್. ರಾಮಯ್ಯ ಕಾಲೇಜು, ಹನುಮಂತ ನಗರ ಠಾಣಾ ವ್ಯಾಪ್ತಿಯಲ್ಲಿರುವ ಬಿಎಂಎಸ್ ಕಾಲೇಜು ಹಾಗೂ ಬಸವನಗುಡಿಯ ಬಿಐಟಿ ಕಾಲೇಜುಗಳಿಗೆ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಿದ್ದರು.ಬಳಿಕ ಅವೆಲ್ಲವೂ ಹುಸಿ ಸಂದೇಶ ಹಾಗೂ ಕರೆಗಳು ಎಂದು ತೀರ್ಮಾನಿಸಲಾಗಿತ್ತು.